ಒಲಿಂಪಿಕ್ಸ್‌ಗೆ ಹಾಕಿ; ಸರ್ಕಾರ ಪೈಸಾನೂ ಕೊಟ್ಟಿಲ್ಲ: ಸುನಿಲ್

7

ಒಲಿಂಪಿಕ್ಸ್‌ಗೆ ಹಾಕಿ; ಸರ್ಕಾರ ಪೈಸಾನೂ ಕೊಟ್ಟಿಲ್ಲ: ಸುನಿಲ್

Published:
Updated:
ಒಲಿಂಪಿಕ್ಸ್‌ಗೆ ಹಾಕಿ; ಸರ್ಕಾರ ಪೈಸಾನೂ ಕೊಟ್ಟಿಲ್ಲ: ಸುನಿಲ್

ಬೆಂಗಳೂರು: `ಚಾಂಪಿಯನ್ ಆದಾಗ ಬಹುಮಾನ ಕೊಡುತ್ತೇವೆ ಎಂದು ಹೇಳಿದ್ದ ರಾಜ್ಯ ಸರ್ಕಾರ ಇದುವರೆಗೆ ಒಂದು ಪೈಸಾನೂ ಕೊಟ್ಟಿಲ್ಲ. ನಾವೀಗ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಗೆ ಸಿದ್ಧರಾಗುತ್ತಿದ್ದೇವೆ. ಆದರೆ ಈ ರೀತಿ ನಮಗೆ ಮೋಸ ಮಾಡಬಾರದಿತ್ತು~



-ಎಸ್.ವಿ.ಸುನಿಲ್ ಹಾಗೂ ವಿ.ಆರ್.ರಘುನಾಥ್ ಸೇರಿದಂತೆ ಭಾರತ ಹಾಕಿ ತಂಡದಲ್ಲಿರುವ ಕರ್ನಾಟಕದ ನಾಲ್ಕು ಮಂದಿ ಹಾಕಿ ಆಟಗಾರರು ಈ ರೀತಿ ಆಕ್ರೋಶ ವ್ಯಕ್ತಪಡಿಸಲು ಕಾರಣ ಐದು ತಿಂಗಳ ಹಿಂದೆ ರಾಜ್ಯ ಸರ್ಕಾರ ಪ್ರಕಟಿಸಿದ್ದ ಐದು ಲಕ್ಷ ರೂಪಾಯಿ ಬಹುಮಾನ ಹಣ ಇನ್ನೂ ತಲುಪಿಲ್ಲ.



ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಈ ತಂಡದಲ್ಲಿದ್ದ ಕರ್ನಾಟಕದ ನಾಲ್ಕು ಮಂದಿ ಆಟಗಾರರಾದ ರಘುನಾಥ್, ಸುನಿಲ್, ಭರತ್ ಚೆಟ್ರಿ ಹಾಗೂ ಇಗ್ನೇಸ್ ಟರ್ಕಿ ಅವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕಳೆದ ಸೆ.14ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪ್ರಕಟಿಸಿದ್ದರು. ಆದರೆ ಆ ಹಣ ಇನ್ನೂ ಆಟಗಾರರ ಕೈ ಸೇರಿಲ್ಲ.



`ಆಟಗಾರರು ಗೆದ್ದು ಬಂದಾಗ ಒತ್ತಾಯಕ್ಕೆ ಮಣಿದು ಕೆಲವರು ಬಹುಮಾನ ಪ್ರಕಟಿಸುತ್ತಾರೆ. ಆಮೇಲೆ ಅದನ್ನು ಮರೆತುಬಿಡುತ್ತಾರೆ. ಬಳಿಕ ನಾವು ಆ ಹಣಕ್ಕಾಗಿ ಕಚೇರಿಗೆ ಅಲೆದಾಡಬೇಕಾಗುತ್ತದೆ~ ಎಂದು ಸುನಿಲ್ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.



`ನೀವು ಪತ್ರಿಕಾ ಭಾಷೆಯಲ್ಲಿ ಎಷ್ಟು ಬೈಯುವುದಕ್ಕೆ ಸಾಧ್ಯವೋ ಅಷ್ಟನ್ನು ಬರೆದು ನಮ್ಮ ಹೆಸರು ಹಾಕಿ ಸರ್~ ಎಂದು ಹೇಳುವ ಮಟ್ಟವನ್ನು ಮುಟ್ಟುವಷ್ಟು ಈ ಹಾಕಿ ಆಟಗಾರರು ಅಸಮಾಧಾನಕ್ಕೆ ಒಳಗಾಗಿದ್ದಾರೆ.



`ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತ ಸೊರಗುತ್ತಿದೆ, ಸೋಲುತ್ತಿದೆ, ಆಟಗಾರರು ಕಳಪೆ ಪ್ರದರ್ಶನ ತೋರುತ್ತಾರೆ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಪ್ರಶಸ್ತಿ ಗೆದ್ದು ಬಂದಾಗಲೂ ನಮ್ಮತ್ತ ಯಾರೂ ಗಮನ ಹರಿಸುವುದಿಲ್ಲ. ಅಭಿನಂದನೆ ಕೂಡ ಹೇಳುವ ಜನ ಇಲ್ಲಿಲ್ಲ~ ಎಂದು ಸುನಿಲ್ ತಮ್ಮ ಬೇಸರ ವ್ಯಕ್ತಪಡಿಸಿದರು.



`ಸಿಎಂ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಆದರೆ ಉಳಿದ ಅಧಿಕಾರಿಗಳಿಗೆ ವಿಷಯ ಗೊತ್ತಿದ್ದೂ ಸುಮ್ಮನಿರುತ್ತಾರೆ. ಇವತ್ತು ಕೊಡಬಹುದು, ನಾಳೆ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ಸರ್ಕಾರ ಪ್ರೋತ್ಸಾಹ ನೀಡಿದರೆ ಅದು ಇನ್ನಷ್ಟು ಸ್ಫೂರ್ತಿ ತರುತಿತ್ತು. ಈ ಸಮಯದಲ್ಲಿ ನಮಗೆ ಬೆಂಬಲ ಸಿಗಬೇಕು~ ಎಂದು ರಘುನಾಥ್ ನುಡಿದರು.



`ಬೇರೆ ರಾಜ್ಯಗಳ ಆಟಗಾರರಿಗೆ ಅಲ್ಲಿನ ಸರ್ಕಾರ ಹಣ ನೀಡಿದೆ. ಅದಕ್ಕೆ ಉದಾಹರಣೆ ಮಹಾರಾಷ್ಟ್ರ, ಪಂಜಾಬ್ ಹಾಗೂ ಹರಿಯಾಣ. ಆದರೆ ನಮ್ಮ ರಾಜ್ಯದವರಿಗೆ ಇಂತಹ ಆಟಗಾರರಿದ್ದಾರೆ ಎನ್ನುವುದೇ ಗೊತ್ತಿಲ್ಲ. ಇದು ನಮ್ಮ ಹಣೆಬರಹ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.



ಈ ಸಂಬಂಧ ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ ಕೇಳಿದರೆ ಅವರು ಹೇಳುವುದೇ ಬೇರೆ. `ಹೌದು, ಈ ವಿಷಯ ನಮಗೂ ಗೊತ್ತಿದೆ. ಈಗಾಗಲೇ ತುಂಬಾ ವಿಳಂಬ ಕೂಡ ಆಗಿದೆ. ಆದರೆ ಮುಖ್ಯಮಂತ್ರಿ ಕಚೇರಿಯಿಂದ ಈ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ~ ಎನ್ನುತ್ತಾರೆ ಇಲಾಖೆಯ ಜಂಟಿ ನಿರ್ದೇಶಕ ಕಾಂತರಾಜ್.



`ಬಹುಮಾನ ಹಣ ನೀಡುವ ಸಂಬಂಧ ಎಲ್ಲಾ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದೇವೆ. ಈ ಸಂಬಂಧ ನಾವು ಮುಖ್ಯಮಂತ್ರಿ ಕಚೇರಿ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ ಬಜೆಟ್ ಕಾರಣ ಕೊಂಚ ತಡವಾಗಬಹುದು. ಆದರೆ ಶೀಘ್ರದಲ್ಲಿ ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ~ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry