ಒಬಿಸಿ ಶುಲ್ಕ ಪರಿಷ್ಕರಣೆ ಖಂಡಿಸಿ ಪ್ರತಿಭಟನೆ

7

ಒಬಿಸಿ ಶುಲ್ಕ ಪರಿಷ್ಕರಣೆ ಖಂಡಿಸಿ ಪ್ರತಿಭಟನೆ

Published:
Updated:

ಮೈಸೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಯೋಜನೆಯ ಪರಿಷ್ಕರಿಸಿದ ಆದೇಶ ಹಿಂಪಡೆ ಯುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಗುರುವಾರವೂ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.ನಗರದ ಮಹಾರಾಜ ಪದವಿ ಕಾಲೇಜು ಮತ್ತು ಕುವೆಂಪುನಗರ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ರಸ್ತೆಗಿಳಿದರು. ಪ್ರತಿಭಟನಾ ಮೆರವಣಿಗೆ ಹೊರಟು ಮೈಸೂರು ವಿಶ್ವ ವಿದ್ಯಾನಿಲಯ ಕಾರ್ಯಸೌಧದ ಮುಂದೆ ಜಮಾಯಿಸಿದರು. ವಿದ್ಯಾರ್ಥಿಗಳ ಹೋರಾಟಕ್ಕೆ ಎಐಡಿಎಸ್‌ಓ ಸಂಘಟನೆ ಬೆಂಬಲ ನೀಡಿತು.ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ರದ್ದುಗೊಳಿಸಿ ಪೂರ್ಣ ಪ್ರಮಾಣದ ಶುಲ್ಕವನ್ನು ವಿದ್ಯಾರ್ಥಿಗಳೇ ಭರಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದರು.ಮೈಸೂರು ವಿಶ್ವವಿದ್ಯಾನಿಲಯ ಪರೀಕ್ಷಾ ಶುಲ್ಕವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ರಿಯಾಯಿತಿ ದರದಲ್ಲೇ ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ತಕ್ಷಣವೇ ಹಿಂತಿರುಗಿಸಬೇಕು. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವ ವಿಧಾನವನ್ನು ಬದಲಾಯಿಸಿದ ಸರ್ಕಾರದ ಆದೇಶ ರದ್ದುಗೊಳಿಸಿ, ಹಿಂದಿನಂತೆಯೇ ಆದಾಯ ಪ್ರಮಾಣ ಪತ್ರ ನೀಡುವ ವಿದ್ಯಾರ್ಥಿಗಳಿಗೆಲ್ಲ ಶುಲ್ಕ ವಿನಾಯಿತಿ ನೀಡಬೇಕು. ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಅವಶ್ಯಕತೆ ಇರುವಷ್ಟು ಹಣ ಆಯಾಯ ಶೈಕ್ಷಣಿಕ ವರ್ಷದಲ್ಲೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನಾಕಾರರ ಸ್ಥಳಕ್ಕೆ ಆಗಮಿಸಿದ ಮೈಸೂರು ವಿಶ್ವ ವಿದ್ಯಾ ನಿಲಯ ಕುಲಸಚಿವ (ಪರೀಕ್ಷಾಂಗ) ಬಿ.ರಾಮು ಅವರು ವಿದ್ಯಾರ್ಥಿಗಳಿಂದ ಮನವಿ ಪತ್ರ ಸ್ವೀಕರಿಸಿ, ಕೂಡಲೇ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಮತ್ತೆ ಹೋರಾಟ ಶುರು

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿ ಹಿರಿಯ ನಾಗರಿಕರ ವೇದಿಕೆ ಕಾರ್ಯ ಕರ್ತರು ನಗರದ ನ್ಯಾಯಾಲಯ ಸಂಕೀರ್ಣ ಎದುರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಗುರುವಾರ ಪ್ರತಿಭಟನೆ ಮಾಡಿದರು.ಕಾವೇರಿ ಹೋರಾಟದಲ್ಲಿ ನಿರತರಾಗಿರುವ ಜಿ.ಮಾದೇಗೌಡರ ಕೈ ಬಲಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ತಮಿಳುನಾಡಿನ ತಾಳಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಕುಣಿಯುತ್ತಿದೆ. ತಮಿಳುನಾಡಿನ ಒತ್ತಡಕ್ಕೆ ಕೇಂದ್ರ ಮಣಿಯಬಾರದು. ರಾಜ್ಯದ ಪರಿಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಬೇಕು. ಕಾವೇರಿ ಹೋರಾಟಕ್ಕೆ ಹಿರಿಯ ನಾಗರಿಕರ ಸಂಪೂರ್ಣ ಬೆಂಬಲ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ವೇದಿಕೆ ಅಧ್ಯಕ್ಷ ಕಾರ್ಗಿಲ್ ಮಾದಪ್ಪ, ಉಪಾಧ್ಯಕ್ಷ ತಾಂಡವ ಮೂರ್ತಿ, ಕಾರ್ಯದರ್ಶಿ ಶಿವದೇವಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಕರವೇ: ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸಿದ ವಿಚಾರದಲ್ಲಿ ರಾಜ್ಯ ಸರ್ಕಾರದ 6 ಮಂದಿ ವಿರುದ್ಧ ಹೂಡಿರುವ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟಿ) ಕಾರ್ಯಕರ್ತರು ನಗರದ ನ್ಯಾಯಾಲಯ ಸಂಕೀರ್ಣ ಎದುರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು.ವೇದಿಕೆ ನಗರ ಘಟಕ ಅಧ್ಯಕ್ಷ ಕೆ.ಮಾದೇಶ್, ಅಜಯ್‌ಕುಮಾರ್ ಜೈನ್, ರವಿ, ಉಮೇಶ್, ನಟೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry