ಭಾನುವಾರ, ಮಾರ್ಚ್ 7, 2021
31 °C

ಒಡೆಯರ ರಣವಿಕ್ರಮ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಡೆಯರ ರಣವಿಕ್ರಮ...

ಕಂಠೀರವ ಸ್ಟುಡಿಯೊ ತುಂಬ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು, ನಟ ಪುನೀತ್ ರಾಜ್‌ಕುಮಾರ್‌ಗೆ ಜೈಕಾರ ಘೋಷಿಸುತ್ತಿದ್ದರೆ, ಚಿತ್ರರಂಗದ ಪ್ರಮುಖರು ಪುನೀತ್‌ಗೆ ಶುಭಾಶಯದ ಮಳೆಗರೆಯುತ್ತಿದ್ದರು. ಪವನ್‌ ಪಡೆಯರ್ ನಿರ್ದೇಶನದ ‘ಧೀರ ರಣವಿಕ್ರಮ’ ಚಿತ್ರದ ಮುಹೂರ್ತ ಈ ಜೈಕಾರ ಮತ್ತು ಶುಭಾಶಯಕ್ಕೆ ವೇದಿಕೆಯಾಗಿತ್ತು. ಅಂದೇ ಪುನೀತ್‌ರ 39ನೇ ಜನ್ಮದಿನವಾಗಿದ್ದು ವಿಶೇಷ.ಪುನೀತ್‌ ನಾಯಕತ್ವದ ‘ಧೀರ ರಣವಿಕ್ರಮ’ ಮುಹೂರ್ತಕ್ಕೂ ಮುನ್ನವೇ ಅವರ ಅಭಿಮಾನಿಗಳಲ್ಲಿ ಸಂಚಲನಕ್ಕೆ ಕಾರಣವಾದ ಚಿತ್ರ. ಪವರ್‌ಸ್ಟಾರ್‌ನ ಪವರ್ ಯಾವ ವೋಲ್ಟ್‌ನಲ್ಲಿರುತ್ತದೆ, ನಾಯಕಿ ಇವರಂತೆ, ಕಥೆ ಹೀಗಿದೆಯಂತೆ? ಹೀಗೆ ಅಂತೆ–ಕಂತೆಗಳ ಸಂತೆಯೊಳಗಿದ್ದ ಗುಟ್ಟನ್ನು ರಟ್ಟು ಮಾಡಲು ಸಜ್ಜಾಗಿದ್ದರು ಚಿತ್ರದ ದಂಡನಾಯಕ ಪವನ್‌ ಒಡೆಯರ್‌. ಅವರ ಪ್ರತಿ ಮಾತಿನಲ್ಲೂ ಆತ್ಮವಿಶ್ವಾಸ ಇಣುಕಿತ್ತು. ವದಂತಿಗಳಿಗೆಲ್ಲಾ ತೆರೆ ಎಳೆಯುವಂತೆ ಮಾತನಾಡಿದರು ಪವನ್. ಪಕ್ಕಾ ಆ್ಯಕ್ಷನ್ ಚಿತ್ರವಾದ ರಣವಿಕ್ರಮನಲ್ಲಿ ಪುನೀತ್ ನಾಲ್ಕು ಸಾವಿರ ವೋಲ್ಟ್‌್ ಮೀರಿ ಫೈಟ್‌ ಮಾಡುವ ಸೂಚನೆಯನ್ನೂ ನೀಡಿದರು. ಹೈವೋಲ್ಟ್ ಖದರ್ ತೋರಿಸಲೋಸುಗವೇ ‘ರಣವಿಕ್ರಮ’ನಿಗೆ ಧೀರ ಎನ್ನುವ ಪದ ಸೇರಿಸಲಾಗಿದೆಯಂತೆ.‘ಏಪ್ರಿಲ್ ಅಂತ್ಯದಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಪುನೀತ್ ಹೆಸರು ವಿಕ್ರಮ್. ಈ ಮುನ್ನ ‘ಒನ್ ಅಂಡ್ ಓನ್ಲಿ ರಣವಿಕ್ರಮ’, ‘ರಣವಿಕ್ರಮ’ ಹೀಗೆ ಟೈಟಲ್‌ ಬಗ್ಗೆ ಚರ್ಚೆಗಳು ನಡೆದು, ರಣವಿಕ್ರಮನಿಗೆ ಮತ್ತಷ್ಟು ಫೋರ್ಸ್‌ ಸಿಗಲಿ ಎನ್ನುವ ಕಾರಣಕ್ಕೆ ಧೀರನನ್ನೂ ಜೋಡಿಸಲಾಯಿತು’ ಎಂದರು ಪವನ್ ಒಡೆಯರ್.‘ಚಿತ್ರದಲ್ಲಿ ಪುನೀತ್ ವಿದ್ಯಾರ್ಥಿಯಾಗಿರುತ್ತಾರೆ, ಇಡೀ ಕನ್ನಡ ನೆಲೆ ತಿರುಗಿ ನೋಡುವಂತೆ ಅವರು ಆಗುತ್ತಾರೆ...ಡಬ್ಬಲ್ ರೋಲ್ ಇಲ್ಲ’ ಎಂದು ವಿವರಿಸುತ್ತಿರುವಾಗಲೇ ಪೊಲೀಸ್ ಪೋಷಾಕಿನಲ್ಲಿ ಪ್ರವೇಶಿಸಿದರು ಪುನೀತ್ ರಾಜ್‌ ಕುಮಾರ್‌. ಇಲ್ಲಿ ಪುನೀತ್ ಪೊಲೀಸೋ ಇಲ್ಲ ವಿದ್ಯಾರ್ಥಿಯೋ ಎನ್ನುವ ಗೊಂದಲದಲ್ಲಿದ್ದಾಗ, ಮಾತಿಗಿಳಿದ ನಿರ್ಮಾಪಕ ಜಯಣ್ಣ‘ ಪುನೀತ್ ಪೊಲೀಸ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಡಬ್ಬಲ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಅವರು ಮಾಡುವ ಕೆಲದ ಆ ರೀತಿ ಇರುತ್ತದೆ’ ಎಂದು ಟ್ವಿಸ್ಟ್‌ನಂತೆ ಮಾತನಾಡಿದರು.‘ವಿದ್ಯಾರ್ಥಿ ಜೀವನದಲ್ಲಿ ಸಿಕ್ಕುವ ತಿರುವೇ ಸಿನಿಮಾಕ್ಕೆ ಮೂಲ. ಕಥೆ, ನಿರೂಪಣೆಯಲ್ಲಿ ಹೊಸತನವಿದೆ. ಭರಪೂರ ಆ್ಯಕ್ಷನ್‌ ಇಲ್ಲಿದೆ’ ಎಂದರು ಪವನ್ ಒಡೆಯರ್. ಚಿತ್ರಕ್ಕೆ ನಾಯಕಿ ಯಾರು ಎಂಬುದು ಅಂತಿಮವಾಗಿಲ್ಲ. ಮುಂದಿನ ವಾರದಲ್ಲಿ ನಟಿಮಣಿಯ ಆಯ್ಕೆ ನಡೆಯುತ್ತದೆ ಎಂದು ನಾಯಕಿಯ ವಿಚಾರದಲ್ಲಿ ಎದಿದ್ದ ಗುಲ್ಲುಗಳನ್ನು ಅಲ್ಲಗಳೆದರು.‘ನಿರ್ದೇಶಕರ ಉತ್ಸಾಹ ಮತ್ತು ಕಥೆಯ ಮೇಲಿನ ಪ್ರೀತಿಯೇ ಈ ಚಿತ್ರ ಒಪ್ಪಿಕೊಳ್ಳಲು ಕಾರಣ’ ಎಂದರು ಪುನೀತ್‌ ರಾಜ್‌ಕುಮಾರ್‌. ಕಥೆ, ನಿರೂಪಣೆ, ಆ್ಯಕ್ಷನ್‌ನಲ್ಲೂ ಭಿನ್ನತೆ ಇರುತ್ತದೆ. ಬಹುಶಃ ನನಗೆ ಇದು ಹೊಸತು ಎನಿಸುತ್ತಿದೆ. ಹಾಫ್ ಪೊಲೀಸ್ ಹಾಫ್ ನಾರ್ಮಲ್ ಎಂದು ತಮ್ಮ ಪಾತ್ರವನ್ನು ಬಣ್ಣಿಸಿಕೊಂಡರು. ತಮ್ಮ ಚಿತ್ರಗಳಿಗಿಂತ ಬೇರೊಬ್ಬರ ಚಿತ್ರಗಳಲ್ಲಿ ಹಾಡುವುದೆಂದರೆ ಅವರಿಗೆ ಇಷ್ಟವಂತೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಈಗಾಗಲೇ ಮೂರು ಹಾಡುಗಳಿಗೆ ವಿ. ಹರಿಕೃಷ್ಣ ಮಟ್ಟುಹಾಕಿದ್ದಾರಂತೆ. ಲಂಡನ್, ಬೆಂಗಳೂರು, ಮೈಸೂರು, ಬೆಳಗಾಂನಲ್ಲಿ 100 ದಿನಗಳ ಚಿತ್ರೀಕರಣ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.  ಸಾಹಸ ನಿರ್ದೇಶಕ ರವಿಮರ್ಮ, ಛಾಯಾಗ್ರಾಹಕ ವೈದಿ ಮತ್ತಿತರರು ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.