ಒಮ್ಮತದ ಆಯ್ಕೆಗೆ ಕಾಂಗ್ರೆಸ್ ಕಸರತ್ತು

7

ಒಮ್ಮತದ ಆಯ್ಕೆಗೆ ಕಾಂಗ್ರೆಸ್ ಕಸರತ್ತು

Published:
Updated:

ಕಾರವಾರ: ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಶುಕ್ರವಾರ (ಅ. 5) ಇಲ್ಲಿಯ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯಲಿದೆ.ಅಧ್ಯಕ್ಷ ಸ್ಥಾನ ಹಿಂದುಳಿದ ~ಬ~ವರ್ಗಕ್ಕೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 36 ಸದಸ್ಯ ಬಲದ ಜಿ.ಪಂ.ಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.ಅಧ್ಯಕ್ಷ  ಸ್ಥಾನಕ್ಕೆ ಭಟ್ಕಳ ತಾಲ್ಲೂಕಿನ ಮಾವಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಲ್ಬರ್ಟ್ ಡಿಕೋಸ್ತಾ ಮತ್ತು ಹಳಿಯಾಳ ಅಂಬಿಕಾನಗರ ಕ್ಷೇತ್ರದ ಸದಸ್ಯ ಕೃಷ್ಣ ನಾರಾಯಣ ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಕಿ ಕ್ಷೇತ್ರದ ವನಿತಾ ನಾಯ್ಕ ಮತ್ತು  ಅಗಸೂರ ಕ್ಷೇತ್ರದ ಸರಸ್ವತಿ ಗೌಡ, ಮಿರ್ಜಾನ ಕ್ಷೇತ್ರದ ಮಹಾದೇವಿ ಗೌಡ ಮತ್ತು ಹಳದೀಪುರ ಕ್ಷೇತ್ರದ ಸರೋಜಾ ಪೂಜಾರಿ ಅವರ ನಡುವೆ ತೀವ್ರ ಪೈಪೋಟಿ ನಡೆದಿದೆ.ಅಧ್ಯಕ್ಷ ಸ್ಥಾನಕ್ಕೆ ಅಲ್ಬರ್ಟ್ ಡಿಕೋಸ್ತಾ ಅವರನ್ನೇ ಪರಿಗಣಿಸಬೇಕು ಎಂದು ದೆಹಲಿಯ ಕಾಂಗ್ರೆಸ್ ನಾಯಕರಿಂದ ಆದೇಶ ಬಂದಿದೆ. ಆದರೆ ಡಿಕೋಸ್ತಾ ಅವರನ್ನು ಮಾಡಿದರೆ ಪಕ್ಷದ ಶಾಸಕರೊಬ್ಬರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರಿಂದ ಪಕ್ಷದ ವರಿಷ್ಠರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಅತ್ತ ಕೇಂದ್ರದ ನಾಯಕರಿಂದ ಬಂದ ಆದೇಶವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇತ್ತ ಶಾಸಕರನ್ನೂ ವಿರೋಧ ಹಾಕಿಕೊಳ್ಳುವಂತಿಲ್ಲ. ಪಕ್ಷದ ನಾಯಕರ ಸ್ಥಿತಿ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತಾಗಿದೆ.ಇಬ್ಬರ ಜಗಳದಿಂದ ಮೂರನೇಯವರಿಗೆ ಲಾಭವಾಯಿತು ಎನ್ನುವಂತೆ ಶಾಸಕರ ಮತ್ತು ಜಿ.ಪಂ. ಸದಸ್ಯರ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಅಧ್ಯಕ್ಷ ಪಟ್ಟ ಅಂಬಿಕಾನಗರ ಕ್ಷೇತ್ರ ಸದಸ್ಯ ಕೃಷ್ಣ ಗೌಡ ಅವರಿಗೆ ಒಲಿಯುವ ಸಾಧ್ಯತೆ ನಿಚ್ಚಳವಾಗಿದೆ.ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ 1983ರಿಂದಲೂ ಪ್ರಮುಖ ಪಾತ್ರ ವಹಿಸುತ್ತಿದ್ದ ಪಕ್ಷದ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹಳಿಯಾಳದವರೇ ಆಗಿರುವುದು ಗೌಡ ಪ್ಲಸ್ ಪಾಯಿಂಟ್. ಕಳೆದ ಬಾರಿ ಉಪಾಧ್ಯಕ್ಷ ಸ್ಥಾನ ಅಂಕೋಲಾಕ್ಕೆ ನೀಡಿರುವ ಹಿನ್ನೆಲೆಯಲ್ಲಿ ಸರಸ್ವತಿ ಗೌಡ ಅವರಿಗೆ ಸಿಗುವ ಆದ್ಯತೆ ಕಡಿಮೆ.

ವನಿತಾ ನಾಯ್ಕ ಅವರು ಈಗಾಗಲೇ ಒಂದು ಬಾರಿ ಉಪಾಧ್ಯಕ್ಷ ಪಟ್ಟವನ್ನು ಅಲಂಕರಿಸಿದ್ದು ಪಕ್ಷದ ನಾಯಕರು ಅವರನ್ನು ಮತ್ತೆ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇದೆ ತಿಳಿದು ಬಂದಿದೆ.ಹಳದೀಪುರ ಕ್ಷೇತ್ರದ ಸರೋಜಾ ಪೂಜಾರಿ ಅಥವಾ ಮಿರ್ಜಾನ ಕ್ಷೇತ್ರದ ಮಹಾದೇವಿ ಗೌಡ ಅವರ ಹೆಸರನ್ನು ಪಕ್ಷದ ನಾಯಕರು ಅಂತಿಮಗೊಳಿಸುವ ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.ಸಭೆ: ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಇಲ್ಲಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜಿ.ಪಂ. ಸದಸ್ಯರ, ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಸಭೆ ನಡೆಯಿತು.ಪಕ್ಷದ ಹಿರಿಯ ನಾಯಕ ಆರ್.ವಿ.ದೇಶಪಾಂಡೆ, ವೀಕ್ಷಕಿ ಶಾಮಲಾ ಭಂಡಾರಿ, ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಸತೀಶ ಸೈಲ್, ರಮಾನಂದ ನಾಯಕ, ರಾಜೇಂದ್ರ ನಾಯಕ, ಮಾಜಿ ಶಾಸಕ ಕೆ.ಎಚ್.ಗೌಡ, ಪುರುಷೋತ್ತಮ ನಾಯ್ಕ ಮಾತನಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry