ಶನಿವಾರ, ನವೆಂಬರ್ 23, 2019
18 °C
ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ; ಡೆವಿಲ್ಸ್ ಎದುರು ಚಾಲೆಂಜರ್ಸ್‌ಗೆ `ಸೂಪರ್' ಗೆಲುವು

ಒತ್ತಡದೊಳಗೆ ಬಂದಿ; ರೋಚಕ ಅಂತ್ಯ

Published:
Updated:

ಬೆಂಗಳೂರು: `ಪ್ರೇಕ್ಷಕರ ಭೋರ್ಗರೆತ, ಸಂಗೀತದ ಅಬ್ಬರ, ಬೆಳಕಿನ ಚಿತ್ತಾರ, ಚಿಯರ್ ಬೆಡಗಿಯರ ಕುಣಿತ... ಇವೆಲ್ಲಾ ಪ್ರೇಕ್ಷಕರ ಉಲ್ಲಾಸ ಹೆಚ್ಚಿಸುತ್ತವೆ. ಆದರೆ ನಮ್ಮ ಮನದೊಳಗೆ ಒತ್ತಡ ಕುದಿಯಲು ಕಾರಣವಾಗುತ್ತವೆ. ಅಭಿಮಾನಿಗಳು ಜೋರಾಗಿ ಕೂಗಿದಾಗಲೆಲ್ಲಾ ಹೊಟ್ಟೆಯೊಳಗೆ ಚಿಟ್ಟೆ ಓಡಾಡಿದಂತಾಗುತ್ತದೆ. ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಈ ರೀತಿ ಒತ್ತಡ ಇರಲಾರದು'-ಭರ್ಜರಿ ಪ್ರದರ್ಶನವನ್ನೇ ನೀಡುತ್ತಿರುವ ಕ್ರಿಸ್ ಗೇಲ್ ಕೆಲ ದಿನಗಳ ಹಿಂದೆ ನೀಡಿದ್ದ ಈ ಹೇಳಿಕೆ ಅಚ್ಚರಿ ಎನಿಸಬಹುದು. ಆದರೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಿರ್ಮಾಣವಾದ ಆ ಒತ್ತಡದ ವಾತಾವರಣವನ್ನು ಮರೆಯಲು ಸಾಧ್ಯವಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯ ಪ್ರತಿ ಕ್ಷಣ ರೋಚಕ, ರೋಮಾಂಚನಕ್ಕೆ ಸಾಕ್ಷಿಯಾಯಿತು. ಆ ಒತ್ತಡವನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಗೆಲುವು ಸಾಧಿಸಿದ್ದು ರಾಯಲ್ ಚಾಲೆಂಜರ್ಸ್. ಟೈ ಆದ ಪಂದ್ಯದ ಫಲಿತಾಂಶ ನಿರ್ಧಾರವಾಗಿದ್ದು ಸೂಪರ್ ಓವರ್‌ನಲ್ಲಿ.ಈ ಪಂದ್ಯದ್ಲ್ಲಲಿ ಡೇರ್‌ಡೆವಿಲ್ಸ್ ಗಳಿಸಿದ 152 ರನ್‌ಗಳಿಗೆ ಉತ್ತರವಾಗಿ ಚಾಲೆಂಜರ್ಸ್ ಕೂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಒಂದು ಹಂತದಲ್ಲಿ ಆರ್‌ಸಿಬಿ 15.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತ್ತು. ಗೆಲ್ಲಲು 25 ಎಸೆತಗಳಲ್ಲಿ ಕೇವಲ 24 ರನ್ ಬೇಕಿತ್ತು. ಆದರೆ 9 ರನ್‌ಗಳ ಅಂತರದಲ್ಲಿ ಐದು ವಿಕೆಟ್ ಪತನಗೊಂಡಿದ್ದು ರೋಚಕ ತಿರುವಿಗೆ ಕಾರಣವಾಯಿತು.ಕೊನೆಯ ಓವರ್‌ನಲ್ಲಿ ಗೆಲ್ಲಲು ಆರ್‌ಸಿಬಿ 12 ರನ್‌ಗಳು ಬೇಕಿದ್ದವು. ಆಗ ಅಂಗಳದಲ್ಲಿ ಕ್ಷಣ ಕ್ಷಣಕ್ಕೆ ಕುತೂಹಲ, ಅಚ್ಚರಿ, ಒತ್ತಡ. ರಾಂಪಾಲ್ ಸಿಕ್ಸರ್ ಎತ್ತಿ ಭರವಸೆ ಮೂಡಿಸಿದರು. ಆದರೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಇರ್ಫಾನ್ ಹಾಕಿದ ಎಸೆತ ನೇರ ವಿಕೆಟ್ ಕೀಪರ್ ಕೈಸೇರಿತು. ಆದಾಗ್ಯೂ ಬೈ ಮೂಲಕ ಒಂದು ರನ್ ಬಂತು. ಹಾಗಾಗಿ ಪಂದ್ಯ ಟೈ ಆಯಿತು. ಇತ್ತ ಒತ್ತಡಕ್ಕೆ ಒಳಗಾಗಿದ್ದ ಕೊಹ್ಲಿ `ಡಗ್‌ಔಟ್'ನಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಗೆ ಕಾಲಿನಿಂದ ಒದೆಯುತ್ತಿದ್ದರು.ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಮೊರೆ ಹೋಗಲಾಯಿತು. ಉಮೇಶ್ ಯಾದವ್ ಮಾಡಿದ ಈ ಓವರ್‌ನಲ್ಲಿ ಡಿವಿಲಿಯರ್ಸ್ ಎರಡು ಸಿಕ್ಸರ್ ಎತ್ತಿದ ಕಾರಣ ಚಾಲೆಂಜರ್ಸ್ 15 ರನ್ ಗಳಿಸಿತು. ಆದರೆ ಇಷ್ಟು ರನ್ ಪೇರಿಸಲು ಡೇರ್‌ಡೆವಿಲ್ಸ್‌ಗೆ ಸಾಧ್ಯವಾಗಲಿಲ್ಲ. ರಾಂಪಾಲ್ ಮೊದಲ ಎಸೆತದಲ್ಲಿಯೇ ವಾರ್ನರ್ ವಿಕೆಟ್ ಪಡೆದರು. ಇರ್ಫಾನ್ ಪಠಾಣ್ ಪ್ರಯತ್ನ ಸಾಕಾಗಲಿಲ್ಲ. ಈ ತಂಡ ಪೇರಿಸಿದ್ದು ಕೇವಲ 11 ರನ್.ಈ ಮೂಲಕ ರಾಯಲ್ ಚಾಲೆಂಜರ್ಸ್ ಗೆಲುವಿನ ಚಿತ್ತಾರ ಬರೆಯಿತು. ಎಂಟು ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆದರೆ ಡೇರ್‌ಡೆವಿಲ್ಸ್ ತಂಡವನ್ನು ಮತ್ತೊಂದು ಸೋಲು ಬಂದು ಅಪ್ಪಳಿಸಿತು. ಇದು ಸತತ ಐದನೇ ಸೋಲು. ಅಷ್ಟೇನು ಸವಾಲು ಅಲ್ಲದ ಮೊತ್ತದ ಎದುರು ಚಾಲೆಂಜರ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಗೇಲ್ ಎರಡು ಸಿಕ್ಸರ್ ಎತ್ತಿದರು. ಪ್ರೇಕ್ಷಕರ ಕೂಗು ಹೆಚ್ಚಾಗುತ್ತಿದ್ದಂತೆ ಅದೇ ಆವೇಶದಲ್ಲಿ ಮತ್ತೊಂದು ಸಿಕ್ಸರ್ ಎತ್ತಲು ಹೋಗಿ ಕೈಸುಟ್ಟು ಕೊಂಡರು. ಕೇವಲ 26 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾಗಿದ್ದು ಕೊಹ್ಲಿ (65; 50 ಎ, 7 ಬೌಂ., 1 ಸಿ.)  ಹಾಗೂ ಡಿವಿಲಿಯರ್ಸ್ (39; 32 ಎ, 3 ಬೌ, 1 ಸಿ.).ಇವರಿಬ್ಬರು ಮೂರನೇ ವಿಕೆಟ್‌ಗೆ 103 ರನ್ (75 ಎಸೆತ) ಸೇರಿಸಿದರು. ನಿಧಾನಗತಿಯಿಂದ ಕೂಡಿದ್ದ ಪಿಚ್‌ನಲ್ಲಿ ರನ್ ಗಳಿಸುವುದೂ ತುಂಬಾ ಕಷ್ಟವಿತ್ತು. ಆದರೆ ಡಿವಿಲಿಯರ್ಸ್ ರನ್‌ಔಟ್ ಆಗಿದ್ದು ಎಡವಟ್ಟಿಗೆ ಮೂಲ ಕಾರಣ. ಡೇವಿಲ್ಸ್ ತಂಡದ ಶಹಬಾಜ್ ಹಾಕಿದ 17ನೇ ಓವರ್‌ನಲ್ಲಿ ಬಂದಿದ್ದು ಕೇವಲ 1 ರನ್. ಹಾಗಾಗಿ ಪಂದ್ಯ ನಾಟಕೀಯ ಅಂತ್ಯ ಕಂಡಿತು.ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದಿದ್ದ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 152 ರನ್. ಕೊನೆಯ ಎರಡು ಓವರ್‌ಗಳಲ್ಲಿ 30 ರನ್ ಬಂದಿದ್ದು ಇಷ್ಟು ಮೊತ್ತಕ್ಕೆ ಕಾರಣವಾಯಿತು. ಆ ಶ್ರೇಯ ಕೇದಾರ್ ಜಾಧವ್ (29; 16 ಎಸೆತ) ಹಾಗೂ ಇರ್ಫಾನ್ ಪಠಾಣ್ (19; 8 ಎಸೆತ) ಅವರಿಗೆ ಸಲ್ಲಬೇಕು.ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ಕೊನೆಯ ಓವರ್‌ನಲ್ಲಿ 16 ರನ್ ನೀಡಿದ್ದ ಆರ್.ಪಿ.ಸಿಂಗ್ ಮೇಲೆ ನಾಯಕ ಕೊಹ್ಲಿಗೆ ಅದೇಕೆ ಅಷ್ಟು ಕರುಣೆಯೋ ಗೊತ್ತಿಲ್ಲ. ಈ ಪಂದ್ಯದಲ್ಲೂ 48 ರನ್ ನೀಡಿ ತುಂಬಾ ದುಬಾರಿಯಾದರು. ಅಮೋಘ ಕ್ಯಾಚ್: ಆದರೆ ಈ ಹಂತದಲ್ಲಿ `ದಾವಣಗೆರೆ   ಎಕ್ಸ್‌ಪ್ರೆಸ್' ಆರ್.ವಿನಯ್ ಕುಮಾರ್ ಜಾದೂ ಪ್ರದರ್ಶಿಸಿದರು. ವಾರ್ನರ್ ಬಿರುಸಾಗಿ ಬಾರಿಸಿದ ಚೆಂಡನ್ನು ಅಷ್ಟೇ ಅದ್ಭುತವಾಗಿ ಕ್ಯಾಚ್ ಪಡೆದು ಪ್ರೇಕ್ಷಕರ ಸಂಭ್ರಮಕ್ಕೆ ಕಾರಣರಾದರು. ಆ ಕ್ಯಾಚ್ ಪಡೆದ ರೀತಿಗೆ ಅಂಪೈರ್ ಕೂಡ ಅಚ್ಚರಿ ವ್ಯಕ್ತಪಡಿಸಿದರು. ಅವರು ಮೊದಲ ಎರಡು ಓವರ್‌ಗಳಲ್ಲಿ ನೀಡಿದ ರನ್ ಕೇವಲ 4.

ಪ್ರತಿಕ್ರಿಯಿಸಿ (+)