ಒತ್ತುವರಿ: ನಗರಸಭೆ ನಿರ್ಲಕ್ಷ್ಯ ಆರೋಪ

7

ಒತ್ತುವರಿ: ನಗರಸಭೆ ನಿರ್ಲಕ್ಷ್ಯ ಆರೋಪ

Published:
Updated:

ಗಂಗಾವತಿ: ನಗರದ ವಿವಿಧ ಉದ್ಯಾನವನ, ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಬಹುಪಾಲು ನಿವೇಶನಗಳನ್ನು ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ. ಇದೀಗ ನಕಲಿ ದಾಖಲೆ ಸೃಷ್ಟಿಸಿ ರಸ್ತೆಯನ್ನೆ ಅತಿಕ್ರಮಿಸಲು ನಗರಸಭೆ ಸಿಬ್ಬಂದಿಯೇ ಕುಮ್ಮಕ್ಕು ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.ನಗರದ 18ನೇ ವಾರ್ಡಿನ ಉಪ್ಪಾರ ಓಣಿಯಲ್ಲಿನ ವ್ಯಕ್ತಿಯೊಬ್ಬರು ಸಾರ್ವಜನಿಕ ರಸ್ತೆಯನ್ನು ಯಾವ ದಾಖಲೆಗಳಿಲ್ಲದೆ ಅತಿಕ್ರಮಿಸಲು ಮುಂದಾಗಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಯಥಾಸ್ಥಿತಿಯ ರಸ್ತೆಯನ್ನು ಉಳಿಸಿಕೊಡುವಂತೆ ವಾರ್ಡಿನ ನಾಗರಿಕರು ನಗರಸಭೆಗೆ ಆಗ್ರಹಿಸಿದ್ದಾರೆ.18ನೇ ವಾರ್ಡಿನ ಲಿಂಗಾಯತ-ಹಜಾಮರ ಓಣಿಯಲ್ಲಿನ ನಾಗಪ್ಪ ದೇವರ ಕಟ್ಟೆ ಸಮೀಪದ ನೀರಿನ ತೊಟ್ಟಿ ಮುಂಭಾಗದ ಸಾರ್ವಜನಿಕ ರಸ್ತೆ ಈಗ ಒತ್ತುವರಿಯಾಗಿದೆ. ಇದು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದ್ದು ವಿವಾದಕ್ಕೂ ಕಾರಣವಾಗಿದೆ.

ಇದ್ದೊಂದು ಸ್ಥಳ ಅತಿಕ್ರಮ: ನಾಗಪ್ಪ ದೇವರ ಕಟ್ಟೆ ಸುತ್ತಲಿರುವ ಸುಮಾರು 25-30 ಮನೆಗಳಿಗೆ ನೇರ ಸಂಪರ್ಕ ಕಲ್ಪಿಸುವ ನಗರಸಭೆಯ ಸಾರ್ವಜನಿಕ ರಸ್ತೆ ಒತ್ತುವರಿಯಾಗುತ್ತಿರುವುದು ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ವಾರ್ಡಿನ ನಿವಾಸಿಗಳಾದ ಸಾಮದ್‌ಸಾಬ, ದೌವಲಸಾಬ ತಿಳಿಸಿದ್ದಾರೆ.ಓಣಿಯ ನಿವಾಸಿಗಳ ಪೈಕಿ ಯಾರದ್ದೆ ಮನೆಯಲ್ಲಿ ಶುಭ-ಅಶುಭ ಕಾರ್ಯಕ್ಕೆ ಕಳೆದ 30 ವರ್ಷದಿಂದ  ಇದೇ ರಸ್ತೆ ಉಪಯೋಗಿಸುತ್ತಿದ್ದೇವೆ. ಈಗ ಒತ್ತುವರಿಯಾಗಿದ್ದರಿಂದ ವಾಹನಗಳ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ ಎಂದು ಖಾಜಾಸಾಬ, ಗುರುಪ್ರಸಾದ ವಿವರಿಸಿದರು.ನಗರಸಭೆಗೆ ದೂರು: ದಾಖಲೆಗಳಿಲ್ಲದೆ, ಕಟ್ಟಡ ನಿಯಮ ಪಾಲಿಸದ ಓಂಕಾರಪ್ಪ ಹಡಪದ ಎಂಬುವವರು ರಸ್ತೆಗೆ ಅಭಿಮುಖವಾಗಿ ಸಾರ್ವಜನಿಕರು ನಿತ್ಯ ಓಡಾಡುವ ಪೂರ್ವದ ರಸ್ತೆಯ ಮೇಲೆ ಬಾಗಿಲು ಇಟ್ಟಿದ್ದಾರೆ ಎನ್ನಲಾಗಿದ್ದು ಇದು ಸಮಸ್ಯೆ ಉದ್ಭವಕ್ಕೆ ಕಾರಣವಾಗಿದೆ. ಈ ಬಗ್ಗೆ ರಸ್ತೆ ಬಿಡಿಸಿ ಕೊಡುವಂತೆ ವಾರ್ಡಿನ ವಾಸಿಗಳು ಕಳೆದ ನಾಲ್ಕು ತಿಂಗಳಿಂದ ನಗರಸಭೆಗೆ ಅಲೆದು ದೂರು ನೀಡಿ ಸುಸ್ತಾಗಿದ್ದಾರೆ, ಆದರೆ ಪ್ರಯೋಜನವಾಗಿಲ್ಲ. ಜಿದ್ದಿಗೆ ಬಿದ್ದವರಂತೆ ಓಂಕಾರಪ್ಪ ತೀವ್ರಗತಿಯಲ್ಲಿ ರಸ್ತೆಯಲ್ಲಿ ಗೋಡೆ ನಿರ್ಮಿಸುತ್ತಿದ್ದಾರೆ ಎಂದು ಜನ ದೂರಿದ್ದಾರೆ.2012 ಆಗಸ್ಟ್ 12, ಸಪ್ಟಂಬರ್ 10 ಮತ್ತು ನವಂಬರ್13 ಸೇರಿದಂತೆ ವಾರ್ಡಿನ ಜನ ಈಗಾಗಲೆ ನಾಲ್ಕಾರು ದೂರು ಸಲ್ಲಿಸಿದ್ದಾರೆ. ಆದರೆ ನಗರಸಭೆ 03.09.2012ರಂದು ಓಂಕಾರಪ್ಪರಿಗೆ ದಾಖಲೆ ಹಾಜರು ಪಡಿಸುವಂತೆ ಒಮ್ಮೆ ನೋಟಿಸ್ ಕೊಟ್ಟದ್ದು ಬಿಟ್ಟರೆ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗುತ್ತಿದೆ.ನಗರಸಭೆಯ ಪೌರಾಯುಕ್ತರು ತಕ್ಷಣ ಕ್ರಮ ಕೈಗೊಂಡು ರಸ್ತೆಯಲ್ಲಿ ನಿರ್ಮಿಸುತ್ತಿರುವ ಕಟ್ಟಡದ ದಾಖಲೆ ಪರಿಶೀಲಿಸಬೇಕು ಮತ್ತು ಸಾರ್ವಜನಿಕ ರಸ್ತೆ ಉಳಿಸಿಕೊಡುವಂತೆ ಬಾಬುರಾವ್, ಶರಣಬಸವ, ಆಲಿಸಾಬ, ದೌವಲ್ ಭಾಷ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry