ಒತ್ತುವರಿದಾರರಿಗೇ ಮಾರಾಟ ಮಾಡಲು ನಿರ್ಧಾರ

7

ಒತ್ತುವರಿದಾರರಿಗೇ ಮಾರಾಟ ಮಾಡಲು ನಿರ್ಧಾರ

Published:
Updated:

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬಿಲ್ಲಕೆಂಪನಹಳ್ಳಿ ಮತ್ತು ಶಾನಮಂಗಲ ಗ್ರಾಮಗಳಲ್ಲಿ ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಸಮೂಹದ `ಈಗಲ್‌ಟನ್ ಗಾಲ್ಫ್  ವಿಲೇಜ್~ ಒತ್ತುವರಿ ಮಾಡಿಕೊಂಡಿರುವ 71.16 ಎಕರೆ ಸರ್ಕಾರಿ ಭೂಮಿಯನ್ನು ಸದ್ಯದ ಮಾರುಕಟ್ಟೆ ದರದಲ್ಲಿ ಅದೇ ಸಂಸ್ಥೆಗೆ ನೀಡಲು ಶುಕ್ರವಾರ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.ಈಗಲ್‌ಟನ್ ಗಾಲ್ಫ್ ವಿಲೇಜ್ ಎರಡೂ ಗ್ರಾಮಗಳ ವ್ಯಾಪ್ತಿಯಲ್ಲಿರುವ 132.26 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿತ್ತು. ಈ ಪೈಕಿ 71.16 ಎಕರೆಯನ್ನು ಮಾರುಕಟ್ಟೆ ದರದಲ್ಲಿ ಅದೇ ಸಂಸ್ಥೆಗೆ ಮರಳಿಸುವ ಮತ್ತು 55 ಎಕರೆಯನ್ನು ಸರ್ಕಾರದ ವಶಕ್ಕೆ ವಾಪಸ್ ಪಡೆಯುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸುಪ್ರೀಂಕೋರ್ಟ್‌ಗೆ ನೀಡಿದ್ದ ವಾಗ್ದಾನದಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ಸಮರ್ಥಿಸಿಕೊಂಡಿದೆ.ಎರಡೂ ಗ್ರಾಮಗಳ ವ್ಯಾಪ್ತಿಯ 503 ಎಕರೆ ವಿಸ್ತೀರ್ಣದಲ್ಲಿ ಈಗಲ್‌ಟನ್ ಗಾಲ್ಫ್ ವಿಲೇಜ್ ನಿರ್ಮಾಣವಾಗಿತ್ತು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಭೂಮಿ ಅತಿಕ್ರಮಣ ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2001ರಲ್ಲಿ ಸರ್ಕಾರ ಬೆಂಗಳೂರು ವಿಭಾಗೀಯ ಆಯುಕ್ತರಿಂದ ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ್ದ ವಿಭಾಗೀಯ ಆಯುಕ್ತರು, ಈಗಲ್‌ಟನ್ ಬಳಿ 208 ಎಕರೆ ಹೆಚ್ಚುವರಿ ಭೂಮಿ ಇದೆ ಎಂದು ವರದಿಯಲ್ಲಿ ತಿಳಿಸಿದ್ದರು.ವರದಿ ಪ್ರಶ್ನಿಸಿ ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ನ ಏಕಸದಸ್ಯ ಪೀಠ ಅರ್ಜಿಯನ್ನು ವಜಾ ಮಾಡಿತ್ತು. ವಿಭಾಗೀಯ ಪೀಠವೂ ಈ ಸಂಸ್ಥೆಯ ಮೇಲ್ಮನವಿಯನ್ನು ತಿರಸ್ಕರಿಸಿ, ದಂಡ ವಿಧಿಸಿತ್ತು. ಬಳಿಕ ಕಂಪೆನಿಯು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 2003ರಲ್ಲಿ ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿತ್ತು.

ವಿವಾದಿತ ಭೂಮಿಯ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ 2009ರಲ್ಲಿ ನ್ಯಾಯಾಲಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿತ್ತು. ಸರ್ವೆ ಪೂರ್ಣಗೊಂಡಾಗ ಈಗಲ್‌ಟನ್ ಗಾಲ್ಫ್  ವಿಲೇಜ್‌ನಲ್ಲಿ 132.26 ಎಕರೆ ಸರ್ಕಾರಿ ಭೂಮಿ ಒತ್ತುವರಿ ನಡೆದಿರುವುದು ಪತ್ತೆಯಾಗಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿತ್ತು.`ಕಂಪೆನಿಗೆ ಸದರಿ ಭೂಮಿಯ ಮಂಜೂರಾತಿ, ಮಾರುಕಟ್ಟೆ ದರದಲ್ಲಿ ಮಾರಾಟವೂ ಸೇರಿದಂತೆ 7 ಅಂಶಗಳ ಪರಿಹಾರವುಳ್ಳ ಪ್ರಮಾಣ ಪತ್ರವನ್ನು ಸರ್ಕಾರ 2011ರ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿತ್ತು. ಭೂಮಿ ಮಂಜೂರು ಮಾಡುವ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕಳೆದ ಜನವರಿಯಲ್ಲಿ ಆದೇಶಿಸಿತ್ತು. ಈ ಬಗ್ಗೆ ಅಡ್ವೊಕೇಟ್ ಜನರಲ್‌ರ ಅಭಿಪ್ರಾಯ ಕೋರಲಾಗಿತ್ತು. ಮಂಜೂರಾತಿಗೆ ಅವಕಾಶವಿಲ್ಲ ಎಂಬ ಅಭಿಪ್ರಾಯ ನೀಡಿದ್ದ ಅವರು, ಮಾರುಕಟ್ಟೆ ದರದಲ್ಲಿ ನೀಡಬಹುದು ಎಂಬ ಅಭಿಪ್ರಾಯ ನೀಡಿದ್ದರು. ಅದರ ಆಧಾರದಲ್ಲೇ 71.16 ಎಕರೆ ಭೂಮಿಯನ್ನು ಚಾಮುಂಡೇಶ್ವರಿ ಬಿಲ್ಡ್‌ಟೆಕ್‌ಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ~ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶಕುಮಾರ್ ಅವರು ಸಂಪುಟ ಸಭೆಯ ಬಳಿಕ ವಿವರ ನೀಡಿದರು.

ಸಚಿವ ಸಂಪುಟ ನಿರ್ಧಾರಕ್ಕೆ ಕೆಲ ಸಚಿವರ ವಿರೋಧ

ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಸಮೂಹದ `ಈಗಲ್‌ಟನ್ ಗಾಲ್ಫ್  ವಿಲೇಜ್~ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಅದೇ ಸಂಸ್ಥೆಗೇ ಬಿಟ್ಟುಕೊಡುವ ಸರ್ಕಾರದ ತೀರ್ಮಾನಕ್ಕೆ ಸಂಪುಟ ಸಭೆಯಲ್ಲಿ ಕೆಲ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.`ಒತ್ತುವರಿ ಮಾಡಿದ ಸಂಸ್ಥೆಗೇ ಜಮೀನನ್ನು ಬಿಟ್ಟುಕೊಡುವ ಪ್ರವೃತ್ತಿ ಸರಿಯಲ್ಲ~ ಎಂದು ಸಚಿವರಾದ ಜಗದೀಶ ಶೆಟ್ಟರ್, ಎಸ್.ಎ.ರಾಮದಾಸ್ ಸೇರಿದಂತೆ ಹಲವರು ಸಂಪುಟ ಸಭೆಯಲ್ಲಿ ತಗಾದೆ ತೆಗೆದರು ಎನ್ನಲಾಗಿದೆ.

ಹಿಂದೊಮ್ಮೆ ಈ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಾಗ ಈ ಸಚಿವರು ಆಕ್ಷೇಪ ಎತ್ತಿದ್ದರು. ಆ ಸಂದರ್ಭದಲ್ಲಿ ಯಾವ ತೀರ್ಮಾನವನ್ನೂ ತೆಗೆದುಕೊಂಡಿರಲಿಲ್ಲ.`ಜಮೀನು ಬಿಟ್ಟುಕೊಡುವ ಬಗ್ಗೆ ಹಿಂದಿನ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಹೀಗಾಗಿ ಜಮೀನು ಬಿಟ್ಟುಕೊಡುವುದು ಅನಿವಾರ್ಯ~ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿದರು.ಇದಕ್ಕೆ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಒತ್ತುವರಿದಾರರಿಗೇ ಅನುಕೂಲ ಮಾಡುವ ಈ ತೀರ್ಮಾನದಿಂದ ಮತ್ತಷ್ಟು ಸಮಸ್ಯೆಗಳು ಉದ್ಭವಿಸಲಿವೆ.ಎಲ್ಲ ಕಡೆಯೂ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ನಂತರ ಕೋರ್ಟ್‌ಗೆ ಹೋಗುವ ಪ್ರವೃತ್ತಿ ಹೆಚ್ಚಲಿದೆ. ಈ ರೀತಿಯ ತೀರ್ಮಾನಗಳು ಸರಿಯಲ್ಲ. ಇಷ್ಟಕ್ಕೂ ಸಂಪುಟ ಸಭೆಯ ಗಮನಕ್ಕೆ ತರದೆ ಜಮೀನು ಬಿಟ್ಟುಕೊಡುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು ಏಕೆ ಎಂದೂ ಕೆಲ ಸಚಿವರು ಪ್ರಶ್ನೆ ಮಾಡಿದ್ದಾರೆ.ನಂತರ ಮುಖ್ಯಮಂತ್ರಿ ಸದಾನಂದ ಗೌಡ ಮಾತನಾಡಿ, `ಸುಪ್ರೀಂಕೋರ್ಟ್‌ಗೆ ಜಮೀನು ಕೊಡುವ ಬಗ್ಗೆ ಸರ್ಕಾರವೇ ಪ್ರಮಾಣ ಪತ್ರ ಸಲ್ಲಿಸಿರುವ ಕಾರಣ ಅನಿವಾರ್ಯವಾಗಿ ಜಮೀನು ಕೊಡಬೇಕಾಗಿದೆ. ಮಾರುಕಟ್ಟೆ ದರದಲ್ಲಿ ಜಮೀನನ್ನು ಬಿಲ್ಡ್‌ಟೆಕ್ ಸಮೂಹಕ್ಕೆ ಬಿಟ್ಟುಕೊಡೋಣ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸೋಣ~ ಎಂದು ಎಲ್ಲರನ್ನೂ ಸಮಾಧಾನಪಡಿಸಿದರು ಎಂದು ಗೊತ್ತಾಗಿದೆ.ದಿನಗೂಲಿ ಕಾಯಂ: ದಿನಗೂಲಿ ನೌಕರರ ಸೇವೆ ಕಾಯಂ ಕುರಿತು ಸಂಪುಟ ಉಪ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿದ್ದರೂ ಆ ಬಗ್ಗೆ ಇನ್ನೂ ಯಾವ ತೀರ್ಮಾನವನ್ನೂ ತೆಗೆದುಕೊಂಡಿಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗವೂ ನಡೆದಿದೆ.ಇದಕ್ಕೆ ಇತರ ಕೆಲ ಸಚಿವರು ಕೂಡ ಧ್ವನಿಗೂಡಿಸಿ, ದಿನಗೂಲಿ ನೌಕರರ ಸೇವೆಯನ್ನು ಕಾಯಂ ಮಾಡಬೇಕು. ತಕ್ಷಣ ಆ ವಿಷಯವನ್ನು ಸಂಪುಟ ಸಭೆಗೆ ತನ್ನಿ ಎಂದು ಸಲಹೆ ಮಾಡಿದರು.ಇದಕ್ಕೆ ಮುಖ್ಯಮಂತ್ರಿ ತಕ್ಷಣ ಸ್ಪಂದಿಸಿ, ಮುಂದಿನ ಸಂಪುಟ ಸಭೆಗೆ ಈ ವಿಷಯವನ್ನು ತರಲಾಗುವುದು. ಅಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳೋಣ ಎನ್ನುವ ಸಲಹೆ ನೀಡಿದರು ಎನ್ನಲಾಗಿದೆ.

6ಮಂದಿ ಕಂದಾಯ ಅಧಿಕಾರಿಗಳ ಅಮಾನತು

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿರುವ ಈಗಲ್ಟನ್ ರೆಸಾರ್ಟ್‌ನ ಅಕ್ಕಪಕ್ಕದ ಜಮೀನು ಹಾಗೂ ಸರ್ಕಾರಿ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಗುರುಲಿಂಗಯ್ಯ, ಕೈಲಾಂಚ ಹೋಬಳಿಯ ಕಂದಾಯ ನಿರೀಕ್ಷಕ ಎ.ಎಸ್.ನಾಗೇಂದ್ರ ಕುಮಾರ್, ಗ್ರಾಮ ಲೆಕ್ಕಿಗ ಪಿ.ರಮೇಶ್, ಕಂದಾಯ ನಿರೀಕ್ಷಕ ಸಿ.ಪುಟ್ಟಸ್ವಾಮಿ, ಪ್ರಥಮ ದರ್ಜೆ ಸಹಾಯಕ ಈಶ್ವರ್, ಉಪ ವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ (ಗ್ರೇಡ್-2) ಮನೋಹರ್ ಜೋಷಿ ಅಮಾನತುಗೊಂಡ ಅಧಿಕಾರಿಗಳು.ಈ ಎಲ್ಲ ಅಧಿಕಾರಿಗಳು ಬಿಡದಿ ಹೋಬಳಿಯಲ್ಲಿ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದವರಾಗಿದ್ದಾರೆ. 

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ಇವರನ್ನು ಶುಕ್ರವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸಿದ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry