ಸೋಮವಾರ, ಮೇ 17, 2021
26 °C

ಒಡಿಶಾ ಕ್ರಮಕ್ಕೆ ಕೇಂದ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಟಲಿ ಪ್ರಜೆ ಮತ್ತು ಶಾಸಕರೊಬ್ಬರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಮಾವೊವಾದಿಗಳು ಬಂಧನದಲ್ಲಿರುವ ತಮ್ಮ ಸಹಚರರನ್ನು ಬಿಡುಗಡೆ ಮಾಡುವಂತೆ ಹಾಕಿರುವ ಷರತ್ತಿಗೆ ಒಪ್ಪಿ, ಕೈದಿಗಳ ಬಿಡುಗಡೆಗೆ ಮುಂದಾಗಿರುವ ಒಡಿಶಾ ಸರ್ಕಾರದ ಕ್ರಮವನ್ನು ಕೇಂದ್ರ ವಿರೋಧಿಸಿದೆ.ಮಾವೊವಾದಿಗಳಿಂದ ಇಟಲಿ ಪ್ರಜೆ ಮತ್ತು ಶಾಸಕರ ಅಪಹರಣ ಮತ್ತು ತತ್ಸಂಬಂಧ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಒತ್ತೆಯಾಳುಗಳನ್ನು ರಕ್ಷಿಸಲು ಸೆರೆಯಾಳುಗಳಾದ ನಕ್ಸಲರನ್ನು ಬಿಡುವ ಷರತ್ತಿಗೆ ಒಪ್ಪಿ, ಆ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿರುವ ಒಡಿಶಾ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ.ಈ ಬಿಕ್ಕಟ್ಟು ಪರಿಹರಿಸಲು ನೆರವು ನಿರೀಕ್ಷಿಸಿರುವ ಒಡಿಶಾ ಸರ್ಕಾರದ ಕೋರಿಕೆಯನ್ನು ಮನ್ನಿಸದ ಕೇಂದ್ರ ಗೃಹ ಸಚಿವಾಲಯ, ಒಡಿಶಾ ಸರ್ಕಾರ ಮತ್ತು ಮಾವೊವಾದಿಗಳ ನಡುವೆ ಯಾವುದೇ ಸಂಧಾನ ಕ್ರಿಯೆಯಲ್ಲಿ ಭಾಗಿಯಾಗಿಲ್ಲ.ಒಡಿಶಾ ಸರ್ಕಾರ ಮಾವೊವಾದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಮತ್ತಷ್ಟು ಅಪಹರಣ ಚಟುವಟಿಕೆಗಳಿಗೆ ಕಾರಣವಾಗಬಹುದು. ನಕ್ಸಲರು ಗಣ್ಯರನ್ನು ಅಪಹರಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇದು ಪ್ರೇರೇಪಿಸುತ್ತದೆ. ಬಂಧನದಲ್ಲಿರುವ ತಮ್ಮ ಸಹಚರರು ಇಲ್ಲವೆ ತಮ್ಮ ಬಗ್ಗೆ ಅನುಕಂಪ ಹೊಂದಿರುವವರ ಬಿಡುಗಡೆಗೆ ಮುಂದೆಯೂ ಇದೇ ರೀತಿಯ ಷರತ್ತುಗಳನ್ನು ಹಾಕುತ್ತಾರೆ ಎಂದು ಗೃಹ ಸಚಿವಾಲಯ ಅಭಿಪ್ರಾಯಪಟ್ಟಿದೆ.ಮಾವೊವಾದಿಗಳು ಬಿಜೆಡಿ ಶಾಸಕ ಮತ್ತು ಇಟಲಿಯ ಪ್ರವಾಸಿ ಮಾರ್ಗದರ್ಶಿಯೊಬ್ಬರನ್ನು ಅಪಹರಿಸಿದ್ದು ಬಿಡುಗಡೆ ಮಾಡಲು ಹಲವು ಷರತ್ತಗಳನ್ನು ವಿಧಿಸಿದ್ದು,ಇದರಲ್ಲಿ ಕಾರಾಗೃಹದಲ್ಲಿರುವ ನಕ್ಸಲರ ಬಿಡುಗಡೆಯೂ ಸೇರಿದೆ.

ಸರ್ಕಾರ- ನಕ್ಸಲರ ಮಧ್ಯೆ ಹೊಸದಾಗಿ ಚರ್ಚೆ

ಭುವನೇಶ್ವರ (ಪಿಟಿಐ): ಅಪಹೃತ ಬಿಜೆಡಿ ಶಾಸಕ ಜಿನಾ ಹಿಕಾಕಾ ಮತ್ತು ಇಟಲಿ ಪ್ರಜೆ ಪೊಲೊ ಬೊಸುಕೊ ಬಿಡುಗಡೆಗೆ ಪ್ರತಿಯಾಗಿ 27 ನಕ್ಸಲರನ್ನು ಜೈಲಿನಿಂದ ಬಿಡುಗಡೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದ ನಂತರ ಶುಕ್ರವಾರ ಮಾವೊವಾದಿಗಳ ಪರ ಸಂಧಾನಕಾರರು ಮತ್ತು ಸರ್ಕಾರದ ಮಧ್ಯೆ ಹೊಸದಾಗಿ ಮಾತುಕತೆ ನಡೆದಿದೆ.ಗೃಹ ಕಾರ್ಯದರ್ಶಿ ಯು.ಎನ್. ಬೆಹೆರಾ ನೇತೃತ್ವದ ಸರ್ಕಾರದ ತಂಡ ಮತ್ತು ಮಾವೊವಾದಿಗಳ ಪರ ಸಂಧಾನಕಾರರಾದ ಬಿ. ಡಿ. ಶರ್ಮಾ ಹಾಗೂ ದಂಡಪಾಣಿ ಮೊಹಂತಿ ಮಧ್ಯೆ ಬಿಡುಗಡೆಗೊಳ್ಳಲಿರುವ ನಕ್ಸಲರ ಹೆಸರುಗಳು ಮತ್ತು ಇತರ ಬೇಡಿಕೆಗಳ ಬಗ್ಗೆ ಚರ್ಚೆ ನಡೆದಿದೆ.ಸಿಪಿಐ ಒಡಿಶಾ ಸಂಘಟನಾ ಕಾರ್ಯದರ್ಶಿ ಸವ್ಯಸಾಚಿ ಪಾಂಡೆ  ಧ್ವನಿಮುದ್ರಿತ ಸಂದೇಶದಲ್ಲಿ ಇಟಲಿ ಪ್ರಜೆಯ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ತಮ್ಮ ಪತ್ನಿ ಶುಭಶ್ರೀ ದಾಸ್ ಅವರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.