ಬುಧವಾರ, ಮಾರ್ಚ್ 3, 2021
25 °C
ಧಾರವಾಡ ಸಾಹಿತ್ಯ ಸಂಭ್ರಮ 2016

ಒಡನಾಟದ ರಸಪ್ರಸಂಗಗಳು

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಒಡನಾಟದ ರಸಪ್ರಸಂಗಗಳು

ಧಾರವಾಡ: ‘ಸಾಹಿತಿಗಳೊಂದಿಗೆ ನಾವು’ ಗೋಷ್ಠಿ ಸಾಹಿತ್ಯಾಸಕ್ತರನ್ನು ಮನದಣಿಯೆ ರಂಜಿಸಿತು. ಗೋಷ್ಠಿಯ ನಿರ್ದೇಶಕರಾಗಿದ್ದ ಯಶವಂತ ಸರದೇಶಪಾಂಡೆ ಅವರೂ ಸೇರಿದಂತೆ ಎಂಟು ಜನರು ವಿವಿಧ ಗಣ್ಯ ಸಾಹಿತಿಗಳ ಜತೆಯ ಒಡನಾಟದಲ್ಲಿ ಪಡೆದುಕೊಂಡ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು. ಸುಮಾರು ಒಂದೂವರೆ ಗಂಟೆ ಕಾಲ ಪ್ರೇಕ್ಷಕರು ನಕ್ಕು ನಲಿಯುವಂತೆ ಮಾಡಿದ ಗೋಷ್ಠಿ ಸಾಹಿತ್ಯದ ಗಂಭೀರ ಚರ್ಚೆಗೆ ಲಘು ಲಹರಿಯ ಖುಷಿಯನ್ನು ಬೆರೆಸಿತು.ರಂಗಭೂಮಿ ಕಲಾವಿದ, ನಟ, ನಿರ್ದೇಶಕ ಯಶವಂತ ಸರದೇಶಪಾಂಡೆ ಅವರ ಧಾರವಾಡ ಭಾಷೆಯ ವಿಶಿಷ್ಟ ಶೈಲಿಯು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.ಲಂಕೇಶರ ಜತೆಗಿನ ಒಡನಾಟದ ರಸಪ್ರಸಂಗಳನ್ನು ವಿವರಿಸಿದ ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ, ‘ಲಂಕೇಶರು ನಿಷ್ಠುರತೆಯನ್ನು ತೋರಿಸಿದಷ್ಟು ನೇರವಾಗಿ  ಪ್ರೀತಿಯನ್ನು ತೋರಿಸುತ್ತಿರಲಿಲ್ಲ. ಆದರೆ ಅವರು ಅಂತರಾಳದಲ್ಲಿ ನಮ್ಮನ್ನೆಲ್ಲ ಅಷ್ಟೇ ಗಾಢವಾಗಿ ಪ್ರೀತಿಸುತ್ತಿದ್ದರು’ ಎಂದು ಹೇಳಿ ಪ್ರಸಂಗವೊಂದನ್ನು ನೆನಪಿಸಿಕೊಂದ್ದು ಹೀಗೆ....‘ನಾನು ಕೆಲವು ದಿನಗಳ ಕಾಲ ಲಂಕೇಶರನ್ನು ನೋಡಲು ಹೋಗದಿದ್ದರೆ, ಅವರಿಗೆ ನನ್ನನ್ನು ನೋಡಬೇಕು ಅನ್ನಿಸಿದರೆ ಅವರೇ ಸ್ವತಃ ದೂರವಾಣಿ ಕರೆ ಮಾಡುತ್ತಿರಲಿಲ್ಲ. ಅವರ ಸಹಾಯಕನ ಬಳಿ ನನಗೆ ಕರೆ ಮಾಡಿಸುತ್ತಿದ್ದರು. ಇತ್ತ ನಾನು ಕರೆ ಸ್ವೀಕರಿಸಿದ ಮೇಲೆ ಆ ಸಹಾಯಕ ಏನೂ ಮಾತನಾಡುತ್ತಿರಲಿಲ್ಲ. ಬದಲಿಗೆ ಲಂಕೇಶರೇ ‘ಆ ಮಹಾಬಲೇಶ್ವರ ಇದಾನೋ ಸತ್ತಿ ದಾನೋ ನೋಡು. ಜೀವಂತ ಇದ್ರೆ ಬರ್ಲಿಕ್ಕೆ ಹೇಳು’ ಎನ್ನುತ್ತಿದ್ದರು. ಆಗ ನಾನು ಅವರ ಕಚೇರಿಗೆ ಹೋಗುತ್ತಿದ್ದೆ’ ಎಂದು ಲಂಕೇಶ್‌ ಸ್ವಭಾವದ ಕುರಿತು ಹೇಳಿದರು.‘ಲಂಕೇಶರು ನನ್ನನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ ಹೆಚ್ಚು ದಿನ ನನ್ನನ್ನು ನೋಡದೇ ಇರಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ನಾನು ನಮ್ಮೂರಾದ ಗೋಕರ್ಣಕ್ಕೆ ಹೋದರೂ ಹೆಚ್ಚು ಸಮಯ ಇರುವಂತಿರಲಿಲ್ಲ. ಒಮ್ಮೆ ನಾನು ಗೋಕರ್ಣಕ್ಕೆ ಹೋಗಿ ಒಂದು ವಾರ ಅಲ್ಲಿಯೇ ಇದ್ದೆ. ಮತ್ತೆ ತಿರುಗಿ ಲಂಕೇಶರಿದ್ದಲ್ಲಿಗೆ ಬಂದಾಗ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದರು.ಅವರಿಂದ ತಪ್ಪಿಸಿಕೊಳ್ಳಲು ನಾನು ‘ಮನೆಯಲ್ಲೇನೋ ತೊಂದರೆಯಿತ್ತು. ಅದಕ್ಕೆ ಊರಿಗೆ ಹೋಗಿದ್ದೆ ’ ಎಂದೆ. ಅವರು ‘ಗೊತ್ತಾಯ್ತು ಬಿಡು. ನಿಮ್ಮಪ್ಪ ಯಾವುದೋ ಬೇರೆ ಹೆಣ್ಣಿನ ಸಹವಾಸ ಮಾಡಿ ಅಮ್ಮನ ಬಳಿ ಸಿಕ್ಕಿಹಾಕಿಕೊಂಡಿರುತ್ತಾರೆ. ಅದಕ್ಕೆ ನಿನ್ನನ್ನು ಕರೆಸಿಕೊಂಡಿರುತ್ತಾರೆ ಎಂದು ಹೇಳಿಬಿಟ್ಟರು’ ಎಂದಾಗ ಸಭೆಯಲ್ಲಿ ನಗುವೆದ್ದಿತು. ‘ಲಂಕೇಶ್‌ ತನ್ನಂತೆಯೇ ಪರರು ಎಂದು ಎಣಿಸುತ್ತಿದ್ದರಿಂದ ಅವರಿಗೆ ಹಾಗೆ ಕಾಣಿಸಿರಬೇಕು’ ಎಂದು ಹೇಳಿದಾಗ ನಗು ಚಿಮ್ಮಿತು.ಹಿರಿಯ ಸಾಹಿತಿ ಶಾ. ಮಂ. ಕೃಷ್ಣರಾವ್‌ ಅವರು, ಅ.ನ. ಕೃಷ್ಣರಾಯ ಮತ್ತು ಬೀಚಿ ಅವರ ಒಡನಾಟದ ಅನೇಕ ಸಂದರ್ಭಗಳನ್ನು ಹೇಳಿಕೊಂಡರು. ಮಾತಿಗಿಳಿಯುವ ಮುನ್ನ ಅವರು ಕುಡಿಯುವ ನೀರಿಗಾಗಿ ಹುಡುಕಾಡುತ್ತಿದ್ದಾಗ ಗೋಷ್ಠಿಯ ನಿರ್ದೇಶಕ ಯಶವಂತ ಸರದೇಶಪಾಂಡೆ ‘ಏನು ಬಾಟಲಿ ಬೇಕಾ?’ (ಮದ್ಯದ ಬಾಟಲಿ ಬೇಕಾ ಎಂಬರ್ಥದಲ್ಲಿ) ಎಂದು ಕೇಳಿದಾಗ ಸಭೆಯಲ್ಲಿ ಒಮ್ಮೆಲೆ ನಗು ಉಕ್ಕಿತು. ಅದಕ್ಕೆ  ‘ನಾನು ಗೋವಾದವನು. ನಮಗೆ ಖಾಲಿಯಿದ್ದರೂ ಪರವಾಗಿಲ್ಲ, ಆದರೆ ಬಾಟಲಿ ಎದುರಿಗಿಲ್ಲದಿದ್ದರೆ ಮಾತಾಡಲು ಆಗುವುದಿಲ್ಲ’ ಅಷ್ಟೇ ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿ ಮಾತಿಗಾರಂಭಿಸಿದರು.ಅಸಾಧಾರಣ ನೆನಪಿನ ಶಕ್ತಿ ಇದ್ದ ಅನಕೃ ಒಮ್ಮೆಮ್ಮೊ ಕೆಲವು ಸಣ್ಣ ಪುಟ್ಟ ಸಂಗತಿಗಳನ್ನು ಮರೆಯುತ್ತಿದ್ದರು ಎಂದು ಹೇಳಿದ ಅವರು, ತಮ್ಮ ಸ್ನೇಹಿತರ ಮಗಳ ಮದುವೆ ಎಂದುಕೊಂಡು ಅ.ನ.ಕೃ ಯಾರದೋ ಮದುವೆಗೆ ಹೋಗಿ ಬಂದ ಪ್ರಸಂಗ ಹೇಳಿದರು.ಲೇಖಕಿ ವಸುಂಧರಾ ಭೂಪತಿ, ಸಾಹಿತಿ ಕರೀಂ ಖಾನ್‌ ಅವರೊಂದಿಗಿನ ಒಡನಾಟದ ಪ್ರಸಂಗಗಳನ್ನು ಹೇಳಿದರು. ಹಾಗೆಯೇ ‘ಸಾಮಾನ್ಯವಾಗಿ ಎಲ್ಲರೂ ಮಹಿಳಾ ಲೇಖಕಿ ಎಂದು ಸಂಬೋಧಿ ಸುತ್ತಾರೆ. ಹಾಗಾದರೆ ಪುರುಷ ಲೇಖಕಿ ಎಂದು ಬೇರೆ ಇರುತ್ತಾರೆಯೇ?’ ಎಂಬ ಪ್ರಶ್ನೆಯನ್ನೂ ಮುಂದಿಟ್ಟರು.ನಂತರ ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಹಾಗೂ ಬೆಸಗರಹಳ್ಳಿ ರಾಮಣ್ಣ ಅವರ ಮಗ ಬಿ.ಆರ್‌. ರವಿಕಾಂತೇಗೌಡ ಅವರು ತಂದೆಯೊಂದಿಗಿನ ಒಡನಾಟದ ನೆನಲಿನ ಜತೆ ಎಂ.ಎಂ. ಕಲಬುರ್ಗಿ ಅವರ ಅಂತಃಕರಣವನ್ನು ಬಿಂಬಿಸುವ ಪ್ರಸಂಗ ಹೇಳಿದರು. ಹಾಗೆಯೇ ಕುವೆಂಪು ಅವರನ್ನು ಸ್ಪರ್ಶಿಸಬೇಕೆಂಬ ತಮ್ಮ ಆಸೆ ಈಡೇರಿದ ಘಟನೆ ನೆನಪಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.