ಸೋಮವಾರ, ಮಾರ್ಚ್ 8, 2021
24 °C
‘ಬಿ’ ಮಾದರಿಯ ಪರೀಕ್ಷೆಯಲ್ಲಿ ದೃಢಪಟ್ಟ ಉದ್ದೀಪನಾ ಮದ್ದು ಸೇವನೆ

ಒಲಿಂಪಿಕ್ಸ್‌ಗೆ ಇಂದರ್‌ಜೀತ್ ಇಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್‌ಗೆ ಇಂದರ್‌ಜೀತ್ ಇಲ್ಲ?

ನವದೆಹಲಿ (ಪಿಟಿಐ):  ಶಾಟ್‌ಪಟ್ ಎಸೆತದ ಸ್ವರ್ಧಿ ಇಂದರ್‌ಜೀತ್ ಸಿಂಗ್ ಅವರು ಉದ್ದೀಪನಾ ಮದ್ದು ಸೇವನೆ ಮಾಡಿರುವುದು ಬಿ ಮಾದರಿಯಲ್ಲಿ ದೃಢ ಪಟ್ಟಿದೆ. ಇದರೊಂದಿಗೆ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವ ಕಾಶ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.ಕುಸ್ತಿಪಟು ನರಸಿಂಗ್ ಯಾದವ್ ಅವರು ನಾಡಾದಿಂದ ದೋಷಮುಕ್ತ ರಾಗಿ ಹೊರಬಿದ್ದ ಸಂತಸದ ಸುದ್ದಿ ಹೊರಬಿದ್ದ 24 ಗಂಟೆಗಳಿಗೂ ಮುನ್ನ ಇಂದರ್‌ ಜೀತ್ ಅವರ ಪ್ರಕರಣ  ಹೊರಬಿದ್ದಿದೆ. ಇದರಿಂದ ಭಾರತದ ಕ್ರೀಡಾ ವಲಯ ಆಘಾತಕ್ಕೊಳಗಾಗಿದೆ.28 ವರ್ಷದ ಇಂದರ್‌ಜೀತ್ ಅವರು ಜೂನ್ 22ರಂದು  ಎ  ಪರೀಕ್ಷೆ ಗೆ ನೀಡಿದ್ದ ಮೂತ್ರದ ಮಾದರಿಯಲ್ಲಿ  ನಿಷೇಧಿತ ಆ್ಯಂಡ್ರೊಸ್ಟೆರೊನ್ ಸ್ಟೆರಾಯ್ಡ್‌ ಅಂಶಗಳು ಪತ್ತೆಯಾಗಿದ್ದವು. ನಂತರ ಇಂದರ್ ಜೀತ್ ಅವರ ಮಾದರಿಯನ್ನು ಬಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.‘ಇಂದರ್‌ಜೀತ್ ಅವರ ಮೇಲೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ. ಎರಡನೇ ನೋಟಿಸ್ ಕೂಡ ನೀಡಲಾಗಿದೆ. ನಾಡಾ ಶಿಸ್ತು ಸಮಿತಿಯ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸುವ ಅವಕಾಶವನ್ನು ಅವರಿಗೆ ಕೊಡಲಾಗಿದೆ’ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಮೂಲದ ಇಂದರ್‌ಜೀತ್ 2014ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.ಎ ಮಾದರಿಯಲ್ಲಿ ಸಿಕ್ಕಿಬಿದ್ದ ನಂತರ ಇಂದರ್‌ಜೀತ್ ಅವರು ಬಿ ಪರೀಕ್ಷೆಗಾಗಿ ಮನವಿ ಸಲ್ಲಿಸಿದ್ದರು. ನಂತರ ಪರೀಕ್ಷೆಗೆ ಮೂತ್ರ ಮತ್ತು ರಕ್ತದ ಮಾದರಿಯನ್ನು  ನೀಡಿದ್ದರು. ಅದರ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಏಷ್ಯನ್ ಅಥ್ಲೆಟಿಕ್ಸ್‌ನ ಚಾಂಪಿಯನ್ ಆಗಿದ್ದ ರು. ಆದರೆ ಇದೀಗ ವಾಡಾ ನಿಯಮದ ಪ್ರಕಾರ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.  ಇದರಿಂದಾಗಿ ಅವರು ಒಲಿಂಪಿಕ್ಸ್‌ ಅವಕಾಶವನ್ನೂ ಕಳೆದುಕೊಳ್ಳಲಿದ್ದಾರೆ.‘ನನ್ನ ವಿರುದ್ಧ ದೊಡ್ಡ ಪಿತೂರಿ ನಡೆದಿದೆ. ನಾನು ಕೊಟ್ಟಿರುವ ಮಾದರಿಯನ್ನು ಬದಲು ಮಾಡಲಾಗಿದೆ.  ತನ್ನ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಪದಾರ್ಥವನ್ನು ಒಬ್ಬ ಕ್ರೀಡಾಪಟು ಎಂದಿಗೂ ಸೇವಿಸುವುದಿಲ್ಲ’ ಎಂದು ಇಂದರ್‌ಜೀತ್ ಹೇಳಿದ್ದಾರೆ.ಇಂದರ್‌ಜೀತ್ ಅವರು ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿರಲಿಲ್ಲ. ತಮ್ಮ ಖಾಸಗಿ ಕೋಚ್‌ ಮೂಲಕ ಅವರು ತರಬೇತಿ ಪಡೆಯುತ್ತಿದ್ದರು. ಅಮೆರಿಕದಲ್ಲಿ ಅವರೂ ವಿಶೇಷ ತರಬೇತಿ ಪಡೆದಿದ್ದಾರೆ. ‘ಹೋದ ವರ್ಷ ಹಲವಾರು ಬಾರಿ ಮದ್ದು ಪರೀಕ್ಷೆಗೆ ಒಳಗಾಗಿದ್ದೇನೆ. ಬಹಳಷ್ಟು ಸ್ಪರ್ಧೆಗಳಲ್ಲಿ ಪರೀಕ್ಷೆ ನೀಡಿದ್ದೇನೆ. ಆಗ ಯಾವುದೇ ಅಂಶ ಪತ್ತೆಯಾಗಿರಲಿಲ್ಲ. ಆದರೆ ನನ್ನ ಬಾಯಿ ಮುಚ್ಚಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಈ ದೇಶದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಇಂದರ್‌ಜೀತ್ ಆರೋಪಿಸಿದ್ದಾರೆ. ಭಾರತದಿಂದ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಅಥ್ಲೀಟ್‌ಗಳಲ್ಲಿ ಇಂದರ್‌ಜೀತ್ ಮೊದಲನೇಯವರಾಗಿದ್ದರು. ಅವರಿಗೆ ಕೇಂದ್ರ ಕ್ರೀಡಾ ಸಚಿವಾಲಯದ ಟಾಪ್ ಯೋಜನೆ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ)ಮೂಲಕ ಪ್ರೋತ್ಸಾಹಧನವನ್ನೂ ನೀಡಲಾಗಿತ್ತು.

‘ನಾಡಾ ತೀರ್ಪು ಮರುಪರಿಶೀಲನೆ’

ನವದೆಹಲಿ (ಪಿಟಿಐ):  ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ನರಸಿಂಗ್ ಯಾದವ್ ಅವರನ್ನು ನಿರ್ದೋಷಿ ಎಂದು ನಾಡಾ ನೀಡಿರುವ ತೀರ್ಪನ್ನು ಮರುಪರಿಶೀಲಿಸುವುದಾಗಿ ವಾಡಾ (ವಿಶ್ವ ಉದ್ದೀಪನಾ ಮದ್ದು ತಡೆ ಘಟಕ) ತಿಳಿಸಿದೆ.‘ನರಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ದಾಖಲೆಗಳನ್ನೂ ಸಲ್ಲಿಸುವಂತೆ ನಾಡಾಗೆ ಸೂಚಿಸಲಾಗಿದೆ. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮಾಹಿತಿ ನೀಡುತ್ತೇವೆ’ ಎಂದು ವಾಡಾ ಸಂಚಾಲಕ ಮ್ಯಾಗಿ ಡುರಾಂಡ್ ತಿಳಿಸಿದ್ದಾರೆ. ನಾಡಾ ತೀರ್ಪು ಪ್ರಶ್ನಿಸಿ ಕ್ರೀಡಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಅವಕಾಶ ವಾಡಾಗೆ ಇದೆ. ಒಂದು ವೇಳೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ನರಸಿಂಗ್ ಯಾದವ್ ಅವರು ರಿಯೊಗೆ ತೆರಳುವ ಹಸಿರು ನಿಶಾನೆಗೆ ಮತ್ತಷ್ಟು ಸಮಯ ಕಾಯಬೇಕಾಗುತ್ತದೆ.‘ನರಸಿಂಗ್ ಯಾದವ್ ಪ್ರಕರಣಕ್ಕೆ ಸಂಬಂಧ ಪಟ್ಟ ಸಂಘಟನೆ, ವ್ಯಕ್ತಿಗಳು (ವಾಡಾ ಸೇರಿದಂತೆ ) ನಾಡಾ ತೀರ್ಪು ಪ್ರಶ್ನಿಸಿ ಕ್ರೀಡಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು; ಎಂದು ನಾಡಾ ಮಹಾನಿರ್ದೇಶಕ ನವೀನ್ ಅಗರವಾಲ್ ಹೇಳಿದ್ದಾರೆ.‘ನಾಡಾ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಮತ್ತು ವಿಚಾರಣೆ ನಡೆಸಿದ ನಂತರವೇ ತೀರ್ಪು ನೀಡಿದೆ. ನರಸಿಂಗ್ ಯಾದವ್ ಅವರು ಪಿತೂರಿಗೆ ಬಲಿಪಶುವಾಗಿರುವುದು ಸಾಬೀತಾಗಿದೆ. ವಾಡದ 10.4 ನಿಯಮದ ಪ್ರಕಾರ ಅವರ ಪರವಾಗಿ ತೀರ್ಪು ನೀಡಲಾಗಿದೆ’ ಎಂದು ಅಗರವಾಲ್ ತಿಳಿಸಿದ್ದಾರೆ.

ಹಾಕಿ ಅಭ್ಯಾಸ ಪಂದ್ಯ: ಭಾರತಕ್ಕೆ ಗೆಲುವು

ಆಕಾಶ್‌ದೀಪ್ ಮತ್ತು ರೂಪಿಂದರ್ ಪಾಲ್ ಸಿಂಗ್ ಅವರ ಅಮೋಘ ಆಟದ ನೆರವಿನಿಂದ ಭಾರತದ ಹಾಕಿ ತಂಡವು ಮಂಗಳವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ  ಜಯಿಸಿತು.ಐದನೇ ಶ್ರೇಯಾಂಕದ ಭಾರತ ತಂಡವು 2–1 ಗೋಲುಗಳಿಂದ ಸ್ಪೇನ್ ತಂಡವನ್ನು ಹಣಿಯಿತು. ಪಿ.ಅರ್. ಶ್ರೀಜೇಸ್ ನಾಯಕತ್ವದ ತಂಡವು ಹೋದ ವಾರ ಮ್ಯಾಡ್ರಿಡ್‌ನಲ್ಲಿ ಸ್ಪೇನ್ ವಿರುದ್ಧ ಸೋಲನುಭವಿಸಿತ್ತು.  ಆದರೆ ಈ ಪಂದ್ಯದಲ್ಲಿ ಸಂಘಟಿತ ಹೋರಾಟ ಮಾಡಿತು. ಆಕಾಶ್‌ದೀಪ್ ಫೀಲ್ಡ್‌ ಗೋಲ್ ಹೊಡೆದರು. ರೂಪಿಂದರ್ ಪಾಲ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್‌ ಅನ್ನು ಗೋಲಿನಲ್ಲಿ ಪರಿವರ್ತಿಸಿದರು.ಭಾರತ ತಂಡವು ಶನಿವಾರ ಇನ್ನೊಂದು ಅಭ್ಯಾಸ ಪಂದ್ಯ ಆಡಲಿದೆ. ಐರ್ಲೆಂಡ್ ತಂಡವನ್ನು ಎದುರಿಸಲಿದೆ. ‘ಸ್ಪೇನ್‌ನಲ್ಲಿ ಬಿಸಿಲು ಹೆಚ್ಚಾಗಿತ್ತು. ಆದ್ದರಿಂದ ನಮ್ಮ ಆಟದ ಮೇಲೆ ಪರಿಣಾಮ ಬೀರಿತ್ತು. ಇಂದಿನ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿದೆ’ ಎಂದು ಶ್ರೀಜೇಶ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.