ಮಂಗಳವಾರ, ನವೆಂಬರ್ 12, 2019
25 °C

ಒಡಕಿನ ಹಾದಿ

Published:
Updated:

ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಹಲವು ದಿನಗಳಿಂದ ಚರ್ಚೆಗೆ ಕಾರಣವಾಗಿದೆ. ಗಹನವಾದ ಚಿಂತನೆಗಳೇನೂ ಇಲ್ಲದಿದ್ದಾಗ ಇಂತಹ ಒಂದು ರಾಜಕೀಯ ಒಣ ಚರ್ಚೆ ಸಾರ್ವಜನಿಕರ ಗಮನವನ್ನು ಬೇರೆಡೆ ತಿರುಗಿಸುವ ತಂತ್ರವಾಗಿ ಕಾಣುತ್ತದೆ. 2014 ರ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಹುಲ್ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಯತ್ನ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದ್ದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮುನ್ನೆಲೆಗೆ ತರಲು ಬಿಜೆಪಿ ಇನ್ನಿಲ್ಲದ ಸಾಹಸ ಮಾಡುತ್ತಿದೆ. ಆಡಳಿತ ಸೂತ್ರ ಹಿಡಿಯುವಲ್ಲಿ ಮೈತ್ರಿಕೂಟಗಳೇ ನಿರ್ಣಾಯಕವಾಗಿರುವುದರಿಂದ, ಅಭ್ಯರ್ಥಿಯ ಬಗ್ಗೆ ಒಟ್ಟಭಿಪ್ರಾಯ ರೂಪಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಹೆಣಗಲೇ ಬೇಕಾಗಿದೆ. ಆದರೆ, ಮೋದಿ ಹೆಸರಿಗೆ ಎನ್‌ಡಿಎ ಮೈತ್ರಿಕೂಟದ ಜನತಾದಳ (ಯು) ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ, ಮೈತ್ರಿಕೂಟಗಳೇ ಕಳಚಿಕೊಳ್ಳುವ ಸಂಭವ ದೂರವೇನಿಲ್ಲ ಎನ್ನಿಸುತ್ತಿದೆ.

ಪ್ರಧಾನಿ ಹುದ್ದೆಗೆ ಜಾತ್ಯತೀತ ಅಭ್ಯರ್ಥಿ ಹೆಸರನ್ನು ಸೂಚಿಸಬೇಕೆಂದು ನಿತೀಶ್‌ಕುಮಾರ್ ಬಿಜೆಪಿಗೆ ಸಲಹೆ ಮಾಡಿದ್ದಾರಲ್ಲದೆ, ಅದಕ್ಕೆ ಡಿಸೆಂಬರ್‌ವರೆಗೆ ಅಂತಿಮ ಗಡುವು ನೀಡಿದ್ದಾರೆ. ಈ ಬೆಳವಣಿಗೆಯೊಂದಿಗೆ ಜೆಡಿಯು ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಉಲ್ಭಗೊಂಡಿರುವುದು ಸ್ಪಷ್ಟವಾಗಿದೆ. 2014 ರ ಚುನಾವಣೆಯ ವೇಳೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾದ ಸಮಯದಲ್ಲಿ ಮೈತ್ರಿಕೂಟದಲ್ಲಿ ಕಂಡುಬಂದ ಒಡಕು ಬಿಜೆಪಿಗೆ ನುಂಗಲಾರದ ತುತ್ತು. ಪ್ರಧಾನಿ ಅಭ್ಯರ್ಥಿ ವಿಷಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದಾಕ್ಷಣ ಎನ್‌ಡಿಎ ಕೂಟದಿಂದ ದೂರವಾಗುವ ಮಾತು ಅಪ್ರಸ್ತುತ ಎಂದು ಬಿಜೆಪಿ ಸಾವರಿಸಿಕೊಳ್ಳುವ ಮಾತುಗಳನ್ನಾಡಿದ್ದರೂ, ಸೈದ್ಧಾಂತಿಕವಾಗಿ ಜನತಾದಳ (ಯು) ಕೂಟದಿಂದ ಬಹಳ ದೂರಹೋದಂತೆಯೇ ಆಗಿದೆ. ಆದರೂ ಎಂಟು ತಿಂಗಳ ಗಡುವನ್ನು ನಿತೀಶ್ ನೀಡಿರುವುದೂ ಕೂಡ ರಾಜಕೀಯ ಆಟವೇ ಇದ್ದಂತಿದೆ.ಈಗಾಗಲೇ ನಿತೀಶ್‌ಕುಮಾರ್ ದೆಹಲಿಗೆ ಬಂದು ರಾಮಲೀಲಾ ಮೈದಾನದಲ್ಲಿ `ಅಧಿಕಾರ್ ರ‌್ಯಾಲಿ' ನಡೆಸಿ, ಗುಜರಾತ್ ಮಾದರಿಗೆ ಪ್ರತ್ಯುತ್ತರವಾಗಿ ಬಿಹಾರ್ ಮಾದರಿಯನ್ನು ಮುಂದೊಡ್ಡಿರುವುದು ಬಿರುಕಿನ ಹಾದಿಯ ಲಕ್ಷಣವೇ ಆಗಿತ್ತು. ಇದನ್ನು ಮುಂಬರುವ ಲೋಕಸಭಾ ಚುನಾವಣಾ ಪೂರ್ವ ಕಸರತ್ತು ಎಂದೂ ವ್ಯಾಖ್ಯಾನಿಸಬಹುದು. ಮೋದಿ ನೇತೃತ್ವದಿಂದಾಗಿ ಎನ್‌ಡಿಎಯನ್ನು ಬೆಂಬಲಿಸುವುದು ಸಾಧ್ಯವೇ ಇಲ್ಲ ಎಂಬ ಜನತಾದಳ (ಯು) ನಿಲುವಿಗೆ ಮೈತ್ರಿಕೂಟದ ಇತರ ಪಕ್ಷಗಳೂ ಸಹಮತ ವ್ಯಕ್ತಪಡಿಸಿದರೆ,ದೇಶದಲ್ಲಿ ರಾಜಕೀಯ ಚಿತ್ರಣವೇ ಬದಲಾಗುವ ಸಾಧ್ಯತೆಗಳಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರ ನಿರ್ಣಾಯಕ ಎಂದು ಹೇಳುವ ಮೂಲಕ ಎನ್‌ಡಿಎ ತಮಗೆ ಅನಿವಾರ್ಯವಲ್ಲ ಎನ್ನುವ ಸಂದೇಶವನ್ನು ನಿತೀಶ್‌ಕುಮಾರ್ ಸ್ಪಷ್ಟವಾಗಿಯೇ ಮುಟ್ಟಿಸುತ್ತಿದ್ದಾರೆ.

ನಿತೀಶ್‌ಕುಮಾರ್ ಅವರ ಅಭಿಪ್ರಾಯವನ್ನು ಅನುಮೋದಿಸುವವರು ಬಿಜೆಪಿಯಲ್ಲೂ ಇದ್ದಾರೆ. ಸಾಮಾನ್ಯವಾಗಿ ಸೌಮ್ಯ ಸ್ವಭಾವದ ನಿತೀಶ್ ಇದ್ದಕ್ಕಿದ್ದಂತೆ ಆಕ್ರಮಣಕಾರಿ ನಿಲುವು ತಳೆದಿರುವುದು ಮುಸ್ಲಿಂ ಮತಗಳನ್ನು ಕಳೆದುಕೊಳ್ಳಬಹುದು ಎನ್ನುವ ಭೀತಿಯಿಂದ ಎನ್ನುವುದನ್ನೂ ನಿರಾಕರಿಸಲಾಗದು. ಆದರೂ ನರೇಂದ್ರ ಮೋದಿಯವರ ಬಗೆಗಿನ ವಿರೋಧವನ್ನು ಅವರು ಯಾವ ರೀತಿಯ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಾರೆ ಎನ್ನುವುದೇ ಮುಂದಿನ ರಾಜಕೀಯ ಕುತೂಹಲ

ಪ್ರತಿಕ್ರಿಯಿಸಿ (+)