ಒಮ್ಮತಕ್ಕೆ ಜಿ-20 ಶೃಂಗಸಭೆ ವಿಫಲ

7
ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ

ಒಮ್ಮತಕ್ಕೆ ಜಿ-20 ಶೃಂಗಸಭೆ ವಿಫಲ

Published:
Updated:

ಸೇಂಟ್ ಪೀಟರ್ಸ್‌ಬರ್ಗ್ (ಪಿಟಿಐ, ಐಎಎನ್‌ಎಸ್, ಎಪಿ, ಎಎಫ್‌ಪಿ): ಡಮಾಸ್ಕಸ್‌ನಲ್ಲಿ ಕಳೆದ ತಿಂಗಳು ನಾಗರಿಕರ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವ ಆರೋಪ ಹೊತ್ತ ಸಿರಿಯಾ ಆಡಳಿತದ ಮೇಲೆ ಸೇನಾ ದಾಳಿ ನಡೆಸುವ ಅಮೆರಿಕದ ಯೋಜನೆಗೆ ಯಾವುದೇ ಬೆಂಬಲ ನೀಡುವ ಬಗ್ಗೆ ಒಮ್ಮತಕ್ಕೆ ಬರಲು ಜಿ-20 ಶೃಂಗಸಭೆ ಶುಕ್ರವಾರ ವಿಫಲವಾಯಿತು.ಏಕ ಪಕ್ಷೀಯ ದಾಳಿ ಬೇಡ: ಈ ಮಧ್ಯೆ, ಸಿರಿಯಾದ  ಮೇಲೆ ದಾಳಿ ನಡೆಸದಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮೇಲೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ಅನುಮತಿ ಇಲ್ಲದೆ ಯಾವುದೇ ಏಕಪಕ್ಷೀಯ ಸೇನಾ ದಾಳಿ ನಡೆಸುವುದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ.ಜಿ-20 ಶೃಂಗಸಭೆಯ ಮೊದಲ ದಿನದ ಸಮಾವೇಶ ಬಳಿಕ ಗುರುವಾರ ರಾತ್ರಿ ಒಬಾಮ ಸೇರಿದಂತೆ ಒಕ್ಕೂಟದ ಎಲ್ಲ ನಾಯಕರ ಗೌರವಾರ್ಥ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ಏರ್ಪಡಿಸಿದ್ದ ಔತಣಕೂಟದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿದರು.ಸಿರಿಯಾ ಆಡಳಿತವು ತನ್ನದೇ ಜನರ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವ ಆರೋಪದ ಬಗ್ಗೆ ವಿಶ್ವಸಂಸ್ಥೆಯ ತನಿಖಾ ತಂಡ ವರದಿ ಸಲ್ಲಿಸುವವರೆಗೆ ವಿಶ್ವ ಸಮುದಾಯವು ಆ ದೇಶದ ಮೇಲೆ ಸೇನಾ ದಾಳಿಗೆ ಕಾಯಬೇಕು ಎಂಬುದು ಪ್ರಧಾನಿಯವರ ಅಭಿಪ್ರಾಯವಾಗಿತ್ತು. ಸಿರಿಯಾ ಅಥವಾ ಜಗತ್ತಿನ ಯಾವುದೇ ರಾಷ್ಟ್ರದಲ್ಲಾದರೂ ರಾಸಾಯನಿಕ ಅಸ್ತ್ರಗಳನ್ನು ಬಳಸುವುದನ್ನು ಅವರು ಖಂಡಿಸಿದರು. ಯಾವುದೇ ದೇಶದ ಮೇಲೆ ಸೇನಾ ದಾಳಿ ನಡೆಸಿದರೂ ಅದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂಬುದು ಸಿಂಗ್ ನಿಲುವಾಗಿತ್ತು ಎಂದು ಔತಣಕೂಟದಲ್ಲಿ ಭಾಗವಹಿಸಿದ್ದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಸುದ್ದಿಗಾರರಿಗೆ ತಿಳಿಸಿದರು.ಐರೋಪ್ಯ ಒಕ್ಕೂಟದ ಬಳಿ ಸಾಕ್ಷ್ಯ  ( ಲಿಥುವೇನಿಯಾ ವರದಿ): ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸಾದ್ ಆಡಳಿತವು ಡಮಾಸ್ಕಸ್ ಬಳಿ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಐರೋಪ್ಯ ಒಕ್ಕೂಟದ ರಕ್ಷಣಾ ಸಚಿವರು ಹೇಳಿದ್ದಾರೆ.ಪರಿಹಾರ ವೀಕ್ಷಣೆ (ವಿಶ್ವಸಂಸ್ಥೆ ವರದಿ): ಸಿರಿಯಾದಲ್ಲಿ ವಿಶ್ವಸಂಸ್ಥೆ ಪರಿಹಾರ ಕಾರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಕಾಣಲು ಆ ದೇಶಕ್ಕೆ ಭೇಟಿ ನೀಡಿರುವ ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳ ಉಪಮಹಾ ಪ್ರಧಾನ ಕಾರ್ಯದರ್ಶಿ ವಲೇರಿ ಅಮಾಸ್, `ಸವಾಲಿನ ಪರಿಸರ'ದಲ್ಲಿ ಕೆಲಸ ಮುಂದುವರಿಸಿರುವ ರಕ್ಷಣಾ ಸಿಬ್ಬಂದಿಗೆ ಬೆಂಬಲ ನೀಡಿದ್ದಾರೆ.ರಷ್ಯಾ ಯುದ್ಧನೌಕೆ (ಮಾಸ್ಕೊ ವರದಿ): ಸಿರಿಯಾ ಮೇಲೆ ಅಮೆರಿಕದ ಸೇನಾ ದಾಳಿಗೂ ಮುನ್ನವೇ ಆ ರಾಷ್ಟ್ರದಲ್ಲಿ ತನ್ನ ಇರುವಿಕೆ ತೋರ್ಪಡಿಸಲು ರಷ್ಯಾ ಯುದ್ಧನೌಕೆಗಳು ವಿಶೇಷ ಸರಕುಗಳ ಜೊತೆ ಡಮಾಸ್ಕಸ್‌ಗೆ ತೆರಳಿವೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಬಂಡುಕೋರರಿಗೆ ಅಮೆರಿಕ ತರಬೇತಿ (ವಾಷಿಂಗ್ಟನ್ ವರದಿ) :  ಪ್ರಸ್ತುತ ಜೋರ್ಡಾನ್‌ನಲ್ಲಿ ನಡೆಯುತ್ತಿರುವ ಸಿಐಎ ತರಬೇತಿಯನ್ನು ಸಿರಿಯಾಕ್ಕೂ ವಿಸ್ತರಿಸಿ, ಅಲ್ಲಿನ ಬಂಡುಕೋರರಿಗೆ ಅಮೆರಿಕದ ಸೇನಾ ತರಬೇತುದಾರರಿಂದ ಸಾಮರ್ಥ್ಯ ಹೆಚ್ಚಳದ ತರಬೇತಿ ನೀಡುವುದನ್ನು ಒಬಾಮ ಆಡಳಿತ ಪರಿಶೀಲಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ಸಿರಿಯಾ ಮೇಲೆ ದಾಳಿ ನಡೆಸುವ ಒಬಾಮ ಆಡಳಿತಕ್ಕೆ ಬೆಂಬಲ ಸೂಚಿಸುವ ನಿರ್ಣಯದ ಮೇಲೆ ಮತದಾನಕ್ಕೆ ಅಮೆರಿಕ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಆದರೆ ಶ್ವೇತಭವನ ಅಗತ್ಯ ಮತಗಳ ಕೊರತೆ ಎದುರಿಸುತ್ತಿರುವುದಾಗಿ ಸೆನೆಟರ್‌ಗಳು ನಂಬಿದ್ದಾರೆ.


ದಾಳಿಗೆ ಅಂತರರಾಷ್ಟ್ರೀಯ ಬೆಂಬಲ ಗಳಿಸಲು ಒಬಾಮ ಶತಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅಮೆರಿಕ ಸಂಸದರಿಂದ ಬೆಂಬಲ ಸಂಪಾದಿಸುವುದು ಕಷ್ಟ ಎಂದು ಮಾಧ್ಯಮ ವರದಿಗಳು ತಿಳಿಸಿವೆ.


ಟರ್ಕಿ ಬಿಗಿ ಭದ್ರತೆ (ಅಂಕಾರ ವರದಿ): ಸಿರಿಯಾ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜಿಸುವ ಮೂಲಕ ಟರ್ಕಿ ಸರ್ಕಾರವು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.ಪುಟಿನ್-ಒಬಾಮ ಭೇಟಿ

ಶೃಂಗಸಭೆಯಲ್ಲಿ ಭಾಗವಹಿಸಿರುವ ಅಮೆರಿಕ ಅಧ್ಯಕ್ಷ ಒಬಾಮ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಸಿರಿಯಾ ವಿಷಯದ ಬಗ್ಗೆ ಚರ್ಚಿಸಿದರು. ಆದರೆ, ಈ ಸಭೆಯಲ್ಲಿ ಯಾವುದೇ ನಿರ್ಣಯಕ್ಕೆ ಬರಲಾಗಲಿಲ್ಲ ಎಂದು ನಂತರ ಪುಟಿನ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry