ಒಣಗುತ್ತಿರುವ ಬೆಳೆ: ರೈತರ ಕಳವಳ

7

ಒಣಗುತ್ತಿರುವ ಬೆಳೆ: ರೈತರ ಕಳವಳ

Published:
Updated:

ಭಾಲ್ಕಿ: ಸುಟ್ಟುಹೋದ ವಿದ್ಯುತ್ ಪರಿವರ್ತಕಗಳು ತಿಂಗಳಾದರೂ ದುರಸ್ತಿಯಾಗಿಲ್ಲ. ಸಾಲದ  ಬಂಡವಾಳ ಹಾಕಿ ಪರಿಶ್ರಮದಿಂದ ಬಿತ್ತಿದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.ನದಿಯ ನೀರನ್ನು ಎರಡು ಮೂರು ಕಿ.ಮೀ. ವರೆಗೆ ಹರಿಸಲು ವಿದ್ಯುತ್ ಅನಿವಾರ್ಯ. ಆದರೆ ಜೆಸ್ಕಾಂ ಕಚೇರಿಗೆ ಅಡ್ಡಾಡುವುದರಲ್ಲಿ ಬೆಳೆಗಳು ಒಣಗಿ ದಯನೀಯ ಸ್ಥಿತಿಗೆ ಬಂದಿದ್ದನ್ನು ನೋಡಲಾಗದೇ ಭಾಲ್ಕಿ ತಾಲ್ಲೂಕಿನ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದ ಅನೇಕ ಬಡ ರೈತರು ಕಂಗಾಲಾಗಿದ್ದಾರೆ.ಗಡಿ ಭಾಗದ ಮೆಹಕರ್, ಶ್ರೀಮಾಳಿ, ಅಟ್ಟರ್ಗಾ, ಗುಂಜರ್ಗಾ, ಬೋಳೆ ಗಾಂವ, ನಾರದಾ ಸಂಗಮ, ಸಾಯಗಾಂವ ತಾಂಡಾ ಮುಂತಾದ ಗ್ರಾಮಗಳ  ರೈತರು ಬವಣೆಪಡುವಂತಾಗಿದೆ.ಇಲ್ಲಿ ಅನೇಕ ಸಣ್ಣ ರೈತರು ಇದ್ದಾರೆ. ಸರ್ಕಾರದ ಯೋಜನೆಯ ಲಾಭ ಪಡೆಯಲು 63ಕೆ.ವಿ. ವಿದ್ಯುತ್ ಅಳವಡಿಸಿಕೊಂಡಿದ್ದಾರೆ. ಆದರೆ ಲೋಡ್ ಹೆಚ್ಚಾಗಿ ವಿದ್ಯುತ್ ಪರಿವರ್ತಕಗಳು ಒಂದೆರಡು ತಿಂಗಳಲ್ಲೇ ಸುಡುತ್ತಿವೆ. ಈ ಬಗ್ಗೆ ಸಾಕಷ್ಟು ಸಲ ಜೆಸ್ಕಾಂ ಕಚೇರಿಗೆ ದೂರು ಕೊಟ್ಟಿದ್ದೇವೆ ಎಂದು ರೈತರಾದ ನರಸಿಂಗ ಹಿಲಾಲಪುರೆ, ಮಧುಕರ, ವೈಜಿನಾಥ, ಆನಂದ, ವೆಂಕಟರಾವ ಜಾಮಖಂಡೆ ಮುಂತಾದವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.ಸಾಕಷ್ಟು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗಿ ಹಲವು ದಿನಗಳಾಗಿವೆ. ಜೆಸ್ಕಾಂ ಕಚೇರಿಗೆ ಅವುಗಳನ್ನು ಸಾಗಿಸಲಾಗಿದೆ.

ಆದರೆ ಮರಳಿ ಬಂದಿಲ್ಲ ಎನ್ನುತ್ತಾರೆ ಇದೇ ಊರಿನ ಎಪಿಎಂಸಿ ಅಧ್ಯಕ್ಷ ಅಶೋಕ ಪಾಟೀಲ.ಕೂಡಲೇ ಟಿ.ಸಿ. ಕೊಡದಿದ್ದರೆ ರೈತರ ಕಬ್ಬು, ಕಡಲೆ, ಶೇಂಗಾ, ತೊಗರಿ ಮುಂತಾದ ನೀರಾವರಿ ಬೆಳೆಗಳು ಒಣಗುತ್ತವೆ. ರೈತರ ಸಾಲ ಬೆಟ್ಟದಷ್ಟು ಬೆಳೆಯುತ್ತದೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಲಿ ಎಂದು ಬೋಳೆಗಾಂವದ ರಾಜೇಶ್ವರ, ಶಿವಕುಮಾರ, ಬಾಲಾಜಿ, ಲಕ್ಷ್ಮಣ ತೋರಣೆ, ಜ್ಞಾನೋಬಾ ಮುಂತಾದವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry