ಒತ್ತಡವೆಂದರೆ ದೋನಿಗೆ ಇಷ್ಟ...

7

ಒತ್ತಡವೆಂದರೆ ದೋನಿಗೆ ಇಷ್ಟ...

Published:
Updated:
ಒತ್ತಡವೆಂದರೆ ದೋನಿಗೆ ಇಷ್ಟ...

`ಮಹೇಂದ್ರ ಸಿಂಗ್ ದೋನಿ ಒತ್ತಡದ ಸಂದರ್ಭಗಳಲ್ಲೂ ಅತ್ಯುತ್ತಮ ಆಟವಾಡುವ ಬ್ಯಾಟ್ಸ್‌ಮನ್. ಏಕದಿನ ಪಂದ್ಯದ ಅಂತಿಮ ಓವರ್‌ಗಳಲ್ಲಿ ಅವರಿಗೆ ಬೌಲಿಂಗ್ ಮಾಡುವುದೆಂದರೆ ತುಂಬಾ ಕಷ್ಟ'-ಇಂಗ್ಲೆಂಡ್ ತಂಡದ ನಾಯಕ ಅಲಸ್ಟೇರ್ ಕುಕ್ ಹೇಳಿದ ಮಾತಿದು. ಭಾರತ- ಇಂಗ್ಲೆಂಡ್ ನಡುವೆ ಜನವರಿ 15 ರಂದು ಕೊಚ್ಚಿಯಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದ ಬಳಿಕ ಅವರು ಈ ಮೇಲಿನಂತೆ ನುಡಿದಿದ್ದರು.ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದೋನಿ ಆಟವನ್ನು ನೋಡಿದ ಕುಕ್ ನಿಬ್ಬೆರಗಾಗಿದ್ದರು. ಕುಕ್ ಮಾತ್ರವಲ್ಲ, ಇಂಗ್ಲೆಂಡ್ ತಂಡದ ಎಲ್ಲ ಆಟಗಾರರಿಗೂ ದೋನಿ ಆಟ ಆಘಾತ ಉಂಟುಮಾಡಿತ್ತು. ಪಂದ್ಯವನ್ನು ಇಂಗ್ಲೆಂಡ್ ಹಿಡಿತದಿಂದ ಬಿಡಿಸಿಕೊಂಡ ಅಮೋಘ ಇನಿಂಗ್ಸ್ ಅದಾಗಿತ್ತು.`ಮಹಿ'ಗೆ ಒತ್ತಡದ ಸಂದರ್ಭದಲ್ಲಿ ಆಡುವುದೆಂದರೆ ಏನೋ ಸಂತಸ ಉಂಟುಮಾಡುತ್ತಿದೆ. ಕೊಚ್ಚಿ ಪಂದ್ಯದಲ್ಲಿ ದೋನಿ ಶತಕವನ್ನೇನೂ ಗಳಿಸಲಿಲ್ಲ. 66 ಎಸೆತಗಳಲ್ಲಿ 72 ರನ್ ಮಾತ್ರ ಪೇರಿಸಿದ್ದರು. ಇದು ಭಾರಿ ಮೊತ್ತವೇನೂ ಅಲ್ಲ. ಆದರೆ ಎಂತಹ ಪರಿಸ್ಥಿತಿಯಲ್ಲಿ ಆ ರನ್‌ಗಳು ಬಂದಿವೆ ಎಂಬುದನ್ನು ನೋಡುವಾಗ ದೋನಿ ಇನಿಂಗ್ಸ್‌ನ ಮಹತ್ವವನ್ನು ಅರಿತುಕೊಳ್ಳಬಹುದು. `ಅತಿಯಾದ ಒತ್ತಡದ ಸಂದರ್ಭ ಹಾಗೂ ಆ ರೀತಿಯ ಪರಿಸ್ಥಿತಿಯಲ್ಲಿ ಅತ್ಯುತ್ತಮ ಆಟವಾಡುವ ಆಟಗಾರನೆಂದರೆ ದೋನಿ ಮಾತ್ರ' ಎಂದಿದ್ದಾರೆ ಕುಕ್.ದೋನಿ ನಾಯಕತ್ವ, ಟೆಸ್ಟ್‌ನಲ್ಲಿ ತೋರಿದ ಬ್ಯಾಟಿಂಗ್, ಅಂಗಳದಲ್ಲಿ ಕೈಗೊಳ್ಳುವ ಕೆಲವೊಂದು ನಿರ್ಧಾರಗಳನ್ನು ನಮಗೆ ಸುಲಭವಾಗಿ ಪ್ರಶ್ನಿಸಬಹುದು. ಆದರೆ ಪಾಕ್ ವಿರುದ್ಧ ಮತ್ತು ಪ್ರಸಕ್ತ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ತೋರುತ್ತಿರುವ ಪ್ರದರ್ಶನ ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಲಭಿಸುವಂತೆ ಮಾಡಿದೆ.ನಿರಾಸೆಯ ನಡುವೆಯೂ ಉತ್ತಮ ಆಟ:

ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಹೆಚ್ಚೆಚ್ಚು ಸೋಲು ಅನುಭವಿಸುತ್ತಿದೆ. ಆದರೆ ದೋನಿ ಮಾತ್ರ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಪ್ರದರ್ಶನಮಟ್ಟವನ್ನು ಉತ್ತಮಪಡಿಸುತ್ತಾ ಸಾಗಿದ್ದಾರೆ. ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗದ ನಿರಾಸೆ ದೋನಿಗೆ ಇದೆ. ಅದರ ನಡುವೆಯೂ ಅವರ ಉತ್ತಮ ಆಟ ಎಲ್ಲರ ಗಮನ ಸೆಳೆದಿದೆ.ದೋನಿ ನಾಯಕತ್ವದ ಕುರಿತು ಟೀಕೆ ಮಾಡುತ್ತಿದ್ದವರು ಈಗ ಸುಮ್ಮನೆ ಕುಳಿತಿದ್ದಾರೆ. `ಮಹಿ' ಬ್ಯಾಟ್‌ನಿಂದ ಹೆಚ್ಚಿನ ರನ್‌ಗಳು ಹರಿದುಬರುತ್ತಿರುವುದೇ ಇದಕ್ಕೆ ಕಾರಣ. ತಾವಾಡಿದ ಕೊನೆಯ ಐದು ಪಂದ್ಯಗಳಲ್ಲಿ (ರಾಂಚಿಯಲ್ಲಿ ಶನಿವಾರ ನಡೆದ ಪಂದ್ಯ ಹೊರತುಪಡಿಸಿ) ದೋನಿ ಪೇರಿಸಿದ್ದು ಒಟ್ಟು 307 ರನ್. ಇದರಲ್ಲಿ ಎರಡು ಸಲ ಅಜೇಯರಾಗಿ ಉಳಿದುಕೊಂಡಿದ್ದಾರೆ. ತಂಡ ಸೋಲುತ್ತಿರುವ ಒತ್ತಡ ಒಂದೆಡೆ, ನಾಯಕತ್ವದಿಂದ ಕೆಳಗಿಳಿಯಬೇಕೆಂಬ ಕೂಗು ಮತ್ತೊಂದೆಡೆ. ಆದರೆ ಇದು ಯಾವುದೂ ದೋನಿ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರಲಿಲ್ಲ.ಪಾಕಿಸ್ತಾನ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಗಳಿಸಿದ ಅಜೇಯ 113 ರನ್‌ಗಳು ಇತ್ತೀಚಿನ ದಿನಗಳಲ್ಲಿ ದೋನಿ ಬ್ಯಾಟ್‌ನಿಂದ ಸಿಡಿದ ಮತ್ತೊಂದು ಅದ್ಭುತ ಇನಿಂಗ್ಸ್. ಅಂದು ದೋನಿ ಕ್ರೀಸ್‌ಗಿಳಿಯುವ ಸಂದರ್ಭ ಭಾರತ 29 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಏಕಾಂಗಿ ಹೋರಾಟ ನಡೆಸಿದ ಅವರು ತಂಡದ ಮೊತ್ತವನ್ನು 227 ರನ್‌ಗಳಿಗೆ ತಂದು ನಿಲ್ಲಿಸಿದ್ದರು.`ಒತ್ತಡದ ಸಂದರ್ಭದಲ್ಲಿ ಗಳಿಸಿದ ಅತ್ಯುತ್ತಮ ಇನಿಂಗ್ಸ್ ಇದು' ಎಂದು ಪಾಕ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಭಾರತ ತಂಡದ ನಾಯಕನ ಇನಿಂಗ್ಸ್‌ನ್ನು ಬಣ್ಣಿಸಿದ್ದರು.ಏಕದಿನ ಕ್ರಿಕೆಟ್‌ನಲ್ಲಿ ಐಸಿಸಿ ತಂದಿರುವ ಬದಲಾವಣೆ ಕೂಡಾ ದೋನಿಗೆ ನೆರವು ನೀಡಿದಂತಿದೆ. `ಪವರ್ ಪ್ಲೇ' ಅಲ್ಲದ ಅವಧಿಯಲ್ಲಿ 30 ಯಾರ್ಡ್ ವೃತ್ತದ ಹೊರಗೆ ನಾಲ್ಕು ಫೀಲ್ಡರ್‌ಗಳಿಗೆ ಮಾತ್ರ ಅವಕಾಶವಿದೆ. ಇದರಿಂದ ಕೊನೆಯ 10 ಓವರ್‌ಗಳಲ್ಲಿ ದೋನಿಗೆ ಭರ್ಜರಿ ಆಟವಾಡಲು ಸಾಧ್ಯವಾಗುತ್ತಿದೆ.ದೋನಿ 2011ರ ವಿಶ್ವಕಪ್ ಬಳಿಕದ 27 ಇನಿಂಗ್ಸ್‌ಗಳಲ್ಲಿ 83.82 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ. ಸ್ಟ್ರೈಕ್‌ರೇಟ್ 92.39 ಆಗಿದೆ. ತಂಡ ಈ ಅವಧಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ದೋನಿ ಮಾತ್ರ ಸ್ಥಿರತೆ ಕಾಪಾಡಿಕೊಂಡಿರುವರು. ಭಾರತದ ಇತರ ಬ್ಯಾಟ್ಸ್‌ಮನ್‌ಗಳು ಈ ಅವಧಿಯಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದಾರೆ.ತಾಂತ್ರಿಕವಾಗಿ ದೋನಿ ಬ್ಯಾಟಿಂಗ್ ಅಷ್ಟೊಂದು ಉತ್ತಮವಾಗಿಲ್ಲ ಎಂಬುದು ಎಲ್ಲರಿಗೆ ತಿಳಿದಿದೆ. ಆದರೆ ಆ ಕೊರತೆಯನ್ನು ಮೀರಿ ನಿಂತು ದೋನಿ ರನ್ ಗಳಿಸುತ್ತಿದ್ದಾರೆ. `ಹೆಲಿಕಾಪ್ಟರ್ ಶಾಟ್' ಒಳಗೊಂಡಂತೆ ಹೆಲವು     ಹೊಸ ಹೊಡೆತಗಳನ್ನು ಕಂಡುಕೊಂಡಿದ್ದಾರೆ.`ದೋನಿ ಈಗ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಆದರೆ ಅವರು ಟೀಕೆಗಳನ್ನು ತಮ್ಮ ಪ್ರಯೋಜನಕ್ಕೆ ಬಳಸುತ್ತಿದ್ದಾರೆ. ಒತ್ತಡದ ಪರಿಸ್ಥಿತಿ ದೋನಿ ಅವರಿಂದ ಉತ್ತಮ ಆಟವನ್ನು ಹೊರತರುತ್ತದೆ' ಎಂಬುದು ರಾಷ್ಟ್ರೀಯ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕಿರಣ್ ಮೋರೆ ಅವರ ಹೇಳಿಕೆ. ಈ ಮಾತು ನಿಜ ಎಂಬುದಕ್ಕೆ `ಮಹಿ' ತೋರುತ್ತಿರುವ ಆಟವೇ ಸಾಕ್ಷಿ.ನಾಯಕತ್ವದಿಂದ ಕೆಳಗಿಳಿಯುವರೇ?

ದೋನಿ ಈಗ ಕ್ರಿಕೆಟ್‌ನ ಎಲ್ಲ ಮೂರೂ ಪ್ರಕಾರಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯೂ ಇದೆ. ಅವರ ಮೇಲೆ ಇದು ಅತಿಯಾದ ಹೊರೆಯಾಗಿ ಪರಿಣಮಿಸಿದೆ.`ನಾಯಕತ್ವ ನನಗೆ ಹೊರೆಯಾಗಿದೆ' ಎಂದು ದೋನಿ ಒಮ್ಮೆಯೂ ಹೇಳಿಲ್ಲ. ಮಾತ್ರವಲ್ಲ ಮುಂದೆಯೂ ಅವರು ಹಾಗೆ ಹೇಳುವುದಿಲ್ಲ. ಆದರೆ ರಾಹುಲ್ ದ್ರಾವಿಡ್ ಸೂಚಿಸಿದಂತೆ ಯಾವುದಾದರೂ ಒಂದು ಪ್ರಕಾರದಲ್ಲಿ ನಾಯಕತ್ವದಿಂದ ಕೆಳಗಿಳಿಯುವುದು ದೋನಿಗೆ ಒಳಿತು.

`ದೋನಿ ಸ್ಥಾನ ತುಂಬಬಲ್ಲ ಸಮರ್ಥ ವಿಕೆಟ್ ಕೀಪಿಂಗ್ ಬ್ಯಾಟ್ಸ್‌ಮನ್ ಭಾರತದಲ್ಲಿ ಈಗ ಯಾರೂ ಇಲ್ಲ. ಆದರೆ ಅವರು ಈಗಿನ ಹೊರೆಯನ್ನು ಕಡಿಮೆಗೊಳಿಸಲು ಟ್ವೆಂಟಿ-20 ತಂಡದ ನಾಯಕತ್ವ ತ್ಯಜಿಸುವುದು ಒಳಿತು' ಎಂಬ ಅಭಿಪ್ರಾಯವನ್ನು ದ್ರಾವಿಡ್ ವ್ಯಕ್ತಪಡಿಸಿದ್ದರು.`ಒಬ್ಬ ಆಟಗಾರನಾಗಿ ಆಡುವ ಸಂದರ್ಭ ಅವರಿಗೆ ಪಂದ್ಯವನ್ನು ವಿಭಿನ್ನ ದೃಷ್ಟಿಯಿಂದ ನೋಡಲು ಸಾಧ್ಯವಾಗುತ್ತದೆ' ಎಂದಿದ್ದರು. ಇದರಿಂದ ಏಕದಿನ ಮತ್ತು ಟೆಸ್ಟ್‌ನಲ್ಲಿ ಅವರಿಗೆ ಇನ್ನಷ್ಟು ಅವಧಿಯವರೆಗೆ ತಂಡವನ್ನು ಮುನ್ನಡೆಸಲು ಸಾಧ್ಯ.

2015ರ ವಿಶ್ವಕಪ್‌ನಲ್ಲಿ ಆಡಬೇಕೇ ಎಂಬುದನ್ನು 2013ರ ಕೊನೆಯಲ್ಲಿ ಅಥವಾ 2014ರ ಆರಂಭದಲ್ಲಿ ತಿಳಿಸುವುದಾಗಿ `ಮಹಿ' ಈ ಹಿಂದೆಯೇ ಹೇಳಿದ್ದರು. ದೋನಿಗೆ ಈಗ 31 ವರ್ಷ ವಯಸ್ಸು. ಇನ್ನೂ ಸಾಕಷ್ಟು ವರ್ಷಗಳ ಆಟ ಅವರಲ್ಲಿ ಉಳಿದುಕೊಂಡಿದೆ.ಏಕದಿನ ಪಂದ್ಯಗಳಲ್ಲಿ ಈಗ ನೀಡುತ್ತಿರುವ ಪ್ರದರ್ಶನ ನೋಡಿದಾಗ, ದೋನಿ ಮುಂದಿನ ವಿಶ್ವಕಪ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ವಿಶ್ವಕಪ್‌ನಲ್ಲಿ ತಂಡದ ನಾಯಕನಾಗಿ ಇರುವರೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಕಾಲವೇ ಅದಕ್ಕೆ ಉತ್ತರಿಸಬೇಕು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry