ಒತ್ತಡಕ್ಕೆ ಮಣಿದು ಪಟ್ಟಿ ಬದಲಾವಣೆ; ಹೊಸ ಸದಸ್ಯರ ಅಸಮಾಧಾನ

7

ಒತ್ತಡಕ್ಕೆ ಮಣಿದು ಪಟ್ಟಿ ಬದಲಾವಣೆ; ಹೊಸ ಸದಸ್ಯರ ಅಸಮಾಧಾನ

Published:
Updated:

ಬಾಗಲಕೋಟೆ: ಸಾಮಾಜಿಕ ನ್ಯಾಯ ಸಮಿತಿ ಸೇರಿದಂತೆ ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಜಿಪಂ ಸಭಾಭವನದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಎಲ್ಲ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಹೆಸರುಗಳನ್ನು ಜಿಪಂ ಅಧ್ಯಕ್ಷೆ ಕವಿತಾ ದಡ್ಡೇನವರ ಪ್ರಕಟಿಸಿದರು.ಸದಸ್ಯರ ಪಟ್ಟಿಯನ್ನು ಏಕಪಕ್ಷೀಯವಾಗಿ ರಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು, ಪಟ್ಟಿ ಬದಲಾವಣೆಗೆ ಪಟ್ಟುಹಿಡಿದರು.ಮುಖಂಡರ ಒತ್ತಾಯದ ಮೇರೆಗೆ ಪಟ್ಟಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ ಬಳಿಕ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ನೂತನ ಸದಸ್ಯರು ಮೊದಲ ಸಭೆಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಗ್ರಾಮಸಭೆಗೆ ಆಹ್ವಾನಿಸುತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು.ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮಸಭೆಗಳಿಗೆ ಆಯಾ ಕ್ಷೇತ್ರದ ಸದಸ್ಯರನ್ನು ಗೌರವ ಸದಸ್ಯರನ್ನಾಗಿ ಕೆಲವೆಡೆ ಆಹ್ವಾನಿಸಲಾಗುತ್ತಿದ್ದು, ಅದೇ ರೀತಿ ಎಲ್ಲ ಕಡೆಯೂ ಆಹ್ವಾನ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೆಲವರು ಆಗ್ರಹಿಸಿದರು.ಆಗ ಮಧ್ಯಪ್ರವೇಶಿಸಿದ ಜಿಪಂ ಮುಖ್ಯ ಕಾರ್ಯದರ್ಶಿ ಡಾ.ಜಿ.ಸಿ. ಪ್ರಕಾಶ್, ಪಂಚಾಯಿತಿ ಕಾಯ್ದೆಯಲ್ಲಿ ‘ಗೌರವ ಸದಸ್ಯ’ ಎಂಬುದಿಲ್ಲ. ಆದ್ದರಿಂದ ಗ್ರಾಮಸಭೆಗೆ ಜಿಪಂ ಸದಸ್ಯರನ್ನು ಕಡ್ಡಾಯವಾಗಿ ಆಹ್ವಾನಿಸಬೇಕು ಎಂದು ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಜಿಪಂ ಸದಸ್ಯರನ್ನು ಗ್ರಾಮಸಭೆಗೆ ಆಹ್ವಾನಿಸುವ ಬಗ್ಗೆ ಗೊಂದಲಗಳಿರುವುದರಿಂದ ಕಾಯ್ದೆಯನ್ನು ಪರಿಶೀಲಿಸಿ ಸದಸ್ಯರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಉಪಾಧ್ಯಕ್ಷ ಹೂವಪ್ಪ ರಾಠೋಡ ತಿಳಿಸಿದರು.ನೂತನ ಸಮಿತಿಗಳ ಮೊದಲ ಸಭೆಗಳು ಫೆ.28ರಿಂದ ಆರಂಭಗೊಳ್ಳಲಿದ್ದು, ಮಾರ್ಚ್ 2ರವರೆಗೆ ನಡೆಯಲಿವೆ. ಸಂಬಂಧಪಟ್ಟ ಸಮಿತಿ ಸದಸ್ಯರಿಗೆ ನೋಟಿಸ್ ಕಳಿಸಲಾಗುವುದು ಎಂದು ಡಾ.ಪ್ರಕಾಶ್ ತಿಳಿಸಿದರು.ಪ್ರತ್ಯೇಕ ಕೊಠಡಿಗೆ ಬೇಡಿಕೆ

ಅಧ್ಯಕ್ಷ- ಉಪಾಧ್ಯಕ್ಷರು ಒಂದೇ ಪಕ್ಷದವರಾಗಿರುವುದರಿಂದ ವಿರೋಧ ಪಕ್ಷದ ಸದಸ್ಯರು ಒಂದೆಡೆ ಕುಳಿತು ಚರ್ಚಿಸಲು ಪ್ರತ್ಯೇಕ ಕೊಠಡಿ ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಆಗ್ರಹಿಸಿದರು.ಈ ಬೇಡಿಕೆಯನ್ನು ನಯವಾಗಿಯೇ ತಿರಸ್ಕೃರಿಸಿದ ಉಪಾಧ್ಯಕ್ಷ ರಾಠೋಡ, ‘ಚುನಾವಣೆ ಮುಗಿದ ಬಳಿಕ ನಾವು ಸದಸ್ಯರೆಲ್ಲ ಒಂದೇ. ಪಕ್ಷಭೇದ ಮರೆತು ಒಟ್ಟಾಗಿ ಕೆಲಸ ಮಾಡೋಣ. ಪ್ರತ್ಯೇಕ ಕೊಠಡಿ ಏಕೆ’ ಎಂದು ಪ್ರಶ್ನಿಸಿದರು.ಒಂದು ವೇಳೆ ಪ್ರತ್ಯೇಕ ಕೊಠಡಿ ಅಗತ್ಯವಿದ್ದರೆ ಇಷ್ಟು ದಿನ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷದವರು ಏಕೆ ಒದಗಿಸಿರಲಿಲ್ಲ ಎಂದು ಕೇಳಿದರು.ಶಾಸಕ ಸಿದ್ದು ಸವದಿ, ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ಸದಸ್ಯರಾದ ವಿಠ್ಠಪ್ಪ ಚೌರಿ, ಹನುಮಂತ ನಿರಾಣಿ, ಬಸವಂತಪ್ಪ ಮೇಟಿ, ಪಾಂಡಪ್ಪ ಪೊಲೀಸ್, ಸುಧಾ ಸೋರಗಾಂವಿ, ಅರ್ಜುನ ದಳವಾಯಿ, ವೀಣಾ ಎಮ್ಮಿ, ಲಕ್ಷ್ಮೀಬಾಯಿ ನ್ಯಾಮಗೌಡರ ಮತ್ತಿತರರು ಉಪಸ್ಥಿತರಿದ್ದರು.ನೂತನ ಸದಸ್ಯರ ಮೊದಲ ಸಭೆಯಾಗಿದ್ದರಿಂದ ಸದಸ್ಯೆಯರ ಪತಿಯಂದಿರು ಜಿಪಂ ಸಭಾಭವನದಲ್ಲಿ ಕಂಡುಬಂದರು.ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ವಿವರ
ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ

ಕವಿತಾ ದಡ್ಡೇನವರ(ಅಧ್ಯಕ್ಷೆ), ಹನುಮಂತ ನಿರಾಣಿ, ಸರೋಜಿನಿ ಅಂಗಡಿ, ಲಕ್ಷ್ಮೀಬಾಯಿ ನ್ಯಾಮಗೌಡರ, ಸೀತವ್ವ ಕಾಳೆ, ಬಸವಂತಪ್ಪ ಮೇಟಿ, ಬಸವರಾಜ ಅಂಗಡಿ(ಸದಸ್ಯರು).ಸಾಮಾನ್ಯ ಸ್ಥಾಯಿ ಸಮಿತಿ

ಹೂವಪ್ಪ ಸೀತಪ್ಪ ರಾಠೋಡ(ಅಧ್ಯಕ್ಷ), ವೀಣಾ ಎಮ್ಮಿ, ಸುಧಾ ಸೋರಗಾಂವಿ, ನಿಂಗಪ್ಪ ಬೊಮ್ಮನಗೌಡರ, ಮಹಾದೇವಿ ಮೂಲಿಮನಿ, ಮಹಾಂತಪ್ಪ ನರಗುಂದ, ಅರ್ಜುನ ದಳವಾಯಿ(ಸದಸ್ಯರು).ಶಿಕ್ಷಣ ಮತ್ತು ಆರೋಗ್ಯ ಸಮಿತಿ


ಮಹಾಂತೇಶ ಹಿಟ್ಟಿನಮಠ(ಅಧ್ಯಕ್ಷ), ಹನುಮಂತ ನಿರಾಣಿ, ವೀಣಾ ಎಮ್ಮಿ, ಈರಪ್ಪ ಬಂಡಿ, ಶೋಭಾ ತೋಟಗೇರಿ, ದುಂಡಪ್ಪ ಲಿಂಗರೆಡ್ಡಿ, ರೇಣುಕಾ ಶಾಂತಗೇರಿ(ಸದಸ್ಯರು).ಕೃಷಿ ಮತ್ತು ಕೈಗಾರಿಕಾ ಸಮಿತಿ

ಸಾವಿತ್ರಿ ಪಾಟೀಲ(ಅಧ್ಯಕ್ಷೆ), ಪದ್ಮವ್ವ ಅಕ್ಕಿವಾಟ, ಮಂಜುಳಾ ರಾಠೋಡ, ಶಾಂತವ್ವ ಬೂಷಣ್ಣವರ, ದುರಗವ್ವ ರಗಪ್ಪಗೋಳ, ಮಲ್ಲಪ್ಪ ಕಿತ್ತಲಿ, ಕಾಶವ್ವ ಹೊಸಟ್ಟಿ(ಸದಸ್ಯರು).ಸಾಮಾಜಿಕ ನ್ಯಾಯ ಸಮಿತಿ

ಕೃಷ್ಣ ಓಗೆಣ್ಣವರ(ಅಧ್ಯಕ್ಷ), ಲಕ್ಷ್ಮೀಬಾಯಿ ನ್ಯಾಮಗೌಡರ, ಈರಪ್ಪ ಬಂಡಿ, ಶಾಂತವ್ವ ಭೂಷಣ್ಣವರ, ಯಲ್ಲಕ್ಕ ದೊಡ್ಡಮನಿ, ಪಾಂಡಪ್ಪ ಪೊಲೀಸ್, ತುಂಗವ್ವ ಮೊಕಾಶಿ(ಸದಸ್ಯರು).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry