ಒಣ ಭೂಮಿಯಲ್ಲಿ ಭತ್ತ

7

ಒಣ ಭೂಮಿಯಲ್ಲಿ ಭತ್ತ

Published:
Updated:
ಒಣ ಭೂಮಿಯಲ್ಲಿ ಭತ್ತ

ಮಳೆ ಆಶ್ರಯದ ಕಪ್ಪು ಮಣ್ಣಿನ ಹೊಲಗಳಲ್ಲಿ ಹಿಂಗಾರಿ ಜೋಳ, ಸಜ್ಜೆ, ಕಡಲೆ ಇತ್ಯಾದಿಗಳನ್ನು ಬೆಳೆಯುವುದು ವಾಡಿಕೆ. ಆದರೆ ಇದೇ ಕಪ್ಪು ಭೂಮಿಯಲ್ಲಿ ರೈತರೊಬ್ಬರು ಭತ್ತ ಬೆಳೆದಿದ್ದಾರೆ!ಹೆಚ್ಚು ಮಳೆಯಾಗಿ ಪಕ್ಕದ ಕೆರೆಯಲ್ಲಿ ನೀರು ಹೆಚ್ಚಾಗಿ ಉಕ್ಕಿದ ಪರಿಣಾಮ ಅಲ್ಲಿ ಹೆಚ್ಚಾದ ತೇವಾಂಶವನ್ನು ಬಳಸಿಕೊಂಡು ಭತ್ತ ಬೆಳೆದ ರೈತನ ಜಾಣ್ಮೆ ಮೆಚ್ಚುವಂಥದ್ದು.

ಈ ರೈತರ ಹೆಸರು ಶಿವನಗೌಡ ಹೊಸಮನಿ.ಅವರು ಹುನಗುಂದ ತಾಲ್ಲೂಕಿನ ಚಿಕ್ಕಯರನಕೇರಿ ಗ್ರಾಮದವರು. ಅವರು ತಮ್ಮ ಹೊಲದಲ್ಲಿ ಜೋಳ, ಸಜ್ಜೆ, ಅಕ್ಕಡಿ ಕಾಳು, ಉಳ್ಳಾಗಡ್ಡಿ ಇತ್ಯಾದಿ ಬೆಳೆಗಳನ್ನು ಬಹಳ ಹಿಂದಿನಿಂದ ಬೆಳೆಯುತ್ತ ಬಂದಿದ್ದಾರೆ.ಶಿವನಗೌಡರ ಹೊಲದ ಪಕ್ಕದಲ್ಲಿ ಒಂದು ಕೆರೆ ಇದೆ. ಎರಡು ವರ್ಷಗಳ ಹಿಂದೆ ಮಳೆ ಹೆಚ್ಚಾಗಿ  ಪ್ರವಾಹ ಬಂದಾಗ ಕೆರೆ ತುಂಬಿತು. ಪರಿಣಾಮ ಶಿವನಗೌಡರ ಹೊಲದಲ್ಲಿ ಅಲ್ಲಲ್ಲಿ ನೀರಿನ ಬುಗ್ಗೆಗಳು ಎದ್ದವು.ನೀರಿನ ಒರತೆಯಿಂದ ಹೊಲ ಸದಾ ಹಸಿಯಾಗಿರುವುದನ್ನು ಗಮನಿಸಿದ ಶಿವನಗೌಡರ ಸೊಸೆ ಅಲ್ಲಿ ಭತ್ತ ಬೆಳೆಯುವ ಸಲಹೆ ನೀಡಿದರು. ಸೊಸೆಯ ಮಾತು ಕೇಳಿ ಉತ್ತೇಜಿತರಾದ ಗೌಡರು ಅನುಭವಿ ರೈತರ ಸಲಹೆಯಂತೆ ಭತ್ತ ಬೆಳೆದರು.ಆರು ಎಕರೆ ಜಮೀನಿನಲ್ಲಿ ಸುಮಾರು ಎಂಟು ಗುಂಟೆಯಷ್ಟು ಪ್ರದೇಶದ್ಲ್ಲಲಷ್ಟೇ ಭತ್ತ ಬೆಳೆದಿದ್ದಾರೆ. ಬಿತ್ತನೆಗೆ ಮೊದಲು ಬೀಜೋಪಚಾರ ಮಾಡಿದ್ದನ್ನು ಬಿಟ್ಟರೆ ಪ್ರತ್ಯೇಕವಾಗಿ ರಾಸಾಯನಿಕ ಗೊಬ್ಬರ ಹಾಕಿಲ್ಲ.ಎಂಟು ಗುಂಟೆಯಲ್ಲಿ ಸುಮಾರು ನಾಲ್ಕು ಚೀಲ ಭತ್ತದ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಸಲ ಒಂದು ಎಕರೆಯಲ್ಲಿ ಭತ್ತ ಬೆಳೆಯುವ ಸಿದ್ಧತೆಯಲ್ಲಿದ್ದಾರೆ. ಮಳೆ ಆಶ್ರಯದ ಕಪ್ಪು ಹೊಲದಲ್ಲಿ ಭತ್ತ ಬೆಳೆದಿರುವ ಶಿವನಗೌಡರ ಪ್ರಯತ್ನ ಸುತ್ತಲಿನ ಊರುಗಳ ರೈತರ ಗಮನ ಸೆಳೆದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry