ಒತ್ತಡಕ್ಕೆ ಮಣಿದು ಅದಿರು ರಫ್ತು ನಿಷೇಧ

7

ಒತ್ತಡಕ್ಕೆ ಮಣಿದು ಅದಿರು ರಫ್ತು ನಿಷೇಧ

Published:
Updated:

ಬೆಂಗಳೂರು: ದೇಶದ ಉಕ್ಕು ಉದ್ಯಮದ ಒತ್ತಡಕ್ಕೆ ಮಣಿದು ಉಕ್ಕು ಸಚಿವಾಲಯ ನೀಡಿರುವ ವರದಿಗಳನ್ನು ಆಧರಿಸಿ ಸಂಸತ್ತಿನ ಸ್ಥಾಯಿ ಸಮಿತಿಯು ಕಬ್ಬಿಣದ ಅದಿರು ರಫ್ತನ್ನು ಸಂಪೂರ್ಣವಾಗಿ ನಿಷೇ ಧಿಸುವಂತೆ ಶಿಫಾರಸು ಮಾಡಿದೆ ಎಂದು ಭಾರತೀಯ ಗಣಿ ಉದ್ಯಮಗಳ ಒಕ್ಕೂಟ (ಫಿಮಿ) ಆರೋಪಿಸಿದೆ.

ನಗರದಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಫಿಮಿ ಅಧ್ಯಕ್ಷ ಎಚ್‌.ಸಿ.ದಾಗಾ ಮತ್ತು ಮಹಾಪ್ರಧಾನ ಕಾರ್ಯದರ್ಶಿ ಆರ್‌.ಕೆ. ಶರ್ಮ, ‘ಉಕ್ಕು ಕೈಗಾರಿಕೆಗಳ ಲಾಬಿಗೆ ಮಣಿದಿರುವ ಉಕ್ಕು ಸಚಿವಾಲಯವು ಸಂಸತ್ತಿನ ಸ್ಥಾಯಿ ಸಮಿತಿಗೆ ತಪ್ಪು ಮಾಹಿತಿ ನೀಡಿದೆ. ಗಣಿ ಸಚಿವಾಲಯ, ವಾಣಿಜ್ಯ ಮತ್ತು ಹಣಕಾಸು ಸಚಿವಾಲಯ ರಫ್ತಿನ ಪರವಾಗಿ ಇದ್ದಾಗ್ಯೂ ವ್ಯತಿರಿಕ್ತ ಶಿಫಾರಸು ಬರಲು ಉಕ್ಕು ಸಚಿವಾಲಯವೇ ಕಾರಣ’ ಎಂದು ನೇರ ಆರೋಪ ಮಾಡಿದರು.

‘ಸಂಸದೀಯ ಸ್ಥಾಯಿ ಸಮಿತಿ ಸರಿ ಯಾಗಿ ತನ್ನ ಕೆಲಸವನ್ನು ಮಾಡಿಲ್ಲ. ದೇಶ ದಲ್ಲಿ ಉಕ್ಕು ರಫ್ತಿಗಿಂತಲೂ ಕಬ್ಬಿಣದ ಅದಿರಿನ ರಫ್ತಿಗೆ ಹೆಚ್ಚು ಅವಕಾಶ ಇದೆ. ಸ್ಥಳೀಯ ಉಕ್ಕು ಕೈಗಾರಿಕೆಗಳು ಕಡಿಮೆ ದರಕ್ಕೆ ಅದಿರು ಪಡೆಯಲು ಈ ರೀತಿ ಮಾಡುತ್ತಿವೆ. ಉಕ್ಕು ಕೈಗಾರಿಕೆಗಳ ಲಾಬಿ ತೀರಾ ಬಲಿಷ್ಠವಾದುದು. ಅವರ ಲಾಬಿಗೆ ಉಕ್ಕು ಸಚಿವಾಲಯ ಮಣಿದಿದೆ. ಆದರೆ, ಅದನ್ನು ಎದುರಿಸುವ ಶಕ್ತಿ ಗಣಿ ಉದ್ಯಮಕ್ಕೆ ಇಲ್ಲ’ ಎಂದರು.

ಕಬ್ಬಿಣದ ಅದಿರು ರಫ್ತು ದೇಶದ ವಿದೇಶಿ ವಿನಿಮಯ ಗಳಿಕೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಕ್ಷೇತ್ರ. 2009–10ರಿಂದ 2011–12ರ ಅವಧಿಯಲ್ಲಿ ಕಬ್ಬಿಣದ ಅದಿರು ರಫ್ತಿನಿಂದ ದೇಶದ ಬೊಕ್ಕಸಕ್ಕೆ ₨ 1.17 ಲಕ್ಷ ಕೋಟಿ ವಿದೇಶಿ ವಿನಿಮಯ ಹರಿದುಬಂದಿತ್ತು. 2009–10ರಲ್ಲಿ 11.7 ಕೋಟಿ ಟನ್‌ ಅದಿರು ರಫ್ತು ಮಾಡಲಾಗಿತ್ತು. 2010–11 ರಲ್ಲಿ ಈ ಪ್ರಮಾಣ 9.8 ಕೋಟಿ ಟನ್‌ಗೆ ಇಳಿದಿತ್ತು. 2011–12ರಲ್ಲಿ ಆರು ಕೋಟಿ ಟನ್‌ ಅದಿರು ರಫ್ತಾಗಿದ್ದರೆ, 2012–13ರಲ್ಲಿ ಈ ಪ್ರಮಾಣ 1.8 ಕೋಟಿ ಟನ್‌ಗೆ ಕುಸಿದಿದೆ ಎಂದು ವಿವರ ನೀಡಿದರು.

‘ದೇಶದಲ್ಲಿ ಲಂಪ್ಸ್‌ ಕಬ್ಬಿಣದ ಅದಿರು ಮಾತ್ರ ಬಳಕೆ ಮಾಡಲಾಗುತ್ತದೆ. ಫೈನ್ಸ್‌ ಅದಿರನ್ನು ರಫ್ತು ಮಾಡಲಾಗುತ್ತದೆ. ಈಗಾಗಲೇ ದೇಶದ ಗಣಿ ಉದ್ಯಮದಲ್ಲಿ ಆಗಿರುವ ಬೆಳವಣಿಗೆಗಳಿಂದ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಅದಿರು ರಫ್ತುದಾರರ ಮೇಲಿನ ವಿಶ್ವಾಸ ಕಡಿಮೆ ಆಗಿದೆ. ಇದರಿಂದಾಗಿ ನಾವು ಈಗಾಗಲೇ ದೊಡ್ಡ ಅವಕಾಶ ಕಳೆದು ಕೊಂಡಿದ್ದೇವೆ’ ಎಂದರು.

10 ಲಕ್ಷ ಜನರಿಗೆ ತೊಂದರೆ

‘ಕಬ್ಬಿಣದ ಅದಿರು ರಫ್ತು ನಿಷೇಧ ಪರಿ ಣಾಮಗಳನ್ನು ಸುಲಭದಲ್ಲಿ ಲೆಕ್ಕಿಸಲು ಸಾಧ್ಯವಿಲ್ಲ. 10 ಲಕ್ಷ ಜನ ನೇರವಾಗಿ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಪರೋಕ್ಷವಾಗಿ ಅದಿರು ರಫ್ತಿನ ಜೊತೆ ನಂಟು ಹೊಂದಿರುವವರ ಸಂಖ್ಯೆ ಕೋಟಿ ಮೀರುತ್ತದೆ. ಒಮ್ಮೆ ಅದಿರು ರಫ್ತು ನಿಷೇಧ ಮಾಡಿದರೆ ಎಲ್ಲರೂ ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಶರ್ಮ ಗಮನ ಸೆಳೆದರು.

ದೇಶದಲ್ಲಿನ ಯಾವುದೇ ಸರ್ಕಾರವೂ ಗಣಿ ಉದ್ಯಮಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಗಣಿ ಗುತ್ತಿಗೆಗೆ ಸಂಬಂಧಿ ಸಿದ 65,000 ಅರ್ಜಿಗಳು ವಿವಿಧ ಸರ್ಕಾರಗಳ ಮುಂದೆ ಬಾಕಿ ಇವೆ. ಈ ಪೈಕಿ 44,000 ಅರ್ಜಿಗಳು ಹೊಸ ಗುತ್ತಿಗೆ ಕೋರಿರುವುದಕ್ಕೆ ಸಂಬಂಧಿಸಿ ದ್ದವು. ಗುತ್ತಿಗೆ ನವೀಕರಣಕ್ಕೆ ಸಂಬಂಧಿ ಸಿದ 2,500 ಅರ್ಜಿಗಳು ಬಾಕಿ ಇವೆ. ಈ ಅರ್ಜಿಗಳ ವಿಲೇವಾರಿಗೆ ಆದ್ಯತೆಯನ್ನೇ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೆಡ್ಡಿಗೆ ಬೆಂಬಲವಿಲ್ಲ’

‘ಗಣಿ ಉದ್ಯಮದ ವಿಷಯ ಬಂದಾಗಲೆಲ್ಲ ಭ್ರಷ್ಟಾಚಾರದ ವಿಷಯ ಪ್ರಸ್ತಾಪವಾಗುತ್ತದೆ. ಇಲ್ಲಿರುವ ಎಲ್ಲರೂ ಭ್ರಷ್ಟರಲ್ಲ. ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿರುವ ಜಿ.ಜನಾರ್ದನ ರೆಡ್ಡಿ ಅವರನ್ನು ಉದ್ಯಮ ಬೆಂಬಲಿಸುವುದಿಲ್ಲ’ ಎಂದು ಶರ್ಮ ಸ್ಪಷ್ಟಪಡಿಸಿದರು.

ಇಂದಿನಿಂದ ಸಮಾವೇಶ

ಭಾರತೀಯ ಗಣಿ ಉದ್ಯಮಗಳ ಒಕ್ಕೂಟ (ಫಿಮಿ) ನಗರದ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಗುರುವಾರದಿಂದ ಶನಿವಾರ ದವರೆಗೆ ಗಣಿಗಾರಿಕೆಗೆ ಸಂಬಂಧಿಸಿದ ಸಮಾವೇಶ ಮತ್ತು ಔದ್ಯಮಿಕ ಪ್ರದರ್ಶನ ಆಯೋಜಿಸಿದೆ.

‘ಗಣಿಗಾರಿಕೆ, ಹೊಸ ಸಾಧ್ಯತೆಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ಅವಕಾಶಗಳು ಮತ್ತಿತರ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯ ಲಿದೆ. ಆಸ್ಟ್ರೇಲಿಯಾ, ಕೆನಡಾ, ಮೊಜಾಂಬಿಕ್‌, ಪೆರು, ನ್ಯೂಗಿನಿ, ದಕ್ಷಿಣ ಆಫ್ರಿಕಾ ಮತ್ತಿತರ ರಾಷ್ಟ್ರಗಳ ಸರ್ಕಾರದ ಪ್ರತಿನಿಧಿಗಳು ಹಾಗೂ ಗಣಿ ಉದ್ಯಮದ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗ ವಹಿಸುವರು. ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಸಮಾವೇಶ ನಡೆಯುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry