ಶನಿವಾರ, ಮೇ 21, 2022
25 °C

ಒಣಗುತ್ತಿರುವ ಬೆಳೆ: ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ನೀರಿಲ್ಲದೆ ಒಣಗುತ್ತಿರುವ ಕಬ್ಬು ಇತರ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.ಸುಮಾರು ಒಂದು ತಾಸು ರೈತರು ಧರಣಿ ನಡೆಸಿದರು. ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳದಿರುವ ಕಬ್ಬು ಬೆಳೆ ನೀರಿಲ್ಲದೆ ಒಣಗುತ್ತಿದೆ. ಶೇ.25ರಷ್ಟು ಬೆಳೆ ಈಗಾಗಲೇ ಹಾಳಾಗಿದೆ. ಮಳೆಯೂ ಬಾರದ ಕಾರಣ ರೈತರು ನಷ್ಟ ಅನುಭವಿಸುವ ಸ್ಥಿತಿ ಬಂದಿದೆ.ಕೆಆರ್‌ಎಸ್ ಜಲಾಶಯದಲ್ಲಿ ಕಳೆದ ಡಿಸೆಂಬರ್‌ನಲ್ಲಿ 2010ನೇ ವರ್ಷದಲ್ಲಿ ಇದ್ದ ನೀರಿಗಿಂತ 7 ಅಡಿ ನೀರು ಜಾಸ್ತಿ ಇತ್ತು. ಅಧಿಕಾರಿಗಳು ಬೇಕಾಬಿಟ್ಟಿ ನೀರು ಹರಿಸಿದ್ದರಿಂದ ನೀರು ಬೇಗ ಖಾಲಿಯಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಸದೆ ಇರುವುದೇ ನೀರಿನ ಕೊರತೆ ಉಂಟಾಗಲು ಕಾರಣವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಸಂಸತ್ ಸದಸ್ಯರ ಬೇಜವಾಬ್ದಾರಿಯಿಂದ ರೈತರು ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ದೂರಿದರು.ನದಿ ಒಡ್ಡಿನ ಕಾಲುವೆಗಳಾದ ಚಿಕ್ಕದೇವರಾಯ ಮತ್ತು ವಿರಿಜಾ ನಾಲೆಗಳಿಗೆ ತಕ್ಷಣ ನೀರು ಹರಿಸಿ ಬೆಳೆ ಉಳಿಸಬೇಕು. ವಿಶ್ವೇರಯ್ಯ ನಾಲೆ ಬಯಲಿನಲ್ಲಿ ಒಣಗುತ್ತಿರುವ ಬೆಳೆ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ನಷ್ಟದ ಅಂದಾಜು ತಯಾರಿಸಬೇಕು.

 

ನೀರಿಲ್ಲದೆ ಒಣಗಿರುವ ಕಬ್ಬು ಬೆಳೆಗೆ ಎಕರೆಯೊಂದಕ್ಕೆ ಸರ್ಕಾರ ರೂ.1 ಲಕ್ಷ ಹಾಗೂ ಇತರ ಬೆಳೆಗಳಿಗೆ ರೂ.50 ಸಾವಿರ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು. ಪರಿಹಾರ ನೀಡದಿದ್ದರೆ ಚಳವಳಿಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

 

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ಕೆ.ಶೆಟ್ಟಹಳ್ಳಿ ಶ್ರೀಕಂಠು, ಕೃಷಿಕ ಸಮಾಜದ ನಿರ್ದೇಶಕ ಬಾಲಕೃಷ್ಣ, ದಿನೇಶ್, ಜಯರಾಮೇಗೌಡ, ಕಪರನಕೊಪ್ಪಲು ಚಿಕ್ಕನಾಗರಾಜು, ದೊಡ್ಡನಾಗರಾಜು, ನಾಗೇಂದ್ರು, ಕೃಷ್ಣ, ಕೆ.ಜಯರಾಂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೆಚ್ಚುವರಿ ತಹಶೀಲ್ದಾರ್ ಪದ್ಮಮ್ಮ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.