ಒಡನಾಟದ ಅವಿಸ್ಮರಣೀಯ ಘಳಿಗೆ ಸ್ಮರಣೆ

7

ಒಡನಾಟದ ಅವಿಸ್ಮರಣೀಯ ಘಳಿಗೆ ಸ್ಮರಣೆ

Published:
Updated:

ಶಿಡ್ಲಘಟ್ಟ: `ನಾನು ಲಾ ಕಾಲೇಜಿನಲ್ಲೂ ಕಲಿಯಲಾಗದ ಅಮೂಲ್ಯ ಪಾಠಗಳನ್ನು ನಮ್ಮ ನ್ಯಾಯಾಧೀಶರಿಂದ ಕಲಿತೆ~ ಎಂದು ಒಬ್ಬ ವಕೀಲರು ಹೇಳಿದರೆ, ಮತ್ತೊಬ್ಬರು, `ನ್ಯಾಯಾಲಯ ಕಲಾಪವಾದ ಮೇಲೆ ಸಂಜೆ ವೇಳೆ ನ್ಯಾಯಾಧೀಶರು ಕಿರಿಯ ವಕೀಲರಿಗಾಗಿ ನಡೆಸುತ್ತಿದ್ದ ಪಾಠಗಳಿಗಾಗಿ ಕಾಯುತ್ತಿದ್ದೆವು~ ಎಂದರು.ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ಭಾವಪೂರ್ಣವಾದ ವಾತಾವರಣ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣವಾಗಿದ್ದದ್ದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಲೋಕೇಶ್ ಅವರ ವರ್ಗಾವಣೆ. ಇದರ ಹಿನ್ನೆಲೆಯಲ್ಲಿ ತಾಲ್ಲೂಕು ವಕೀಲರ ಸಂಘವು ಬೀಳ್ಕೊಡುಗೆ ಸಮಾರಂಭ ಆಯೋಜಿಸಿತ್ತು.ಕಿರಿಯ ವಕೀಲರು ತಾವು ನ್ಯಾಯಾಧೀಶರಿಂದ ಕಲಿತ ಪಾಠಗಳ ಬಗ್ಗೆ ವಿವರಿಸಿ, ಇನ್ನು ಮುಂದೆ ಅವುಗಳನ್ನು ತಿಳಿಸುವರಾರು ಎಂದು ಅಳಲನ್ನು ವ್ಯಕ್ತಪಡಿಸಿದರೆ, ಹಿರಿಯ ವಕೀಲರು ನ್ಯಾಯಾಧೀಶರ ಜ್ಞಾನ, ಸರಳತೆ, ಸಾಮಾಜಿಕ ಬದ್ಧತೆ, ಕಳಕಳಿ ಹಾಗೂ ಅವರೊಂದಿಗೆ ಕಳೆದ ದಿನಗಳ ಬಗ್ಗೆ ಮಾತನಾಡಿದರು.ತಾಲ್ಲೂಕು ವಕೀಲರ ಸಂಘದಿಂದ ಬೀಳ್ಕೊಡುಗೆ ಸ್ವೀಕರಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ಮಾತನಾಡುವಾಗ ಭಾವಪೂರ್ಣರಾದರು. ತಮ್ಮ ತಂದೆ ನಿಧನರಾದಾಗ ಎಲ್ಲ ವಕೀಲರು ಕುಟುಂಬದ ಸದಸ್ಯರಂತೆ ಬಂದು ಸಾಂತ್ವನ ಹೇಳಿದ್ದು ಮತ್ತು ನ್ಯಾಯಾಧೀಶರಾಗಿ ನೇಮಕರಾಗಿ ಶಿಡ್ಲಘಟ್ಟಕ್ಕೆ ಬಂದಾಗ ವಕೀಲರು ತೋರಿದ ಪ್ರೀತಿ-ವಿಶ್ವಾಸವನ್ನು ಸ್ಮರಿಸಿದರು.`ನಾನು ಪಾಠವನ್ನು ಮಾಡಿಲ್ಲ. ಹಲವಾರು ವಿಷಯಗಳನ್ನು ಮನನ ಮಾಡಲು ನೆರವಾಗಿದ್ದೀರಿ ನಿಮಗೆಲ್ಲ ಧನ್ಯವಾದಗಳು~ ಎಂದು ಅವರು ಹೇಳಿದರು.ಬೀಳ್ಕೊಡುಗೆ ಸ್ವೀಕರಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಲೋಕೇಶ್, `ಶಿಡ್ಲಘಟ್ಟ ರೇಷ್ಮೆ ಮತ್ತು ಹಾಲಿಗಷ್ಟೇ ಅಲ್ಲ ಪ್ರೀತಿ ವಿಶ್ವಾಸಕ್ಕೂ ಖ್ಯಾತಿಯನ್ನು ಹೊಂದಿದೆ~ ಎಂದರು.`ನ್ಯಾಯಾಧೀಶರು ಗುರುವಿನಂತೆ ಕಿರಿಯ ವಕೀಲರಿಗೆ ಪಾಠ ಹೇಳಿಕೊಟ್ಟಿದ್ದಾರೆ, ಮಾರ್ಗದರ್ಶನ ಮಾಡಿದ್ದಾರೆ. ಪ್ರತಿದಿನ ನ್ಯಾಯಾಲಯದ ಅವಧಿ ಮುಗಿದ ಮೇಲೆ ಕಿರಿಯ ವಕೀಲರಿಗೆ ಪಾಠ ಮಾಡಿ ತರಬೇತಿ ನೀಡಿ ಅವರಿಗೆ ಧೈರ್ಯ ತುಂಬಿದ್ದಾರೆ. ಸರಳತೆ ಮತ್ತು ಸ್ನೇಹಪರತೆಯಿಂದ ಎಲ್ಲರ ಮನಗೆದ್ದು ಈಗ ವರ್ಗಾವಣೆ ಆಗಿರುವುದು ಬೇಸರ ಮೂಡಿಸಿದೆ~ ಎಂದು ಹಿರಿಯ ವಕೀಲ ಡಿ.ಅಶ್ವತ್ಥನಾರಾಯಣ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ತಮ್ಮ ಅನುಭವ್ನ ಹಂಚಿಕೊಂಡರು. ವಕೀಲರಾದ ನಾರಾಯಣಪ್ಪ, ಚಂದ್ರಶೇಖರಗೌಡ, ಯೋಗಾನಂದ್, ವೆಂಕಟೇಶ್, ಸುಬ್ರಮಣ್ಯಪ್ಪ, ಬೈರಾರೆಡ್ಡಿ, ರವೀಂದ್ರನಾಥ್, ಲಕ್ಷ್ಮೀ, ಯಾಸ್ಮೀನ್ ತಾಜ್, ಸತ್ಯನಾರಾಯಣ್, ಎಪಿಪಿ ಶ್ರೀನಿವಾಸ್, ರವಿ, ದೇವರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry