ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ನಲ್ಲಿ ಓಡಿದ ಮೊದಲ ಕನ್ನಡಿಗ ಪಿ.ಡಿ.ಚೌಗುಲೆ

Last Updated 21 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಲ್ಜಿಯಮ್‌ನ ಆಂಟ್ವರ್ಪ್‌ ನಗರದಲ್ಲಿ 1920ರ ಆಗಸ್ಟ್‌ 14ರಿಂದ 29ರವರೆಗೆ ಒಲಿಂಪಿಕ್‌ ಸ್ಪರ್ಧೆಗಳು ನಡೆದಿದ್ದವು. ಆಗಸ್ಟ್‌ 22ರಂದು ಮ್ಯಾರಥಾನ್‌ ಅಂತಿಮ ಸ್ಪರ್ಧೆ ನಡೆಯಿತು. ಅಂದು ಭರೋ ಎಂದು ಮಳೆ ಸುರಿಯುತ್ತಿದ್ದುದರಿಂದ ಅಲ್ಲಿನ ರಸ್ತೆಗಳು ಹದಗೆಟ್ಟಿದ್ದವು.

ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಓಡಿದ ಫಿನ್ಲೆಂಡ್‌ನ ಪಾವೊ ನುರ್ಮಿ ಮೊದಲಿಗರಾಗಿ ಗುರಿ ಮುಟ್ಟಿದರು. ಆದರೆ ಆರಂಭದಿಂದಲೂ ಮುನ್ನಡೆ ಕಾಪಾಡಿಕೊಂಡಿದ್ದ ಓಟಗಾರನೊಬ್ಬ ಪ್ರತಿಕೂಲ ವಾತಾವರಣದಲ್ಲಿ ಪಡಿಪಾಟಲು ಪಡುತ್ತಲೇ ಕುಂಟುತ್ತಾ ಓಡಿದ್ದ.

ಆತನ ಕ್ರೀಡಾಸ್ಫೂರ್ತಿಯನ್ನು ನೋಡಿದ ರಸ್ತೆಯ ಇಕ್ಕೆಲಗಳಲ್ಲೂ ಇದ್ದ ಜನ ಆ ಓಟಗಾರನನ್ನು ಹುರಿದುಂಬಿಸಿದ್ದರು. ಆ ಓಟಗಾರನ ಬೂಟಿನೊಳಗೆ ನೀರು ತುಂಬಿಕೊಂಡಿತ್ತು. ಕಾಲಿನಿಂದ ರಕ್ತ ಒಸರುತಿತ್ತು. ಆತ ಕುಂಟುತ್ತಲೇ ಓಡಿ, 19ನೇಯವನಾಗಿ ಗುರಿ ಮುಟ್ಟಿದ್ದ. ಆತನ ಹೆಸರು ಪಡಪ್ಪ ಧಾರಪ್ಪ ಚೌಗುಲೆ. ಆತನ ಊರು ಬೆಳಗಾವಿ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಕನ್ನಡಿಗ.

ಆಂಟ್ವರ್ಪ್‌ ಒಲಿಂಪಿಕ್ಸ್‌ನಲ್ಲಿ 29 ದೇಶಗಳಿಂದ ಸುಮಾರು 2606 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಆ ಕೂಟದಲ್ಲಿ ಭಾರತವನ್ನು ನಾಲ್ವರು ಓಟಗಾರರು ಮತ್ತು ಇಬ್ಬರು ಪೈಲ್ವಾನರು ಪ್ರತಿನಿಧಿಸಿದ್ದರು. ಆ ನಾಲ್ವರು ಓಟಗಾರರಲ್ಲಿ ಒಬ್ಬರಾದ ಚೌಗುಲೆಯವರು ಬೆಳಗಾವಿಯ ರೈತಾಪಿ ಕುಟುಂಬಕ್ಕೆ ಸೇರಿದವರು.

ಚೌಗುಲೆಯವರು ಹುಟ್ಟಿದ್ದು 1902ರಲ್ಲಿ. ಪುಟ್ಟ ವಯಸ್ಸಿನಲ್ಲೇ ಅಂಗಸಾಧನೆ ಮತ್ತು ಓಡುವ ಅಭ್ಯಾಸ ನಡೆಸುತ್ತಿದ್ದರು. ಅವರಿಗೆ 16 ವರ್ಷ ವಯಸ್ಸಾಗಿದ್ದಾಗ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಬೆಳಗಾವಿಯಿಂದ ಖಾನಾಪುರದವರೆಗೆ 27 ಕಿ.ಮೀ. ದೂರ ಓಡುತ್ತಿದ್ದರು. ಅಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಮಿಂದು ವಾಪಸಾಗುತ್ತಿದ್ದರು. ಕೆಲವೊಮ್ಮೆ ಇವರು ರೈಲುಗಳನ್ನೂ ಹಿಂಬಾಲಿಸಿ ಓಡುತ್ತಿದ್ದರು. ಇವರು ಕುಸ್ತಿಯಲ್ಲಿಯೂ ನೈಪುಣ್ಯ ಸಾಧಿಸಿದ್ದರು.

ಬೆಳಗಾವಿಯ ಸರ್ಕಾರಿ ಆಂಗ್ಲ ಸರ್ದಾರ್‌ ಪ್ರೌಡಶಾಲೆಯಲ್ಲಿ ಇವರು ಶಿಕ್ಷಣ ಪಡೆದಿದ್ದರು. ಇವರ ಓಟದ ಸಾಹಸವನ್ನು ಗಮನಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇವರಿಗೆ ಅಪಾರ ಪ್ರೋತ್ಸಾಹ ನೀಡಿದ್ದರು.

ಪುಣೆಯ ಡೆಕ್ಕನ್‌ ಜಿಮ್ಖಾನ ಕ್ಲಬ್‌ ವತಿಯಿಂದ 1919ರ ನವೆಂಬರ್‌ನಲ್ಲಿ ನಡೆದಿದ್ದ ಅಖಿಲ ಭಾರತ ಮಟ್ಟದ ಗುಡ್ಡಗಾಡು ಓಟದ ಸ್ವರ್ಧೆಯಲ್ಲಿ ಪಾಲ್ಗೊಂಡಿದ್ದ ಅವರು 26 ಮೈಲು ದೂರವನ್ನು 2 ಗಂಟೆ 48ನಿಮಿಷ 49 ಸೆಕೆಂಡುಗಳಲ್ಲಿ ಕ್ರಮಿಸಿದ್ದರು. ಅದು ಆ ಕಾಲದ ಮಟ್ಟಿಗೆ ದಾಖಲೆಯೇ ಹೌದು. ಚಿನ್ನದ ಪದಕ ಗೆದ್ದಿದ್ದರು. ಆ ನಂತರ ಮುಂಬೈನಲ್ಲಿ ನಡೆದಿದ್ದ ವೈಎಂಸಿಎ ಕ್ಲಬ್‌ ವತಿಯ ಮ್ಯಾರಥಾನ್‌ನಲ್ಲಿಯೂ ಮೊದಲಿಗರಾಗಿ ಗುರಿ ಮುಟ್ಟಿದ್ದರು.

ಆಂಟ್ವರ್ಪ್‌ ಒಲಿಂಪಿಕ್ಸ್‌ಗೆ ಭಾರತದಿಂದಲೂ ತಂಡವೊಂದನ್ನು ಕಳುಹಿಸಲು ಆಗಿನ ಮುಂಬೈನ ಗವರ್ನರ್‌ ಜಾರ್ಜ್‌ ಲಾಯ್ಡ್ ಅವರು ಆಸಕ್ತಿ ವಹಿಸಿದ್ದರು. ಆಗ ಕೈಗಾರಿಕೋದ್ಯಮಿ ದೊರಾಬ್‌ಜಿ ಟಾಟಾ ಅವರು ಆರ್ಥಿಕ ನೆರವು ನೀಡಿದ್ದರು.

ಆ ದಿನಗಳಲ್ಲಿ ಭಾರತ ತಂಡಕ್ಕೆ ಅರ್ಹತೆ ಗಳಿಸಬೇಕಿದ್ದರೆ ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ನಡೆಯುವ ಅರ್ಹತಾ ಕೂಟಗಳಲ್ಲಿ ಪಾಲ್ಗೊಂಡು ತೇರ್ಗಡೆಗೊಳ್ಳಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ಜಾರ್ಜ್‌ ಲಾಯ್ಡ್‌ ಅವರೇ ಎಲ್ಲಾ ಪತ್ರ ವ್ಯವಹಾರಗಳನ್ನೂ ನಡೆಸಿದ್ದರು.

ಚೌಗುಲೆಯವರು ಅಂದು ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅವರು ಬೆಳಗಾವಿಯಿಂದ ರೈಲಿನಲ್ಲಿ ಮುಂಬೈಗೆ ಹೋಗಿ ತಂಡವನ್ನು ಸೇರಿಕೊಂಡರು. ಅಲ್ಲಿಂದ ಹಡಗಿನಲ್ಲಿ ಹೊರಟು ಮೂರು ವಾರಗಳ ಸಮುದ್ರಯಾನದ ನಂತರ ಇಂಗ್ಲೆಂಡ್‌ಗೆ ತಲುಪಿದರು. 1920ರ ಜೂನ್‌ 5ರಂದು ಅವರು ಬೆಳಗಾವಿಯಿಂದ ರೈಲಿನಲ್ಲಿ ಹೊರಟಿದ್ದಾಗ ರೈಲ್ವೆ ನಿಲ್ದಾಣಕ್ಕೆ ನೂರಾರು ಮಂದಿ ಹೋಗಿದ್ದರು.

ಲಂಡನ್‌ ನಗರದಲ್ಲಿ ನಡೆದಿದ್ದ ಸೆಮಿ ಮ್ಯಾರಥಾನ್‌ ಓಟದ ಸ್ವರ್ಧೆಯಲ್ಲಿ ಚೌಗುಲೆಯವರು 10 ಮೈಲು ದೂರವನ್ನು ನಿಗದಿತ ಸಮಯದಲ್ಲಿ ಕ್ರಮಿಸಿದ್ದರು. ಹೀಗಾಗಿ ಆಂಟ್ವರ್ಪ್‌ಗೆ ಅರ್ಹತೆ ಗಿಟ್ಟಿಸಿದ್ದರು.

ಅಲ್ಲಿಂದ ಆಂಟ್ವರ್ಪ್‌ ನಗರಕ್ಕೆ ತಂಡ  ತೆರಳಿತು. ಅಲ್ಲಿ ಓಡುವವರು ಬೂಟು ಧರಿಸಬೇಕೆಂದು ನಿಯಮ ಮಾಡಿದ್ದರು. ಆದರೆ ಚೌಗುಲೆಯವರಿಗೆ ಬೂಟು ಧರಿಸಿ ಓಡಿ ಅಭ್ಯಾಸ ಇರಲಿಲ್ಲ. ಆದರೆ ಅಲ್ಲಿ ಅವರು ಅನಿವಾರ್ಯವಾಗಿ ಬೂಟು ಧರಿಸಿ ಒಡಲೇ ಬೇಕಾಯಿತು. ಹೊಸದಾಗಿ ಬೂಟು ಧರಿಸಿ ಒಡಿದ್ದರಿಂದ ಅವರ ಬೆರಳುಗಳ ಚರ್ಮಕ್ಕೆ ಗಾಯವಾಗಿತ್ತು. ಆದರೂ ಅವರು ನಿಗದಿತ ದೂರವನ್ನು 2 ಗಂಟೆ 50 ನಿಮಿಷ 45.2 ಸೆಕೆಂಡುಗಳಲ್ಲಿ ಕ್ರಮಿಸಿದ್ದರು. ಚೌಗುಲೆ 19ನೇ ಸ್ಥಾನ ಗಳಿಸಿದ್ದರು.

ಅಲ್ಲಿಂದ ಬೆಳಗಾವಿಗೆ ವಾಪಸಾದ ನಂತರ ಹುಟ್ಟೂರಿನಲ್ಲಿ ಅವರಿಗೆ ಸಾರ್ವಜನಿಕ ಸನ್ಮಾನ ಏರ್ಪಡಿಸಲಾಗಿತ್ತು. ಅಲ್ಲಿ ಪವನಂಜಯ (ಗಾಳಿಗಿಂತಲೂ ವೇಗವಾಗಿ ಓಡುವವನು) ಎಂಬ ಬಿರುದು ನೀಡಿ ಗೌರವಿಸಲಾಯಿತು. ಆ ನಂತರ ಅವರು ಪವನಂಜಯ ಚೌಗುಲೆ ಎಂದೇ ಜನಪ್ರಿಯರಾಗಿದ್ದರು.

ಚೌಗುಲೆಯವರು 1917ರಿಂದ 20ರವರೆಗೆ ಭಾರತದ ವಿವಿಧ ಕಡೆ ಓಡಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಬೆಳಗಾವಿಯಲ್ಲಿ ಅವರು ಓದಿದ್ದ ಸರ್ದಾರ್‌ ಶಾಲೆಯಲ್ಲಿ ಅವರು ಗೆದ್ದ ಟ್ರೋಫಿಗಳೆಲ್ಲದರ ಪ್ರದರ್ಶನ ನಡೆದಿತ್ತು.

ಆ ಕಾಲದಲ್ಲಿ ಇಂಗ್ಲೆಂಡ್‌ನ ಕ್ರೀಡಾ ಕ್ಲಬ್‌ ಒಂದು ಚೌಗುಲೆಯವರನ್ನು ಕೋಚ್‌ ಆಗಿ ಕಾರ್ಯ ನಿರ್ವಹಿಸಲು ಲಂಡನ್‌ಗೆ ಆಹ್ವಾನಿಸಿತ್ತಂತೆ. ಆದರೆ ಚೌಗುಲೆಯವರು ಅಲ್ಲಿಗೆ ಹೋಗಲಿಲ್ಲ. ಇವರು 1952ರಲ್ಲಿ ನಿಧನ ಹೊಂದಿದರು.

ಬೆಳಗಾವಿಯವರೇ ಆದ ದ್ವಾರಪಾಲ ಜಿನ್ನಪ್ಪ ಜಡಿ ಎಂಬುವವರು ಬೆಳಗಾವಿ ಜಿಲ್ಲೆಯ ಅನೇಕ ವೀರರ ಕುರಿತು ಲಾವಣಿ ರಚಿಸಿದ್ದಾರೆ. ಈ ಲಾವಣಿಗಳನ್ನು ಬೆಳಗಾವಿಯ ಭುಜೇಂದ್ರ ಮಹಿಷವಾಡಿಯವರು 1971ರಲ್ಲಿ ಸಂಗ್ರಹಿಸಿ ‘ಜನಪದ ವೀರಗೀತೆಗಳು’ ಎಂಬ ಸಂಕಲನವನ್ನು ಪ್ರಕಟಿಸಿದ್ದರು.

ಅದರಲ್ಲಿರುವ ಒಂದು ಲಾವಣಿ ಇಂತಿದೆ: ಕೇಳಿರಿ ಬೆಲ್ಜಿಯಂನ ಲೀಲಾ, ಪವನಂಜಯ ಮಾಡಿದ ಹಲ್ಲಾ; ಸತ್ತರ್‌ ( 70 ಮಂದಿ ಓಡುವ ಶರ್ಕಾ, ಇತ್ತ ಇಪ್ಪತಾರು ಮೈಲಾ; ಕೂಳು–ನೀರು ಅಲ್ಲಿ ಸಿಗಲಿಲ್ಲಾ; ಕಪಟ ಮಾಡಿದರ ಅವರೆಲ್ಲಾ; ಬೂಟ ಹಾಕಿಕೊಂಡು ಓಡಬೇಕಂತ ತಗದಾರ ಆಗ ಕೆಟ್ಟಾ ಶಕಲಾ; ಬೆರಳು ಒಡೆದರಾನೂ ಬಿಡಲಿಲ್ಲಾ; ಎರಡು ನಂಬರ ಬಂದ ಚೌಗಲಾ; ನೆತ್ತರು ಬೀಳೋದು ನೋಡಿದ ಕೂಡಲೇ; ಅಂದಾರು ನಾಡಿಗೆ ಇವನೇ ಭಲಾ!

1960ರ ದಶಕದಲ್ಲಿ ಚೌಗುಲೆಯವರ ನೆನಪಿಗಾಗಿ ‘ಚೌಗುಲೆ ಚಾಲೆಂಜ್‌ ಶೀಲ್ಡ್ ಕ್ರಿಕೆಟ್ ಟೂರ್ನಿ’ಯೊಂದನ್ನು ಬೆಳಗಾವಿಯ ಫ್ರೆಂಡ್ಸ್‌ ಕ್ರಿಕೆಟ್‌ ಕ್ಲಬ್‌ ಏರ್ಪಡಿಸುತಿತ್ತು. ಆದರೆ ಚೌಗುಲೆಯವರ ಮಕ್ಕಳಾದ ಬಿ.ಪಿ.ಚೌಗುಲೆ ಯವರು ನೆರವು ನೀಡುತ್ತಿದ್ದರು.

ಬೆಳಗಾವಿಯ ಶೆರಿ ಗಲ್ಲಿಯಲ್ಲಿರುವ ಪವನಂಜ ಚೌಗುಲೆಯವರ ಮನೆಗೆ ‘ಪವನಂಜಯ ರಾಜ್‌’ ಎಂದು ಹೆಸರಿಟ್ಟಿರುವುದನ್ನು ಇವತ್ತಿಗೂ ಕಾಣಬಹುದಾಗಿದೆ.

ರಿಯೊ ಮೆರಥಾನ್‌ನಲ್ಲಿ ಒ.ಪಿ.ಜೈಶಾ
ಭಾರತದಲ್ಲಿ ದೂರ ಓಟದ ಬಲುದೊಡ್ಡ ಪರಂಪರೆಯೇ ಇದೆ. ಏಷ್ಯಾ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿರುವ ಭಾರತದ ಓಟಗಾರರು ವಿವಿಧ ಒಲಿಂಪಿಕ್ಸ್‌ ಕೂಟಗಳಲ್ಲಿ ಸದಾ ವೈಫಲ್ಯ ಕಂಡಿದ್ದಾರೆ.

ರಿಯೊ ಒಲಿಂಪಿಕ್ಸ್‌ನ ಮೆರಥಾನ್‌ ಓಟದ ಸ್ವರ್ಧೆಯಲ್ಲಿ ಭಾರತದ ಒ.ಪಿ.ಜೈಶಾ ಪಾಲ್ಗೊಂಡಿದ್ದರು. ಇವರು ನಿಗದಿತ ದೂರವನ್ನು ಕ್ರಮಿಸಲು 2ಗಂಟೆ 47.19 ಸೆಕೆಂಡುಗಳನ್ನು ತೆಗೆದುಕೊಂಡು 89ನೇಯವರಾಗಿ ಗುರಿ ಮುಟ್ಟಿದರು. 

ಪುರುಷರ ವಿಭಾಗದ ಮೆರಾಥಾನ್‌ನಲ್ಲಿ ಕೆ.ರಾಮ್‌, ಟಿ.ಗೋಪಿ, ಎನ್‌.ಸಿಂಗ್‌ ರಾವತ್‌ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT