ಸೋಮವಾರ, ಏಪ್ರಿಲ್ 12, 2021
26 °C

ಒಡೆಯರ್ ಆಡಳಿತ ಇಂದಿನವರಿಗೆ ಮಾರ್ಗದರ್ಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ರಾಜ್ಯದಲ್ಲಿ ಆಡಳಿತ ಯಂತ್ರ ಆಯೋಮಯವಾಗಿರುವಾಗ ಮೈಸೂರಿನ ಯದುವಂಶೀಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವನ್ನು ನೆನಪಿಸಿಕೊಳ್ಳುವುದು ಇಂದು ತೀರಾ ಅಗತ್ಯ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಪಿ.ವಿ.ಸೀತಾರಾಮು ಅಭಿಪ್ರಾಯಪಟ್ಟರು.ಅವರು ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಕೋಟೆ ರಾಮೇಶ್ವರ ನಗರದಲ್ಲಿ ಸೋಮವಾರ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ 128ನೇ ಜನ್ಮದಿನದಲ್ಲಿ ಒಡೆಯರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಅವರ ಆಡಳಿತದ ಆದರ್ಶಗಳು ಆಧುನಿಕ ಚುನಾಯಿತ ಪ್ರತಿನಿಧಿಗಳಿಗೆ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದರು.ಮೈಸೂರಿನ ಮಹಾರಾಜರು ಎಂದೂ ಯುದ್ಧಕ್ಕೆ ಮುಂದಾಗದೆ ಸರ್ವರ ಅಭಿವೃದ್ಧಿಗೆ ನಾಂದಿ ಹಾಡಿ, ಮಾದರಿ ಮೈಸೂರು ರಾಜ್ಯ ನಿರ್ಮಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿರುವ ತಿಪ್ಪಗೊಂಡನಹಳ್ಳಿಯ ಚಾಮರಾಜ ಸಾಗರ ಜಲಾಶಯಕ್ಕೆ ಹೇಮಾವತಿ ನೀರು ಹರಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಪಿ.ವಿ.ಸೀತಾರಾಮ್ ಒತ್ತಾಯಿಸಿದರು.ಸಮಾಜ ಸೇವಾ ಕಾರ್ಯಕರ್ತ ಮಿಲಿಟರಿ ಭೈರಪ್ಪನ ಪಾಳ್ಯದ ಬಿ.ವಿ.ಜಯರಾಮ್ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ 1902ರಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದಿಸಿದ ಕೀರ್ತಿ ಒಡೆಯರ್ ಅವರಿಗೆ ಸಲ್ಲುತ್ತದೆ. ಕೆಜಿಎಫ್ ಚಿನ್ನದ ಗಣಿಗೆ, ಬೆಂಗಳೂರು ನಗರಕ್ಕೆ ವಿದ್ಯುತ್ ಹರಿಸಿದ ನಂತರ ಹಳ್ಳಿಹಳ್ಳಿಗೆ ಬೆಳಕು ನೀಡಿದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರನ್ನು ಜನತೆ ಗೌರವದಿಂದ ಕೃಷ್ಣರಾಜ ಭೂಪ, ಮನೆ ಮನೆಯ ದೀಪ ಎಂದು ಕರೆದರು ಎಂಬುದನ್ನು ಸ್ಮರಿಸಿದರು. ಕೊಟ್ಟಣ ಬೀದಿಯ ನರಸಿಂಗ್ ಮಾತನಾಡಿ,  ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದು ಅದನ್ನು ರಕ್ಷಿಸಿಕೊಳ್ಳಲು ಒದ್ದಾಡುತ್ತಿರುವ ಇಂದಿನ ರಾಜಕಾರಣಿಗಳು ಮೈಸೂರು ಮಹಾರಾಜರ ಮಾದರಿ ಆಡಳಿತವನ್ನು ಅರಿತುಕೊಳ್ಳುವುದು ಸೂಕ್ತ ಎಂದರು.ಪುರಸಭೆಯ ಸದಸ್ಯ ಜಯಣ್ಣ ಮಾತನಾಡಿ, 1907ರಲ್ಲಿಯೇ ಕೃಷ್ಣರಾಜ ಒಡೆಯರ್ ನ್ಯಾಯ ವಿಧಾಯಕ ಸಭೆಯನ್ನು ಆರಂಭಿಸಿದ್ದರು. ಜನಸಾಮಾನ್ಯರೂ ಕೂಡ ಆಡಳಿತದಲ್ಲಿ ಭಾಗವಹಿಸುವಂತೆ ಮಾಡಿದ್ದರು. ಕನ್ನಡದಲ್ಲಿ ಆಡಳಿತ ನಡೆಸಿ, ಮಹಿಳೆಯರಿಗೆ ಸಮಪಾಲು ನೀಡಿದ್ದರು. ಬುಡಕಟ್ಟು ಮತ್ತು ಪರಿಶಿಷ್ಟ ಜನಾಂಗದವರು ಸಹ ಶಿಕ್ಷಣ ಪಡೆಯಬೇಕೆಂದು ಮೈಸೂರು, ಚಿಕ್ಕಮಗಳೂರು, ತುಮಕೂರುಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿ, ವಿದ್ಯೆಗೆ ಪ್ರೋತ್ಸಾಹ ನೀಡಿ ಮೀಸಲಾತಿ ಜಾರಿಗೆ ತಂದಿದ್ದರು ಎಂದು ತಿಳಿಸಿದರು.ಸಮಾಜ ಸೇವಕ ವೇಣುಗೋಪಾಲ್ ಮಾತನಾಡಿ, ಕೃಷಿ, ಜೀವ ವಿಮೆ, ಸಹಕಾರಿ ಬ್ಯಾಂಕುಗಳ ಸ್ಥಾಪನೆ, ಆಸ್ಪತ್ರೆ, ಸೇತುವೆ ಜಲಾಶಯಗಳ ನಿರ್ಮಾಣ ಇನ್ನಿತರೆ ಹತ್ತು ಹಲವಾರು ಮಹತ್ವದ ಸಾಧನೆ ಮಾಡಿರುವ ನಾಲ್ವಡಿ ಕೃಷ್ಣರಾಜರು ಮಾಗಡಿಯ ರಂಗನಾಥ ಸ್ವಾಮಿ ದೇವಾಲಯಕ್ಕೆ  ಅಪಾರ ಚಿನ್ನಾಭರಣಗಳನ್ನು ಮಾಡಿಸಿಕೊಟ್ಟಿದ್ದಾರೆ. ಮಾಗಡಿಯ ಜನತೆ ಮೈಸೂರಿನ ಅರಸರನ್ನು ಎಂದಿಗೂ ಮರೆಯುವಂತಿಲ್ಲ ಎಂದು ಸ್ಮರಿಸಿದರು.ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್, ಬಸವರಾಜು, ಪುಟ್ಟಸ್ವಾಮಿ, ಗಣೇಶ್, ಪುರಸಭೆಯ ಮಾಜಿ ಸದಸ್ಯ ಕೃಷ್ಣಕುಮಾರ್, ಪುಟ್ಟುರಾಜ್ ಯಾದವ್ ಇತರರು ನಾಲ್ವಡಿಯವರ ಗುಣಗಾನ ಮಾಡಿದರು.  ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನಾಲ್ವಡಿಯವರ ಅಭಿಮಾನಿಗಳು ಮತ್ತು ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.