ಒಬಿಸಿ ಮೀಸಲಾತಿ ಭರ್ತಿ ಮಾಡಲು ಆಗ್ರಹ

7

ಒಬಿಸಿ ಮೀಸಲಾತಿ ಭರ್ತಿ ಮಾಡಲು ಆಗ್ರಹ

Published:
Updated:

ಗುಲ್ಬರ್ಗ: ರಾಜ್ಯದ ಜನಸಂಖ್ಯೆಯಲ್ಲಿ ಶೇ.54ರಷ್ಟು ಇರುವ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಉದ್ಯೋಗದಲ್ಲಿ ಕೇವಲ ಶೇ. 27 ಮೀಸಲಾತಿ ನೀಡಲಾಗಿದೆ. ಈ ಪೈಕಿ ಕೇವಲ ಶೇ.6 ಮೀಸಲಾತಿ ಮಾತ್ರ ಭರ್ತಿಯಾಗಿದ್ದು, ಉಳಿದ ಹುದ್ದೆಗಳು ಖಾಲಿ ಬಿದ್ದಿವೆ. ಹಿಂದುಳಿದ ವರ್ಗಗಳ ಬಗ್ಗೆ ಸರ್ಕಾರಕ್ಕೆ  ಬದ್ಧತೆ ಇದ್ದಲ್ಲಿ ಈ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗುಲ್ಬರ್ಗ ಜಿಲ್ಲಾ ಘಟಕವು ಆಗ್ರಹಿಸಿದೆ.ಹಿಂದುಳಿದ ವರ್ಗಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿಗೆ ತೆರಳಲಿರುವ ನಿಯೋಗದ ಮುಖಂಡರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವರ್ಷಕ್ಕೆ ಎರಡು ಬಾರಿ ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಸಬೇಕು. (ಈ ಸಭೆ ನಡೆಸದೇ ಮೂರು ವರ್ಷ ಸಂದಿವೆ.) ಬಜೆಟ್‌ನಲ್ಲಿ ಶೇ.50ರಷ್ಟು ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು. ಜಿಲ್ಲಾ, ತಾಲ್ಲೂಕು ಪಂಚಾಯಿತಿಯಲ್ಲಿ ವಂಚನೆಗೆ ಒಳಗಾಗಿರುವ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸಬೇಕು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಮನೆ ಮತ್ತಿತರ ಸೌಲಭ್ಯ ನೀಡಬೇಕು. ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಸಿ.ಎಸ್. ದ್ವಾರಕನಾಥ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು.ಪ್ರಸ್ತುತ ಆಯೋಗಕ್ಕೆ ಕಾರ್ಯನಿರ್ವಹಿಸಲು ಬೇಕಾದ ಎಲ್ಲ ಸವಲತ್ತುಗಳನ್ನು ಕಲ್ಪಿಸಬೇಕು. ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಕಲ್ಪಿಸಬೇಕು. ಮೀಸಲಾತಿಯ ಬಾಕಿ ಇರುವ ಹುದ್ದೆಗಳನ್ನು ಬ್ಯಾಕ್‌ಲಾಗ್ ಸೃಷ್ಟಿಸಿ, ರೋಸ್ಟರ್ ಮೂಲಕ ಭರ್ತಿ ಮಾಡಬೇಕು. ಹಿಂ.ವ. ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು. ರಾಜ್ಯಾದ್ಯಂತ ವಸತಿ ನಿಲಯ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಕನಿಷ್ಠ 3,000 ರೂಪಾಯಿ ವಿದ್ಯಾರ್ಥಿ ವೇತನ ನೀಡಬೇಕು.ಮೀಸಲಾತಿ ಕೆನೆಪದರ ಆದಾಯ ಮಿತಿಯನ್ನು 4.5ಲಕ್ಷ ರೂಪಾಯಿಗೆ ಏರಿಸಬೇಕು. ಮೀಸಲಾತಿ ವಿಚಾರದಲ್ಲಿ ಮೋಸ ಮಾಡಿ ಉದ್ಯೋಗ ಪಡೆದಿರುವ ವ್ಯಕ್ತಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಯೋಗದ ಮುಖಂಡ ಶಿವಲಿಂಗಪ್ಪ ಕಿನ್ನೂರ ಆಗ್ರಹಿಸಿದರು.ನಿಯೋಗವು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಹಿಂದುಳಿದ ಆಯೋಗದ ಅಧ್ಯಕ್ಷ ಶಂಕ್ರೆಪ್ಪ ಮಡಿವಾಳ, ಶಾಸಕರು ಮತ್ತಿತರರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಎಂ.ಬಸವರಾಜ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸುಭಾಷ ಗೌಳಿ, ಮಹಾಂತೇಶ ಕೌಲಗಿ, ವೆಂಕಟೇಶ ಯಾದವ, ಬಾಬು ತೆಲಂಗ, ಮಲ್ಲಣ್ಣ ಮಡಿವಾಳ, ವೆಂಕಟೇಶ ದೊರೆಪಲ್ಲಿ, ನಿಂಗಪ್ಪ ಆರ್. ದೇವಣಗಾಂವ, ಶಿವಾಜಿ ಗೊಂದಳಿ, ಚಂದ್ರಕಾಂತ ಗುತ್ತೇದಾರ, ನಾರಾಯಣರಾವ್ ಸುರವಶೆ, ಸಿದ್ರಾಮ ಹೆಳವಾರ, ಶಿವಾನಂದ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry