ಶನಿವಾರ, ಮೇ 8, 2021
19 °C

ಒತ್ತುವರಿ ತೆರವು ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡ ಲಕ್ಷಾಂತರ ಎಕರೆ ಸರ್ಕಾರಿ ಭೂಮಿಯನ್ನು ತೆರವು ಮಾಡದೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದಾರೆ.

 

ಒತ್ತುವರಿ ಭೂಮಿಯನ್ನು ಬಿಟ್ಟುಕೊಡುವಂತೆ ನ್ಯಾಯಾಲಯಗಳು ಆದೇಶ ನೀಡಿದ್ದರೂ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತ ಕಾನೂನು ಸಂಘರ್ಷಕ್ಕೆ ಇಳಿಯುವ ಪರಿಸ್ಥಿತಿ ಮುಂದುವರಿದಿದೆ.

 

ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್‌ಕುಮಾರ್ 2006ರಲ್ಲಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 64.24 ಎಕರೆ ಅರಣ್ಯ ಭೂಮಿಯನ್ನು ಕಬಳಿಸಿದ್ದರು.ರಾಜ್ಯದಲ್ಲಿ ಒತ್ತುವರಿಯಾಗಿರುವ ಭೂಮಿಗೆ ಹೋಲಿಸಿದರೆ ಇದು ಸಮುದ್ರದ ನೀರಿನ ಒಂದು ಹನಿಯಷ್ಟು. ಕಂದಾಯ ಹಾಗೂ ಅರಣ್ಯ ಇಲಾಖೆಗಳು ನಡೆಸಿದ ಜಂಟಿ ಸಮೀಕ್ಷೆಯಿಂದ ಒತ್ತುವರಿ ದೃಢಪಟ್ಟಿದೆ.ಈ ಪ್ರಕರಣದ ವಿಚಾರಣೆ ನಡೆಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯ ಒತ್ತುವರಿಗೆ ತೆರವಿಗೆ ಆದೇಶ ನೀಡಿತ್ತು. ಭೂಮಿ ಬಿಟ್ಟುಕೊಡದೆ ರಮೇಶ್‌ಕುಮಾರ್ ಮೇಲ್ಮನವಿ ಸಲ್ಲಿಸಿದ್ದರು.

 

ಇದೀಗ ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ಮೇಲ್ಮನವಿ ಪ್ರಾಧಿಕಾರವೂ ಒತ್ತುವರಿ ತೆರವಿಗೆ ಆದೇಶ ನೀಡಿದೆ. ಇನ್ನಾದರೂ ರಮೇಶ್‌ಕುಮಾರ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕಾನೂನಿಗೆ ಗೌರವ ಕೊಡಬೇಕು. ಇಲ್ಲವಾದರೆ ಅವರಿಗೂ ಭೂ ಮಾಫಿಯಾದ ನೆಲಗಳ್ಳರಿಗೂ ವ್ಯತ್ಯಾಸವೇ ಇರುವುದಿಲ್ಲ.ರಾಜ್ಯದ ಉದ್ದಗಲದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡ ಸಾವಿರಾರು ಪ್ರಕರಣಗಳಿವೆ. ನೂರಾರು ಕೆರೆಗಳು ಒತ್ತುವರಿಯಾಗಿವೆ. ಬಡವರು, ಅಸಹಾಯಕರು, ಭೂಹೀನರು ಮಾಡಿಕೊಂಡ ಒತ್ತುವರಿಗಳನ್ನು ಸರ್ಕಾರ ಪೊಲೀಸರನ್ನು ಬಳಸಿಕೊಂಡು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತದೆ.ಆದರೆ ರಾಜಕಾರಣಿಗಳು ಹಾಗೂ ಪ್ರಭಾವಿಗಳ ತಂಟೆಗೆ ಹೋಗುವುದಿಲ್ಲ. ಬಹುತೇಕ ಒತ್ತುವರಿ ಪ್ರಕರಣಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೇ ಪರೋಕ್ಷವಾಗಿ ಅದಕ್ಕೆ ಉತ್ತೇಜನ ನೀಡುತ್ತಾರೆ. ಒತ್ತುವರಿ ಕಂಡು ಬಂದ ತಕ್ಷಣ ಕ್ರಮ ಜರುಗಿಸಿ ಭೂಮಿಯನ್ನು ರಕ್ಷಿಸುವ ಸರ್ಕಾರಿ ಅಧಿಕಾರಿಗಳು ವಿರಳ.ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಹಿಂದಿನ ಸರ್ಕಾರದಲ್ಲಿದ್ದ ಸಚಿವರು, ಪ್ರಭಾವಿ ವ್ಯಕ್ತಿಗಳು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ  ಅಕ್ರಮ ಗಣಿಗಾರಿಕೆ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಅದಿರನ್ನು ಕೊಳ್ಳೆ ಹೊಡೆದರು. ಅದನ್ನು ತಡೆಯುವ ಪ್ರಯತ್ನವನ್ನೇ ಸರ್ಕಾರ ಮಾಡಲಿಲ್ಲ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಅದಕ್ಕೆ ಕಡಿವಾಣ ಹಾಕಬೇಕಾಯಿತು.

 

ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ವಿಷಯದಲ್ಲಿ ಸರ್ಕಾರ ದ್ವಂದ್ವ ನೀತಿ ಬಿಡಬೇಕು. ಕಾನೂನಿಗೆ ತಿದ್ದುಪಡಿ ತಂದಾದರೂ ಒತ್ತುವರಿ ಭೂಮಿಯನ್ನು ತುರ್ತಾಗಿ ತನ್ನ ವಶಕ್ಕೆ ಪಡೆಯಬೇಕು.

 

ಬೆಂಗಳೂರು ನಗರದಲ್ಲಿ ಆಗಿರುವ ಒತ್ತುವರಿ ಕುರಿತು ಅಧ್ಯಯನ ಮಾಡಿರುವ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ಸಮಿತಿ ಶಿಫಾರಸುಗಳ ಅನ್ವಯ ಒತ್ತುವರಿ ಭೂಮಿ ತೆರವು ಮಾಡಿ ಅದನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವ ದಿಟ್ಟತನವನ್ನು ಪ್ರದರ್ಶಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.