ಒತ್ತುವರಿದಾರರ ಜೊತೆ ಜಿಲ್ಲಾಧಿಕಾರಿ ಶಾಮೀಲು

7

ಒತ್ತುವರಿದಾರರ ಜೊತೆ ಜಿಲ್ಲಾಧಿಕಾರಿ ಶಾಮೀಲು

Published:
Updated:
ಒತ್ತುವರಿದಾರರ ಜೊತೆ ಜಿಲ್ಲಾಧಿಕಾರಿ ಶಾಮೀಲು

ರಾಮನಗರ:  ವಕ್ಫ್ ಮಂಡಳಿಗೆ ಸೇರಿದ ಜಮೀನನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದ್ದರೂ ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ವಕ್ಫ್ ಮಂಡಳಿ ಪದಾಧಿಕಾರಿಗಳ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಜಿಲ್ಲಾ ಕಂದಾಯ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗುರುಭೋವಿ ದೊಡ್ಡಿಯಲ್ಲಿ ಒತ್ತುರಿಯಾಗಿರುವ ವಕ್ಫ್ ಮಂಡಳಿ ಜಮೀನನ್ನು ಮಂಡಳಿಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿ ಮನಸ್ಸು ಮಾಡುತ್ತಿಲ್ಲ. ಬದಲಿಗೆ ಅವರು ಒತ್ತುವರಿದಾರರ ಜತೆ ಕೈಜೋಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಹೈಕೋರ್ಟ್ ಆದೇಶವಿದ್ದರೂ ಅದನ್ನು ಪಾಲನೆ ಮಾಡದೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ ಎಂದು ಕರ್ನಾಟಕ ವಕ್ಫ್ ರಕ್ಷಣಾ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರೂ ಆದ ಸರ್ದಾರ್ ಅಹಮದ್ ಖುರೇಷಿ ದೂರಿದರು.ಈ ಆಸ್ತಿಯನ್ನು ಕಬಳಿಕೆ ಮಾಡಿರುವ ಒತ್ತುವರಿದಾರರು ಇಲ್ಲಿನ ಗ್ರಾಮದಲ್ಲಿ ವಾಸವಿದ್ದ 80ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಿ, ಗ್ರಾಮವನ್ನೇ ನಾಶಪಡಿಸಿದ್ದಾರೆ ಎಂದು ಅವರು ಕಿಡಿಕಾರಿದರು.ಇಲ್ಲಿ ಇನ್ನೂ ಸಮುದಾಯದ ಶಾಲೆ, ಮಸೀದಿ ಹಾಗೂ ಸ್ಮಶಾನಗಳಿದ್ದು ಗ್ರಾಮದ ಕುರುಹನ್ನು ತೋರಿಸುತ್ತದೆ.  ಭೂ-ಒತ್ತುವರಿದಾರರು ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳಲ್ಲಿ ಹಸ್ತಕ್ಷೇಪ ನಡೆಸಿ 20 ವರ್ಷಗಳಿಂದಲೂ ವಿವಾದ ಬಗೆಹರಿಯಲು ಬಿಟ್ಟಿಲ್ಲ ಎಂದು ಆರೋಪಿಸಿದರು.ರಾಜ್ಯ ವಕ್ಫ್‌ಬೋರ್ಡ್ ಮಂಡಳಿಯು ಭ್ರಷ್ಟಾಚಾರದ ಕೂಪವಾಗಿದೆ. ಅನ್ವರ್ ಮಾನಿಪ್ಪಾಡಿ ಅವರು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ನಂತರ ಹೋರಾಟ ಮಾಡಿ ರಾಜ್ಯದಾದ್ಯಂತ `ಗುಳುಂ~ ಆಗಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಕ್ಫ್ ಮಂಡಳಿ ಆಸ್ತಿಯ ಬಗ್ಗೆ ದಾಖಲೆ ಸಮೇತ ಪ್ರಸ್ತುತ ಪಡಿಸಿದ್ದಾರೆ. ಮಂಡಳಿಯ ಆಸ್ತಿಯನ್ನು ಒತ್ತುವರಿ ಮಾಡಿ, ಕಬಳಿಸಿರುವವರ ವಿರುದ್ಧ ಶಿಸ್ತು ಕ್ರಮ ಜರುಗಬೇಕಿದೆ ಎಂದು ಒತ್ತಾಯಿಸಿದರು.ಜಿಲ್ಲಾ ವಕ್ಫ್‌ಬೋರ್ಡ್ ಸದಸ್ಯ ಸೈಯದ್ ಮುತಾಹೀರ್ ಮಾತನಾಡಿ, 4 ತಿಂಗಳೊಳಗೆಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಹೈಕೋರ್ಟ್ 2010ರಲ್ಲಿಯೇ ಆದೇಶಿಸಿದೆ. ಆಗಿನ ಜಿಲ್ಲಾಧಿಕಾರಿ ಕೂಡಲೇ ಸರ್ವೇ ಕೆಲಸ ಮುಗಿಸಿದ್ದರು. ನಂತರ ಅವರ ವರ್ಗಾವಣೆಯಾಯಿತು. ತದನಂತರ ಎರಡು ವರ್ಷ ಕಳೆದರೂ ಜಿಲ್ಲಾಡಳಿತ ಯಾವ ಕ್ರಮಕ್ಕೂ ಮುಂದಾಗಿಲ್ಲ. ಹಗರಣದಲ್ಲಿ ಅಧಿಕಾರಿಗಳು ಹಾಗೂ ವಕ್ಫ್ ಮಂಡಳಿಯ ಪ್ರಮುಖರು ಪಾಲುದಾರರಾಗಿದ್ದಾರೆ. ಅವರ ಕುಮ್ಮಕ್ಕಿಲ್ಲದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ದೂರಿದರು.

15 ದಿನಗಳಲ್ಲಿ ಈ ಆಸ್ತಿ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದಿದ್ದರೆ ರಾಜಭವನ್ ಚಲೊ ರ‌್ಯಾಲಿಯನ್ನು ಹಮ್ಮಿಕೊಂಡು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ವಕ್ಫ್ ಮಂಡಳಿಯ ಉಪಾಧ್ಯಕ್ಷ ಸೈಯದ್ ಉಮ್ಮರ್ ದರಾಜ್, ಜಂಟಿ ಕಾರ್ಯದರ್ಶಿ ಅಬ್ದುಲ್ ಕರೀಂ, ಕಾನೂನು ಸಲಹೆಗಾರ ಮೊಕ್ತಾರ್ ಅಹಮದ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಇಲಿಯಾಜ್ ಷರೀಫ್, ಟಿಪ್ಪು ಸುಲ್ತಾನ್ ಸಂಯುಕ್ತರಂಗದ ಎಸ್.ಎ.ರಹೀಮ್, ಮುಖಂಡರುಗಳಾದ ಮಹಮ್ಮದ್ ಅಲ್ತಾಫ್, ಸೈಯದ್ ಶಫಿ, ಮಹಮ್ಮದ್ ಗೌಸ್, ಸಿದ್ಗತ್ ಮುಂತಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry