ಒಣಗಿದ ಕೆರೆಗೆ ಅಲಂಕಾರ

7

ಒಣಗಿದ ಕೆರೆಗೆ ಅಲಂಕಾರ

Published:
Updated:

ಗದಗ: ನಗರದ ಹೃದಯಭಾಗದಲ್ಲಿರುವ ಭೀಷ್ಮನ ಕೆರೆಯು ಗದುಗಿಗೆ ಬಡಿದಿರುವ ಬರಕ್ಕೆ ಕನ್ನಡಿಯಂತಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಕೆರೆ ಸಂಪೂರ್ಣ ಒಣಗಿದ್ದು, ಇದ್ದ ನೀರಿನಲ್ಲಿ ಮೈತೊಳೆದುಕೊಳ್ಳುತ್ತಿದ್ದ ಬಿಳಿಯ ಬಣ್ಣದ ಹಕ್ಕಿಗಳು ಬರಡು ನೆಲಕ್ಕೆ ಹೆದರಿ ಪಲಾಯನಗೈಯ್ಯುತ್ತಿವೆ. ಇನ್ನೊಂದೆಡೆ, ಇದಕ್ಕೆ ಕಾಯುತ್ತಿದ್ದೆವೆಂಬಂತೆ ಜೆಸಿಬಿ ಯಂತ್ರಗಳು ನೆಲ ಬಗೆದು ಹೂಳೆತ್ತುವ ಕಾರ್ಯದಲ್ಲಿ ನಿರತವಾಗಿವೆ. ಬರದ ಹಿನ್ನೆಲೆಯಲ್ಲಿ, ಒಣಗಿದ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಜಿಲ್ಲಾಡಳಿತವು ಕೆಲವು ತಿಂಗಳ ಹಿಂದೆ ಚಾಲನೆ ನೀಡಿದ್ದು, ಇದೀಗ ಕಾಮಗಾರಿಯು ಮುಕ್ತಾಯ ಹಂತಕ್ಕೆ ಬಂದು ತಲುಪಿದೆ. ಕೆರೆಯ ಒಂದು ಭಾಗದಲ್ಲಿ ಹಸಿಯಾಗಿರುವ ನೆಲವನ್ನು ಬಿಟ್ಟರೆ ಬಹುತೇಕ ನೆಲವನ್ನು ಅಗೆದು ಜೆಸಿಬಿಗಳು ಮಣ್ಣು ತೆಗೆದು ಸಾಗಿಸಿವೆ. ಇದಲ್ಲದೆ ಕೆರೆಯ ಸುತ್ತ ಕಲ್ಲುಗಳಿಂದ ಬದುಗಳನ್ನು ನಿರ್ಮಿಸುವ ಕಾರ್ಯ ಸಹ ಪೂರ್ಣಗೊಂಡಿದೆ.ಇತಿಹಾಸ ಪ್ರಸಿದ್ಧ ಭೀಷ್ಮ ಕೆರೆ ಈಚಿನ ವರ್ಷಗಳಲ್ಲಿ ನೀರಿನ ಕೊರತೆ ಎದುರಿಸುತ್ತಿದ್ದು, ನೀರಿನ ಮೂಲಗಳು ಬಂದ್ ಆದ ಕಾರಣ ಕೇವಲ ಮಳೆ ನೀರನ್ನೇ ಆಶ್ರಯಿಸಿ ಬದುಕುತಿತ್ತು. ಆದರೆ ಈ ಬಾರಿ ಮಳೆ ಕೈಕೊಟ್ಟ ಕಾರಣ ಕೆರೆಯ ಅರ್ಧಭಾಗವೂ ತುಂಬಲಿಲ್ಲ.ಬರದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯು ಜಿಲ್ಲೆಯ ವಿವಿಧ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಭೀಷ್ಮಕೆರೆ ಸೇರಿದಂತೆ ಒಟ್ಟು ಮೂರು ಕೆರೆಗಳ ಹೂಳೆತ್ತುವುದು ಮತ್ತು ಅಭಿವೃದ್ಧಿ ಸೇರಿ ಒಟ್ಟು 49 ಲಕ್ಷ ವೆಚ್ಚದ ಕಾಮಗಾರಿಗೆ ಅಕ್ಟೋಬರ್ 15ರಂದು ಆದೇಶ ನೀಡಲಾಗಿತ್ತು.

 

ಈ ಪೈಕಿ ಭೀಷ್ಮ ಕೆರೆಯ ಅಭಿವೃದ್ಧಿಗೆಂದು 25.68 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಕಳೆದ ಅಕ್ಟೋಬರ್ 15ರಂದು ಈ ಕಾಮಗಾರಿಗೆ ಆದೇಶ ಜಿ.ಪಂ. ನಿಂದ ಆದೇಶ ಹೊರಬಿದ್ದಿದ್ದು, ಮೂರು ತಿಂಗಳ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿತ್ತು. ಆದಾಗ್ಯೂ ಸದ್ಯ ಅಂತಿಮ ಹಂತದ ಕೆಲಸಗಳು ನಡೆದಿವೆ.ಬದಲಾಗದ ಚಿತ್ರಣ: ಒಂದೆಡೆ ಬತ್ತಿದ ಕೆರೆಯನ್ನು ಹೂಳೆತ್ತಿ, ಅದಕ್ಕೆ ಕಾಯಕಲ್ಪ ನೀಡುವ ಪ್ರಯತ್ನವನ್ನು ಜಿಲ್ಲಾಡಳಿತ ನಡೆಸಿದೆ. ಮತ್ತೊಂದೆಡೆ, ಉದ್ಯಾನ ಸೇರಿದಂತೆ ಕೆರೆಯ ಕಂಪೌಂಡ್ ವ್ಯಾಪ್ತಿಯಲ್ಲಿನ ಹತ್ತಾರು ಎಕರೆ ಪ್ರದೇಶದ ಚಿತ್ರಣ ಮಾತ್ರ ಬದಲಾಗಿಲ್ಲ. ಉದ್ಯಾನದ ಮುರಿದ ಆಟಿಕೆಗಳು ಅಲ್ಲಿನ ಕಥೆ ಹೇಳುವಂತಿವೆ.

 

ಇನ್ನೂ ಗಿಡಗಳಿಗೆ ನೀರುಣಿಸುವವರು ಗತಿಯಿಲ್ಲದೆ ಸೊರಗುತ್ತಿವೆ. ಸಂಜೆ ವೇಳೆ ಮೋಜು-ಮಸ್ತಿಯ ತಾಣವನ್ನಾಗಿ ಉದ್ಯಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಆಗಿನಿಂದಲೂ ಕೇಳಿಬರುತ್ತಿವೆ.  ಆದರೂ ಇಲ್ಲಿ ಕಾವಲುಗಾರರನ್ನು ನೇಮಿಸುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.ಕೆರೆಗೆ ಪರ್ಯಾಯ ಮೂಲಗಳಿಂದ ನೀರು ತುಂಬಿಸುವ ಮೂಲಕ ಕೆರೆಗೆ ಮತ್ತೆ ಜೀವ ಬರಬೇಕು. ಭೀಷ್ಮನ ಕೆರೆಯ ಅಂಗಳದಲ್ಲಿ ಮತ್ತೆ ಹಕ್ಕಿಗಳು ಸ್ವಚ್ಛಂದದಿಂದ ಹಾರುವಂತಾಗಬೇಕು ಎನ್ನುವುದು ಇಲ್ಲಿನ ನಾಗರಿಕರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry