ಶನಿವಾರ, ಫೆಬ್ರವರಿ 27, 2021
22 °C

ಒತ್ತಡದ ಬದಲು ಸಂತಸದಿಂದ ಬದುಕಿ

ಭರತ್ ಮತ್ತು ಶಾಲನ್ ಸವೂರ್ Updated:

ಅಕ್ಷರ ಗಾತ್ರ : | |

ಒತ್ತಡದ ಬದಲು ಸಂತಸದಿಂದ ಬದುಕಿ

ಸೂರ್ಯೋದಯಕ್ಕಿಂತ ಮೊದಲು ಎಂದಾದರೂ ಎದ್ದಿದ್ದೀರಾ? ಸೂರ್ಯ ಹುಟ್ಟುವುದಕ್ಕಿಂತ ಮೊದಲಿನ ಆ ನಿಶ್ಶಬ್ದ ಅದ್ಭುತವಾಗಿರುತ್ತದೆ. ಆ ಪ್ರಶಾಂತ ವಾತಾವರಣದಲ್ಲಿ ಹುಟ್ಟುವ ಆಲೋಚನೆಗಳು ಪರಿಶುದ್ಧವಾಗಿರುತ್ತವೆ. ಪವಿತ್ರವಾಗಿರುತ್ತವೆ. ಸರಳವೂ, ಮುಗ್ಧವೂ ಆಗಿರುತ್ತವೆ.ಅಂತಹ ಸಂದರ್ಭದಲ್ಲಿ ಮುಂದೆ ಬರುವ ದಿನವನ್ನು ಅವಲೋಕಿಸಬೇಡಿ. ವಿಶ್ಲೇಷಣೆಗೆ ಒಳಪಡಿಸಬೇಡಿ. ಈ ವಿಶ್ಲೇಷಣೆಯಿಂದ ಆರೋಗ್ಯಕರವಾದದು, ಪ್ರಯೋಜನಕ್ಕೆ ಬರುವಂತಹದ್ದು ದೊರಕುವುದಿಲ್ಲ. ಬದಲು ಲೌಕಿಕದ ವಿಚಾರಗಳೆಲ್ಲ ಮನಸ್ಸಿನಲ್ಲಿ ತುಂಬಿಕೊಂಡು ಪರಿಶುದ್ಧತೆಯನ್ನು ಹಾಳುಗೆಡವುತ್ತವೆ.ಪರಿಶುದ್ಧವಾದ ತಾಜಾ ವಿಚಾರಗಳು ದೈವಿಕವಾಗಿರುತ್ತವೆ. ಅದು ಹಾಗೆಯೇ ಇರಲಿ. ಆ ವಿಚಾರಗಳೇ ಒಂದರ್ಥದಲ್ಲಿ ಪ್ರಾರ್ಥನೆಯಾಗಿರುತ್ತವೆ.ಸಾಧ್ಯವಾದಷ್ಟು ಹೊತ್ತು ಈ ಪ್ರಶಾಂತ, ಪರಿಶುದ್ಧ ಮನಸ್ಥಿತಿಯಲ್ಲಿ ಇರಿ. ಮಂಜಿನ ಹನಿಗಳಂತೆ ಈ ವಿಚಾರಗಳು ನಿಮ್ಮ ಮನದಲ್ಲಿ ಅಡಗಿರಲಿ.  `ಮುಂದೆ ಬರುವ ದಿನ, ಬೆಳಕಿನ ಕಿರಣದಂತೆ ಇರಲಿ. ಪರಿಶುದ್ಧವಾಗಿರಲಿ. ನಮಗೆ ಒಳ್ಳೆಯದನ್ನೇ ಮಾಡಲಿ ಎಂದು ಹೇಳಿಕೊಳ್ಳಿ.

 

ಭೂಮಿಯನ್ನು ತಲುಪುವ ಮೊದಲ ಬೆಳಕಿನ ಕಿರಣಗಳು ಸಂತಸ, ಸೌಹಾರ್ದ, ಖುಷಿಯ ಬುಗ್ಗೆಯನ್ನೇ ಹರಿಸಲಿ. ದುಃಖ, ಆತಂಕದಿಂದ ಮಲಗಿದವರೆಲ್ಲ ಸಂತಸದಿಂದ ಏಳುವ ರೀತಿ ಈ ದಿನ ಇರಲಿ. ಬೆಳಕಿನ ಕಿರಣಗಳು ದಿಗಂತದ ಮೇಲೆ ಬಿದ್ದು ಹೊಳೆದಾಗ ನಾನು ಮತ್ತು ನನ್ನ ಸಂಗಾತಿಗಳೆಲ್ಲ ಸಂತಸದಿಂದ ಇರುವಂತಾಗಲಿ~ ಎಂದು ಹೇಳಿಕೊಳ್ಳಿ.ಕೃತಜ್ಞತೆ, ಮೆಚ್ಚುಗೆ, ಶಾಂತಿ ನಿಮ್ಮ ಹೃದಯದಿಂದ ಉಕ್ಕಿ ಹರಿಯಲಿ.ಬ್ರಹ್ಮಾಂಡದ, ಜಗತ್ತಿನ ಆಗುಹೋಗು, ಶಕ್ತಿ ಪ್ರವಾಹ ನಿಯಂತ್ರಿಸಲು ನನ್ನಿಂದ ಎಲ್ಲಿ ಸಾಧ್ಯವಿದೆ ಎಂದು ಸಂಶಯದಲ್ಲಿ ಇರಬೇಡಿ. ನಾನೊಂದು ಸಣ್ಣ ಹುಳದಂತ ವ್ಯಕ್ತಿ ಅಂದುಕೊಳ್ಳಬೇಡಿ.

 

ಸಣ್ಣ ದೀಪವೊಂದು ಮೂಲೆಯಲ್ಲಿ ಕುಳಿತು ಹೀಗೆ ಅಂದುಕೊಳ್ಳುತ್ತಿತ್ತು. ದೀಪದ ಬಾಡಿದ ಮುಖ ನೋಡಿದ ಗೂಬೆಯೊಂದು ಅದಕ್ಕೆ ಬುದ್ಧಿವಾದ ಹೇಳಿತು. ಯಾವತ್ತೂ ಹತಾಶಳಾಗಿ ಕೂರಬೇಡ. ಆ ದೊಡ್ಡ ಸೂರ್ಯನಿಗೆ ಮಾಡಲಾಗದ್ದನ್ನು ನೀನು ಮಾಡುತ್ತಿದ್ದೀಯ. ಕತ್ತಲು ಕವಿದ ಮೇಲೆ ನೀನು ಬೆಳಕು ನೀಡುತ್ತಿದ್ದೀಯ ಎಂದು ಹೇಳಿತು. ನೀವು ಸಹ ಆ ದೀಪದಂತೆ. ಸೂರ್ಯೋದಯಕ್ಕಿಂತ ಮೊದಲು ನೀವು ಬೆಳಗಬಹುದು. ಇಡೀ ಜಗತ್ತಿಗೆ ಆ ದಿನ ಒಳ್ಳೆಯದಾಗಲಿ ಎಂದು ಹಾರೈಸಬಹುದು.ನಿಮ್ಮಲ್ಲಿ ಎರಡು ವ್ಯಕ್ತಿಗಳು ಅಡಗಿದ್ದಾರೆ. ನೀವು ಲೌಕಿಕ ಜಗತ್ತಿಗೆ ಸೇರಿದ್ದೀರಿ. ಸಂಪೂರ್ಣ ಸಂತಸದಿಂದ ಕೂಡಿದ ಆತ್ಮವೂ ಆಗಿದ್ದೀರಿ. ನಿಮ್ಮಲ್ಲಿನ ಲೌಕಿಕ ವ್ಯಕ್ತಿ ಯಾವಾಗಲೂ ಪ್ರತಿರೋಧದ ಭಾವದಲ್ಲೇ ಇರುತ್ತಾನೆ/ಳೆ. ಏಕೆಂದರೆ ಲೌಕಿಕ ಜಗತ್ತು ಭಯವನ್ನು ಹುಟ್ಟುಹಾಕಿರುತ್ತದೆ. ಬೇಗ ಏಳಲು ಆಗದ ಭಯ, ಏನನ್ನೋ ಮರೆಯುವ ಭಯ. ಬಾಸ್ ಹೇಳಿದ ಕೆಲಸ ಮಾಡಲಾಗದ್ದಕ್ಕೆ ಭಯ. ನಾನು ಒಳ್ಳೆಯವಳಲ್ಲ ಎಂಬ ಭಯ. ಆರೋಗ್ಯ ಹದ ತಪ್ಪುವ, ವಯಸ್ಸಾಗುವ, ಸಾಯುವ ಭಯ...ನಿಮ್ಮಳಗಿನ ಈ ಲೌಕಿಕ ವ್ಯಕ್ತಿ ಖುಷಿಯಿಂದ, ನೆಮ್ಮದಿಯಿಂದ ಇರಬೇಕಾದರೆ ಜೀವನ ಸರಳವಾಗಿರಬೇಕು. ನಿಮ್ಮ ಆತ್ಮದ ಜೊತೆ ಮಾತುಕತೆಯಲ್ಲಿ ಇರಬೇಕು. ಅತ್ಯಂತ ಅವಸರ, ಗಡಿಬಿಡಿಯಿಂದ ಜೀವನ ಸಾಗಿಸುವ ಬದಲು ಬದುಕನ್ನು ಸರಳವಾಗಿಸಿಕೊಳ್ಳಿ.ಸಂಬಂಧಿಗಳು, ಸ್ನೇಹಿತರ ಮನೆಯ ಕಾರ್ಯಕ್ರಮಗಳಿಗೆಲ್ಲ ಹೋಗುವುದು, ಬರುವುದು. ಅನವಶ್ಯಕ ತಿರುಗಾಟ, ಕೆಲಸಗಳನ್ನೆಲ್ಲ ನಿಮ್ಮ ದಿನಚರಿಯಿಂದ ಕಿತ್ತುಹಾಕಿ.ಸದಾ ಸಂತಸದಿಂದ ಇರಲು ಈ ಮೂರು ಸಂಗತಿಗಳನ್ನು ಆಯ್ದುಕೊಳ್ಳಿ.

ಯಾವಾಗಲೂ ಒಳ್ಳೆಯ ಉದ್ದೇಶವನ್ನೇ ಹೊಂದಿರಿ.

ಕುರುಡನೊಬ್ಬ ಲಾಟೀನು ಹಿಡಿದು ತಿರುಗುತ್ತಿದ್ದ. ಕಣ್ಣೇ ಕಾಣದ ನಿನಗೆ ಲಾಟೀನು ಏಕೆ ಎಂದು ಎಲ್ಲರೂ ಪ್ರಶ್ನಿಸಿದರು. ಕತ್ತಲಲ್ಲಿ ನಡೆದು ನನಗೆ ಅಭ್ಯಾಸವಿದೆ. ಆದರೆ, ಬೇರೆಯವರು ನನ್ನ ಮೇಲೆ ಬೀಳದಿರಲಿ ಎಂದು ಈ ಲಾಟೀನು ಹಿಡಿದು ತಿರುಗುತ್ತಿದ್ದೇನೆ ಎಂದು ಆತ ಹೇಳಿದ.* ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ ಎಂಬ ಭಾವವನ್ನು ದೂರವಾಗಿಸಿ. ಇದು, ಪೆನ್ನೊಂದು ನಾನೇ ಲೇಖಕ ಅಂದುಕೊಂಡಂತೆ. ಆ ದೈವಿಕ ಶಕ್ತಿ ಲೇಖಕನಾಗಿರುತ್ತದೆ. ನಾವು ಕೇವಲ ಸಾಧನವಾಗಿರುತ್ತೇವೆ. ನಾನು ಕೇವಲ ಸಾಧನ ಎಂಬುದು ಪೆನ್ನಿಗೆ ಅರ್ಥವಾದಾಗ ಆ ಅಹಂಕಾರವೆಲ್ಲ ಕರಗಿಹೋಗುತ್ತದೆ.ಎಲ್ಲವನ್ನೂ ಬೇಗ ಬೇಗ ಮುಗಿಸಬೇಕು ಎಂಬ ಭಾವವೂ ಕರಗಿಹೋಗುತ್ತದೆ. ಎಲ್ಲ ಒತ್ತಡಗಳು ಮಾಯವಾಗುತ್ತವೆ. ಪೆನ್ನು (ನೀವು) ವಿಶ್ರಾಂತ ಸ್ಥಿತಿಯಲ್ಲಿ ಇದ್ದಾಗ ಸೃಜನಶೀಲತೆಯೆಂಬ ಶಾಯಿ ಅದರಿಂದ ಹರಿಯುತ್ತದೆ. ಎಂಥ ಮುಕ್ತ ಭಾವವದು...!

* ಮೌನವಾಗಿರಿ.

ಬಹುತೇಕ ಎಲ್ಲ ಸಮಸ್ಯೆಗಳೂ ಮನಸ್ಸಿನ ಕಾಲಮಿತಿಯ ಪರಿಧಿಯಲ್ಲಿ ಇರುವಂಥದ್ದಾಗಿರುತ್ತವೆ. ಸಮಸ್ಯೆ ಅಂದರೆ ಮನಸ್ಸಿನಲ್ಲಿನ ಶಬ್ದಗಳು. ಹೆಚ್ಚೆಚ್ಚು ಯೋಚಿಸಿದಂತೆ ಹೆಚ್ಚೆಚ್ಚು ಶಬ್ದ, ಹೆಚ್ಚೆಚ್ಚು ಕಾಲ ಹಿಡಿಯುತ್ತದೆ. ಯಾವುದೇ ಪರಿಹಾರ ದೊರಕುವುದಿಲ್ಲ. ಕೇವಲ ಒತ್ತಡ ಮಾತ್ರ ಇರುತ್ತದೆ. ಒಂದೇ ಒಂದು ಪರಿಹಾರ ಅಂದರೆ ಮೌನವಾಗಿರುವುದು.ಯಾವುದೇ ಸಮಸ್ಯೆ ಹೊತ್ತು ಬುದ್ಧನ ಬಳಿ ಹೋದಾಗ ಆತ ಪರಿಹಾರ ಬೋಧಿಸುತ್ತಿರಲಿಲ್ಲ. ಮೌನವಾಗಿ ತನ್ನ ಪಕ್ಕ ಕುಳಿತುಕೊಳ್ಳುವಂತೆ ಸೂಚಿಸುತ್ತಿದ್ದ. ಮನಸ್ಸಿನ ಮೌನದಲ್ಲಿ ಎಲ್ಲ ಸಮಸ್ಯೆ, ಚಿಂತೆ ಮಾಯವಾಗುವುದನ್ನು ಅವರು ಗಮನಿಸಿದರು. ಮಾತಿನ ಶಕ್ತಿಯನ್ನು ಗಳಿಸಿಕೊಳ್ಳುವ ಭರದಲ್ಲಿ ಮೌನದ ಶಕ್ತಿಯನ್ನು ನಾವು ಮರೆತಿದ್ದೇವೆ.ಮೌನವೆಂಬುದು ಸಂತಸದ ಸುಂದರ ಭಾಷೆ. ಸಂತಸದಲ್ಲಿ ಜೀವನ ನಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.