ಒಡೆಯನ ಭಾವನೆಗಳಿಗೆ ಸ್ಪಂದಿಸುವ ಫೋನ್

7

ಒಡೆಯನ ಭಾವನೆಗಳಿಗೆ ಸ್ಪಂದಿಸುವ ಫೋನ್

Published:
Updated:
ಒಡೆಯನ ಭಾವನೆಗಳಿಗೆ ಸ್ಪಂದಿಸುವ ಫೋನ್

ಈ ಮೊಬೈಲ್ ಎಂಬುದು ಈಗ ಜಾದೂ ಪೆಟ್ಟಿಗೆಯಾ    ಗಿದೆ~ ಎಂದುಬಿಟ್ಟರೆ ಎಲ್ಲ ಹೇಳಿದಂತಾಯಿತೆ? ನಿಮಗೂ ಎಲ್ಲ ಅರ್ಥವಾದಂತಾಯಿತೆ?ಇಲ್ಲಿ ಕೇಳಿ. ಕ್ಷಮಿಸಿ, ಓದಿಕೊಳ್ಳಿ.ನೀವಿಗ ತಕ್ಷಣವೇ ಮನೆಗೊ, ಕಚೇರಿಗೊ ದೂರವಾಣಿ ಕರೆ ಮಾಡಲೇಬೇಕಿದೆ. ಕ್ಷಣ ಕೂಡ ತಡಮಾಡುವಂತಿಲ್ಲ. ಆದರೆ, ನೀವು ಕಾರು ಚಾಲನೆಯಲ್ಲಿದ್ದೀರಿ. ಜತೆಗೆ ಅದು ಭಾರಿ ದಟ್ಟಣೆ ಇರುವ ಮಾರ್ಗ. ಕಾರನ್ನು ರಸ್ತೆ ಪಕ್ಕಕ್ಕೆ ಸರಿಸಿ ನಿಲ್ಲಿಸೋಣವೆಂದರೆ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಎಡ-ಬಲದಲ್ಲಿ ವಾಹನಗಳು ಶರವೇಗದಲ್ಲಿ ಸಾಗುತ್ತಲೇ ಇವೆ. ಕಾರನ್ನು ತಿರುಗಿಸಿ ಪಕ್ಕಕ್ಕೆ ನಿಲ್ಲಿಸಲು ಅವಕಾಶವೇ ಇಲ್ಲದಂತಹ ಸಂದರ್ಭ. ಆದರೂ ತಕ್ಷಣವೇ ದೂರವಾಣಿ ಕರೆ ಮಾಡಬೇಕು. ಏನು ಮಾಡುವುದು?ಅದಕ್ಕೇಕಿಷ್ಟು ಚಿಂತೆ! ಸುಮ್ಮನೆ ಒಮ್ಮೆ `ಕಾಲ್~ ಎಂದರಾಯಿತು. ಡ್ಯಾಷ್ ಬೋರ್ಡಿನ ಮೇಲೆ ತಣ್ಣಗೆ ಮಲಗಿರುವ ಮೊಬೈಲ್ ಫೋನ್ ಮೆಲ್ಲಗೆ ಆಕಳಿಸಿ ತನ್ನನ್ನು ತಾನು `ಕರೆ~ಗೆ ಸಿದ್ಧಪಡಿಸಿಕೊಳ್ಳುತ್ತದೆ. ನಂತರ ಸಂಪರ್ಕಿಸಬೇಕಾದ ವ್ಯಕ್ತಿಯ ಹೆಸರು ಹೇಳಿದರೆ `ಕಾಂಟ್ಯಾಕ್ಟ್ ಬುಕ್~ ಶೋಧಿಸಿ ಅಂಥ ಹೆಸರು ಅದರಲ್ಲಿದ್ದರೆ ಆ ಸಂಖ್ಯೆಗೆ ಡಯಲ್ ಮಾಡುತ್ತದೆ. ನೀವು ಕಾರಿನ ಚಾಲನೆ ಮುಂದುವರಿಸಿರಬಹುದು.ಮೊಬೈಲ್ ಡ್ಯಾಷ್‌ಬೋರ್ಡ್ ಮೇಲೇ ಇದ್ದರೂ ಕರೆ ಮಾಡಿದ ವ್ಯಕ್ತಿಯ ಫೋನ್ ರಿಂಗ್ ಆಗುತ್ತಿರುವುದು ನಿಮ್ಮ ಕಿವಿಗೂ ಬೀಳುತ್ತಿರುತ್ತದೆ. ಅತ್ತ ಕಡೆ ವ್ಯಕ್ತಿ ಕರೆ ಸ್ವೀಕರಿಸಿದ್ದು ತಿಳಿಯುತ್ತಲೇ `ಹಾಯ್...~ ಎಂದು ಮಾತು ಮುಂದುವರಿಸಿದರಾಯಿತು!

ಫೋನ್ ಕೈಗೆತ್ತಿಕೊಳ್ಳದೇ, ಇಯರ್‌ಫೋನನ್ನೋ, ಬ್ಲ್ಯೂಟೂತ್ ಸಾಧನವನ್ನೋ ಕಿವಿಗೂ ಸಿಕ್ಕಿಸಿಕೊಳ್ಳದೇ ಮಾತುಕತೆ ಸರಾಗವಾಗಿ ಪೂರೈಸಬಹುದು.ಕರೆ ಮಾಡುವುದು ಎಷ್ಟು ಸುಲಭದ್ದು ಎಂದರೆ ಕಾರು ಚಾಲನೆ ಮಾಡುತ್ತಲೇ ಜತೆಗಿರುವ ವ್ಯಕ್ತಿಯೊಂದಿಗೆ ಹರಟೆ ಹೊಡೆದಷ್ಟೇ ಸಲೀಸು. ಇಂಥ ಸೌಲಭ್ಯ ಸಾಧ್ಯವಾಗಿರುವುದು `ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್~ ಇತ್ತೀಚೆಗೆ ಭಾರತದ ಮಾರುಕಟ್ಟೆಗೆ ಪರಿಚಯಿಸಿರುವ `ಗ್ಯಾಲಕ್ಸಿ ಎಸ್3~ ಎಂಬ ಸ್ಮಾರ್ಟ್‌ಫೋನ್‌ನಿಂದ!ಈ ಗ್ಯಾಲಕ್ಸಿ ಎಸ್3 ಅದೆಷ್ಟು `ಬುದ್ಧಿವಂತ~ ಎಂದರೆ, ಅದು ಒಡೆಯನ(ನಿಮ್ಮ) ಭಾವನೆಗಳನ್ನೆಲ್ಲ ಅರ್ಥ ಮಾಡಿಕೊಂಡು ತಕ್ಕಂತೆ ಪ್ರತಿಕ್ರಿಯಿಸಬಲ್ಲದು, ವರ್ತಿಸಬಲ್ಲದು. ಇದರ ಒಡಲೊಳಗೆ ಇಂಥ ಸಾಕಷ್ಟು ಸೌಲಭ್ಯಗಳನ್ನು, ಸೇವೆಗಳನ್ನೂ ತುಂಬಿಸಲಾಗಿದೆ ಎನ್ನುತ್ತಾರೆ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಇಂಡಿಯದ ಮುಖ್ಯಸ್ಥ ರಂಜಿತ್‌ಯಾದವ್.ಇದು ಇತರೆ ಫೋನ್‌ಗಳಂತೆ ನಿಮ್ಮ ಬೆರಳುಗಳ ಚಲನೆಯನ್ನೇ ಅನುಸರಿಸಿಯೇನೂ ಕೆಲಸ ಮಾಡುವುದಿಲ್ಲ. ದನಿ ಗುರುತಿಸಿಯೇ ನಿಮ್ಮ ಅಜ್ಞೆಗಳನ್ನು  ಪಾಲಿಸಬಲ್ಲದು. ಅದರಲ್ಲಿರುವ `ಎಸ್ ವಾಯ್ಸ~ ಸೌಲಭ್ಯವೇ ಅದರ ಈ ಕಾರ್ಯವೈಖರಿಗೆ ಕಾರಣ. ನಿಮಗೆ ಈಗ ಸಂಗೀತ ಕೇಳಬೇಕಿನಿಸಿದೆ. ಆದರೆ, ಸ್ಮಾರ್ಟ್‌ಫೋನ್ ಕೈಯಳತೆಗಿಂತ ದೂರದಲ್ಲಿದೆ.ಚಿಂತೆ ಬೇಡ, `ಸಾಂಗ್~ ಎಂದು ಹಾಡಿನ ಫೈಲ್ ನೇಮ್ ಹೇಳಿದರೆ ಸಾಕು, ಫೋನ್‌ನ ಮಲ್ಟಿಮೀಡಿಯಾ ಪ್ಲೇಯರ್ ಆನ್ ಆಗಿ ನಿಮ್ಮಿಷ್ಟದ ಸಂಗೀತ, ಗೀತೆ ಹೊರಹೊಮ್ಮುತ್ತದೆ. ನೀವು ಕಾರು ಚಾಲನೆಯಲ್ಲಿದ್ದಾಗಲೂ ದನಿ ಮೂಲಕವೇ ಅದನ್ನು ನಿರ್ದೇಶಿಸಲು, ಕರೆ ಮಾಡಲು ಸಾಧ್ಯವಾಗಿಸಿದ್ದೂ ಇದೇ `ಎಸ್ ವಾಯ್ಸ~ ವ್ಯವಸ್ಥೆ.ಫೋನನ್ನು ಎದುರಿಗೆ  ಹಿಡಿದುಕೊಂಡರೆ ನಿಮ್ಮ ಮುಖವನ್ನು, ಅದರಲ್ಲಿ ವ್ಯಕ್ತವಾಗುವ ಭಾವನೆಗಳನ್ನೂ ಈ ಗ್ಯಾಲಕ್ಸಿ ಎಸ್3 ಗುರುತಿಸಬಲ್ಲದು. ಮೊಬೈಲ್‌ನಲ್ಲಿ ಗೇಮ್ಸ ಆಡುತ್ತಿದ್ದೀರಿ, ಇಂಟರ್ನೆಟ್ ಬಳಸುತ್ತಿದ್ದೀರಿ ಅಥವಾ ಸಂಗೀತ ಕೇಳುವುದೋ, ಸಿನಿಮಾ ವೀಕ್ಷಣೆಯೋ ಮಾಡುತ್ತಿದ್ದೀರಿ. ಆಗ ಮೊಬೈಲ್ ನಿಮ್ಮ ಮುಖದೆದುರೇ ಹಿಡಿದಿರುತ್ತೀರಿ ಅಲ್ಲವೆ. ನಿಮಿಷಗಳು ಜಾರುತ್ತಲೇ ಮಂಪರು ಕವಿಯುತ್ತದೆ.ನೀವು ನಿದ್ರೆಗೆ ಜಾರುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಅಂಥ ಸಂದರ್ಭ ಸಾಮಾನ್ಯ ಫೋನ್‌ಗಳಾದರೆ ಚಾಲನೆಯಲ್ಲೇ ಇರುತ್ತವೆ. ಒಂದೊ ಬ್ಯಾಟರಿ ಖಾಲಿಯಾಗಿ ಆಫ್ ಆಗಬೇಕು, ಇಲ್ಲವೇ ಕರೆನ್ಸಿ ಖಾಲಿಯಾಗಿ ನೆಟ್ ಸಂಪರ್ಕ ಕಡಿತವಾಗಬೇಕು. ಹೆಚ್ಚೆಂದರೆ ಸ್ಕ್ರೀನ್ ಮಾತ್ರ ಆಫ್ ಆಗುತ್ತದೆ. ಆದರೆ, ಗ್ಯಾಲಕ್ಸಿ ಎಸ್3 ಅದೆಷ್ಟರಮಟ್ಟಿಗೆ ನಿಮ್ಮ ಪ್ರತಿ ನಡೆಯನ್ನೂ ಗಮನಿಸಿ ಸ್ಪಂದಿಸುತ್ತದೆ ಎಂದರೆ ನಿಮ್ಮ ಕಣ್ಣೆವೆ ಮುಚ್ಚಿಕೊಳ್ಳುವ ಚಲನೆ ನೋಡಿಯೇ (ಫೋನ್‌ನ 1.9 ಎಂಪಿ ಫ್ರಂಟ್ ಕ್ಯಾಮೆರಾ ನಿಮ್ಮನ್ನು ಗಮನಿಸುತ್ತಿರುತ್ತದೆ) ಮರುಕ್ಷಣವೇ ತಾನೂ ನಿದ್ರೆಗೆ ಜಾರುತ್ತದೆ, ಅಂದರೆ ಆಫ್ ಆಗುತ್ತದೆ. ಈ ಕ್ರಿಯೆಯನ್ನೂ ಅದರ `ಸ್ಮಾರ್ಟ್ ಸ್ಟೇ~ ವ್ಯವಸ್ಥೆಯೇ ನಿಯಂತ್ರಿಸುತ್ತದೆ.ನಿದ್ರೆಯಿಂದೇಳಲು ಫೋನ್‌ನಲ್ಲಿಯೇ ಅಲಾರಾಂ ಕೊಟ್ಟಿದ್ದೀರಿ. ಸಮಯ ಆಗುತ್ತಿದ್ದಂತೆಯೇ ಗಂಟೆ ಬಾರಿಸಲಾರಂಭಿಸುತ್ತದೆ. ನಿಮಗೋ ಇನ್ನೂ ನಿದ್ರೆಯ ಗುಂಗು. 10-15 ನಿಮಿಷ ನಿದ್ರೆ ಮುಂದುವರಿಸಬೇಕಿದೆ.ಚಿಂತೆ ಬೇಡ, ಮಲಗಿದ್ದಲ್ಲಿಂದಲೇ `ಸ್ನೂಜ್~ ಎಂದರೆ ಸಾಕು; ನಿಮ್ಮ ದನಿ ಗುರುತಿಸುವ ಸ್ಮಾರ್ಟ್‌ಫೋನ್ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತದೆ. ಮತ್ತೆ 10-15 ನಿಮಿಷ  ಸುಮ್ಮನಿದ್ದು (ನೀವು ನಿಗದಿಪಡಿಸಿದ ಸಮಯದ ಅಂತರ ಅನುಸರಿಸಿ) ನಂತರ ಗಂಟೆ ಬಜಾಯಿಸುತ್ತದೆ. ಆಗಲೂ ನಿದ್ರೆ ಮುಗಿದಿಲ್ಲದಿದ್ದರೆ, ಮತ್ತೊಮ್ಮೆ `ಸ್ನೂಜ್~ಅಂದರಾಯಿತು ಅಷ್ಟೆ! ಎನ್ನುವುದು ರಂಜೀತ್ ಯಾದವ್ ಅವರ ಕೊನೆಯಿಲ್ಲದ ವಿವರಣೆ.

ಫೋಟೊ ತೆಗೆಯುವುದೂ ಅದೆಷ್ಟು ಸಲೀಸು ಎಂದರೆ, ಚಲನೆಯಲ್ಲಿರುವ ವ್ಯಕ್ತಿ-ವಸ್ತುಗಳನ್ನೂ ಸುಲಭವಾಗಿ ಚಿತ್ರೀಕರಿಸಬಲ್ಲದು. ಇದರ 8 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ ನಿಮ್ಮ ಕಣ್ಣೆವೆ ಮುಚ್ಚಿ ತೆಗೆಯುವುದರೊಳಗೆ 7-8 ಫ್ರೇಮ್‌ಗಳನ್ನು ಕ್ಲಿಕ್ಕಿಸಿರುತ್ತದೆ.

 

ಅದರಲ್ಲಿ ಗುಣಮಟ್ಟದ ಫೋಟೊವನ್ನೂ ಆಯ್ಕೆ ಮಾಡಿಕೊಡುತ್ತದೆ. ಹಾಗಾಗಿ ಫೋಟೊ ತೆಗೆಯುವಾಗ ಕೈ ನಡುಗುತ್ತದೆ ಎಂಬ ಭಯವೂ ಬೇಕಿಲ್ಲ. ಇಷ್ಟೆಲ್ಲ ಸೌಲಭ್ಯಗಳಿರುವ ಈ ಫೋನ್ ಡುಮ್ಮಣ್ಣ ಏನೂ ಅಲ್ಲ. ಇದರ ಗಾತ್ರ ಕೇವಲ 8.6 ಎಂಎಂನಷ್ಟಿದೆ. 133 ಗ್ರಾಂ ತೂಕವಷ್ಟೇ ಇದೆ. 4.8 ಇಂಚು ಹೈಡೆಫನಿಷನ್ ಸೂಪರ್ ಅಮೊಲೆಡ್ ಡಿಸ್‌ಪ್ಲೆ ಸ್ಕ್ರೀನ್ ಹೊಂದಿದೆ.ನೆಟ್ ಡೌನ್‌ಲೋಡ್ ಸಹ ಬಹಳ ವೇಗದ್ದಾಗಿದೆ ಎನ್ನುತ್ತಾರೆ ರಂಜೀತ್ಅರೆ, ಬ್ರಾಂಡ್ ಅಂಬಾಸಿಡರ್ ಬಾಲಿವುಡ್ ನಟಿ ನರ್ಗಿಸ್ ಫಾಕ್ರಿಯಷ್ಟೇ ತೆಳ್ಳಗೆ, ಬೆಳ್ಳಗೆ ಇರುವ, ಚೆಂದದ ನೀಲಿಬಣ್ಣದ ಹೊದಿಕೆಯನ್ನೂ ಹೊದ್ದಿರುವ, ವಿಪರೀತ ಸೌಲಭ್ಯಗಳಿರುವ ಸ್ಮಾರ್ಟ್‌ಫೋನ್ ನನಗೂ ಒಂದಿರಲಿ ಎಂದು ಈಗಲೇ ಷೋರೂಂನತ್ತ ದೌಡಾಯಿಸುತ್ತಿದ್ದೀರಾ? ಸ್ವಲ್ಪ ತಡೆಯಿರಿ, ಬೆಲೆಯನ್ನೂ ಕೇಳಿ ಮುಂದುವರಿಯಿರಿ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್3 ಸ್ಮಾರ್ಟ್‌ಫೋನ್ ಬೆಲೆ ರೂ. 43,180!

               

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry