ಬುಧವಾರ, ಮೇ 18, 2022
24 °C

ಒರಾಯನ್‌ನಲ್ಲಿ ಸಮರ್ಥನಂ ಸಂಜೆ

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಒರಾಯನ್ ಮಾಲ್ ಸಂಜೆ ವಿಶೇಷ ಕಾರ್ಯಕ್ರಮವೊಂದಕ್ಕೆ ಸಜ್ಜಾಗಿತ್ತು. ತೆರೆದ ಆವರಣದಲ್ಲಿಯೇ ವೇದಿಕೆ ರೂಪಿಸಲಾಗಿತ್ತು. ಆದರೆ ಇಲ್ಲಿ ಏನು ನಡೆಯುತ್ತದೆ ಎಂದು ಯಾರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. ನಗರದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮಗಳು ಸಹಜ, ಆದರೆ ಇಲ್ಲಿ ವಿಶೇಷವೇನಿದೆ ಎಂದು ಹುಡುಕುತ್ತಿದ್ದವರಿಗೆ ಆಶ್ಚರ್ಯ ಕಾದಿತ್ತು. `ಸಮರ್ಥನಂ~ ಟ್ರಸ್ಟ್‌ನ ಅಂಗವಿಕಲ ಮಕ್ಕಳು ಇಲ್ಲಿ ನೃತ್ಯ ಪ್ರದರ್ಶಿಸಲಿದ್ದಾರೆ ಎಂದು ವೇದಿಕೆ ಮೇಲಿಂದ ಬಂದ ಧ್ವನಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು.ದೈಹಿಕ ನ್ಯೂನತೆ ಮೆಟ್ಟಿನಿಂತು ಸಮರ್ಥರಾಗುವತ್ತ ಹೆಜ್ಜೆ ಹಾಕುತ್ತೇವೆ ಎಂಬ ಆತ್ಮವಿಶ್ವಾಸ ಹೊತ್ತು ಮಾತನಾಡಿದ `ಸಮರ್ಥನಂ~ ಸಂಸ್ಥಾಪಕ ಜಿ. ಕೆ. ಮಹಾಂತೇಶ್, `ನಾನು ಜೀವನದೊಂದಿಗೆ ಸೆಣೆಸಾಡಿದ ರೀತಿ ಈ ಸಂಸ್ಥೆ ಸ್ಥಾಪಿಸಲು ಪ್ರೇರೇಪಿಸಿತು, ನನ್ನಂತೆ ಇನ್ನೂ ಹಲವರಿಗೆ ನೆರವಾಗಲಿ ಎಂಬ ಕಾರಣಕ್ಕೆ ಸಮರ್ಥನಂ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ನಡೆಸುತ್ತಿದ್ದೇವೆ.

ಸಂಸ್ಥೆಯ ಸಾಂಸ್ಕೃತಿಕ ಅಂಗ `ಸುನಾದ~ ಈ ಸಂಗೀತ, ನೃತ್ಯ ಕಾರ್ಯಕ್ರಮದ ರೂವಾರಿ. ನಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ಲೋಕಕ್ಕೆ ತೋರಿಸುವ ಅಭಿಲಾಷೆ ನಮ್ಮದು~ ಎಂಬ ಮಾತು ಕೇಳಿ ಅಲ್ಲಿ ಬಂದು ನೆರೆದಿದ್ದವರೆಲ್ಲಾ ಮೌನಕ್ಕೆ ಶರಣಾಗಿದ್ದರು.ಮೊದಲು ಅಂಧ ಕಲಾವಿದೆ ಭಾನುಮತಿ ಅವರ ವಿನಾಯಕನ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಗೀತಕ್ಕೆ ನೋವನ್ನು ಮರೆಸುವ ವಿಶೇಷ ಶಕ್ತಿಯಿದೆ ಎಂಬುದನ್ನು ಆಕೆಯ ಹಾಡು ಅಲ್ಲಿ ನಿರೂಪಿಸಿತು.ಇವರು ಹೇಗೆ ನೃತ್ಯ ಪ್ರದರ್ಶಿಸುತ್ತಾರೆ ಎಂಬ ಕುತೂಹಲ ಹೊತ್ತೇ ಇಲ್ಲಿಗೆ ಬಂದ ಜನರನ್ನು ಅಚ್ಚರಿಗೊಳಿಸಿದ್ದು ಆರು ಜನರ ತಂಡದ ನೃತ್ಯ ಪ್ರದರ್ಶನ. ಆರು ಜನರಲ್ಲಿ ಮೂವರು ಅಂಧರು. ಇನ್ನು ಇಬ್ಬರು ಮಾತು ಬರದವರು ಮತ್ತೊಬ್ಬರು ಕಿವಿ ಕೇಳದವರು.

ಆದರೆ ಸಾಮಾನ್ಯ ಜನರಿಗೂ ಕಷ್ಟವೆನಿಸುವ ನೃತ್ಯ ಕಲೆಯನ್ನು ಅತಿ ಸರಳವಾಗಿ ಹೆಜ್ಜೆಗಳ ಲೆಕ್ಕಾಚಾರದೊಂದಿಗೆ ಪ್ರದರ್ಶಿಸಿದ್ದು ಎಲ್ಲರೂ ಬಿಡುಗಣ್ಣಾಗುವಂತೆ ಮಾಡಿತ್ತು. ಎಲ್ಲೂ ತಾಳ ತಪ್ಪದೆ, ಏಕಾಗ್ರತೆ ಜೊತೆಗೆ ಭಾವವನ್ನು ತಮಗೆ ತಿಳಿದ ರೀತಿಯಲ್ಲಿ ಅಭಿವ್ಯಕ್ತಿ ಪಡಿಸುತ್ತಿದ್ದುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.ಮೊದಲು ವೇದಿಕೆಯ ವಿಸ್ತಾರವನ್ನು ಅಂದಾಜು ಮಾಡಿಕೊಂಡು ನಂತರ ಗಣನಾಯಕನ ಹಾಡಿಗೆ ಹೆಜ್ಜೆ ಕಟ್ಟಿದ್ದರು. ಎಲ್ಲಿಯೂ ಅಂದಾಜು ತಪ್ಪದಂತೆ ನೋಡಿಕೊಂಡ ಅವರ ರೀತಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶಾಪಿಂಗ್ ನೆಪದಲ್ಲಿ ಮಾಲ್‌ಗೆ ಭೇಟಿ ನೀಡಿದವರೆಲ್ಲಾ ಅಲ್ಲಿ ಸೇರಿದ್ದರು.ಪುಟಾಣಿಗಳಂತೂ ಮಳೆ ಬಂದಿದ್ದನ್ನೂ ಗಮನಿಸದೆ ನೆಲದ ಮೇಲೆಯೇ ಬೆರಗುಗಣ್ಣಿನಿಂದ ನೋಡುತ್ತಾ ಕೂತರು.

ನಂತರ ಲಿಂಗರಾಜು ಎಂಬ ಅಂಧ ಯುವಕ ಶಿವಶಂಭೋ ಹಾಡಿಗೆ ಏಕನೃತ್ಯ ಪ್ರದರ್ಶನ ನೀಡಿದರು. ಮತ್ತೆ ಅದೇ ತಂಡ ಶ್ರೀಮನ್ನಾರಾಯಣ ಎಂಬ ಶಾಸ್ತ್ರೀಯ ಹಾಡಿಗೆ ಹೆಜ್ಜೆ ಬೆರೆಸಿತ್ತು.ನೃತ್ಯದೊಂದಿಗೆ ಸಂಗೀತದ ಸುನಾದವೂ ಸೇರಲಿ ಎಂದು ಜನಕ್ ಎಂಬಾತ ಗಿಟಾರ್‌ನೊಂದಿಗೆ ಹಿಂದಿ ಹಾಡನ್ನು ಹಾಡಿದರು. ತಮಗರಿವಿಲ್ಲದಂತೆಯೇ ಪ್ರೇಕ್ಷಕರ ಕಾಲುಗಳು ಆತನ ಸಂಗೀತಕ್ಕೆ ತಾಳ ಹಾಕಲು ಶುರುವಿಟ್ಟುಕೊಂಡಿತ್ತು.ಕೊನೆಗೆ ದೀಪದ ನೃತ್ಯ ನಡೆಯಿತು. ಕತ್ತಲಲ್ಲಿ ಬೆಳಕು ಹುಡುಕುವ ನಮಗೆ ನೀವೂ ಜೊತೆಯಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಈ ಹಾಡಿನ ಮೂಲಕ ಅನಾವರಣಗೊಂಡಿತು. ಕೊನೆಗೆ ಭಾನುಮತಿ ಮತ್ತು ಜನಕ್ ಅವರು ಮೂರು ಭಾಷೆಗಳ ಹಾಡನ್ನು ಗಿಟಾರ್ ವಾದನದೊಂದಿಗೆ ಹಾಡಿದರು. ಸುನಾದ ತಂಡದಲ್ಲಿ ನೃತ್ಯ ಪ್ರದರ್ಶನ ನೀಡಿದ ಮಾನಸ, ರೂಪ, ಶ್ರೀದೇವಿ, ಸುಮ, ಸುಮ, ಲಿಂಗರಾಜು ಎಲ್ಲರ ಮುಖದಲ್ಲೂ ನಗು ಅರಳಿತು.`ಎಲ್ಲೋ ಹುಡುಕಿದೆ ಇಲ್ಲದ ದೇವರ~ ಎಂಬ ಹಾಡನ್ನು ವಿಭಿನ್ನವಾಗಿ ಗಿಟಾರ್ ವಾದನದೊಂದಿಗೆ ಹಾಡಿದ್ದು ಎಲ್ಲರ ಮನದಲ್ಲೂ ಅಚ್ಚೊತ್ತಿತ್ತು. ವಿಶೇಷ ಸಾಮರ್ಥ್ಯವುಳ್ಳ ತಂಡದ ನೃತ್ಯ ಕಣ್ಣಿಗೆ ತಂಪೆರೆದರೆ ಕಾರ್ಯಕ್ರಮದ ಮಧ್ಯೆ ಸುರಿದ ಮಳೆ ಎಲ್ಲರ ಮೈ ಮನಸ್ಸನ್ನು ಪ್ರಫುಲ್ಲಗೊಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.