ಭಾನುವಾರ, ಜನವರಿ 19, 2020
26 °C

ಒತ್ತುವರಿ ಭೂಮಿ ತೆರವುಗೊಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿ ಸುತ್ತಮುತ್ತ ಒತ್ತುವರಿಯಾಗಿರುವ 45 ಸಾವಿರ ಎಕರೆ ಭೂಮಿಯನ್ನು ಕೂಡಲೇ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಒತ್ತಾಯಿಸಿದರು.ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ನೀಡಿರುವ ವರದಿಯಲ್ಲಿ 45 ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಸಲಾಗಿದೆ. ಅದನ್ನು ತೆರವುಗೊಳಿಸುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ತೆರವುಗೊಳಿಸಿದ ನಂತರ ಸ್ವಲ್ಪ ಭೂಮಿಯನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಉಳಿದ ಭೂಮಿಯಲ್ಲಿ ನಿವೇಶನಗಳನ್ನು ವಿಂಗಡಿಸಿ ಬಡವರಿಗೆ  ಹಂಚಿಕೆ ಮಾಡಬೇಕು ಎಂದರು.ನಗರದ ಸುತ್ತಮುತ್ತ ಕೆರೆಗಳು, ರಾಜಕಾಲುವೆಗಳು ಸೇರಿದಂತೆ ಸರ್ಕಾರಿ ಭೂಮಿ ಮಾಫಿಯಾಗಳ ಪಾಲಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳ ನಾಯಕರ ಕೈವಾಡವೂ ಇದೆ. ಯಾವುದೇ ಮುಲಾಜಿಲ್ಲದೆ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದು ಹರಾಜು ಹಾಕಬೇಕು ಎಂದರು.ಸರ್ಕಾರಿ ಭೂಮಿ ಒತ್ತುವರಿಯನ್ನು ಪತ್ತೆಹಚ್ಚಿ ತೆರವುಗೊಳಿಸುವ ಉದ್ದೇಶ­ದಿಂದ ಬಿಎಂಟಿಎಫ್‌ ರಚಿಸಲಾಗಿತ್ತು. ಆದರೆ, ಕೆಲವರು ಕೋರ್ಟ್‌ಗೆ ಹೋದ ಕಾರಣ ಅದರ ಅಧಿಕಾರ ಮೊಟಕಾಗಿದ್ದು, ನಿಷ್ಕ್ರಿಯಗೊಂಡಿದೆ. ಈ ಪ್ರಕರಣ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿದ್ದು, ಸರ್ಕಾರ ಸಮರ್ಥವಾಗಿ ವಾದ ಮಂಡಿಸುವ ಮೂಲಕ ಕಾರ್ಯಪಡೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.‘ಭೂ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಹಿಂದೆಯೂ ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಅಲ್ಲದೆ ಧರ್ಮಸಿಂಗ್‌ ಮುಖ್ಯಮಂತ್ರಿ ಆಗಿದ್ದಾಗಲೂ ನಗರದ ಮೂಲಸೌಕರ್ಯಕ್ಕೆ ಸಂಬಂಧಪಟ್ಟಂತೆ ಪತ್ರ ಬರೆದಿದ್ದೆ’ ಎಂದರು.

ಸಿದ್ದರಾಮಯ್ಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ನಾನು ಬರೆದಿರುವ ಪತ್ರಗಳಿಗೆ ನೀಡಿರುವ ಉತ್ತರದಲ್ಲಿ ನೀವು ಹೇಳಿದ ಹಾಗೆ ಆಡಳಿತ ನಡೆಸಲಾಗುವುದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಸರಿಯಲ್ಲ’ ಎಂದು ಖಾರವಾಗಿ ನುಡಿದರು.ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಕೇಳಿದಷ್ಟು ಜಮೀನು ನೀಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 400 ಎಕರೆ ಜಮೀನು ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಇದು ಜಮೀನು ಕಬಳಿಸುವ ಹುನ್ನಾರ ಎಂದರು.ಲೋಕ್‌ಪಾಲ್‌ ಮಸೂದೆಗೆ ಸಂಸತ್‌ ಒಪ್ಪಿಗೆ ನೀಡಿರುವುದನ್ನು ಸ್ವಾಗತಿಸಿದ ಅವರು, ದಿ.ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಲೋಕಾಯುಕ್ತ ಕಾಯ್ದೆ ಜಾರಿಗೆ ತಂದಿದ್ದನ್ನು ಸ್ಮರಿಸಿದರು.‘ಭೂಗಳ್ಳರಿಗೆ ರಕ್ಷಣೆ ಇಲ್ಲ’

‘ಭೂಗಳ್ಳರನ್ನು ರಕ್ಷಿಸುವು­ದಿಲ್ಲ. ಭೂಗಳ್ಳರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿ­ಸಿದ ಅವರು, ‘ದೇವೇಗೌಡರ ಎಲ್ಲ ಪತ್ರಗಳಿಗೆ ಉತ್ತರ ನೀಡಿದ್ದೇನೆ. ಈಗ ಹೊಸದಾಗಿ ಬರೆದಿರುವ ಪತ್ರ ನೋಡಿಲ್ಲ. ಆ ಪತ್ರ ನೋಡಿ ಉತ್ತರ ನೀಡುತ್ತೇನೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)