ಒಡಿಶಾ ಮೂಲದ ದಿನಗೂಲಿ ಕಾರ್ಮಿಕರ ಬಿಡುಗಡೆ

7
ಇಟ್ಟಿಗೆ ಕಾರ್ಖಾನೆಯಲ್ಲಿ ಒತ್ತೆಯಾಗಿಟ್ಟುಕೊಂಡ ದೂರು

ಒಡಿಶಾ ಮೂಲದ ದಿನಗೂಲಿ ಕಾರ್ಮಿಕರ ಬಿಡುಗಡೆ

Published:
Updated:
ಒಡಿಶಾ ಮೂಲದ ದಿನಗೂಲಿ ಕಾರ್ಮಿಕರ ಬಿಡುಗಡೆ

 


ಯಲಹಂಕ: ಒತ್ತೆಯಾಗಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಾಗಲೂರು ಗೋಪಾಲಪುರ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ, ಸ್ಥಳೀಯ ಪೊಲೀಸರ ನೆರವಿನಿಂದ ಇಟ್ಟಿಗೆ ಗೂಡಿನ ಶೆಡ್‌ಗಳಲ್ಲಿ ಇದ್ದ ಒಡಿಶಾ ಮೂಲದ 12 ಮಕ್ಕಳು ಸೇರಿದಂತೆ 62 ಮಂದಿ ದಿನಗೂಲಿ ಕಾರ್ಮಿಕರನ್ನು ಬಿಡುಗಡೆಗೊಳಿಸಿತು.

 

ಒಡಿಶಾ ಮೂಲದ ದಿನಗೂಲಿ ಕಾರ್ಮಿಕರನ್ನು ಒತ್ತೆಯಾಗಿರಿಸಿಕೊಳ್ಳಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು `ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್' ಸಂಸ್ಥೆಯು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಗುರುವಾರ ಬೆಳಗ್ಗೆ 8.30ಕ್ಕೆ ಗೋಪಾಲಪುರ ಗ್ರಾಮದಲ್ಲಿರುವ ಮಂಜುನಾಥ್ ಎಂಬುವರಿಗೆ ಸೇರಿದ `ಎಸ್‌ಎಂಜಿ ಬ್ರಿಕ್ಸ್' ಎಂಬ ಇಟ್ಟಿಗೆ ಕಾರ್ಖಾನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ದಿನಗೂಲಿ ಕಾರ್ಮಿಕರನ್ನು ಬಿಡುಗಡೆಗೊಳಿಸಿ, ವಿಚಾರಣೆಗಾಗಿ ತಹಸೀಲ್ದಾರ್ ಕಚೇರಿಗೆ ಕರೆತಂದರು.

 


ಬೆಂಗಳೂರು ಉತ್ತರ (ಹೆಚ್ಚುವರಿ) ತಹಸೀಲ್ದಾರ್ ಕೆ.ರಂಗನಾಥ್ ಪ್ರತಿಕ್ರಿಯಿಸಿ, ಕಾರ್ಖಾನೆ ಮಾಲೀಕರು ಒಡಿಶಾ ಮೂಲದ 14 ಕುಟುಂಬಗಳ ಸದಸ್ಯರಿಂದ ಕಾನೂನಿನ ರೀತಿಯಲ್ಲಿ  ಕೆಲಸ ಮಾಡಿಸಿಕೊಳ್ಳುತ್ತ್ದ್ದಿದಾರೆಯೆ ಅಥವಾ ಊರಿಗೆ ಹೋಗಿ ಬರಲು ಯಾವುದೇ ಸ್ವಾತಂತ್ರ್ಯ ನೀಡದೆ ಜೀತದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುವುದು. ನಂತರ ಅಗತ್ಯ ಬಿದ್ದರೆ ಅವರನ್ನು ಅವರ ರಾಜ್ಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

 


ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಎಸ್ತರ್ ಡ್ಯಾನಿಯಲ್, `ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ, ದಿನಗೂಲಿ ಕಾರ್ಮಿಕರನ್ನು ಬಿಡುಗಡೆಗೊಳಿಸಿದ್ದಾರೆ. ಅವರ ಸಂಪೂರ್ಣ ವಿವರ ಪಡೆದು,   ಅವರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು' ಎಂದರು. ಉಪ ವಿಭಾಗಾಧಿಕಾರಿ ಕಾಂತರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಎಸ್.ಸಿದ್ದರಾಮಣ್ಣ, ಕಾರ್ಮಿಕ ಇನ್‌ಸ್ಪೆಕ್ಟರ್ ವರಲಕ್ಷ್ಮಿ, ಕಾರ್ಮಿಕ ಅಧಿಕಾರಿಗಳಾದ ಶಬನಾ, ರಾಮಯ್ಯ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry