ಒಲಿಂಪಿಕ್ಸ್‌ಗೆ ತಂಡ: ಡಬಲ್ಸ್‌ನಲ್ಲಿ ಪೇಸ್ ಜೊತೆ ಭೂಪತಿ ಆಡಬೇಕು

7

ಒಲಿಂಪಿಕ್ಸ್‌ಗೆ ತಂಡ: ಡಬಲ್ಸ್‌ನಲ್ಲಿ ಪೇಸ್ ಜೊತೆ ಭೂಪತಿ ಆಡಬೇಕು

Published:
Updated:
ಒಲಿಂಪಿಕ್ಸ್‌ಗೆ ತಂಡ: ಡಬಲ್ಸ್‌ನಲ್ಲಿ ಪೇಸ್ ಜೊತೆ ಭೂಪತಿ ಆಡಬೇಕು

ಬೆಂಗಳೂರು: `ಯಾವುದೇ ಕಾರಣಕ್ಕೆ ಮುಂದೆಂದೂ ಜೊತೆಯಾಗಿ ಆಡುವುದಿಲ್ಲ~ ಎಂದು ಖಡಕ್ಕಾಗಿ ಹೇಳಿದ್ದ ಹೆಸರಾಂತ ಟೆನಿಸ್ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರನ್ನೇ ಲಂಡನ್ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಆಯ್ಕೆ ಮಾಡಿದೆ.ಅಷ್ಟು ಮಾತ್ರವಲ್ಲದೇ, ತಮ್ಮ ನಿರ್ಧಾರಕ್ಕೆ ವಿರುದ್ಧವಾಗಿ ನಡೆದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಅನಿಲ್ ಖನ್ನಾ ಶುಕ್ರವಾರ ಉದ್ಯಾನ ನಗರಿಯ ಏಟ್ರಿಯಾ ಹೋಟೆಲ್‌ನಲ್ಲಿ ನಡೆದ ರಾಷ್ಟ್ರೀಯ ಆಯ್ಕೆ ಸಮಿತಿ ಸಭೆ ಬಳಿಕ ಹೇಳಿದರು.ಪೇಸ್ ಜೊತೆ ಆಡಲು ಭೂಪತಿಗೆ ಇಷ್ಟವಿಲ್ಲದಿದ್ದರೂ ಈ ನಿರ್ಧಾರ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಆಟಗಾರರೇ ತಮ್ಮನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅವಕಾಶವಿಲ್ಲ. ಆಟಗಾರನ್ನು ಆಯ್ಕೆ ಮಾಡಲು ನಾವು ಸಮಿತಿ ಹೊಂದಿದ್ದೇವೆ. ತರಬೇತಿಗಾಗಿ ಅವರು ಸರ್ಕಾರದಿಂದ ಪ್ರತಿ ತಿಂಗಳು 33 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಹಾಗಾಗಿ ಆಡುವುದಿಲ್ಲ ಎಂದು ಅವರು ಹೇಳಲು ಸಾಧ್ಯವೇ ಇಲ್ಲ. ಆದರೆ ಭೂಪತಿ ಹೇಳಿಕೆ ಭಾವನಾತ್ಮಕವಾದುದು~ ಎಂದರು.ವೈಮನಸ್ಸಿನಿಂದಾಗಿ ದೂರ ಉಳಿದಿರುವ ಪೇಸ್ ಮತ್ತು ಮಹೇಶ್, ಟೆನಿಸ್ ಸಂಸ್ಥೆಯ ಈ ನಿರ್ಧಾರದಿಂದ ಒಟ್ಟಿಗೆ ಆಡಲೇಬೇಕಾದ ಅನಿವಾರ್ಯ ಎದುರಾಗಿದೆ. ಆದರೆ ಏಳು ತಿಂಗಳಿನಿಂದ ಜೊತೆಯಾಗಿ ಆಡದೇ ಹಾಗೂ ಮಾತುಕತೆಯೂ ಇಲ್ಲದೆ ಉಳಿದಿರುವ ಪೇಸ್ ಹಾಗೂ ಭೂಪತಿ ಒಲಿಂಪಿಕ್ಸ್ ನಲ್ಲಿ ಯಾವ ರೀತಿಯ ಪ್ರದರ್ಶನ ತೋರಬಹುದು ಎಂಬ ಸಂದೇಹವನ್ನು ಕೆಲ ಮಾಜಿ ಟೆನಿಸ್ ಆಟಗಾರರು ವ್ಯಕ್ತಪಡಿಸಿದ್ದಾರೆ.`ಡಬಲ್ಸ್‌ನಲ್ಲಿ ಆಡಲು ಬೋಪಣ್ಣ ಹಾಗೂ ನನ್ನನ್ನು ಪರಿಗಣಿಸಬೇಕು~ ಎಂದು ಆಯ್ಕೆ ಸಭೆಗೂ ಮುನ್ನ ಸಂಸ್ಥೆಗೆ ಬರೆದಿದ್ದ ಇ-ಮೇಲ್‌ನಲ್ಲಿ ಭೂಪತಿ ತಿಳಿಸಿದ್ದರು ಎನ್ನಲಾಗಿದೆ. ಪೇಸ್ ಜೊತೆ ಆಡಲು ಬೋಪಣ್ಣ ಕೂಡ ವಿರೋಧ ವ್ಯಕ್ತಪಡಿಸ್ದ್ದಿದರು ಎನ್ನಲಾಗಿದೆ. ಆದರೆ ಇದನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ. ಎಐಟಿಎನ ಈ ನಿರ್ಧಾರದಿಂದ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕದ ಬೋಪಣ್ಣ ಅವರ ಕನಸು ಭಗ್ನಗೊಂಡಿತು.ಡಬಲ್ಸ್‌ನಲ್ಲಿ ಪಾಲ್ಗೊಳ್ಳಲು ಎರಡು ತಂಡಗಳನ್ನು ಕಳುಹಿಸಲು ಅವಕಾಶವಿದೆ. ಆದರೆ ಕೇವಲ ಒಂದು ತಂಡ ಕಳುಹಿಸಲು ಮಾತ್ರ ಆಯ್ಕೆದಾರರು ತೀರ್ಮಾನ ಕೈಗೊಂಡಿದ್ದಾರೆ. `ಇತ್ತೀಚೆಗಿನ ಪ್ರದರ್ಶನ ನೋಡಿ ನಾವು ತಂಡ ಆಯ್ಕೆ ಮಾಡಿದ್ದೇವೆ. ಭೂಪತಿ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಪೇಸ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಡಬಲ್ಸ್ ಚಾಂಪಿಯನ್ ಆಗಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಇವರಿಗಿದೆ. ತಮ್ಮ ಅಹಂಭಾವ ಬಿಟ್ಟು ದೇಶಕ್ಕಾಗಿ ಇವರು ಒಂದುಗೂಡಿ ಆಡಬೇಕು~ ಎಂದು ಖನ್ನಾ ಸ್ಪಷ್ಟಪಡಿಸಿದರು.ವೈಲ್ಡ್‌ಕಾರ್ಡ್ ಪ್ರವೇಶಕ್ಕಾಗಿ ಪತ್ರ: ಮಿಶ್ರ ಡಬಲ್ಸ್ ತಂಡದ ಆಯ್ಕೆ ಸಂಬಂಧ ಪ್ರತಿಕ್ರಿಯಿಸಿದ ಖನ್ನಾ, `ಸಾನಿಯಾ ಮಿರ್ಜಾ ಅವರಿಗೆ ನೇರ ಪ್ರವೇಶ ಸಿಕ್ಕಿಲ್ಲ. ಹಾಗಾಗಿ ನಾವು ವೈಲ್ಡ್ ಕಾರ್ಡ್ ಪ್ರವೇಶ ನೀಡುವಂತೆ ಕೋರಲಿದ್ದೇವೆ. ಸಿಂಗಲ್ಸ್ ಅಥವಾ ಡಬಲ್ಸ್‌ಗೆ ನಾವು ಈ ಮನವಿ ಮಾಡಲಿದ್ದೇವೆ. ಅದು ಲಭಿಸಿದರೆ ಮಿಶ್ರ ಡಬಲ್ಸ್‌ನಲ್ಲೂ ಆಡಲು ಅವಕಾಶವಿರುತ್ತದೆ.ಡಬಲ್ಸ್‌ನಲ್ಲಿ ರುಶ್ಮಿ ಚಕ್ರವರ್ತಿ ಜೊತೆಗೂಡಿ ಆಡಲಿದ್ದಾರೆ. ಆದರೆ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಜೊತೆ ಯಾರನ್ನು ಆಡಿಸಬೇಕು ಎಂಬ ನಿರ್ಧಾರವನ್ನು ಬಳಿಕ ತೆಗೆದುಕೊಳ್ಳಲಾಗುವುದು~ ಎಂದರು.ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಸೋಮದೇವ್ ದೇವ್‌ವರ್ಮನ್‌ಗೂ ವೈಲ್ಡ್ ಕಾರ್ಡ್ ಪ್ರವೇಶ ಕೋರಲಾಗಿದೆ.

                      ಪ್ರತಿಕ್ರಿಯೆ....  `ಸೂಚನೆ ತಪ್ಪಿದರೆ ಒಲಿಂಪಿಕ್ಸ್‌ಗೆ ಕಳುಹಿಸುವುದಿಲ್ಲ~
`ಇದು ಆಯ್ಕೆ ಸಮಿತಿ ತೆಗೆದುಕೊಂಡಿರುವ ನಿರ್ಧಾರ. ಆಯ್ಕೆಗೆ ಮುನ್ನ  ಪೇಸ್, ಭೂಪತಿ ಹಾಗೂ ಬೋಪಣ್ಣ ಜೊತೆಗೆ ಆಯ್ಕೆ ಸಮಿತಿ ಟೆಲಿಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದೆ. ಅಕಸ್ಮಾತ್ ಈ ಸೂಚನೆ ತಪ್ಪಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಒಲಿಂಪಿಕ್ಸ್‌ಗೆ ಈ ಆಟಗಾರರನ್ನು ಕಳುಹಿಸುವುದಿಲ್ಲ~ ಎಂದು ಖನ್ನಾ ಎಚ್ಚರಿಕೆ ನೀಡಿದ್ದಾರೆ.
                             ಆಯ್ಕೆ ಪ್ರಶ್ನಿಸಿದ ಭೂಪತಿ, ಬೋಪಣ್ಣ
ತಂಡವನ್ನು ಆಯ್ಕೆ ಮಾಡಿದ ಕೆಲವೇ ನಿಮಿಷಗಳಲ್ಲಿ ಮಹೇಶ್ ಹಾಗೂ ರೋಹನ್ ಜಂಟಿ ಹೇಳಿಕೆ ಹೊರಡಿಸಿದ್ದು ಆಯ್ಕೆಯನ್ನು ಪ್ರಶ್ನಿಸಿದ್ದಾರೆ. `ಎಐಟಿಎ ನಿರ್ಧಾರದಿಂದ ನಮಗೆ ತುಂಬಾ ಅಸಮಾಧಾನವಾಗಿದೆ. ಈ ಹಿಂದೆ ನಾವು ಸಂಸ್ಥೆಗೆ ಮನವಿ ಮಾಡಿದ್ದರೂ ಅದನ್ನು ಪರಿಗಣಿಸಿಲ್ಲ. ಒಟ್ಟಿಗೆ ಆಡಲು ಉದ್ದೇಶಿಸಿದ್ದ ನಮ್ಮ ನಿರ್ಧಾರಕ್ಕೆ ವಿರುದ್ಧವಾದ ಆಯ್ಕೆ. ಪೇಸ್ ಜೊತೆ ಆಡಿಸಲು ಮುಂದಾಗಿರುವುದು ಒಂದು ಕೆಟ್ಟ ನಿರ್ಧಾರ~ ಎಂದಿದ್ದಾರೆ.`ನಾವು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಎರಡು ತಂಡಗಳನ್ನು ಕಳಿಸುವ ಅವಕಾಶ ಇದ್ದರೂ ಅದಕ್ಕೆ ಆಯ್ಕೆ ಸಮಿತಿ ಅವಕಾಶ ನೀಡಿಲ್ಲ. ಇದರಿಂದ ಅತ್ಯುತ್ತಮ ಆಟಗಾರರಿಗೆ ಅವಕಾಶ ತಪ್ಪಿಸಿದಂತಾಗಿದೆ. ದೇಶದ ಟೆನಿಸ್ ಕ್ರೀಡೆಗೆ ಇದೊಂದು ನೋವಿನ ದಿನ. ಆದರೆ ಪಟ್ಟಿ ಕಳುಹಿಸಲು ಜೂನ್ 21 ಅಂತಿಮ ದಿನವಾಗಿದೆ.ಅಷ್ಟರೊಳಗೆ ಉತ್ತಮ ನಿರ್ಧಾರ ಹೊರಬೀಳಬೇಕು~ ಎಂದು ಅವರು ಹೇಳಿದ್ದಾರೆ. `ನನ್ನ ಹಾಗೂ ಪೇಸ್ ನಡುವಿನ ಜೊತೆಯಾಟ ಮುಗಿದ ಕಥೆ. ನಾವು ನಾಲ್ಕು ಬಾರಿ ಬೇರೆ ಬೇರೆಯಾಗಿದ್ದೆವು. ನಾಲ್ಕು ಒಲಿಂಪಿಕ್ಸ್‌ನಲ್ಲಿ ಆಡಿ ಬರಿಗೈಲಿ ಬಂದಿದ್ದೇವೆ. ಆದರೆ ಪೇಸ್ ಬೆನ್ನ ಹಿಂದಿನಿಂದ ಚೂರಿ ಹಾಕುತ್ತಿದ್ದಾರೆ. ನನ್ನ ಮೇಲೆ ಸಂಸ್ಥೆ ನಿಷೇಧ ಹೇರಲಿ ನೋಡೋಣ~ ಎಂದು ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
                                ಬರೆದಿದ್ದಾರೆ ಎನ್ನಲಾದ ಇ-ಮೇಲ್...
* `ಯಾವುದೇ ಕಾರಣಕ್ಕೂ ಪೇಸ್ ಅವರನ್ನು ಕೈಬಿಡಬಾರದು. ಆತ ಸದ್ಯದ ಅತ್ಯುತ್ತಮ ಡಬಲ್ಸ್ ಆಟಗಾರ. ಭೂಪತಿ ಹಾಗೂ ಬೋಪಣ್ಣ ಅವರಿಗಿಂತ ಹೆಚ್ಚು ಸಾಧನೆ ಮಾಡಿರುವುದಕ್ಕೆ ಅಂಕಿ ಅಂಶಗಳೇ ಸಾಕ್ಷಿ. ಹಾಗಾಗಿ ದೇಶದ ಹಿತದೃಷ್ಟಿಯಿಂದ ತಂಡ ಆಯ್ಕೆ ಮಾಡಬೇಕು~ ಎಂದು ಲಿಯಾಂಡರ್ ತಂದೆ ವೇಸ್ ಪೇಸ್ ಹೇಳಿದ್ದಾರೆ.

* `ಕಳೆದ ಏಳು ತಿಂಗಳಿಂದ ರೋಹನ್ ಬೋಪಣ್ಣ ಹಾಗೂ ನಾನು ಒಟ್ಟಿಗೆ ಆಡುತ್ತಿದ್ದೇವೆ. ಒಲಿಂಪಿಕ್ಸ್ ದೃಷ್ಟಿಯಲ್ಲಿಟ್ಟುಕೊಂಡು ಅಭ್ಯಾಸ ನಡೆಸುತ್ತಿದ್ದೇವೆ. ಡಬಲ್ಸ್‌ನಲ್ಲಿ ಆಡುತ್ತಿರುವ ಭಾರತದ ಆಟಗಾರರಲ್ಲಿ ಅತಿ ಹೆಚ್ಚು ರ‌್ಯಾಂಕ್ ಹೊಂದಿರುವವರು ನಾವು~ ಎಂದು ಇ-ಮೇಲ್‌ನಲ್ಲಿ ಹೇಳುವ ಮೂಲಕ ಭೂಪತಿ ಹಿರಿಯ ಆಟಗಾರ ಪೇಸ್‌ಗೆ ತಿರುಗೇಟು ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry