ಒಮ್ಮೆ ಒಬ್ಬರಿಗಷ್ಟೇ ಮಾತಿನ ಅವಕಾಶ

7
ಹೊಸ ಸದನದಲ್ಲಿ ನವೀನ ತಂತ್ರಜ್ಞಾನ

ಒಮ್ಮೆ ಒಬ್ಬರಿಗಷ್ಟೇ ಮಾತಿನ ಅವಕಾಶ

Published:
Updated:

ಸುವರ್ಣ ವಿಧಾನಸೌಧ, ಬೆಳಗಾವಿ : ಬೇಕೆಂದಾಗ ಎದ್ದು ಮೈಕ್ ಆನ್ ಮಾಡಿಕೊಂಡು ಮಾತನಾಡುತ್ತಿದ್ದ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಅದು ಸಾಧ್ಯ ಇಲ್ಲ. ಒಬ್ಬರು ಮಾತನಾಡುತ್ತಿದ್ದರೆ ಮತ್ತೊಬ್ಬರ ಮೈಕ್ ಆನ್ ಆಗುವುದೇ ಇಲ್ಲ. ಬದಲಿಗೆ ಕೂಗಿ ಕೂಗಿ ಗಂಟಲು ನೋಯಿಸಿಕೊಳ್ಳಬೇಕು...!ಇಂತಹ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಸದಾಗಿ ನಿರ್ಮಿಸಿರುವ ಸುವರ್ಣ ವಿಧಾನಸೌಧದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಭಾಂಗಣಗಳಲ್ಲಿ ಅಳವಡಿಸಲಾಗಿದೆ. ಸಂಸತ್ತಿನ ಉಭಯ ಸದನಗಳು, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ಡಿಜಿಟಲ್ ಕಾನ್ಫರೆನ್ಸ್ ಮತ್ತು ಎಲೆಕ್ಟ್ರಾನಿಕ್ ವೋಟಿಂಗ್ ಸಿಸ್ಟಮ್ ಇಲ್ಲಿಯೂ ಜಾರಿ ಮಾಡಲಾಗಿದೆ. ಕೊನೆ ಹಂತದ ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಮಾಡಲಾಯಿತು.ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಕಾನೂನು ಸಚಿವ ಎಸ್. ಸುರೇಶಕುಮಾರ್, ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಅವರು ಖುದ್ದು ಪರಿಶೀಲಿಸಿ, ಹೊಸ ವ್ಯವಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು.ಸದಸ್ಯರು ಬೇಕೆಂದಾಗ ತಮ್ಮ ಆಸನದ ಮುಂದಿನ ಸ್ವಿಚ್ ಆನ್ ಮಾಡಿಕೊಂಡು ಮಾತನಾಡುವ ವ್ಯವಸ್ಥೆ ವಿಧಾನಸೌಧದಲ್ಲಿ ಇದೆ. ಆದರೆ, ಇಲ್ಲಿ ಅಂತಹದ್ದಕ್ಕೆ ಅವಕಾಶ ಇಲ್ಲ. ಮಾತನಾಡಲು ಇಚ್ಛಿಸುವವರು ಮೊದಲು ತಮ್ಮ ಮುಂದಿನ ಬಟನ್ ಒತ್ತಿ, ಅನುಮತಿ ಪಡೆಯಬೇಕು. ಬಳಿಕ ಅವರಿಗೆ ಹಸಿರು ನಿಶಾನೆ ದೊರೆತ ನಂತರವೇ ಅವರ ಮೈಕ್ ಆನ್ ಆಗುವುದು. ಅದು ಆನ್ ಆಗುವವರೆಗೂ ಅವರ ಎಷ್ಟೇ ಕೂಗಿಕೊಂಡರೂ ಯಾರಿಗೂ ಕೇಳಿಸುವುದಿಲ್ಲ.ಎಲ್ಲರೂ ಎದ್ದು, ಎಲ್ಲ ಮೈಕ್ ಚಾಲೂ ಮಾಡಿಕೊಂಡು ಕೂಗಾಡುವುದಕ್ಕೆ ಇದರಲ್ಲಿ ಅವಕಾಶ ಇಲ್ಲ. ಎಲ್ಲವನ್ನೂ ಸ್ಪೀಕರ್ ಅವರ ಟೇಬಲ್ ಮೇಲೆ ಅಳವಡಿಸಿರುವ ಕಂಪ್ಯೂಟರ್ ಮೂಲಕ ನಿಯಂತ್ರಿಸಬಹುದು. ಸ್ಪೀಕರ್ ಅವರ ನೇರ ನಿಯಂತ್ರಣಕ್ಕೆ ಎಲ್ಲವೂ ಒಳಪಡುವ ಹಾಗೆ ಮಾಡಲಾಗಿದೆ ಎಂದು ಈ ವ್ಯವಸ್ಥೆಯ ಪೂರ್ಣ ಉಸ್ತುವಾರಿ ಹೊತ್ತಿರುವ ದೆಹಲಿಯ ಎಲ್ಜಿನ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಪ್ರತಿನಿಧಿ ಎಚ್.ಡಿ.ಜೋಷಿ ವಿವರಿಸಿದರು.ಮತ್ತೊಂದು ವಿಶೇಷದ ಸಂಗತಿ ಎಂದರೆ, ಮೈಕ್ ಆನ್ ಆದ ತಕ್ಷಣ ಅತ್ತ ಕಡೆ ಸಿ.ಸಿ. ಕ್ಯಾಮೆರಾ ತನ್ನಿಂತಾನೆ ತಿರುಗುತ್ತದೆ. ಸದಸ್ಯರು ಭಾಷಣ ಆರಂಭಿಸುತ್ತಿದ್ದಂತೆ ಅವರ ಮಾತು ಮತ್ತು ವಿಡಿಯೋ ದೃಶ್ಯಗಳು ದಾಖಲಾಗುತ್ತವೆ. ಇಂತಹ ಒಟ್ಟು ನಾಲ್ಕು ಕ್ಯಾಮೆರಾಗಳನ್ನು ಸಭಾಂಗಣದ ಒಳಗೆ ಅಳವಡಿಸಲಾಗಿದೆ. ನಾಲ್ಕು ಬೃಹತ್ ಗಾತ್ರದ ಎಲ್‌ಸಿಡಿ ಟಿ.ವಿ.ಗಳನ್ನೂ ಅಳವಡಿಸಿದ್ದು, ಅದರಲ್ಲಿ ಕಲಾಪದ ನೇರ ಪ್ರಸಾರ ಇರುತ್ತದೆ.ಇನ್ನು ಮತದಾನ ಸುಲಭ: ಹೊಸ ವ್ಯವಸ್ಥೆಯಿಂದಾಗಿ ಮತ ಎಣಿಕೆ ಮತ್ತಷ್ಟು ಸುಲಭವಾಗಲಿದೆ. ಅವಿಶ್ವಾಸ ನಿರ್ಣಯ ಅಥವಾ ಯಾವುದೇ ವಿಷಯವನ್ನು ಸದನದಲ್ಲಿ ಮತಕ್ಕೆ ಹಾಕಬೇಕು ಎಂದಾಗ ಶಾಸಕರ ತಲೆ ಎಣಿಸಬೇಕಾಗಿತ್ತು. ಹೊಸ ವ್ಯವಸ್ಥೆಯಲ್ಲಿ ಅಂತಹದ್ದಕ್ಕೆ ಅವಕಾಶ ಇಲ್ಲ. ತ್ವರಿತವಾಗಿ ಎಲ್ಲವೂ ಮುಗಿಯುವ ಹಾಗೆ ಮಾಡಲಾಗಿದೆ.ಹೇಗಾಗುತ್ತದೆ?: ಪ್ರತಿಯೊಬ್ಬ ಸದಸ್ಯರೂ ಎ.ಟಿ.ಎಂ ಕಾರ್ಡ್ ಮಾದರಿಯ ಗುರುತಿನ ಚೀಟಿಯನ್ನು ತಮ್ಮ ಆಸನದ ಮುಂದಿನ ನಿರ್ದಿಷ್ಟ ಜಾಗದಲ್ಲಿ ಉಜ್ಜಬೇಕು. ಹಾಗೆ ಮಾಡಿದ ಬಳಿಕ ನಿಣರ್ಯದ ಪರ ಅಥವಾ ವಿರುದ್ಧ ಮತ ಹಾಕುವುದಕ್ಕೆ ಬಟನ್ ಒತ್ತಬೇಕಾಗುತ್ತದೆ. ಯಾವುದಾದರೊಂದು ಬಟನ್ ಒತ್ತಿದ ತಕ್ಷಣವೇ ಅದು ಕ್ಷಣ ಮಾತ್ರದಲ್ಲಿ ಲೆಕ್ಕ ಹಾಕಿ ಫಲಿತಾಂಶ ನೀಡುತ್ತದೆ. ಆ ಮೂಲಕ ಮತಕ್ಕೆ ಹಾಕಿದ ನಿರ್ಣಯ ಏನಾಯಿತು ಎಂಬುದು ಗೊತ್ತಾಗಲಿದೆ.ಭಾಷಾಂತರ: ಹೊಸ ವ್ಯವಸ್ಥೆಯಲ್ಲಿ ಭಾಷಾಂತರಕ್ಕೂ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಮಾತನಾಡಲು ಬಾರದ ಸದಸ್ಯರು ತಮ್ಮ ಮಾತೃ ಭಾಷೆಯಲ್ಲಿ ಮಾತನಾಡಿದರೂ ಅದನ್ನು ಕನ್ನಡಕ್ಕೆ ಅನುವಾದಿಸುವ ವ್ಯವಸ್ಥೆ ಇದೆ. ಸದ್ಯಕ್ಕೆ ಈ ಅನುಕೂಲ ಲಭ್ಯ ಇಲ್ಲ. ಅದು ಪೂರ್ಣ ಪ್ರಮಾಣದಲ್ಲಿ ಜಾರಿ ಆಗುವುದಕ್ಕೆ ಇನ್ನೂ ಸ್ವಲ್ಪ ದಿನ ಹಿಡಿಯುತ್ತದೆ ಎನ್ನುತ್ತಾರೆ ಜೋಷಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry