ಗುರುವಾರ , ಮಾರ್ಚ್ 4, 2021
16 °C
ಎರಡು ತಿಂಗಳ ಹಿಂದೆ ಹೂಳು ತೆಗೆಸಿದ ಕಾಮಗಾರಿ ಕಳಪೆ: ಆರೋಪ, ಬೆಳೆ ಪರಿಹಾರಕ್ಕೆ ರೈತರ ಆಗ್ರಹ

ಒಡೆದ ದೊಡ್ಡಕೆರೆ ಏರಿ; ಬೆಳೆ ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಡೆದ ದೊಡ್ಡಕೆರೆ ಏರಿ; ಬೆಳೆ ನೀರುಪಾಲು

ಅರಕಲಗೂಡು: ತಾಲ್ಲೂಕಿನ ಇಬ್ಬಡಿ ಗ್ರಾಮದ ದೊಡ್ಡಕೆರೆ ಏರಿ ಒಡೆದು ತಳಭಾಗದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.ಏರಿ ಒಡೆದು ನೀರು ನುಗ್ಗಿದ ರಭಸಕ್ಕೆ ತೂಬಿಗೆ ಅಳವಡಿಸಿದ್ದ ಕೊಳವೆಗಳು ಸಹ ಕೊಚ್ಚಿಕೊಂಡು ಹೋಗಿವೆ. ತಳಭಾಗದ ನೂರಾರು ಎಕರೆ ಜಮೀನು ಜಲಾವೃತಗೊಂಡಿದ್ದು ಇಲ್ಲಿ ಬೆಳೆಯಲಾಗಿದ್ದ ತಂಬಾಕು, ಜೋಳ, ಆಲೂಗೆಡ್ಡೆ, ಶುಂಠಿ,ನಾಟಿ ಮಾಡಲು ಸಿದ್ಧಪಡಿಸಿದ್ದ ಭತ್ತದ ಸಸಿಮಡಿಗಳು ಕೊಚ್ಚಿಹೋಗಿವೆ. ಜಮೀನಿನಲ್ಲಿ ಮಣ್ಣು, ಕಲ್ಲು, ಮರಳು ತುಂಬಿಕೊಂಡಿರುವ ಪರಿಣಾಮವಾಗಿ ಮುಂದಿನ ಬೇಸಾಯ ಕಾರ್ಯಗಳನ್ನು ನಡೆಸಲೂ ಸಹ ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ತಳಬಾಗದ ತೋಟಗಳಲ್ಲಿ ನೀರು ತುಂಬಿರುವ ಕಾರಣ ತೆಂಗು, ಅಡಿಕೆ, ಬಾಳೆ, ವೀಳ್ಯದೆಲೆ ಬೆಳೆ ಹಾಳಾಗುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.ಕಳಪೆ ಕಾಮಗಾರಿ ಆರೋಪ: ಗ್ರಾಮದ ದೊಡ್ಡಕೆರೆಯು 80 ಎಕರೆ ವಿಸ್ತೀರ್ಣವಿದ್ದು 300 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕಳೆದ ಕೆಲ ದಿನಗಳಿಂದ ಹೇಮಾವತಿ ಬಲಮೇಲ್ದಂಡೆ ನಾಲೆಯಿಂದ ನೀರು ಹರಿಸಿ ಕೆರೆ ತುಂಬಿಸಲಾಗಿತ್ತು. ಸುಮಾರು ಎರಡು ತಿಂಗಳ ಹಿಂದೆ ಕೆರೆ ಏರಿಯ ರಸ್ತೆ, ತೂಬು ಹಾಗೂ ಹೂಳು ತೆಗೆಯುವ ಕಾಮಗಾರಿಯನ್ನು ₹ 70 ಲಕ್ಷ ವೆಚ್ಚದಲ್ಲಿ ನಿರ್ವಹಿಸಲಾಗಿತ್ತು. ಕಳಪೆ ಕಾಮಗಾರಿಯ ಪರಿಣಾಮವಾಗಿ ಕೆರೆ ಒಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಕಾಮಗಾರಿ ನಡೆಯುವಾಗಲೇ ಕಾಮಗಾರಿ ಗುಣಮಟ್ಟ ಉತ್ತಮವಾಗಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.ಸಾಕಷ್ಟು ಮಳೆಯಾಗದೆ, ಸಂಕಷ್ಟದ ಸಮಯದಲ್ಲಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಒಂದೇ ರಾತ್ರಿಯಲ್ಲಿ ಹಾಳಾಗಿದೆ. ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳಬೇಕು. ಹಾಳಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ಮಣ್ಣು, ಕಲ್ಲಿನಿಂದ ತುಂಬಿರುವ ಜಮೀನುಗಳನ್ನು ವ್ಯವಸಾಯ ಯೋಗ್ಯವಾಗಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಘೋಷಣೆಗಳನ್ನು ಕೂಗಿದರು.ಆಗ್ರಹ: ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎಚ್‌. ಯೋಗಾರಮೇಶ್‌ ಸುದ್ದಿಗಾರರೊಂದಿಗೆ ಮಾತನಾಡಿ, ಕೆರೆಯ ಏರಿ ಒಡೆಯಲು ಕಳಪೆ ಕಾಮಗಾರಿಯೇ ಕಾರಣ. ನೂರಾರು ಏಕರೆ ಬೆಳೆ ನಾಶವಾಗಿದ್ದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ನಾಲೆಯಲ್ಲಿ ನೀರು ಬಿಡುತ್ತಿದ್ದಂತೆ ಕೆರೆ, ನಾಲೆಗಳು ಒಡೆದು ರೈತರಿಗೆ ಸಂಕಷ್ಟ ಉಂಟಾಗುತ್ತಿದೆಯಲ್ಲದೆ ವ್ಯರ್ಥವಾಗಿ ನೀರು ಪೋಲಾಗುತ್ತಿದೆ. ಇದು ಪ್ರತಿವರ್ಷ ಪುನರಾವರ್ತನೆ ಯಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ. ಸಚಿವರು ಇತ್ತಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.15 ದಿನಗಳಲ್ಲಿ ಕೆರೆ ಏರಿಯನ್ನು ಗುಣಮಟ್ಟದ ಕಾಮಗಾರಿ ನಡೆಸಿ ದುರಸ್ತಿಗೊಳಿಸಬೇಕು. ಬೆಳೆನಷ್ಟ ವಾಗಿರುವ ರೈತರಿಗೆ ಪರಿಹಾರ ನೀಡಬೇಕು, ಇಲ್ಲದಿದ್ದಲ್ಲಿ ರೈತರೊಂದಿಗೆ ಸೇರಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಸ್ಥಳಕ್ಕೆ ಭೇಟಿ ನೀಡಿದ್ದ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ವೀಣಾ ಮಂಜುನಾಥ್‌ ಮಾತನಾಡಿ, ಕಳಪೆ ಕಾಮಗಾರಿಯ ಕಾರಣ ಕೆರೆಯ ಏರಿ ಒಡೆದಿದೆ. ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ಎ.ಮಂಜು ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಕೆರೆ ದುರಸ್ತಿ ಹಾಗೂ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.ಜಿಲ್ಲಾ ಪಂಚಾಯತಿ ಸದಸ್ಯ ಬಿ.ಎಂ.ರವಿ ಮಾತನಾಡಿ, ಘಟನೆ ಕುರಿತು ಈ ತಿಂಗಳ 23ರಂದು ನಡೆಯುವ ಜಿ.ಪಂ. ಸಭೆಯಲ್ಲಿ ಪ್ರಸ್ತಾಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಯತ್ನಿಸುವುದಾಗಿ ತಿಳಿಸಿದರು. ರೈತರಿಗೆ ಅಗತ್ಯವಾದ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವುದಾಗಿ  ತಿಳಿಸಿದರು.ಸ್ವಲ್ಪದರಲ್ಲೇ ತಪ್ಪಿದ ಅಪಾಯ!

ಇಬ್ಬಡಿ ಗ್ರಾಮದಲ್ಲಿ ಸುಮಾರು 500 ಲೀಟರ್‌ಗೂ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರು ಅಜ್ಜೂರು ಗ್ರಾಮದ ಹಾಲಿನ ಡೇರಿಗೆ ಹಾಲನ್ನು ನೀಡುತ್ತಿದ್ದು ಕೆರೆಯ ಏರಿಯ ಮೇಲೆ ಓಡಾಡಬೇಕಿದೆ. ರಾತ್ರಿ 8 ಕ್ಕೆ ಹಾಲು ನೀಡಿ ವಾಪಸ್ಸಾಗಿದ್ದೆವು. 8.30ಕ್ಕೆ ಈ ಘಟನೆ ಸಂಭವಿಸಿದ್ದು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದೇವೆ ಎಂದು ಗ್ರಾಮದ ಜವರೇಗೌಡ ತಿಳಿಸಿದರು.

ಹಾಲು ನೀಡಲು ಇದೇ ಏರಿಯ ಮೇಲೆ ಹೋಗುವುದಾದಲ್ಲಿ ಒಂದೂವರೆ ಕಿ.ಮೀ. ಕ್ರಮಿಸಬೇಕಿತ್ತು. ಈಗ ಬಳಸು ದಾರಿಯಲ್ಲಿ  ತೆರಳಬೇಕಿದ್ದು 8 ಕಿ.ಮೀ. ದೂರವಾಗುತ್ತದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.