ಒಪ್ಪಂದದ ಪರಿಣಾಮಕಡಿಮೆಯಾದ ವೇತನ

7
ರಾಜ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಆಘಾತ

ಒಪ್ಪಂದದ ಪರಿಣಾಮಕಡಿಮೆಯಾದ ವೇತನ

Published:
Updated:

ಬೆಂಗಳೂರು: ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಹಾಗೂ ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ `ಮಧ್ಯರಾತ್ರಿ' ಮಾಡಿಕೊಂಡ ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆ ಮಾಡಿದರೆ ಕೆಎಸ್‌ಆರ್‌ಟಿಸಿ ನೌಕರರ ವೇತನ ಹೆಚ್ಚಾಗುವ ಬದಲು ಕಡಿಮೆಯೇ ಆಗಲಿದೆ!ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸೆಪ್ಟೆಂಬರ್ 12ರಿಂದ 14ರ ವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಸ್ ವ್ಯವಸ್ಥೆ ಸ್ತಬ್ಧಗೊಂಡಿತ್ತು. ಸೆ.14ರ ಮಧ್ಯರಾತ್ರಿವರೆಗೂ ನಡೆದ ಸಂಧಾನ ಸಭೆಯಲ್ಲಿ ವೇತನ ಪರಿಷ್ಕರಣೆಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮುಷ್ಕರವನ್ನು ಕೈಬಿಡಲಾಗಿತ್ತು.ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಪ್ರಸಾದ್ ಇತ್ತೀಚೆಗೆ ಪತ್ರ ಬರೆದು ಕಾರ್ಮಿಕರ ಹಿತದೃಷ್ಟಿಯಿಂದ ಈ ಪ್ರಸ್ತಾವವನ್ನು ಜಾರಿಗೆ ತರುವುದು ಸೂಕ್ತವಲ್ಲ ಹಾಗೂ ಇದನ್ನು ಕೈಬಿಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ನಗರದ ಎಚ್.ಡಿ.ರೇವಪ್ಪ ಎಂಬವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಇದೇ 6ರಂದು ಕೆಎಸ್‌ಆರ್‌ಟಿಸಿ ನೀಡಿರುವ ಉತ್ತರದಲ್ಲಿ ಈ ಅಂಶ ಬಹಿರಂಗಗೊಂಡಿದೆ. ಈ ಒಪ್ಪಂದ ಜಾರಿಯಾದರೆ ಪ್ರತಿ ನೌಕರನ ವೇತನದಲ್ಲಿ ಅಂದಾಜು ಒಂದು ಸಾವಿರ ರೂಪಾಯಿಯಷ್ಟು ಕಡಿಮೆ ಆಗಲಿದೆ.ವಿವಾದ ಏನು: ಸಾರಿಗೆ ನಿಗಮಗಳಲ್ಲಿ ನಾಲ್ಕು ವರ್ಷಕ್ಕೊಮ್ಮೆ ಅಧಿಕಾರಿಗಳು ಹಾಗೂ ನೌಕರರ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. 2011ರ ಡಿಸೆಂಬರ್ ಅಂತ್ಯಕ್ಕೆ ಈ ಹಿಂದಿನ ವೇತನ ಪರಿಷ್ಕರಣೆ ಅವಧಿ ಕೊನೆಗೊಂಡಿತ್ತು. ಬಳಿಕ 2012ರ ಆಗಸ್ಟ್ ತಿಂಗಳಿನಿಂದ ಜಾರಿಗೆ ಬರುವಂತೆ ವೇತನ ಹೆಚ್ಚಿಸಲಾಗಿತ್ತು. ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ಪರಿಷ್ಕರಣೆ ಮಾಡಲಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಆಪಾದಿಸಿದ್ದವು. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘದ ಜಂಟಿ ಸಮಿತಿ (ಐದು ಕಾರ್ಮಿಕ ಸಂಘಟನೆಗಳು) ನೇತೃತ್ವದಲ್ಲಿ ನಾಲ್ಕು ನಿಗಮಗಳ ನೌಕರರು ಸೆಪ್ಟೆಂಬರ್ 12ರಿಂದ ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದರು. ಸಾರಿಗೆ ಸಚಿವ ಆರ್.ಅಶೋಕ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ವೇತನ ಪರಿಷ್ಕರಣೆಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.ಒಪ್ಪಂದದ ಸಾರಾಂಶ: `ನಿಗಮದ ನೌಕರರು ಹಾಗೂ ಅಧಿಕಾರಿಗಳು 2012ರ ಮಾರ್ಚ್ ಅಂತ್ಯದವರೆಗೆ ಹಳೆಯ ವೇತನ ಶ್ರೇಣಿಯಲ್ಲಿಯೇ ವೇತನ ಪಡೆಯುವರು. ಈ ಅವಧಿಯಲ್ಲಿ ಅವರು ಪಡೆಯುತ್ತಿದ್ದ ಮೂಲವೇತನದ ಶೇ 10ರಷ್ಟನ್ನು ಮಾತ್ರ ಮಧ್ಯಂತರ ಪರಿಹಾರವಾಗಿ ಪಡೆಯುವರು. ಅಲ್ಲದೆ, ನಿಗಮದ ನೌಕರರು ಮಾರ್ಚ್ 31ರಂತೆ ಪಡೆಯುತ್ತಿದ್ದ ಮೂಲ ವೇತನವನ್ನು ಅದರ ಶೇ 86.75ರಷ್ಟು (ಮಧ್ಯಂತರ ಪರಿಹಾರ ಶೇ 10 ಹಾಗೂ ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ನೌಕರರು ಪಡೆಯುತ್ತಿದ್ದ ಶೇ 76.75ರಷ್ಟು ಮೂಲ ವೇತನದ ತುಟ್ಟಿಭತ್ಯೆ) ಹೆಚ್ಚಿಸಿ ಪರಿಷ್ಕೃತ ವೇತನ ಶ್ರೇಣಿಯನ್ನು ಜಾರಿಗೆ ತರಲಾಗುವುದು. ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗುವುದು. ಅಲ್ಲದೆ, ನೌಕರರು ಹಿಂದಿನ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವಾರ್ಷಿಕ ವೇತನ ಬಡ್ತಿಯನ್ನು ಶೇ 86.75ರಷ್ಟು ಹೆಚ್ಚಿಸಲಾಗುವುದು' ಎಂಬುದು ಒಪ್ಪಂದದ ಸಾರಾಂಶ.ಆ ಬಳಿಕ ಪರಿಷ್ಕರಣೆಯಿಂದ ನೌಕರರಿಗೆ ಆಗುವ ಲಾಭ-ನಷ್ಟವನ್ನು ಅಂಕಿ ಅಂಶ ಸಹಿತ ವಿವರಿಸಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಅಕ್ಟೋಬರ್ 11ರಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. `ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆಯಿಂದ ನೌಕರರು ಈಗ ಪಡೆಯುತ್ತಿರುವ ವೇತನಕ್ಕಿಂತ ಕಡಿಮೆ ವೇತನ ಪಡೆಯಬೇಕಾಗುತ್ತದೆ. ಹಿರಿಯ ನೌಕರರಿಗೆ ಅವರ ಸೇವಾ ಹಿರಿತನಕ್ಕೆ ಅನುಗುಣವಾಗಿ ಇನ್ನೂ ಅಧಿಕ ನಷ್ಟ ಆಗಲಿದೆ' ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

ನೌಕರರಿಗೆ ನಷ್ಟ-13ರಂದು ಪ್ರತಿಭಟನೆ

ಜಂಟಿ ಸಮಿತಿಯವರು ಸೆಪ್ಟೆಂಬರ್‌ನಲ್ಲಿ ಪ್ರತಿಭಟನೆ ಮಾಡುವ ಮೊದಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲಾಗಿತ್ತು. ಪ್ರತಿಷ್ಠೆಯ ಕಾರಣದಿಂದ ಜಂಟಿ ಸಮಿತಿಯ ಮುಖಂಡರು ಮುಷ್ಕರಕ್ಕೆ ಕರೆ ನೀಡಿದ್ದರು. ಮುಷ್ಕರದಿಂದ ಕಾರ್ಮಿಕರಿಗೆ ಯಾವ ಲಾಭವೂ ಆಗಿಲ್ಲ. ಸೆ.14ರ ಒಪ್ಪಂದದಂತೆ ವೇತನ ಪರಿಷ್ಕರಣೆ ಜಾರಿಯಾದರೆ ನೌಕರರಿಗೆ ನಷ್ಟವೇ ಆಗಲಿದೆ.

ಕಾರ್ಮಿಕರಿಗೆ ಆಗುವ ನಷ್ಟದ ಅಪಾಯದ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಪ್ರಯೋಜನ ಆಗಿಲ್ಲ. ಈ ಒಪ್ಪಂದವನ್ನು ರದ್ದು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 13ರಂದು ಕೆಎಸ್‌ಆರ್‌ಟಿಸಿ ಪ್ರಧಾನ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ಎಸ್.ಪ್ರಸನ್ನ ಕುಮಾರ್, ಗೌರವಾಧ್ಯಕ್ಷ, ಸಿಐಟಿಯು ನೇತೃತ್ವದ ಸಾರಿಗೆ ನೌಕರರ ಸಂಘಟನೆ

`ಅಧಿಕಾರಗಳಿಗೆ ಗೊಂದಲ'

`ಒಪ್ಪಂದದ ಪ್ರಕಾರವೇ ವೇತನ ಪರಿಷ್ಕರಣೆ ಮಾಡಿದರೆ ವೇತನ ಹೆಚ್ಚಾಗುವುದು ಖಚಿತ. ತಪ್ಪು ಲೆಕ್ಕಾಚಾರದಿಂದ ಹಾಗೂ ಗೊಂದಲದಿಂದ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ವೇತನ ಪರಿಷ್ಕರಣೆಯ ಹೊಸ ಪ್ರಸ್ತಾವ ಸಲ್ಲಿಸುವಂತೆ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈಚೆಗೆ ತಿಳಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಪರಿಷ್ಕೃತ ಪ್ರಸ್ತಾವವನ್ನು ಸಲ್ಲಿಸಿದ್ದೇವೆ. ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ಸಿಕ್ಕ ಬಳಿಕ ನೌಕರರ ವೇತನ ಹೆಚ್ಚಾಗಲಿದೆ. ಶೀಘ್ರದಲ್ಲಿ ವೇತನ ಪರಿಷ್ಕರಣೆ ಮಾಡದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ.'

-ನಾಗರಾಜ್, ಪ್ರಧಾನ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ

`ಹೊಸ ಪ್ರಸ್ತಾವ ಬಂದಿದೆ'

ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆ ಮಾಡಲು ಹೋದರೆ ನೌಕರರ ವೇತನ ಹೆಚ್ಚಾಗುವ ಬದಲು ಕಡಿಮೆಯೇ ಆಗಲಿದೆ. ಹೀಗಾಗಿ ಪರಿಷ್ಕೃತ ಪ್ರಸ್ತಾವವನ್ನು ನೀಡುವಂತೆ ಕಾರ್ಮಿಕ ಸಂಘಟನೆಗಳ ಮುಖಂಡರಿಗೆ ತಿಳಿಸಲಾಗಿತ್ತು. ಅವರಿಂದ ಹೊಸ ಪ್ರಸ್ತಾವ ಬಂದಿದೆ. ಶೀಘ್ರದಲ್ಲಿ ನೌಕರರ ವೇತನ ಪರಿಷ್ಕರಣೆ ಆಗಲಿದೆ'.

-ಮಂಜುನಾಥ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry