ಒಡಂಬಡಿಕೆ ಪತ್ರ ಕಸದ ಬುಟ್ಟಿಗೆ ಎಸೆದು ಪ್ರತಿಭಟನೆ

7

ಒಡಂಬಡಿಕೆ ಪತ್ರ ಕಸದ ಬುಟ್ಟಿಗೆ ಎಸೆದು ಪ್ರತಿಭಟನೆ

Published:
Updated:
ಒಡಂಬಡಿಕೆ ಪತ್ರ ಕಸದ ಬುಟ್ಟಿಗೆ ಎಸೆದು ಪ್ರತಿಭಟನೆ

ಬೆಂಗಳೂರು: ವೆಂಕಟಪ್ಪ ಆರ್ಟ್‌ ಗ್ಯಾಲರಿಯ ಖಾಸಗೀಕರಣ ವಿರೋಧಿಸಿ ಕಲಾವಿದರು ಭಾನುವಾರ ವಿನೂತನ ಪ್ರತಿಭಟನೆ ನಡೆಸಿದರು. ವೆಂಕಟಪ್ಪ ಆರ್ಟ್‌ ಗ್ಯಾಲರಿ ಫೋರಂನ (ವಿಎಜಿ) ಸದಸ್ಯರು ಗ್ಯಾಲರಿಯನ್ನು  ತಸ್ವೀರ್‌ ಫೌಂಡೇಷನ್‌ಗೆ ದತ್ತು ನೀಡುವ ಒಡಂಬಡಿಕೆ ಪತ್ರದ ಪ್ರತಿಗಳಿಗೆ ‘ಎಂಒಯು ಓದಿದ್ದೇವೆ, ಅದನ್ನು ತಿರಸ್ಕರಿಸಿದ್ದೇವೆ’ ಎಂದು ಠಸ್ಸೆ ಒತ್ತಿ ಪ್ರತಿಭಟನೆ ನಡೆಸಿದರು.ಅಲ್ಲದೆ, ಆ ಪ್ರತಿಗಳನ್ನು ಹುರಿಗಡಲೆ, ಮಸಾಲೆ ಕಡಲೆಪುರಿ ಕಟ್ಟಲು, ತಂಪುಪಾನೀಯ ನೀಡಿದ ಕಾಗದ ಲೋಟಕ್ಕೆ ಅಂಟಿಸಲು ಹಾಗೂ ವಿವಿಧ ಕಲಾಕೃತಿಗಳ ರಚನೆಗೆ ಬಳಸಲಾಯಿತು. ಜತೆಗೆ ಕತ್ತೆಯ ಮುಖವಾಡ ತಯಾರಿಸಿ ಅದರ ಬಾಯಿಗೆ ಎಂಒಯು ಪ್ರತಿಯನ್ನು ನೀಡಲಾಗಿತ್ತು. ಕಲಾವಿದರು ಬಲೂನ್‌ಗಳನ್ನು ಊದಿ ಒಡೆಯುವ ಮೂಲಕವೂ ಪ್ರತಿಭಟನೆ ನಡೆಸಿದರು.‘ಒಡಂಬಡಿಕೆ ಪತ್ರವನ್ನು ನಾವು ಓದಿದ್ದೇವೆ. ಈ ಒಪ್ಪಂದವನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಇದು ತಿರಸ್ಕಾರಕ್ಕೆ ಯೋಗ್ಯವಾಗಿದ್ದು, ಕಸದ ಬುಟ್ಟಿಗೆ ಸೇರಬೇಕು’ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದರು.‘ಸರ್ಕಾರ ಗ್ಯಾಲರಿಯನ್ನು ದತ್ತು ನೀಡುವ ಮೂಲಕ ರಾಜ್ಯದ ಏಕೈಕ ಗ್ಯಾಲರಿಯನ್ನು ನಡೆಸುವ ಶಕ್ತಿ ತನಗಿಲ್ಲ ಎಂದು ತನ್ನ ವೈಫಲ್ಯವನ್ನು ಒಪ್ಪಿಕೊಂಡಂತಾಯಿತಲ್ಲವೇ? ಇದೇ ರೀತಿ ವಿಧಾನಸೌಧವನ್ನು ಅನಾಥ ಎಂದು ಘೋಷಿಸಿ ಖಾಸಗಿಯವರಿಗೆ ದತ್ತು ನೀಡುತ್ತದೆಯೇ?’ ಎಂದು ಪ್ರಶ್ನಿಸಿದರು.‘ತಸ್ವೀರ್‌ ಫೌಂಡೇಷನ್‌ಗೆ ಗ್ಯಾಲರಿಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಇನ್ಫೊಸಿಸ್‌  ಸಂಸ್ಥೆಯಂತೆ ಹಣ ಸಹಾಯ ಮಾಡಿ ಆಡಳಿತದಿಂದ ದೂರ ಇರಬಹುದಿತ್ತಲ್ಲವೇ?’ ಎಂದು ಪ್ರಶ್ನಿಸಿದ ಕಲಾವಿದರು, ‘ರಾಜ್ಯದ ಹಿತದೃಷ್ಟಿಯಿಂದ ಒಪ್ಪಂದವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry