ಒಪ್ಪಿಗೆ ಇಲ್ಲದೆ ಪ್ರಕರಣ ದಾಖಲಿಸಲು 'ಸುಪ್ರೀಂ' ಅನುಮತಿ

7
ಅಕ್ರಮ ಗಣಿಗಾರಿಕೆ ಪ್ರಕರಣ

ಒಪ್ಪಿಗೆ ಇಲ್ಲದೆ ಪ್ರಕರಣ ದಾಖಲಿಸಲು 'ಸುಪ್ರೀಂ' ಅನುಮತಿ

Published:
Updated:

ನವದೆಹಲಿ (ಪಿಟಿಐ): ಅಕ್ರಮ ಅದಿರು ರಫ್ತು ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರದ ಅನುಮೋದನೆ ಇಲ್ಲದೇ `ಕ್ರಿಮಿನಲ್' ಪ್ರಕರಣ ದಾಖಲಿಸಿಕೊಳ್ಳಲು ಸಿಬಿಐಗೆ ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.

`ದೆಹಲಿ ವಿಶೇಷ ಪೊಲೀಸ್ ಸಿಬ್ಬಂದಿ ಕಾಯ್ದೆಯ (ಡಿಎಸ್‌ಪಿಇ) ಕಲಂ 6ರ ಅಡಿಯಲ್ಲಿ  ವಿಧಿಸಿದ್ದ ನಿರ್ಬಂಧ ಈ ನ್ಯಾಯಾಲಯ ಸೂಚಿಸಿರುವ ತನಿಖೆಗೆ ಅನ್ವಯಿಸುವುದಿಲ್ಲ' ಎಂದು ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ನೇತೃತ್ವದ ತ್ರಿಸದಸ್ಯ ಅರಣ್ಯ ಪೀಠ ತಿಳಿಸಿದೆ.2012ರ ಸೆಪ್ಟೆಂಬರ್ 5ರ ವರದಿಯನ್ವಯ ಪ್ರಾಥಮಿಕ ತನಿಖೆ (ಪಿಇ) ಹಾಗೂ ಸರ್ವೋಚ್ಚ ನ್ಯಾಯಾಲಯ ನೇಮಕದ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ (ಸಿಇಸಿ) ಶಿಫಾರಸುಗಳಲ್ಲಿ ಕೇಳಿ ಬಂದ ಹಾಗೂ 50 ಸಾವಿರ ಮೆಟ್ರಿಕ್ ಟನ್‌ಗೂ ಹೆಚ್ಚು  ತೂಕದ ಕಬ್ಬಿಣದ ಅದಿರನ್ನು ರಫ್ತು ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಸಹ ಪೀಠ ಹಸಿರು ನಿಶಾನೆ ತೋರಿದೆ.

ಅಲ್ಲದೇ ಒಟ್ಟು 50 ಸಾವಿರ ಟನ್‌ಗೂ ಕಡಿಮೆ ತೂಕದ ಅದಿರು ರಫ್ತು ಮಾಡಿದವರ ಹಾಗೂ ಸಿಬಿಐನ ಪ್ರಾಥಮಿಕ ವಿಚಾರಣಾ  ವ್ಯಾಪ್ತಿಯಿಂದ ಹೊರಗಿರುವ ರಫ್ತುದಾರರ ಪ್ರಕರಣಗಳನ್ನು ಸಿಇಸಿ ಶಿಫಾರಸು ಮಾಡಿರುವ ನಿಯಮಗಳ ಪ್ರಕಾರ ಕ್ರಮಕ್ಕಾಗಿ ಕರ್ನಾಟಕ ಸರ್ಕಾರದ ಜೊತೆಗೂಡಿ ಕಾರ್ಯನಿರ್ವಹಿಸಲು ಪೀಠ ಅನುಮತಿ ನೀಡಿದೆ.

ಸಿಬಿಐನಿಂದ ಪ್ರಾಥಮಿಕ ವಿಚಾರಣೆಗೆ ಒಳಗಾಗಿರುವ ಹಾಗೂ 50 ಸಾವಿರ ಟನ್‌ಗೂ ಕಡಿಮೆ ತೂಕದ ಅದಿರು ರಫ್ತು ಮಾಡಿದ ಪ್ರಕರಣಗಳನ್ನೂ ಕರ್ನಾಟಕ  ಸರ್ಕಾರಕ್ಕೆ ಒಪ್ಪಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್.ನಿಜ್ಜರ್ ಹಾಗೂ ರಂಜನ್ ಗೊಗೊಯ್ ಅವರನ್ನೂ ಒಳಗೊಂಡಿದ್ದ ಪೀಠ ಹೇಳಿದೆ.

ನಾಲ್ಕು ತಿಂಗಳದ ಒಳಗಾಗಿ ಉಭಯ ಸಿಬಿಐ ಹಾಗೂ ಕರ್ನಾಟಕ ಸರ್ಕಾರ, `ಒಪ್ಪಿಗೆ ವರದಿ' ಸಲ್ಲಿಸುವಂತೆ  ಹಾಗೂ ಆದೇಶದ ಪ್ರತಿಗಳನ್ನು ಸಿಬಿಐ ನಿರ್ದೇಶಕ ಮತ್ತು ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗೆ ತಲುಪಿಸುವಂತೆ  ಸುಪ್ರೀಂ ಕೋರ್ಟ್ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry