ಒಟ್ನಲ್ಲಿ

7

ಒಟ್ನಲ್ಲಿ

Published:
Updated:

ಈ ಬೆಳದಿಂಗಳ ಮಳೆಯಲಿ ಮುಳುಗೇಳುತಿರುವ

ಊರಗಟಾರದ ಕೆರೆ ನೊರೆಹಾಲ ತೊರೆಯಂತೆ ಮಿರುಗುತ

ಹೊಂಬಿಸಿಲಲಿ ಹೊಳೆವ ವಿಷಸಸ್ಯದ ಎಳೆಎಲೆಯೂ

ಸರೀ ಬೆಳಗಿದ ಪಾತ್ರೆಯಂತೆ ಫಳಫಳಿಸುತ

ನೂರು ಜೀವಗಳ ಹೀರಿ ಕುಡಿದ ಜೀವದಾಯೀ ನದಿ

ಅಮಾಯಕ ಮಗುವಂತೆ ಯಾವಸದ್ದಿರದೆ ಹರಿಯುತ

ಕರಚಾಲನೆಯ ಕೌಶಲ್ಯಕೆ ಕಣ್ಣರಳಿಸುವ ಲೋಕ

ಆಳಕಿಳಿಯದೆ ಮಂಕುಬೂದಿಯ ಮಂದಹಾಸವ

ಮುಖಕೆಲ್ಲ ಬಳಿದುಕೊಳುತ...

ಈ ನಾಯಿಯೇ ವಾಸಿ ಗದರಿದರೆ

ಸೋಗು ನಿಲಿಸಿ ಸುಮ್ಮನಾದರೂ ಆಗುವುದು

ಮಿತಿಮೇರೆಗಳಿರದ ಮನುಷ್ಯ ಮಾತ್ರ

ಪರವೂರಿನ ಪೋಲಿಸನಂತೆ ನಿನ್ನೂರಲೇ

ನಿನ್ನ ನಿಲಿಸಿ ಗುರುತು ಪತ್ರ ಕೇಳುವ

ಸಹಿ ಫರಕಿದ್ದರೆ ನೀನು ನೀನಲ್ಲ ಎನುವ

‘ದಿನಾ ಹತ್ತು ಸಲ ಸಹಿ ತಿದ್ದಿ ರೂಢಿಸಿಕೊ’

ಎನುತ ಕಿವಿ ಕಿಟಕಿ ಮುಚ್ಚಿಕೊಂಡು

ಕಪ್ಪುಕನ್ನಡಕ ಮೂಗಿಗೇರಿಸಿ

ಹೊಳ್ಳೆಗಳಲಿ ಹತ್ತಿ ಬಾಯಿಗೆ ಅಗುಳಿ

ಜಡಕೊಂಡು ತನ್ನಂತಿರುವಂತೆ ಕೆಕ್ಕರಿಸಿ

ನೋಡಿ ಕಿವಿಮಾತು ಹೇಳುವ

ಒಟ್ನಲ್ಲಿ ಹುಷಾರಾಗಿರಬೇಕು

ಕಲಬೆರಕೆಯದಿರಬಹುದು

ಸದ್ಗುಣವೂ ಸವಿನುಡಿಯೂ

ಮೆಲುದನಿಯೂ ಗೆಳೆತನವೂ

ಬಂಧಗಳೂ ಬಂಧನವೂ

ಪ್ರೇಮವೂ ಕಾಮವೂ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry