ಬುಧವಾರ, ಜನವರಿ 29, 2020
27 °C

ಒಣಗುತ್ತಿರುವ ಕಬ್ಬು: ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ/ಎಚ್‌.ಎಸ್‌. ಶ್ರೀಹರಪ್ರಸಾದ್‌ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ಈ ಭಾಗದಲ್ಲಿ ಕಬ್ಬು ಬೆಳೆದ ಬೆಳೆಗಾರರ ಬದುಕು ಸಿಹಿಗಿಂತ ಕಹಿಯೇ ಹೆಚ್ಚಾ ಗಿದ್ದು, ಕಟಾವಿಗೆ ಬಂದ ಕಬ್ಬು ಒಣಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.



ಹೋಬಳಿ ವ್ಯಾಪ್ತಿಯ ವ್ಯಾಸನಕೆರೆ ಏತನೀರಾವರಿ ಪ್ರದೇಶ ವ್ಯಾಪ್ತಿಯ ಹಂಪಿನಕಟ್ಟೆ–ವೆಂಕಟಾಪುರ, ವ್ಯಾಸನಕೆರೆ, ಅಯ್ಯನಹಳ್ಳಿ ಭಾಗದಲ್ಲಿ 500 ಎಕರೆಗೂ ಅತಿ ಹೆಚ್ಚು ಕಬ್ಬನ್ನು ಬೆಳೆಯಲಾಗಿದೆ. ಜತೆಗೆ ಡಣಾಯಕನಕೆರೆ, ಗುಂಡಾ, ಜಿ.ನಾಗಲಾ ಪುರ, ಚಿಕನಹಟ್ಟಿ, ಡಣಾಪುರ, ಹನುಮಹಳ್ಳಿ, ಪೋತಲಕಟ್ಟೆ ಸೇರಿಂತೆ ಇತರೆ ಗ್ರಾಮಗಳ ಭಾಗದ ಕೆರೆ ಮಾಗಾಣಿ ಸೇರಿದಂತೆ ಪಂಪ್‌ಸೆಟ್‌, ಬೋರ್‌ ವೆಲ್‌ನ  ವ್ಯಾಪ್ತಿ ಸೇರಿದಂತೆ ಒಟ್ಟಾರೆ ಸುಮಾರು 600 ಎಕರೆಗೂ ಹೆಚ್ಚು ಪ್ರದೇಶದಲ್ಲಿ,  ಸುಮಾರು 30ಸಾವಿರ ಟನ್‌ ಅಧಿಕ ಕಬ್ಬನ್ನು ಬೆಳೆಯಲಾಗಿದೆ.



ಅಲ್ಲದೆ ಈಗಾಗಲೇ 12 ತಿಂಗಳಿಗೂ ಮೇಲ್ಪಟ್ಟ ಕಬ್ಬು ಕಟಾವಿಗೆ ಬಂದಿದ್ದು, ಒಂದೆಡೆ ಒಣಗುತ್ತಿ ರುವದು ರೈತರಲ್ಲಿ ಆತಂಕ ಉಂಟು ಮಾಡಿದೆ.



13 ತಿಂಗಳಿಗೆ ಕಟಾವಿಗೆ ಬರುವ ಕಬ್ಬು, ಕೆಲವೆಡೆಗಳಲ್ಲಿ 13 ತಿಂಗಳಿಗೂ ಅಧಿಕಕಾಲವಾಗಿ ಅವಧಿ ಮೀರಿದ್ದು ಕಟಾವಿಗೆ ಬಂದು ನಿಂತಿದೆ. ಅಲ್ಲದೆ ಅವಧಿ ಮೀರಿದ ಕಬ್ಬಿನಲ್ಲಿನ ಸಕ್ಕರೆ ಅಂಶವು ಕಡಿಮೆಯಾಗುತ್ತಿದ್ದು, ಇತ್ತ ತೂಕ ಹಾಗೂ ಇಳು ವರಿಯೂ ಕಡಿಮೆಯಾಗುತ್ತಿದೆ. ಕಬ್ಬು ಒಣಗುತ್ತಿ­ರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.



ಒಂದೆಡೆ ಕಬ್ಬು ಬೆಳೆಗಾರ ರೈತರು ಬೆಳೆದ ಕಬ್ಬನ್ನು ಮುಕ್ತ ಮರಾಟಕ್ಕೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿರುವದು ಒಂದೆಡೆಯಾದರೆ, ಇತ್ತ ಹೊಸಪೇಟೆಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಇನ್ನು ಪ್ರಾರಂಭವಾಗದಿರುವುದು ಕಬ್ಬು ಬೆಳೆಗಾರ ರರ ಬೆನ್ನ ಮೇಲೆ ಬರೆ ಬಿದ್ದಂತಾಗಿದೆ.



ಇತ್ತ ಹೊರಗಡೆಯ ಕಾರ್ಖಾನೆಗಳಿಗೆ ಸಾಗಿಸಲು ಅನುವು ಮಾಡಿ ಕೊಡದಿರುವದು ಕಬ್ಬು ಒಣಗಲು ಕಾರಣ ಎಂದು ಈ ಭಾಗದ ರೈತರು ದೂರುತ್ತಿದ್ದಾರೆ.



ಸರ್ಕಾರ ನಿಗದಿ ಪಡೆಸಿರುವ ಬೆಲೆಗೆ ಕೊಡಲು ಸಿದ್ಧರಿದ್ದರೂ, ಇನ್ನು ಕಾರ್ಖಾನೆ ಪ್ರಾರಂಭವಾ ಗಿಲ್ಲ. ಅಲ್ಲದೆ ಹೊಸಪೇಟೆಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆಯವರು ಕಳೆದ ವರ್ಷ ಟನ್‌ಗೆ ಹೆಚ್ಚುವರಿ ₨ 120 ಸೇರಿದಂತೆ ಅದರ ಹಿಂದಿನ ವರ್ಷದ ಬಾಕಿ ಮೊತ್ತವನ್ನು ಇನ್ನು ನೀಡಿಲ್ಲ.ಎಂದು ದೂರುವ ರೈತರು ಇತ್ತ ಕಬ್ಬು ಬೆಳೆಗಾರರ ಸಂಕಷ್ಟ ಕೇಳುವರಿಲ್ಲದಂತಾಗಿದೆ ಎಂದು ಆತಂಕ ತೋಡಿಕೊಳ್ಳುತ್ತಾರೆ.



‘ನೋಡ್ರಿ ಇನ್ನ ಕಬ್ಬು ಬೆಳೆ ಬೇಕಂದ್ರ ಬ್ಯಾಸರ ಬಂದೈತಿ, ಕಬ್ಬ ಬೆಳೆದ ನಮ್‌ ಬದುಕು ಸಿಹಿಯಾಗಿ ಹಸನಾಗತೈತಿ ಅಂತ ಅನ್‌ಕೊಂಡಿದ್ವಿ, ಆದ್ರ ಸಿಹಿಗಿಂತ ನಮಗೆ ಕಹಿ ಹೆಚ್ಚಾಗೈತಿ. ಏತನೀರಾವರಿ ನೀರು ಸಿಗುತೈತಿ ಅಂತ ಕಬ್ಬ ಹಾಕೇವಿ, ಆದ್ರ ಕಬ್ಬ ಕಟಾವಿಗೆ ಬಂದ್ರು, ಇನ್ನು ಹೊಸಪ್ಯಾಟಿ ಕಾರ್ಖಾನಿ ತೆಗೆದಿಲ್ಲ, ಇತ್ತ ಬೇರೆ ಕಡೆ ಸಾಗಿಸೋಣ ಅಂದ್ರ ಅದಕ್ಕ ದಾರಿ ಇಲ್ಲದಂಗ ಆಗೇತಿ.  ಹಿಂಗಾದ್ರ ರೈತರ ಬದುಕು ಹೆಂಗ, ಸಾಲಸೋಲ ಮಾಡೇವಿ ಅದನ್ನ ಕಟ್ಟದು ಕಷ್ಟ ಆಗತೈತಿ. ಈ ಕಡೆ ಸರ್ಕಾರನೂ ಕಬ್ಬ ಬೆಳೆಗಾಗರರ ಸಂಕಷ್ಟ ಕೇಳದಂಗ ಆಗೈತಿ ನಮ್‌ ಪರಿಸ್ಥಿತಿ ಎನ್ನುತ್ತಾರೆ ಹಂಪಿಕಟ್ಟೆ–ವೆಂಕಟಾಪುರದ ಭಾಗದ ಕಬ್ಬು ಬೆಳೆಗಾರರಾದ ಹನುಮಂತಪ್ಪ, ರಾಮಚಂದ್ರಪ್ಪ ಮತ್ತು ಗಾಳೆಪ್ಪ.



ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಹೇಳುವಂತೆ, ಹೊಸಪೇಟೆ ಐಎಸ್‌ಆರ್‌ ಕಾರ್ಖಾನೆ ವ್ಯಾಪ್ತಿಗೆ ಬರುವ ಹಗರಿಬೊಮ್ಮನಹಳ್ಳಿ, ತಂಬ್ರಳ್ಳಿ, ಮರಿಯಮ್ಮನ ಹಳ್ಳಿ ಹೋಬಳಿಯಲ್ಲಿ ಬರುವ ಗ್ರಾಮಗಳ ವ್ಯಾಪ್ತಿ ಯ ಸುಮಾರು 2500ಎಕರೆಯಲ್ಲಿ ಬೆಳೆದ 1.35 ಲಕ್ಷ ಟನ್‌ ಕಬ್ಬು ಬೆಳೆದ ರೈತರಿಗೆ ಐಎಸ್‌ಆರ್‌ ಕಾರ್ಖಾನೆ ಸರಿಯಾಗಿ ಹಣ ನೀಡದೇ ಹಾಗೂ ಸೂಕ್ತ ಸಮಯದಲ್ಲಿ ಕಾರ್ಖಾನೆ ಪ್ರಾರಂಭಿಸದೆ ರೈತರನ್ನು ನಷ್ಟಗಾರರನ್ನಾಗಿ ಮಾಡುತ್ತಿದೆ. ನಾವು ಬೆಳೆದ ಕಬ್ಬನ್ನು ಬೇರೆಡೆ ಸಾಗಿಸಲು ಮುಕ್ತ ಮಾರಾಟಬೇಕಾಗಿದೆ.





ರೈತರು ಬೆಳೆದ ಕಬ್ಬನ್ನು ಮುಕ್ತವಾಗಿ ಮರಾಟ ಮಾಡಲು ಸರ್ಕಾರ ಅವಕಾಶ ಕಲ್ಪಿಸಲು ಒತ್ತಾಯಿಸಿ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರುವ ಈ ಭಾಗದ ರೈತರು ಸರ್ಕಾರ ಗಮನ ಸೆಳೆಯಲು ಪ್ರತಿಭಟನೆ ಹಾದಿ ತುಳಿಯಲು ಮುಂದಾಗಿದ್ದಾರೆ.

 

ಪ್ರತಿಕ್ರಿಯಿಸಿ (+)