ಒಪ್ಪಂದ ರದ್ದುಗೊಳಿಸಿದ ಸಹಾರಾ

7

ಒಪ್ಪಂದ ರದ್ದುಗೊಳಿಸಿದ ಸಹಾರಾ

Published:
Updated:

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ ನಾಟಕೀಯ ಬೆಳವಣಿಗೆಯೊಂದರಲ್ಲಿ ಅನಿರೀಕ್ಷಿತ ಆಘಾತಕ್ಕೆ ಒಳಗಾಗಿದೆ. ಕಾರಣ ಮಂಡಳಿಯಿಂದ ಸರಿಯಾದ ನ್ಯಾಯ ದೊರೆಕುತ್ತಿಲ್ಲ ಎಂದು ಆರೋಪಿಸಿರುವ `ಸಹಾರಾ ಇಂಡಿಯಾ ಪರಿವಾರ~ ಭಾರತ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದು, ಐಪಿಎಲ್‌ನಿಂದಲೂ ಹೊರಬಂದಿದೆ.ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಶನಿವಾರ ಬೆಳಿಗ್ಗೆ ಇನ್ನೇನು ಐಪಿಎಲ್ ಹರಾಜು ಪ್ರಕ್ರಿಯೆ ಶುರುವಾಗಬೇಕು ಎಂಬಷ್ಟರಲ್ಲಿ ಸಹಾರಾ ಈ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿತು. ಈ ಫ್ರಾಂಚೈಸಿಯ ಅಧಿಕಾರಿಗಳು ಸ್ಥಳದಿಂದ ಹೊರ ನಡೆದರು. ಇದರೊಂದಿಗೆ ಸಹಾರಾ ಹಾಗೂ ಬಿಸಿಸಿಐ ನಡುವಿನ 11 ವರ್ಷಗಳ ಸಂಬಂಧ ಕಳಚಿ ಬಿದ್ದಿದೆ.ಈ ಬಗ್ಗೆ `ಸಹಾರಾ ಅಡ್ವೆಂಚರ್ ಸ್ಪೋರ್ಟ್ಸ್ ಲಿಮಿಟೆಡ್~ನ ವ್ಯವಸ್ಥಾಪಕ ನಿರ್ದೇಶಕ ಸುಶಾಂತ್ ರಾಯ್ ಮಾಧ್ಯಮವರಿಗೆ ಪತ್ರಿಕಾ ಪ್ರಕಟಣೆ ನೀಡಿದರು. ಹಾಗಾಗಿ ಹರಾಜಿನಲ್ಲಿ ಸಹಾರಾ ಪುಣೆ ವಾರಿಯರ್ಸ್ ತಂಡ ಪಾಲ್ಗೊಳ್ಳಲಿಲ್ಲ. ಈ ಗೊಂದಲದ ನಡುವೆಯೇ ಐಪಿಎಲ್ ಐದನೇ ಅವತರಣಿಕೆಯ ಹರಾಜು ಪ್ರಕ್ರಿಯೆ ನಡೆಯಿತು.ಐಪಿಎಲ್ ನಿಯಮದಲ್ಲಿ ಕೆಲವೊಂದು ಬದಲಾವಣೆ ಮಾಡಲು ಬಿಸಿಸಿಐ ನಿರಾಕರಿಸಿದ್ದೇ ಈ ಬೆಳವಣಿಗೆಗೆ ಮೂಲ ಕಾರಣ. ಅನಾರೋಗ್ಯಕ್ಕೆ ಒಳಗಾಗಿರುವ ಈ ತಂಡದ ಯುವರಾಜ್ ಸಿಂಗ್ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಹಾಗಾಗಿ ಯುವಿ (8.42 ಕೋಟಿ) ಅವರ ಮೊತ್ತವನ್ನು ಈ ಬಾರಿಯ ಹರಾಜಿನಲ್ಲಿ ಸೇರಿಸಿಕೊಳ್ಳಲು ತಮಗೆ ಅವಕಾಶ ನೀಡಬೇಕು ಎಂದು ಸಹಾರಾ ಕೋರಿದ್ದ ಮನವಿಯನ್ನು ಬಿಸಿಸಿಐ ಪುರಸ್ಕರಿಸಿಲಿಲ್ಲ. `2008ರ ಚೊಚ್ಚಲ ಐಪಿಎಲ್ ಟೂರ್ನಿಗೆ ಹಲವು ಕಾರಣ ನೀಡಿ ತಮ್ಮ ಪ್ರವೇಶವನ್ನು ನಿರಾಕರಿಸಲಾಗಿತ್ತು. ಬಳಿಕ ನಾಲ್ಕನೇ ಅವತರಣಿಕೆಯಲ್ಲಿ 94 ಪಂದ್ಯಗಳ ಆಯೋಜನೆ ಭರವಸೆ ನೀಡಲಾಗಿತ್ತು. ಆದರೆ ಕೇವಲ 74 ಪಂದ್ಯಗಳು ನಡೆದವು. ಈ ಸಂಬಂಧ ನಮ್ಮ ಸಲಹೆ ಹಾಗೂ ಮನವಿಗೆ ಬಿಸಿಸಿಐ ಸ್ಪಂದಿಸಲಿಲ್ಲ~ ಎಂದು ಸಹಾರಾ ಆರೋಪಿಸಿದೆ.ಭಾರತ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಸಹಾರಾ ಪ್ರತಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಪಂದ್ಯಕ್ಕೆ 3.34 ಕೋಟಿ ರೂ. ನೀಡುತಿತ್ತು. ಈ ಒಪ್ಪಂದ 2013ರ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಬೇಕಿತ್ತು.

ತಮ್ಮ ನಿರ್ಧಾರವನ್ನು `ಸಹಾರಾ ಇಂಡಿಯಾ ಪರಿವಾರ~ ಅಧ್ಯಕ್ಷ ಸುಬ್ರತೊ ರಾಯ್ ಮುಂಬೈನಲ್ಲಿ ಸಮರ್ಥಿಸಿಕೊಂಡಿದ್ದಾರೆ. `ಇದು ಖಂಡಿತ ಕೆಟ್ಟ ನಿರ್ಧಾರವಲ್ಲ.  ಕೇವಲ ಒಂದು ವಿಷಯಕ್ಕೆ ಈ ರೀತಿಯ ಮನಸ್ತಾಪ ಉದ್ಭವಿಸುವುದಿಲ್ಲ. ತುಂಬಾ ದಿನಗಳಿಂದ ಹಲವು ಸಮಸ್ಯೆಗಳು ನಿರ್ಮಾಣವಾಗಿವೆ~ ಎಂದಿದ್ದಾರೆ.`ಆದರೆ ಐಪಿಎಲ್‌ನಿಂದ ಹೊರಬಂದಿರುವುದರಿಂದ ವಾರಿಯರ್ಸ್ ತಂಡದ ಆಟಗಾರರು ಸಮಸ್ಯೆಗೆ ಒಳಗಾಗಬಾರದು. ಹಾಗಾಗಿ ಈ ಸಂಬಂಧ ಬಿಸಿಸಿಐನೊಂದಿಗೆ ಮಾತುಕತೆಗೆ ಸಿದ್ಧರಿರುವುದಾಗಿ ರಾಯ್ ತಿಳಿಸಿದ್ದಾರೆ.ಈ ಬೆಳವಣಿಗೆ ಸಂಬಂಧ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ಹಾಗೂ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ `ಇಂತಹ ಬೆಳವಣಿಗೆ ನಡೆಯಬಾರದಿತ್ತು. ಆದರೆ ಇದುವರೆಗೆ ನಮಗೆ ಸಹಾರಾದಿಂದ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಮಾಧ್ಯಮಗಳ ಮೂಲಕವಷ್ಟೇ ಈ ವಿಷಯ ನಮಗೆ ಗೊತ್ತಾಗಿದೆ~ ಎಂದರು.ಆದರೆ `ಯಾವುದೇ ಗೊಂದಲವಿದ್ದರೂ ಅದನ್ನು ಸಮಾಲೋಚನೆ ಮೂಲಕ ಬಗೆ ಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ~ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry