ಶುಕ್ರವಾರ, ಫೆಬ್ರವರಿ 26, 2021
20 °C

ಒಡವೆಯಂಗಡಿಯಲ್ಲಿ ಕೋಲ್ಮಿಂಚು

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಒಡವೆಯಂಗಡಿಯಲ್ಲಿ ಕೋಲ್ಮಿಂಚು

ಭಾರಿ ಆಭರಣಗಳನ್ನು ಎಂದೂ ಧರಿಸಿರದ ಸ್ಯಾಂಡಲ್‌ವುಡ್‌ ಸುಂದರಿ ಐಂದ್ರಿತಾ ರೇ ಶುಕ್ರವಾರ ಮೈತುಂಬಾ ಆಭರಣ ಹೇರಿಕೊಂಡಿದ್ದರು. ಸಾಕ್ಷಾತ್‌ ಮಹಾಲಕ್ಷ್ಮಿಯ ಕಳೆಯಿತ್ತು ಅವರಲ್ಲಿ. ಕಿವಿಗೆ ದೊಡ್ಡ ಓಲೆ ಮತ್ತು ಉದ್ದದ ಜುಮುಕಿ, ಎರಡೂ ಕಿವಿಯ ಹಿಂದೆ ಆ್ಯಂಟಿಕ್ ಬಿಲ್ಲೆಗಳು, ಕತ್ತಿನಲ್ಲಿ ಎರಡು ಬಗೆಯ ಕಾಸಿನ ಸರಗಳು ಮತ್ತು ಕಾಲ್ಗೆಜ್ಜೆಯಂಥ ನೆಕ್‌ಲೇಸ್‌, ಕೈಯಲ್ಲಿ ಭಾರೀ ಕಡಗಗಳು, ಬೆರಳಿಗೆ ಇಷ್ಟಗಲದ ಟ್ರೆಂಡಿ ಉಂಗುರಗಳು... ಆಹಾ... ಸಾವಕಾಶವಾಗಿ ಮೆಟ್ಟಿಲಿಳಿದು ಬಂದ ಐಂದ್ರಿತಾ ನಕ್ಕಿದ್ದು, ಅವರ ಹಾವಭಾವ, ಒಟ್ಟು ನೋಟ ಒಂದು ಸಣ್ಣ ಕೋಲ್ಮಿಂಚು ಸುಳಿದಂತೆ ಭಾಸವಾಯಿತು.ಕಸ್ತೂರಬಾ ರಸ್ತೆಯ ಮಿತ್ರಾ ಟವರ್ಸ್‌ನಲ್ಲಿರುವ ‘ಆಮ್ರಪಾಲಿ’  ಜ್ಯುವೆಲ್ಸ್‌ ಮಳಿಗೆಯಲ್ಲಿ ಶುಕ್ರವಾರದಿಂದ ಆರಂಭಗೊಂಡ ‘ಆಮ್ರಪಾಲಿ ಟ್ರೂಸೊ’ ಎಂಬ ವಿನೂತನ ಸಂಗ್ರಹದ ಪ್ರದರ್ಶನ–ಮಾರಾಟ ಸಪ್ತಾಹಕ್ಕೆ ಚಾಲನೆ ನೀಡಿದ್ದು ಒಂದು ಸಣ್ಣ ರ್‍್ಯಾಂಪ್‌ ಶೋದ ಮೂಲಕ. ಐಂದ್ರಿತಾ ರೇ ಒಟ್ಟು ಶೋನ ಪ್ರಮುಖ ಆಕರ್ಷಣೆಯಾಗಿದ್ದರು.ಕಪ್ಪು ಜಾರ್ಜೆಟ್‌ ಸೀರೆಯನ್ನು ವೆಸ್ಟರ್ನ್‌ ರ್‍್ಯಾಪ್‌ ಓವರ್‌ನಂತೆ ಸುತ್ತಿಕೊಂಡಿದ್ದ ಐಂದ್ರಿತಾ ಧರಿಸಿದ್ದ ಕಾಸಿನ ಸರಗಳು ಕೈಯಲ್ಲೇ ಅಕ್ಕಸಾಲಿಗರು ತಯಾರಿಸಿದ್ದು, ಸಾಂಪ್ರದಾಯಿಕ ಕಾಸಿನ ಸರದ ಪರಿಕಲ್ಪನೆಗೆ ಆಧುನಿಕ ಸ್ಪರ್ಶ ಕೊಟ್ಟು ವಿನ್ಯಾಸ ಮಾಡಲಾಗಿದೆ ಎಂದು ಆಮ್ರಪಾಲಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಮೋಂಕಾರ್ಟ್‌ ಹೇಳಿದರು.ಎಂಟನೇ ಎಳೆಯಲ್ಲಿ ಕಾಸಿನ ವಿನ್ಯಾಸಗಳಿದ್ದ ಒಂದು ಹಾರ ಎದೆಮಟ್ಟಕ್ಕಿತ್ತು. ಅದಕ್ಕಿಂತ ಮೂರಿಂಚು ಉದ್ದದ ಮತ್ತೊಂದು ಕಾಸಿನ ಸರ ಚಾಪೆಯಂತಹ ಹೆಣಿಗೆಯಿಂದ ಗಮನ ಸೆಳೆಯುವಂತಿತ್ತು. ರವಿಕೆಯಿಲ್ಲದ ಬರಿದೋಳಿಗೂ ಲಾಕೆಟ್‌ನಂತಹ ಸರಳವಾದ ವಂಕಿ ತೊಟ್ಟಿದ್ದರು ಐಂದ್ರಿತಾ.ಪ್ರಸಾದ್ ಬಿದಪ್ಪ ಗರಡಿಯ  ರೂಪದರ್ಶಿಗಳಾದ ಪಾರ್ತೊ, ನಿಲೋಫರ್‌ ಮತ್ತು ಆಕಾಂಕ್ಷಾ  ‘ಟ್ರೂಸೊ’ ಸಂಗ್ರಹದ ಒಡವೆಗಳನ್ನು ಪ್ರದರ್ಶಿಸಿದರು. ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ‘ಟ್ರೂಸೊ’ ಸಂಗ್ರಹಗಳ ಪ್ರದರ್ಶನದಲ್ಲಿ ಸಾಮಾನ್ಯವಾಗಿರುವಂತೆ ಆಮ್ರಪಾಲಿಯಲ್ಲೂ ಪೊಲ್ಕಿ, ಕುಂದನ್‌, ಹಾರದ ಒಳಭಾಗದಲ್ಲಿ ಮೀನಾಕರಿ ಚಿತ್ತಾರವುಳ್ಳ ಸಂಗ್ರಹಗಳನ್ನು ಧರಿಸಿ ಅವರು ಸರಣಿಯಲ್ಲಿ ಬಂದರು.ಮೊದಲಿಗೆ ಬಂದ ಆಕಾಂಕ್ಷಾ ಟೆಂಪಲ್‌ ಶೈಲಿಯ ಒಡವೆಗಳನ್ನು ಧರಿಸಿದ್ದರು. ಐದು ಬಗೆಯ ವಿನ್ಯಾಸಗಳಿದ್ದ ದೊಡ್ಡ ಹಾರದ ಪದಕದಲ್ಲಿ ನೃತ್ಯನಿರತ ಶಿವನನ್ನು ಅಕ್ಕಸಾಲಿಗರು ಕೈಯಲ್ಲಿ ವಿನ್ಯಾಸ ಮಾಡಿದ್ದು, ಇಡೀ ಹಾರಕ್ಕೆ ವಿಶೇಷ ತೂಕ ತಂದಿದೆ ಎಂದರು ಲಕ್ಷ್ಮೀ.ಮುಂದಲೆಗೆ, ಕಿವಿಗೆ, ತೋಳಿಗೆ, ಸೊಂಟಕ್ಕೆ, ಕೈಗೆ, ಬೆರಳಿಗೆ ಬಗೆ ಬಗೆಯ ಒಡವೆಗಳನ್ನು ಧರಿಸಿದ್ದರೂ ಅವೆಲ್ಲವನ್ನೂ ಮಿೀರಿಸುವಂತಿತ್ತು ಅವರ ಸ್ನಿಗ್ಧ ನಗೆ.

ನಂತರ ಬಂದ ರಷ್ಯಾದ ನಿಲೋಫರ್ ಪರಿಚಯಿಸಿದ್ದು ಮಾವಿನ ಮಿಡಿ ವಿನ್ಯಾಸದ ‘ಮ್ಯಾಂಗೋ ಮಾಲೆ’ಗಳನ್ನು.  ಕೆಂಪು ಮತ್ತು ಪಚ್ಚೆಯ ಎರಡು ಮಾವಿನ ಹಾರಗಳಿಗೆ ಸಾಥ್‌ ಕೊಡುವಂತೆ ಅದೇ ಮಾದರಿಯ ಸೊಂಟಪಟ್ಟಿಯನ್ನು ಅವರು ಧರಿಸಿದ್ದರು. ಅನ್‌ಕಟ್‌ ಡೈಮಂಡ್‌ನೊಂದಿಗೆ ರತ್ನಗಳನ್ನೂ ಒಳಗೊಂಡಿರುವ ಈ ಹಾರಗಳು ಮೈಸೂರು ಮಹಾರಾಜರ ಕಾಲದ ಶೈಲಿಗೆ ಆಧುನಿಕ ತಂತ್ರಗಾರಿಕೆಯನ್ನು ಬೆಸೆದು ಸಿದ್ಧವಾದವುಗಳು ಎಂದು ಮಾಹಿತಿ ನೀಡಲಾಯಿತು.ಅಂತರರಾಷ್ಟ್ರೀಯ ರ್‍್ಯಾಂಪ್‌ಗಳಲ್ಲೂ ಪಳಗಿದ ರೂಪದರ್ಶಿ ಪಾರ್ಥೊ ಪ್ರದರ್ಶಿಸಿದ್ದು ವಿಕ್ಟೋರಿಯನ್‌ ಕಲೆಕ್ಷನ್. ಲಂಡನ್‌ನ ಮಹಾರಾಣಿ ಮೆಚ್ಚಿದ್ದ ಮೀನಾಕರಿ ವಿನ್ಯಾಸದ ಹಾರ ಅವರ ಕೊರಳಲ್ಲಿತ್ತು. ವೆಸ್ಟರ್ನ್‌ ಉಡುಗೆಗೂ ಹೊಂದುವಂತಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಯರೂ ಭಾರತೀಯ ಸಾಂಪ್ರದಾಯಿಕ ಶೈಲಿಯ ಒಡವೆಗಳನ್ನೇ ಹೆಚ್ಚು ಇಷ್ಟಪಡುತ್ತಿರುವುದು ಭಾರತೀಯ ಆಭರಣ ಮಾರುಕಟ್ಟೆಯಲ್ಲಿನ ಹೊಸ ಬೆಳವಣಿಗೆ ಎಂದು ಲಕ್ಷ್ಮೀ ಅಭಿಪ್ರಾಯಪಟ್ಟರು.ನಿಲೋಫರ್‌ ಮತ್ತೆ ಬಂದಾಗ ಮುತ್ತಿನ ಒಡವೆಗಳಲ್ಲಿನ ವೈವಿಧ್ಯಕ್ಕೆ ಪ್ರತಿಮೆಯಂತೆ ಕಂಡರು. ಸೂಕ್ಷ್ಮವಾದ ಮುತ್ತುಗಳ ಹತ್ತಾರು ಎಳೆಗಳ ಸೊಂಟಪಟ್ಟಿಯಿಂದ ಹಿಡಿದು ಹಣೆಬೊಟ್ಟಿನವರೆಗೂ ಮುತ್ತಿನದೇ ವೈಭವ. ಉದ್ದನೆಯ ಕಂಠಹಾರದಲ್ಲಿ ಪಚ್ಚೆ ಮತ್ತು ಮುತ್ತಿನ ಜುಗಲ್‌ಬಂದಿಯಿತ್ತು. ಮಧ್ಯೆ ಮಿನುಗುತ್ತಿದ್ದ ಎಮರಾಲ್ಡ್‌ ದಕ್ಷಿಣ ಆಫ್ರಿಕಾದ್ದು. ಆಮ್ರಪಾಲಿಗೆ ಎಮರಾಲ್ಡ್‌ಗಳು ಪೂರೈಕೆಯಾಗುವುದು ಅಲ್ಲಿಂದಲೇ ಎಂದು ಲಕ್ಷ್ಮೀ ವಿವರಿಸಿದರು.

ದೇಶ ವಿದೇಶದ ಮಹಾರಾಣಿಯರ ಕಾಲದ ವಿನ್ಯಾಸದ ಒಡವೆಗಳನ್ನು ಆಮ್ರಪಾಲಿ ಸಮಕಾಲೀನ ವಿನ್ಯಾಸಗಳೊಂದಿಗೆ ಸಮ್ಮಿಶ್ರಗೊಳಿಸಿ ಪ್ರಸ್ತುತಪಡಿಸಿ

ರುವ ಸಂಗ್ರಹವಿದು. ವೈವಾಹಿಕ ಆಭರಣ ವಿನ್ಯಾಸಗಳ ಸಂಗ್ರಹವೆಂದು ಈ ‘ಟ್ರೂಸೊ’ ಸಂಗ್ರಹವನ್ನು ಕರೆದಿದ್ದರೂ ಯಾವುದೇ ಉಡುಗೆಯೊಂದಿಗೆ ಯಾವುದೇ ಸಂದರ್ಭಕ್ಕೆ ಒಪ್ಪುವ ಒಡವೆಗಳು ಇದರಲ್ಲಿರುವುದು ವಿಶೇಷ.ಐಂದ್ರಿತಾಗೆ ಈಗ ಒಡವೆಯ ಗೊಡವೆ

‘ಈ ನೆಕ್‌ಲೇಸ್‌ಗಳೆಲ್ಲ ನೋಡಲು ಭಾರವಿದ್ದಂತೆ ಅನಿಸುತ್ತದೆ ಅಷ್ಟೇ. ಹಿಡಿದು ನೋಡಿ. ಭಾರವಿಲ್ಲ. ಎಷ್ಟು ಚಂದ ಅಲ್ವಾ ಈ ವಿನ್ಯಾಸಗಳು?’ ಎಂದು ಮತ್ತಷ್ಟು ಕಣ್ಣರಳಿಸಿ ನಕ್ಕ ಐಂ-ದ್ರಿತಾ ಇಲ್ಲಿವರೆಗೂ ತಾವಾಗಿ ಆಭರಣ ಖರೀದಿಸಿಲ್ಲವೆಂದರು.‘ಚಿನ್ನ, ಒಡವೆಯೆಂದರೆ ನನಗೆ ಅಷ್ಟೇನೂ ಇಷ್ಟವಿಲ್ಲ. ಅಮ್ಮನೇ ನನಗಾಗಿ ಖರೀದಿಸುತ್ತಾರೆ. ಆದರೆ ಈಗ ನೋಡಿ ಇಷ್ಟೆಲ್ಲ ವೆರೈಟಿ ಒಡವೆ ಧರಿಸಿದ ಮೇಲೆ ನನಗೂ ಇಂತಹ ಕಲೆಕ್ಷನ್‌ ಬೇಕು ಅನ್ನಿಸ್ತಿದೆ. ಶ್ಯೂರ್‌. ನಾನು ಖರೀದಿಸುತ್ತೇನೆ’ ಎಂದು ಮತ್ತೆ ವಯ್ಯಾರದಿಂದ ನಕ್ಕರು.‘ಮುಂಚೆಯೆಲ್ಲ ನೆಕ್‌ಲೇಸ್‌, ಹಾರಗಳು ಸೀರೆಗಷ್ಟೇ ಸೀಮಿತವಾಗಿದ್ದವು. ಈಗ ಹಾಗಲ್ಲ. ವೆಸ್ಟರ್ನ್‌ವೇರ್‌ಗೂ ಅವುಗಳನ್ನು ಧರಿಸುವುದು ಟ್ರೆಂಡ್‌. ಸೋ ನೈಸ್‌ ಅಲ್ವಾ’ ಎಂದು ಮೀನಾಕರಿ ನೆಕ್‌ಲೇಸ್‌ನ ಮುಟ್ಟಿಕೊಂಡರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.