ಶುಕ್ರವಾರ, ಜೂನ್ 18, 2021
27 °C

ಒಪ್ಪಂದ ಪರಿಶೀಲನೆ; ವಿಶ್ವಸಂಸ್ಥೆಗೆ ಉತ್ತರ ಕೊರಿಯಾ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್ (ಎಎಫ್‌ಪಿ): ಉದ್ದೇಶಿತ ಉಪಗ್ರಹ ಉಡಾವಣಾ ಯೋಜನೆಗೆ ವಿವಿಧ ದೇಶಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹೊತ್ತಿನಲ್ಲಿಯೇ ಉತ್ತರ ಕೊರಿಯಾವು, ಅಮೆರಿಕದೊಂದಿಗಿನ ಪರಮಾಣು ಒಪ್ಪಂದದ ಮೇಲ್ವಿಚಾರಣೆ ನೋಡಿಕೊಳ್ಳಲು ವಿಶ್ವಸಂಸ್ಥೆಯ ತನಿಖಾಧಿಕಾರಿಗಳಿಗೆ ಆಹ್ವಾನ ನೀಡಿದೆ.ಕಮ್ಯುನಿಸ್ಟ್ ದೇಶವು ದೂರಗಾಮಿ ಕ್ಷಿಪಣಿ ತಂತ್ರಜ್ಞಾನವನ್ನು ಪ್ರಯೋಗಕ್ಕೊಳಪಡಿಸುತ್ತಿದ್ದು, ಇದು ಮುಂದೊಂದು ದಿನ ಪರಮಾಣು ಸಿಡಿತಲೆಯನ್ನೂ ಕೊಂಡೊಯ್ಯಬಹುದು ಎಂಬ ಆತಂಕ ಕೇಳಿ ಬಂದಿದೆ. ಅಮೆರಿಕದಿಂದ ಆಹಾರ ನೆರವು ಪಡೆಯುವ ಸಂಬಂಧ ಉ.ಕೊರಿಯಾ ಫೆಬ್ರುವರಿ 29ರಂದು ಒಪ್ಪಂದ ಮಾಡಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಅದು ತನ್ನ ದೇಶದಲ್ಲಿನ ಪರಮಾಣು ಕಾರ್ಯಕ್ರಮಗಳನ್ನು ಭಾಗಶಃ ರದ್ದುಗೊಳಿಸಬೇಕಾಗಿದೆ.ಒಂದು ವೇಳೆ ಉ.ಕೊರಿಯಾ ಉಪಗ್ರಹ ಉಡಾವಣೆ ಮಾಡಿದಲ್ಲಿ ಈ ಒಪ್ಪಂದವು ಮುರಿದು ಬೀಳಲಿದೆ ಎಂದು ಅಮೆರಿಕ ಹೇಳುತ್ತಿದೆ. ಈ ನಡುವೆ, ಉತ್ತರ ಕೊರಿಯಾ ತನ್ನ ಯೋಜನೆಯನ್ನು ಸಮರ್ಥಿಸಿಕೊಂಡಿದೆ. ಇದು ಪರಮಾಣು ಕಾರ್ಯಕ್ರಮವಲ್ಲ; ಶಾಂತಿಯುತ ಉಪಗ್ರಹ ಉಡಾವಣೆ ಎಂದು ಹೇಳಿಕೊಂಡಿದೆ.`ಉಪಗ್ರಹ ಉಡಾವಣೆಗೂ ಈ ಒಪ್ಪಂದಕ್ಕೂ ಯಾವುದೇ ಸಂಬಂಧವಿಲ್ಲ~ ಎಂದು ಪರಮಾಣು ಯೋಜನೆಗಳ ಮುಖ್ಯ ಸಂಧಾನಕಾರ ರಿ ಯಾಂಗ್-ಹೊ ಬೀಜಿಂಗ್‌ನಲ್ಲಿ ಹೇಳಿದ್ದಾರೆ. `ಉ.ಕೊರಿಯಾ ಅಮೆರಿಕದೊಂದಿಗಿನ ತನ್ನ ಒಪ್ಪಂದವನ್ನು ಅನುಷ್ಠಾನಗೊಳಿಸಲಿದೆ. ಹಾಗಾಗಿ ನಮ್ಮ ದೇಶಕ್ಕೆ ತನಿಖಾಧಿಕಾರಿಗಳನ್ನು ಕಳುಹಿಸುವಂತೆ ಅಂತರ ರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಗೆ (ಐಎಇಎ) ನಾವು ಪತ್ರ ಬರೆದಿದ್ದೇವೆ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಗಳನ್ನು ನಿಯಂತ್ರಿಸಲು ದಶಕಗಳಿಂದಲೂ ನಡೆಸುತ್ತಿರುವ ಪ್ರಯತ್ನಕ್ಕೆ ಈ ಒಪ್ಪಂದವು ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.ಅಮೆರಿಕದಿಂದ 2,40,000 ಟನ್ ಆಹಾರ ನೆರವು ಪಡೆಯಲು, ದೂರಗಾಮಿ ಕ್ಷಿಪಣಿ ಉಡಾವಣೆಗಳು, ಪರಮಾಣು ಪರೀಕ್ಷೆ, ಯುರೇನಿಯಂ ಅಭಿವೃದ್ಧಿ ಯೋಜನೆಯನ್ನು ರದ್ದುಗೊಳಿಸುವುದಾಗಿ ಉ.ಕೊರಿಯಾ ಕಳೆದ ತಿಂಗಳು ಒಪ್ಪಿಕೊಂಡಿತ್ತು.ಉಪಗ್ರಹ ಉಡಾವಣೆ ಯೋಜನೆಯನ್ನು ಕೈಬಿಡುವಂತೆ ಜಪಾನ್, ರಷ್ಯ ಸೇರಿದಂತೆ ಹಲವು ರಾಷ್ಟ್ರಗಳು ಉತ್ತರ ಕೊರಿಯಾದ ಮೇಲೆ ಒತ್ತಡ ಹೇರಿವೆ. ಉ.ಕೊರಿಯಾಗೆ ಪರಮಾಪ್ತ ದೇಶವಾಗಿರುವ ಚೀನಾ ಕೂಡ ಇದಕ್ಕೆ ಆತಂಕ ವ್ಯಕ್ತಪಡಿಸಿದೆ.

`ರಾಕೆಟ್ ಹೊಡೆದುರುಳಿಸುತ್ತೇವೆ~

ಟೋಕಿಯೊ (ಪಿಟಿಐ): ದೇಶದ ಭೂಭಾಗ ಅಥವಾ ಜಲ ಪ್ರದೇಶದ ಮೇಲೆ ಹಾರಾಡುವ ಉ.ಕೊರಿಯಾ ರಾಕೆಟ್ ಅನ್ನು ಹೊಡೆದುರುಳಿಸುವುದಾಗಿ ಜಪಾನ್ ರಕ್ಷಣಾ ಸಚಿವ ನೈಕಿ ಟನಕಾ ಎಚ್ಚರಿಕೆ ನೀಡಿದ್ದಾರೆ.`ಉ.ಕೊರಿಯಾದ ರಾಕೆಟ್ ಹೊಡೆದುರುಳಿಸಲು ನಾವು ಸ್ವಯಂ ರಕ್ಷಣಾ ಪಡೆಗಳನ್ನು (ಎಸ್‌ಡಿಎಫ್) ನಿಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ~ ಎಂದು ಅವರು ಸಂಸತ್‌ನಲ್ಲಿ ಸೋಮವಾರ ಹೇಳಿಕೆ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.