ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹ

7

ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹ

Published:
Updated:

ಸೋಮವಾರಪೇಟೆ: ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ಸಮಸ್ಯೆಗೆ ಜೆಡಿಎಸ್ ಕಾರಣ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಆರೋಪ ಮಾಡುತ್ತಿವೆ. ಈ ಸಮಸ್ಯೆಯ ನಿವಾರಣೆಗೆ ಸಮಗ್ರ ನೀತಿ ರೂಪಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಆಗ್ರಹಿಸಿದ್ದಾರೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಒತ್ತುವರಿ ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿಗಳು, ವಿಪಕ್ಷಗಳು, ಬೆಳೆಗಾರರ ಸಂಘದ ಪದಾಧಿಕಾರಿಗಳನ್ನು ಸೇರಿಸಿ ಸಾಧಕ ಬಾಧಕಗಳ ಕುರಿತು ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಸಮಗ್ರ ನೀತಿ ರೂಪಿಸುವ ಅಗತ್ಯವಿದೆ ಎಂದರು.ವಿದರ್ಭ ಪ್ಯಾಕೇಜ್ ಘೋಷಣೆಯಾಗಿರುವ ಜಿಲ್ಲೆಯಲ್ಲಿ ಒತ್ತುವರಿ ತೆರವಿನಿಂದ ರೈತರು ಆತ್ಮಹತ್ಯೆಗೆ ಮುಂದಾದರೆ ಸರ್ಕಾರವೇ ನೇರಹೊಣೆ ಯಾಗುತ್ತದೆ. ತಕ್ಷಣ ಈ ಕ್ರಮವನ್ನು ಕೈಬಿಡಬೇಕು. ತಪ್ಪಿದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ಈಚೆಗೆ ಸಂಸದರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್‌ಗಿಂತ ಅಧಿಕವಾಗಿ ಜೆಡಿಎಸ್ ಅಲ್ಪಸಂಖ್ಯಾತರ ರಕ್ಷಣೆಗೆ ನಿಂತಿದೆ.ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮತಗಳು ಕೈತಪ್ಪುವ ಹೆದರಿಕೆಯಿಂದ ಸಂಸದರು ಇಂತಹ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಹಿಂದಿನ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರದ ಬಗ್ಗೆ ಟೀಕಿಸುವ ಸಂಸದರು, ತಮ್ಮೂರು ಕೆ.ಆರ್. ನಗರದ ಎಪಿಎಂಸಿಯಲ್ಲಿ ಬಿಜೆಪಿ ಸಂಗ ಮಾಡಿಕೊಂಡೇ ಅಧಿಕಾರ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಎಂದರು.ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಅಧ್ಯಕ್ಷರನ್ನು ನಿಯೋಜಿಸಲಾಗುವುದು. ಆದ್ದರಿಂದ ತಾಲೂಕು ಘಟಕ ವಿಸರ್ಜಿಸಲಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಜಿಲ್ಲೆಯ ಮೂರೂ ತಾಲೂಕುಗಳಿಗೆ ಸಂಬಂಧಿಸಿದಂತೆ ಸ್ಥಾನೀಯ ಸಮಿತಿ ರಚಿಸಲಾಗುವದು. ಫೆ. 26ರಂದು ಕೂಡಿಗೆಯಲ್ಲಿ ಸ್ಥಾನೀಯ ಸಮಾವೇಶದ ಕಚೇರಿ ಉದ್ಘಾಟಿಸಲಾಗುವುದು.ನಂತರ ಮಡಿಕೇರಿ ಹೋಬಳಿಗೆ ಸಂಬಂಧಿಸಿದಂತೆ ಕಡಗದಾಳು ಹಾಗೂ ವಿರಾಜಪೇಟೆಯ ಮಾಲ್ದಾರೆಯಲ್ಲಿ ಕಚೇರಿ ತೆರೆಯಲಾಗುವುದು ಎದರು. ಗೋಷ್ಠಿಯಲ್ಲಿ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಸ್.ಬಿ.ಭರತ್‌ಕುಮಾರ್, ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಜಿ.ಪಂ.ಸದಸ್ಯೆ ಗೀತಾ, ರಾಜ್ಯ ಉಪಾಧ್ಯಕ್ಷ ಷರೀಫ್, ಮುಖಂಡರಾದ ಪರಮೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry