ಒಲಿಂಪಿಕ್ಸ್ ಜ್ಯೋತಿ ಹಸ್ತಾಂತರ: ನಾಳೆಯಿಂದ ಇಂಗ್ಲೆಂಡ್‌ನಲ್ಲಿ ಯಾತ್ರೆ

7

ಒಲಿಂಪಿಕ್ಸ್ ಜ್ಯೋತಿ ಹಸ್ತಾಂತರ: ನಾಳೆಯಿಂದ ಇಂಗ್ಲೆಂಡ್‌ನಲ್ಲಿ ಯಾತ್ರೆ

Published:
Updated:

ಅಥೆನ್ಸ್ (ಐಎಎನ್‌ಎಸ್/ ರಾಯಿಟರ್ಸ್): ಲಂಡನ್ ಒಲಿಂಪಿಕ್ ಕೂಟದ ಜ್ಯೋತಿಯ ಗ್ರೀಸ್ ಲೆಗ್‌ನ ರಿಲೆ ಗುರುವಾರ ತೆರೆ ಕಂಡಿತು. ಸ್ನೇಹ ಹಾಗೂ ಕ್ರೀಡಾಪ್ರೇಮದ ದ್ಯೋತಕ ಎನಿಸಿರುವ ಜ್ಯೋತಿಯ ಪ್ರಯಾಣ ಇನ್ನು ಇಂಗ್ಲೆಂಡ್ ನೆಲದಲ್ಲಿ ನಡೆಯಲಿದೆ.

ಅಥೆನ್ಸ್‌ನಲ್ಲಿ ಗುರುವಾರ ರಾತ್ರಿ ನಡೆದ ಸಮಾರಂಭದಲ್ಲಿ ಜ್ಯೋತಿಯನ್ನು ಡೇವಿಡ್ ಬೆಕಮ್ ಅವರನ್ನು ಒಳಗೊಂಡ ಇಂಗ್ಲೆಂಡ್‌ನ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು. ಇದಕ್ಕೂ ಮುನ್ನ ಗ್ರೀಸ್‌ನ ಹೈಜಂಪ್ ವಿಶ್ವಚಾಂಪಿಯನ್ ದಿಮಿತ್ರಿ ಕಾಂಡ್ರೊಕಾಕಿಸ್ ಅವರು ಅಕ್ರೊಪೊಲಿಸ್ ಪರ್ವತದಲ್ಲಿಟ್ಟ ಬೃಹತ್ ಗಾತ್ರದ ಅಗಲವಾದ ಹಂಡೆಯಂತಿರುವ `ಕಾಲ್ಡ್ರನ್~ ಬೆಳಗಿಸುವ ಮೂಲಕ ರಿಲೆಗೆ ತೆರೆ ಎಳೆದರು.

ಒಲಿಂಪಿಕ್ಸ್ ಜ್ಯೋತಿಯನ್ನು ವಿಶೇಷ ವಿಮಾನದ ಮೂಲಕ ಇಂಗ್ಲೆಂಡ್‌ಗೆ ಕೊಂಡೊಯ್ಯಲಾಗುವುದು. ಜ್ಯೋತಿಯ ಗ್ರೀಸ್ ಲೆಗ್‌ನ ರಿಲೆ ಕಳೆದ ಗುರುವಾರ ಆರಂಭವಾಗಿತ್ತು. ಪುರಾತನ ಒಲಿಂಪಿಯಾದ 2,600 ವರ್ಷ ಹಳೆಯದಾದ ಡಾರಿಕ್ ಹಾಗೂ ಹೆರಾ ಮಂದಿರದ ನಡುವಣ ವಿಶಾಲ ಪ್ರಾಂಗಣದಲ್ಲಿ ಜ್ಯೋತಿಯನ್ನು ಹೊತ್ತಿಸಲಾಗಿತ್ತು.

ಇಂಗ್ಲೆಂಡ್‌ನಲ್ಲಿ ಜ್ಯೋತಿಯ ರಿಲೆ ಶನಿವಾರ ಆರಂಭವಾಗಲಿದೆ. 70 ದಿನ ಪ್ರಮುಖ ನಗರ, ಪಟ್ಟಣಗಳಲ್ಲಿ ಸಂಚರಿಸಲಿದೆ. 8 ಸಾವಿರ ಕಿ.ಮೀ. ಕ್ರಮಿಸಲಿರುವ ಈ ಜ್ಯೋತಿಯನ್ನು ಹಿಡಿದು ಓಡುವ ಗೌರವ 8 ಸಾವಿರ ಮಂದಿಗೆ ಲಭಿಸಲಿದೆ. ಜುಲೈ 27ರಂದು ಸ್ಟ್ರಾಟ್‌ಫೋರ್ಡ್‌ನಲ್ಲಿರುವ ಒಲಿಂಪಿಕ್ ಕ್ರೀಡಾಂಗಣದಲ್ಲಿ ಜ್ಯೋತಿ ತನ್ನ ಯಾತ್ರೆ ಕೊನೆಗೊಳಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry