ಒತ್ತಡಕ್ಕೆ ಮಣಿದ ಸರ್ಕಾರ: ಬದಲಾದ ರಸ್ತೆ ಮಾರ್ಗ

7

ಒತ್ತಡಕ್ಕೆ ಮಣಿದ ಸರ್ಕಾರ: ಬದಲಾದ ರಸ್ತೆ ಮಾರ್ಗ

Published:
Updated:
ಒತ್ತಡಕ್ಕೆ ಮಣಿದ ಸರ್ಕಾರ: ಬದಲಾದ ರಸ್ತೆ ಮಾರ್ಗ

ಚಿಕ್ಕಮಗಳೂರು: ಬಾಸೂರು ಅಮೃತ ಮಹಲ್ ಕಾವಲನ್ನು ಸೀಳಲಿದ್ದ ಕೇದಿಗೆರೆ-ಅರೆಹಳ್ಳಿ ರಸ್ತೆ ಮಾರ್ಗ ಕೊನೆಗೂ ಬದಲಾಗಿದೆ. ಪರಿಸರ ಸಂಘಟನೆಗಳು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಸ್ತೆಯ ಮಾರ್ಗ ಬದಲಿಸಿ ಬಾಸೂರು ಗೇಟ್-ಬಾಸೂರು ಮಾರ್ಗವಾಗಿ ಬಿಸಿಲೆರೆ ಹಾಗೂ ಕೇದಿಗೆರೆ ಸಂಪರ್ಕಿಸುವ 9 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಶುಕ್ರವಾರ ಶಂಕುಸ್ಥಾಪನೆ ನಡೆಯಲಿದೆ.ಜಿಲ್ಲೆಯ ಬಯಲು ಸೀಮೆಯ ಏಕೈಕ ಅರಣ್ಯ ಪ್ರದೇಶವೆನಿಸಿದ್ದ ಬಾಸೂರು ಅಮೃತ ಮಹಲ್ ಕಾವಲು ಅಳಿವಿನಂಚಿನಲ್ಲಿರುವ ಅಪರೂಪದ ಕೃಷ್ಣಮೃಗಗಳಿಗೆ ಆವಾಸ ಸ್ಥಾನವಾಗಿದೆ. ಅಲ್ಲದೇ ಅಮೃತ ಮಹಲ್ ರಾಸುಗಳ ತಳಿ ಸಂವರ್ಧನೆಯ ನೈಸರ್ಗಿಕ ಕೇಂದ್ರವೆನಿಸಿದೆ.ಇದರ ಜತೆಗೆ ಅಪರೂಪದ ಪ್ರಾಣಿ, ಪಕ್ಷಿಗಳಿಗೆ ಈ ಹುಲ್ಲುಗಾವಲು ನೆಲೆ ಒದಗಿಸಿದೆ. 2011ರ                     ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಬಾಸೂರು ಅಮೃತ ಮಹಲ್ ಕಾವಲನ್ನು ಕೃಷ್ಣಮೃಗಗಳ ಸಂರಕ್ಷಿತ ತಾಣವಾಗಿ ಅಧಿಕೃತ ಘೋಷಣೆ ಮಾಡಿದೆ.ಇಂತಹ ಅಪರೂಪದ ಅಮೃತ ಮಹಲ್ ಕಾವಲಿನ ನೈಸರ್ಗಿಕ ಪರಿಸರಕ್ಕೆ ಧಕ್ಕೆಯಾಗುವಂತೆ ಕಾವಲಿನೊಳಗೆ 9 ಕಿ.ಮೀ. ರಸ್ತೆ ನಿರ್ಮಿಸಲು ಈ ಹಿಂದಿನ ಶಾಸಕ ದಿವಂಗತ ಕೆ.ಎಂ. ಕೃಷ್ಣಮೂರ್ತಿಯವರು ಕೈಹಾಕಿದ್ದು, ಪರಿಸರ ಸಂಘಟನೆಗಳು ಮತ್ತು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಸತತ ಮೂರು ವರ್ಷಗಳ ಕಾಲ ನಡೆದ ಹೋರಾಟಕ್ಕೆ ಮಣಿದಿರುವ ಸರ್ಕಾರ ಕೊನೆಗೂ ಮಾರ್ಗ ಬದಲಿಸಿ, ಅಮೃತ ಮಹಲ್ ಕಾವಲಿನ ವನ್ಯಜೀವಿಗಳ ಸ್ವಚ್ಛಂದ ಓಡಾಟಕ್ಕೆ ತೊಂದರೆ ಯಾಗದಂತೆ ಎಚ್ಚರವಹಿಸಿದೆ.3.82 ಕೋಟಿ ರೂಪಾಯಿ ವೆಚ್ಚದಲ್ಲಿ ಕೇದಿಗೆರೆ-ಅರೆಹಳ್ಳಿ ಸಂಪರ್ಕಿಸುವ 9 ಕಿ.ಮೀ.ರಸ್ತೆಯನ್ನು ಬಾಸೂರು ಕಾವಲಿನೊಳಗೆ ನಿರ್ಮಿಸಲು ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಗಮ 2008ರಲ್ಲಿ ಸಮ್ಮತಿ ನೀಡಿತ್ತು. ಆದರೆ, ಈ ಮಾರ್ಗದ ರಸ್ತೆ ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಾರ್ಗ ಪರಿಷ್ಕರಿಸಿ ಬಾಸೂರು ಗೇಟ್-ಬಾಸೂರು ಮಾರ್ಗವಾಗಿ ಬಿಸಿಲೆರೆ ಹಾಗೂ ಕೇದಿಗೆರೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಪಿಎಂಜಿಎಸ್‌ವೈ ಅಧಿಕಾರಿಗಳು ಕೈಹಾಕಿದ್ದಾರೆ.`ಈ ಹಿಂದೆ ಎದುರಾಗಿದ್ದ ಎಲ್ಲ ಆಕ್ಷೇಪಗಳನ್ನು ಗಮನದಲ್ಲಿಟ್ಟುಕೊಂಡು ಮೂಲ ಯೋಜನೆ ಪ್ರಕಾರವೇ ಅಮೃತ ಮಹಲ್ ಕಾವಲಿಗೆ ಧಕ್ಕೆಯಾಗದಂತೆ ರಸ್ತೆ ನಿರ್ಮಿಸಲು ಮರು ಟೆಂಡರ್ ಮಾಡಿಸಲಾಗಿದೆ~ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ಅಮೃತ ಮಹಲ್ ಕಾವಲಿನ ಒಂದೇ ಒಂದು ಅಡಿ ಜಾಗ ರಸ್ತೆಗೆ ಬರುವುದಿಲ್ಲ. ಕಾವಲಿನ ಹೊರ ಭಾಗದಲ್ಲಿ ರಸ್ತೆ ಹಾದು ಹೋಗಲಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಆಗಿರುವ ಮಣ್ಣಿನ ರಸ್ತೆಯನ್ನು ಪಿಎಂಜಿಎಸ್‌ವೈ ಯೋಜನೆಯ ಅನುದಾನದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ~ ಎಂದು ಬಿಸಿಲೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಸ್ಪಷ್ಟಪಡಿಸಿದ್ದಾರೆ.`ಪಿಎಂಜಿಎಸ್‌ವೈ ಎಂಜಿನಿಯರ್‌ಗಳು ನೀಡುವ ರಸ್ತೆಯ ನಕ್ಷೆ ಹಿಡಿದುಕೊಂಡು ಖುದ್ದು ಸ್ಥಳ ಪರಿಶೀಲನೆ ನಡೆಸಲಾಗುವುದು. ವನ್ಯಜೀವಿಧಾಮಕ್ಕೆ ಧಕ್ಕೆಯಾಗುವಂತಿದ್ದರೆ ಯಾವುದೇ ಕಾರಣಕ್ಕೂ ರಸ್ತೆ ನಿರ್ಮಿಸಲು ಅವಕಾಶ ನೀಡುವುದಿಲ್ಲ. ಪರ್ಯಾಯ ಮಾರ್ಗದಲ್ಲಿ ರಸ್ತೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ಯಾವುದೇ ಆಕ್ಷೇಪ ಇರುವುದಿಲ್ಲ~ ಎಂದು ವಲಯ ಅರಣ್ಯಾಧಿಕಾರಿ ಸೈಯದ್ ನಿಜಾಮುದ್ದಿನ್ ಪ್ರತಿಕ್ರಿಯಿಸಿದ್ದಾರೆ.`ಈಗಾಗಲೇ ಬಾಸೂರು ಅಮೃತ ಮಹಲ್ ಕಾವಲನ್ನು ವನ್ಯಜೀವಿ ಧಾಮವಾಗಿ ರಾಜ್ಯ ಸರ್ಕಾರ ಘೋಷಿಸಿರುವುದರಿಂದ ಉದ್ದೇಶಿತ ರಸ್ತೆ ಬಾಸೂರು ಕಾವಲ್ ಸನಿಹದಲ್ಲೇ ಹಾದುಹೋದರೂ ಆಕ್ಷೇಪಣೆ ಸಲ್ಲಿಸುತ್ತೇವೆ.ವನ್ಯಜೀವಿಗಳ ಸಂರಕ್ಷಣೆ ಮತ್ತು ಅವುಗಳ ಮುಕ್ತಸಂಚಾರ ದೃಷ್ಟಿಯಿಂದ ಪರ್ಯಾಯ ರಸ್ತೆ ನಿರ್ಮಿಸಿಕೊಳ್ಳುವುದು ಸೂಕ್ತ. ಇಲ್ಲದಿದ್ದರೆ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವನ್ನಪ್ಪುವುದನ್ನು ತಡೆಯಲು ಮತ್ತು ಕಳ್ಳಬೇಟೆ ತಪ್ಪಿಸಲು ಕಷ್ಟಸಾಧ್ಯವಾಗುತ್ತದೆ~ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಾದ ಡಿ.ವಿ.ಗಿರೀಶ್, ಶ್ರೀದೇವ್ ಹುಲಿಕೆರೆ, ಜಿ.ವೀರೇಶ್ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry