ಒಣಗಿದ ಮೆಕ್ಕೆಜೋಳ:ಕಂಗಾಲಾಗಿದ ರೈತರು

7
ಹಗರಿಬೊಮ್ಮನಹಳ್ಳಿ , ಹೆಕ್ಟೇರ್

ಒಣಗಿದ ಮೆಕ್ಕೆಜೋಳ:ಕಂಗಾಲಾಗಿದ ರೈತರು

Published:
Updated:

ಹಗರಿಬೊಮ್ಮನಹಳ್ಳಿ: `ಕಳೆದ ವರ್ಷ ಒಟ್ಟಾ ಮಳೀ ಬರಲಿಲ್ಲ. ಈ ಸಾರಿ ಏಪ್ರಿಲನ್ಯಾಗ ಮಳೀ ಬಂತಲ್ಲ, ತಡದ ಮಳೀ ಜಡದ ಬರತೈತಿ ಅಂತಾ ಸಾಲಸೋಲ ಮಾಡಿ ಎರಡು ಎಕರಿ ಮೆಕ್ಕಿಜೋಳ ಬಿತ್ತಿದ್ನಾ. ಅವಾಗಸುಟಾ ಮಳೀನಾ ಆಗಲಿಲ್ರಿ. ಕಡ್ಡಿ ಗೀರಿ ಹಚ್ಚಿದ್ರೆ ಸಾಕು ಮೆಕ್ಕೆಜೋಳ ಪೀಕು ಪೂರ್ತಿ ಪುರಪುರಂತಾ ಸುಟ್ಟು ಹೋಗತೈತ ನೋಡ್ರಿ...'

ಹೀಗೆಂದು ಒಂದೇ ಉಸಿರಿನಲ್ಲಿ  ತಮ್ಮ ಅಳಲು ತೋಡಿಕೊಂಡಿದ್ದು, ಮೆಕ್ಕೆಜೋಳ ಬಿತ್ತಿ ಬಸವಳಿದಿರುವ ಅಂಬಳಿ ಗ್ರಾಮದ ಖುಷ್ಕಿ ಜಮೀನಿನ ರೈತ ಮರ್ದಾನಯ್ಯ.ತಾಲ್ಲೂಕಿನಾದ್ಯಂತ ಖುಷ್ಕಿ ಜಮೀನಿನಲ್ಲಿ ಗುರಿ ಮೀರಿ 15000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿರುವ ಮೆಕ್ಕೆಜೋಳದ ಬೆಳೆ, ಮಳೆಯ ಅಭಾವದಿಂದಾಗಿ ಸಂಪೂರ್ಣವಾಗಿ ಬಾಡಿ ಹೋಗಿದೆ.ಕಡ್ಡಿ ಗೀರಿ ಹಚ್ಚಿದರೆ ಸುಟ್ಟು ಬೂದಿಯಾಗಬಹುದಾದ ಕಾರಣಕ್ಕೆ ಮೆಕ್ಕೆಜೋಳ ಬೆಳೆದಿರುವ ರೈತರ ಅಂಗಳದಲ್ಲಿ ಈಗ ಚಿಂತೆಯ ಕಾರ್ವೋಡ ಆವರಿಸಿವೆ. ತಾಲ್ಲೂಕಿನಲ್ಲಿ ಜೂನ್‌ನಿಂದ ಸೆಪ್ಟೆಂಬರ್ ಅವಧಿಯ 48 ಮಳೆಗಾಲದ ದಿನಗಳಲ್ಲಿ ವಾಡಿಕೆಯಂತೆ 557ಮಿಮೀ ಮಳೆ ಬಿದ್ದರೆ  ರೈತರ ಬಾಳು ಹಸನಾಗುತ್ತದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಆದರೆ, ಹಲವಾರು ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದೇ ರೈತರ ಬದುಕು ಮತ್ತು ಅವರ ಕೃಷಿ ಚಟುವಟಿಕೆಗಳು ಮಳೆಯೊಂದಿಗೆ ಆಡುವ ಜೂಜಾಟ ಎನ್ನುವಂತಾಗಿದೆ.ಈ ಬಾರಿ ಮುಂಗಾರು ಪ್ರಾರಂಭದ ದಿನಗಳಲ್ಲಿ ಸ್ವಲ್ಪ ಸದ್ದು ಮಾಡಿತು. ಏಪ್ರಿಲ್ ತಿಂಗಳಲ್ಲಿ 25ಮಿಮೀ ವಾಡಿಕೆಯ ಮಳೆ  ಬದಲಾಗಿ 66ಮಿಮೀ ಮಳೆಯಾಗಿದ್ದು ರೈತರಲ್ಲಿ ಹರ್ಷಚಿತ್ತ  ವಾತಾವರಣ ಉಂಟು ಮಾಡಿತು.ಸಹಜವಾಗಿ ನಾಲ್ಕು ಹೋಬಳಿಗಳ ಖುಷ್ಕಿ ಜಮೀನಿನಲ್ಲಿ 11 ಸಾವಿರ ಹೆಕ್ಟೇರ್ ಗುರಿ ಬದಲಾಗಿ 14,890ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತಲಾಯಿತು.ಆದರೆ, ಮೇ-ಜೂನ್ ಅವಧಿಯಲ್ಲಿ 120ಮಿಮೀ ಮಳೆ ನಿರೀಕ್ಷಿಸಿದ್ದ ರೈತರು ವಾಡಿಕೆಯಂತೆ ಮಳೆಯಾಗದೇ ಹೋದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾಯಿತು.ಈ ಅವಧಿಯಲ್ಲಿ ಕೇವಲ 23ಮಿಮೀ ಮಳೆಯಾದ ಕಾರಣಕ್ಕೆ ಇಡೀ ತಾಲ್ಲೂಕಿನ ರೈತ ಸಮೂಹ ಪರಿತಪಿಸಿತು. ಅನ್ನದಾತನ ಕೈ ಹಿಡಿಯುವ ಮಳೆಗಳಾದ ಪುಷ್ಯ, ಪುನರ್ವಸು, ಉತ್ತರಿ, ಹಸ್ತ ಮತ್ತು ಚಿತ್ತಾ ಸಂಪೂರ್ಣವಾಗಿ ಕೈಕೊಟ್ಟವು.ಭೂಮಿ ಹದ ಮಾಡುವುದು ಸೇರಿದಂತೆ ಬೀಜ, ಗೊಬ್ಬರ, ಕಳೆ ತೆಗೆಯುವುದು ಮತ್ತು ಕಟಾವಿಗೆಂದು ತಲಾ ಎಕರೆಗೆ ರೂ 6000 ಖರ್ಚು ಮಾಡಿ 30 ಕ್ವಿಂಟಾಲ್ ಇಳುವರಿ ನಿರೀಕ್ಷಿಸಿದ್ದ ರೈತರು ಅತ್ತ ಮಳೆ ಇಲ್ಲದೆ ಇತ್ತ ಬೆಳೆ ಬಾಡಿ ಸಾಲದ ಹೊರೆ ಹೆಗಲಿಗೇರಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.ತಾಲ್ಲೂಕಿನಾದ್ಯಂತ ಮಳೆ ಇಲ್ಲದೇ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಕುಸಿತ ಮತ್ತು ಅನಿಯಮಿತ ವಿದ್ಯುತ್ ವಿತರಣೆಯಿಂದಾಗಿ, ಏತ ನೀರಾವರಿ ಯೋಜನೆಯ ಪ್ರದೇಶ ಹೊರತುಪಡಿಸಿ ಮೆಕ್ಕೆಜೋಳ ಬೆಳೆದಿರುವ 3800 ಹೆಕ್ಟೇರ್ ನೀರಾವರಿ ಪ್ರದೇಶದ ರೈತರ ಕಥೆಯೂ ಖುಷ್ಕಿ ಜಮೀನಿನ ರೈತರ ಪರಿಸ್ಥಿತಿಯನ್ನು ಹೋಲುತ್ತದೆ ಎಂದು ಕೃಷ್ಣಾಪುರದ ರೈತ ರಾಮಣ್ಣ ಹೇಳುತ್ತಾರೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬೆಳೆದು ನಷ್ಟಕ್ಕೀಡಾಗಿರುವ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಮಗ್ರ ವರದಿ ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಬೇಕು.ಈ ಕೂಡಲೆ ಸಮೀಕ್ಷೆ ನಡೆಸಲು ಕೃಷಿ ಅಧಿಕಾರಿಗಳು ಸಿದ್ಧರಾಗಬೇಕು. ಇಲ್ಲದಿದ್ದರೆ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡ ಕೊಟಗಿ ಮಲ್ಲಿಕಾರ್ಜುನ ಎಚ್ಚರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry