ಒಡಿಸ್ಸಿ ನೂಪುರ, ಬೇಂದ್ರೆ ಸ್ವರ

7

ಒಡಿಸ್ಸಿ ನೂಪುರ, ಬೇಂದ್ರೆ ಸ್ವರ

Published:
Updated:

ಒಡಿಸ್ಸಿ ದೇಶದ ಅತಿ ಪ್ರಾಚೀನ ನೃತ್ಯ ಪ್ರಕಾರ. ಜನಿಸಿದ್ದು ಕ್ರಿ.ಪೂ. ಮೊದಲನೆಯ ಶತಮಾನದಲ್ಲಿ, ಒಡಿಶಾ ರಾಜಧಾನಿ ಭುವನೇಶ್ವರ ಬಳಿಯ ಉದಯಪುರದಲ್ಲಿ. ನಂತರ ಅದು ಹೆಮ್ಮರವಾಗಿ ನಿಂತ ಪರಿ ಅನನ್ಯ. ಅದಾದ ಸಾವಿರಾರು ವರ್ಷಗಳ ಬಳಿಕ ಒಡಿಸ್ಸಿ ನೃತ್ಯದ ಪ್ರಯೋಗಶಾಲೆಯಾಗಿ ನಗರದ ಹೆಸರಘಟ್ಟ ಬಳಿ ನೃತ್ಯಗ್ರಾಮ ರೂಪುಗೊಂಡು ದೇಶ ವಿದೇಶಗಳಲ್ಲಿ ಒಡಿಸ್ಸಿ ನೃತ್ಯವನ್ನು ಪ್ರಚುರಪಡಿಸಿತು

.

ಒಡಿಶಾ ನೃತ್ಯಕ್ಕೂ, ನೃತ್ಯಗ್ರಾಮಕ್ಕೂ ಈಗ ಹೇಳಲಿರುವ ನೃತ್ಯಗಾರ್ತಿಗೂ ಪರಸ್ಪರ ನಂಟಿದೆ. ಶೃಂಗೇರಿ ಮೂಲದ ವಂದನಾ ಸುಪ್ರಿಯಾ ಹೊಸ ತಲೆಮಾರಿನ ಒಡಿಸ್ಸಿ ನೃತ್ಯಗಾರ್ತಿ. ಪಾರಂಪರಿಕ ನೃತ್ಯ ಪ್ರಕಾರ ಹಾಗೂ ಅತ್ಯಾಧುನಿಕ ಫ್ಯಾಷನ್ ಲೋಕ ಎರಡರಲ್ಲೂ ಮಿಂಚಿದ ಪ್ರತಿಭೆ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಓದುತ್ತ, ಜಾಹೀರಾತು ಜಗತ್ತಿನಲ್ಲಿ ಅಡ್ಡಾಡುತ್ತ, ನೃತ್ಯದ ಬೆನ್ನೇರಿದಾಕೆ. ನೃತ್ಯಗ್ರಾಮದ ಸನಿಹವೇ ಇತ್ತು ಅವರ ತಂದೆ ಮನೆ. ನಿತ್ಯ ಕೇಳುತ್ತಿದ್ದ ಗೆಜ್ಜೆ ಸದ್ದು ಒಂದು ದಿನ ಗಂಧರ್ವ ಲೋಕದೆಡೆಗೆ ಸೆಳೆಯಿತು. ಮುಂದೆ ಏಳೆಂಟು ವರ್ಷಗಳ ಕಾಲ ನೃತ್ಯಾಭ್ಯಾಸ, ಜತೆಗೇ ವ್ಯಾಸಂಗ. ಶುರೂಪಾ ಸೇನ್, ಬಿಜಯಾನಿ ಸತ್ಪತಿ, ಸರಿತಾ ಮಿಶ್ರಾ ಕಲಾ ಗುರುಗಳು. ಸ್ಟೆಮ್ ನೃತ್ಯಶಾಲೆ ಹಾಗೂ ಮಾಯಾರಾವ್ ಅವರ ನಾಟ್ಯ ಸಂಸ್ಥೆಗಳಲ್ಲಿ ದುಡಿದ ಅನುಭವ.ನೃತ್ಯ ನೋಡುತ್ತ, ನೋಡುತ್ತ ನೃತ್ಯವೇ ತಾನಾದ ಆಕೆಗೆ ನೃತ್ಯಗ್ರಾಮವೆಂದರೆ ಕುಣಿವ ಕಾರಂಜಿ. `ಬೆಳಿಗ್ಗೆಯೇ ಎದ್ದು ನೃತ್ಯ ಕಲಿಕೆ. ಗುರುಕುಲ ಪದ್ಧತಿಯ ಕಠಿಣ ಶಿಕ್ಷಣ. ನಂತರ ನೃತ್ಯ ಕುಟೀರಗಳನ್ನು ಶುಭ್ರಗೊಳಿಸುವ ಕಾರ್ಯ. ಕಲಿಯುವವರಿಗೆ ಕಲಿಯುವಷ್ಟೂ ಅವಕಾಶ ಅಲ್ಲಿತ್ತು~ ಎನ್ನುತ್ತ ಹುರುಪುಗೊಳ್ಳುತ್ತಾರೆ. ಈ ಮಧ್ಯೆ ಕೆಲವು ಸಿನಿಮಾ ಅವಕಾಶಗಳು ಅರಸಿ ಬಂದದ್ದುಂಟು. ಆದರೆ ಕಮರ್ಷಿಯಲ್ ಸಿನಿಮಾಗಳತ್ತ ಅಷ್ಟು ಒಲವಿರಲಿಲ್ಲ. ಪರಿಣಾಮ ಜಾಹೀರಾತುಗಳಿಗೆ, ಸಾಕ್ಷ್ಯಚಿತ್ರಗಳಿಗೆ ಸೀಮಿತವಾದರು. ಇದೀಗ ವಂದನಾ ಮತ್ತೊಂದು ಪರಿಕ್ರಮಕ್ಕೆ ಮುಂದಾಗಿದ್ದಾರೆ.ಬೇಂದ್ರೆ ಹಾಡಿಗೆ ನೃತ್ಯರೂಪ

ಸದಾ ಹೊಸದರ ಬಗ್ಗೆ ತುಡಿಯುವ ವಂದನಾ ಈಗ ಬೇಂದ್ರೆ ಧ್ಯಾನದಲ್ಲಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಬೇಂದ್ರೆ ಗೀತೆಗಳನ್ನು ಅವರು ನೃತ್ಯ ರೂಪಕ್ಕೆ ಇಳಿಸುತ್ತಿದ್ದಾರೆ. ಬೇಂದ್ರೆಯವರ ಸುಮಾರು ಹತ್ತು ಹಾಡುಗಳನ್ನು ಆಯ್ದು ನೃತ್ಯ ಸಂಯೋಜಿಸಲಾಗುತ್ತಿದೆ. ಅವರ ಈ ಕಾರ್ಯಕ್ಕೆ ಸ್ಫೂರ್ತಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ. ವಂದನಾ ಅವರ ಈ ಕಾರ್ಯಕ್ಕೆ ಅನನ್ಯ ಸಂಸ್ಥೆಯ ರಾಘವೇಂದ್ರ, ಸಂಗೀತ ವಿದ್ವಾಂಸ ಗಣೇಶ್ ದೇಸಾಯಿ ಅವರ ಸಾಥ್ ಇದೆ.

ಪೂರ್ವ ತಯಾರಿಗೆ ಸುಮಾರು ಮೂರು ತಿಂಗಳ ಕಾಲ ಹಿಡಿದಿದೆ.

`ನಾದಲೋಲ ಬೇಂದ್ರೆ ಕಾವ್ಯಗಳ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅವರ ಕಾವ್ಯವನ್ನು ಒಂದಲ್ಲಾ ಒಂದು ದಿನ ನೃತ್ಯದ ಮೂಲಕ ಹೇಳುವ ತವಕ ಹೊಂದಿದ್ದೆ. ಆ ಕನಸು ನನಸಾಗುವ ಕಾಲ ಈಗ ಬಂದಿದೆ. ವೈಜಯಂತಿ ಇಂಥ ಪ್ರಯೋಗವನ್ನು ಭರತನಾಟ್ಯದಲ್ಲಿ ಮಾಡಿದ್ದರು. ಕಾರ್ಯಕ್ರಮದ ಮೂಲಕ ಒಡಿಸ್ಸಿಗೆ ಕನ್ನಡದ ಸ್ಪರ್ಶ ನೀಡುವುದು ನನ್ನ ಗುರಿ~ ಎನ್ನುತ್ತಾರೆ ವಂದನಾ. ಕಾರ್ಯಕ್ರಮ ರೂಪುಗಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೂ ಶ್ರಮಿಸುತ್ತಿದ್ದಾರೆ.ಎಲ್ಲಾ ಅಂದುಕೊಂಡಂತೆ ಆದರೆ ಶೀಘ್ರವೇ ಬೇಂದ್ರೆ ಗೆಜ್ಜೆಗಳಲ್ಲಿ ಮಿಡಿಯಲಿದ್ದಾರೆ.

ಅಕ್ಕ ಸಮ್ಮೇಳನ, ಬೆಂಗಳೂರು ಹಬ್ಬ ಸೇರಿದಂತೆ ಹಲವು ನಾಡ ಉತ್ಸವಗಳಲ್ಲಿ, ವಂದನಾ ಹೆಜ್ಜೆ ಹಾಕಿದ್ದಾರೆ. ಪದವಿ ಬಳಿಕ ಮನಶಾಸ್ತ್ರದಲ್ಲಿ ಡಿಪ್ಲೊಮಾ ಪಡೆದಿರುವ ಅವರಿಗೆ ಕೆಎಎಸ್ ಅಧಿಕಾರಿಯಾಗುವ ಬಯಕೆ. ಶೃಂಗೇರಿಯಂಥ ಪುಟ್ಟ ಊರಿನ ಮಂದಿಗೆ ಒಡಿಸ್ಸಿ ಕಲಿಸಬೇಕು ಎಂಬುದು ಅವರದು ದೊಡ್ಡ ಕನಸು. ಬೇಂದ್ರೆ ಪ್ರಾಜೆಕ್ಟ್ ನಂತರ ಈ ಕನಸಿನ ಕೈ ಹಿಡಿಯುವರಂತೆ ವಂದನಾ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry