ಸೋಮವಾರ, ಜೂನ್ 21, 2021
28 °C

ಒಬ್ಬ ಸಾಹಿತಿಗೆ ಸೋಲು, ಇನ್ನೊಬ್ಬರಿಗೆ ಗೆಲುವು

ಪಿ.ಕೆ. ರವಿಕುಮಾರ್‌/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಘಟಾನುಘಟಿ ಅಭ್ಯರ್ಥಿಗಳಿಗೆ ಮತದಾರರು ಮಣ್ಣು ಮುಕ್ಕಿಸಿದ ಇತಿಹಾಸ ಉತ್ತರ ಕನ್ನಡ (ಕೆನರಾ) ಲೋಕಸಭಾ ಕ್ಷೇತ್ರಕ್ಕಿದೆ. ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಇದೇ ಜಿಲ್ಲೆಯವರಾದ ರಾಮಕೃಷ್ಣ ಹೆಗಡೆ (1977) ಮತ್ತು ಚಿತ್ರನಟ ಅನಂತನಾಗ್‌ ಹಾಗೂ ನೆರೆ ಜಿಲ್ಲೆಯವರಾದ ಹೆಸರಾಂತ ಸಾಹಿತಿ ಶಿವರಾಮ ಕಾರಂತ (1989) ಸೋಲು ಕಂಡಿದ್ದರು.1977ರಲ್ಲಿ ತುರ್ತು ಪರಿಸ್ಥಿತಿ ನಂತರದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಸಂಘಟಿತ ರಾಜಕೀಯ ವೇದಿಕೆಯಾಗಿ ಹೊರಹೊಮ್ಮಿದ್ದ ಜನತಾ ಪಕ್ಷ ಜಯಭೇರಿ ಬಾರಿಸಿ ಕೇಂದ್ರದಲ್ಲಿ ಅಧಿಕಾರ­ಕ್ಕೇರಿತು. ಆದರೆ, ಈ ಪಕ್ಷದ ಹುರಿಯಾಳು ರಾಮಕೃಷ್ಣ ಹೆಗಡೆ ಮಾತ್ರ ತಮ್ಮ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಬಾಲು ಪುರ್ಸು ಕದಂ ಎದುರು ಸೋಲು ಕಂಡರು. ಕೆನರಾ ಲೋಕ­ಸಭಾ ಕ್ಷೇತ್ರಕ್ಕೆ  ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ತಾಲ್ಲೂಕುಗಳ ಮತ­ದಾರರೂ ಸೇರಿಕೊಂಡದ್ದು ಈ ಸೋಲಿಗೆ ಕಾರಣವಾಯಿತು.1989ರ ಚುನಾವಣೆಯಲ್ಲಿ ಸಾಹಿತಿ ಶಿವರಾಮ ಕಾರಂತರು ಜಿಲ್ಲೆಯಲ್ಲಿ ಕೈಗಾ ಅಣುಸ್ಥಾವರ ವಿರುದ್ಧ ಚಳವಳಿ ನಿರತ ಪರಿಸರ ಸಂಘಟನೆಗಳ ಧ್ವನಿಯಾಗಿ ಈ ಕ್ಷೇತ್ರದಿಂದ ಸ್ಪರ್ಧೆಗಿಳಿದರೂ ಗೆಲುವು ಕಾಣಲಿಲ್ಲ. ಅವರಿಗೆ ಸಿಕ್ಕಿದ್ದು ಕೇವಲ 58,902 ಮತಗಳು. ಆಗ ಜನತಾದಳದ ಅಭ್ಯರ್ಥಿಯಾಗಿದ್ದ ನಟ ಅನಂತನಾಗ್ ಕೂಡಾ ಸೋಲು ಕಂಡರು. ಇವರಿಬ್ಬರು ಘಟಾನುಘಟಿಗಳ ಎದುರು ಕಾಂಗ್ರೆಸ್‌ನ ದೇವರಾಯ ನಾಯ್ಕ ಆಯ್ಕೆಯಾದರು.ಕಾಂಗ್ರೆಸ್‌ ಅಲೆ: ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ದೇಶ­ದಾದ್ಯಂತ ಕಾಂಗ್ರೆಸ್‌ ಅಲೆ ಜೋರಾಗಿತ್ತು. 1951, 1957 ಹಾಗೂ 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜೋಕಿಂ ಆಳ್ವ ಸತತವಾಗಿ ಮೂರು ಬಾರಿ ಗೆದ್ದು ‘ಹ್ಯಾಟ್ರಿಕ್‌’ ಸಾಧಿಸಿದ್ದರು. ಹಾಗೆ ನೋಡಿದರೆ ಅವರು ಹೊರಗಿನವರು. ಆದರೆ ಆಗಿನ ಪ್ರಧಾನಿ ನೆಹರೂರ ಪರಮಾಪ್ತರು.1951 ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಸಾಹಿತಿ ದಿನಕರ ದೇಸಾಯಿ 1967ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಬಾರಿಗೆ ಗೆಲುವಿನ ರುಚಿ ಕಂಡರು. 1971ರ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದ ಅವರು, ಕಾಂಗ್ರೆಸ್‌ನ ಬಾಲಕೃಷ್ಣ ವೆಂಕಣ್ಣ ನಾಯಕ (ಬಿ.ವಿ. ನಾಯಕ) ವಿರುದ್ಧ ಸೋಲು ಅನುಭವಿಸಿದರು.ಸತತ ನಾಲ್ಕು ಬಾರಿ ಗೆಲುವು: 1980ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆಯ ಹುಡುಕಾಟ ನಡೆದಿತ್ತು. ಆಗ ವಿದ್ಯಾರ್ಥಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಹಿಂದುಳಿದ ವರ್ಗದ (ಈಡಿಗ) ಯುವಕ ದೇವರಾಯ ನಾಯ್ಕ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ಜನತಾಪಕ್ಷದಿಂದ ಆರ್.ವಿ. ದೇಶಪಾಂಡೆ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಅಲೆ ಬಲವಾಗಿದ್ದರಿಂದ ದೇವರಾಯ ನಾಯ್ಕ 2,40,246 ಮತ ಪಡೆದು ಭರ್ಜರಿ ವಿಜಯ ಸಾಧಿಸಿದ್ದರು. 1984ರಲ್ಲೂ ಜಿ.ಎಸ್.ಅಜ್ಜಿಬಳ ಅವರನ್ನು 49 ಸಾವಿರ ಮತಗಳ ಅಂತರದಿಂದ ನಾಯ್ಕ ಸೋಲಿಸಿದ್ದರು.ಕಾಂಗ್ರೆಸ್‌ ಅಲೆಯ ಮೇಲೆ 1989ರಲ್ಲಿ ಅವರು ಮತ್ತೆ ಗೆಲುವು ಸಾಧಿಸಿದರು. 1991ರಲ್ಲಿ ಪ್ರಥಮ ಬಾರಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕರ್ಕಿ ಮಂಜುನಾಥ್‌ ಅವರನ್ನು ಕಣಕಿಳಿಸಿತ್ತು. ಆದರೆ, ಈ ಚುನಾವಣೆಯಲ್ಲೂ ಗೆಲುವು ನಾಯ್ಕ ಅವರದ್ದೇ ಆಗಿತ್ತು. 

ಟಿಕೆಟ್‌ ಬೇಡ ಎಂದರು: ಪಿ.ವಿ. ನರಸಿಂಹರಾವ್‌ ಪ್ರಧಾನಿ­ಯಾಗಿದ್ದಾಗ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ನೆಲಸಮವಾಯಿತು.  ಇದರಿಂದ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಕಾಂಗ್ರೆಸ್‌ ವಿರುದ್ಧ ಅಸಮಾಧಾನ­ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದೇವರಾಯ ನಾಯ್ಕ 1996ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಬೇಡ ಎಂದು ನಿರಾಕರಿಸಿದ್ದರು.ಹಿಂದುತ್ವದ ಅಲೆ: -ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 1996 ರಲ್ಲಿ ಮೊದಲ ಬಾರಿಗೆ ಬಿಜೆಪಿ ಹಿಂದುತ್ವದ ಅಲೆಯ ಮೇಲೆ ಅನಂತಕುಮಾರ್ ಹೆಗಡೆ ಜನತಾದಳದ ಪ್ರಮೋದ್​ ಹೆಗಡೆ ವಿರುದ್ಧ ಗೆದ್ದರು. ಕಾಂಗ್ರೆಸ್‌ ಹೊನ್ನಾವರದ ಆರ್.ಎನ್. ನಾಯ್ಕರಿಗೆ ಟಿಕೆಟ್ ನೀಡಿತ್ತು. ಆದರೆ ಅವರು ಗೆಲುವು ಕಾಣಲಿಲ್ಲ.1998ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಗೆದ್ದರು. ಆಗ ಅವರ ಎದುರಾಳಿ ಮಾರ್ಗರೆಟ್ ಆಳ್ವ. ಉತ್ತರ ಕನ್ನಡ ಜಿಲ್ಲೆಯ ಸೊಸೆಯಾಗಿದ್ದರೂ ಹಿಂದುತ್ವದ ಅಲೆಯ ಎದುರು ಅವರಿಗೆ ದಡ ಸೇರಲಾಗಲಿಲ್ಲ.1999ರಲ್ಲಿ ಮತ್ತೆ ಕಣಕ್ಕಿಳಿದಿದ್ದ ಮಾರ್ಗರೆಟ್​ ಆಳ್ವ ಅದೇ ಅನಂತಕುಮಾರ್ ಹೆಗಡೆ ಅವರನ್ನು ಸೋಲಿಸಿದ್ದರು. ನಂತರದ ಎರಡೂ ಚುನಾವಣೆಗಳಲ್ಲಿ ಪರಾಭವಗೊಂಡು ಅವರು ಲೋಕ­ಸಭೆಯ ಬದಲು ರಾಜ್ಯಪಾಲರಾಗಿ ರಾಜಭವನ ಸೇರಿದರು.ಈ ಸಲ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿ ಎಂದಿಗಿಂತ ಹೆಚ್ಚಿತ್ತು. ಹೀಗಾಗಿ ಮೂರನೇ ಪಟ್ಟಿಯಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ್‌ ದೇಶಪಾಂಡೆ ಅವರಿಗೆ ಟಿಕೆಟ್‌ ಸಿಕ್ಕಿದೆ. ಚುನಾವಣಾ ಅಖಾಡದಲ್ಲಿನ ಕುಸ್ತಿಪಟುಗಳು ಯಾರ ಎಂಬುದು ಗೊತ್ತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.