ಶನಿವಾರ, ಏಪ್ರಿಲ್ 17, 2021
30 °C

ಒಲಿಂಪಿಕ್ಸ್ ಮಾಹಿತಿ ಕಣಜ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗೇಶ್ವರ ದತ್

ಭಾರತ ಈ ಸಲದ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ತನ್ನ ಸವಾಲು ಎಸೆದಿರುವುದಂತೂ ಸ್ಪಷ್ಟ. ನಮ್ಮ ಕುಸ್ತಿ ತಂಡದಲ್ಲಿರುವ ಯೋಗೇಶ್ವರ ದತ್ ಅವರಂತೂ `ನನ್ನ ಬದುಕಿನಲ್ಲಿ ಇದು ಕೊನೆಯ ಒಲಿಂಪಿಕ್ಸ್ ಅವಕಾಶ. ನಾನು ಗೆಲ್ಲಲಿಕ್ಕಾಗಿಯೇ ನೆಲಕಚ್ಚಿ ಹೋರಾಡುತ್ತೇನೆ~ ಎಂದು ಪದೇ ಪದೇ ಹೇಳುತ್ತಿರುವುದು ಮಾಧ್ಯಮಗಳಲ್ಲೂ ನಿರಂತರವಾಗಿ ಪ್ರಕಟಗೊಳ್ಳುತ್ತಲೇ ಇವೆ.

ಹೌದು, 29ರ ಹರೆಯದ ಇವರು ನಾಲ್ಕು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ನಿರಾಸೆ ಕಂಡಿದ್ದರು. ಅಲ್ಲಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಇವರು ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಕಜಕಸ್ತಾನದ ಬೌರ್ಜಾನ್ ಒರಾಗ್ಜೆಯೆನ್ ಅವರನ್ನು 8-3ರಿಂದ ಸೋಲಿಸಿದ್ದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ದೇಶದ ಕೆನಿಚಿ ಯುಮೊಟೊ ಎದುರು 3-6ರಿಂದ ಸೋಲನುಭವಿಸಿದರು.

ಇವರು 1998ರಿಂದಲೇ ರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ. 2006ರಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 60 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. 2008 ಮತ್ತು ಈ ವರ್ಷ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ತಮ್ಮ ವಿಭಾಗದಲ್ಲಿ ಬಂಗಾರದ ಸಾಧನೆಯನ್ನೇ ತೋರಿದ್ದಾರೆ. 2003ರ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಇವರು, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕ ಗಳಿಸಿದರು.

ಮೂರು ತಿಂಗಳ ಹಿಂದೆ ಕಜಕಸ್ತಾನದಲ್ಲಿ ನಡೆದ ಒಲಿಂಪಿಕ್ಸ್‌ಗಾಗಿ `ಏಷ್ಯಾ ಅರ್ಹತಾ ಸುತ್ತಿನ ಕುಸ್ತಿ~ ಟೂರ್ನಿಯಲ್ಲಿ ಇವರು ರಜತ ಗೆಲ್ಲುವ ಮೂಲಕ ಲಂಡನ್‌ಗೆ ರಹದಾರಿ ಗಿಟ್ಟಿಸಿದರು.

“ಮುಂದಿನ ಒಲಿಂಪಿಕ್ಸ್‌ನಲ್ಲಿ ನಾನು ಸ್ಪರ್ಧಿಸುವುದು ಸಾಧ್ಯವೇ ಇಲ್ಲ. ಹೀಗಾಗಿ ಈ ಸಲ `ಮಾಡು ಇಲ್ಲವೆ ಮಾಡಿ~ ಎಂಬ ಛಲದಿಂದ ನಾನು ಅಖಾಡದಲ್ಲಿ ಹೋರಾಟ ನಡೆಸಲಿದ್ದೇನೆ. ಜಪಾನ್, ರಷ್ಯಾ, ಅಮೆರಿಕಾ, ಉಕ್ರೇನ್‌ನ ಪೈಲ್ವಾನರಿಂದ ತೀವ್ರ ಪೈಪೋಟಿ ಎದುರಾಗುತ್ತದೆ ಎಂಬುದು ನನಗೆ ಗೊತ್ತು. ಅದಕ್ಕೆ ನಾನು ಸಿದ್ಧನಾಗಿದ್ದೇನೆ. ಈ ಸಲ ಪದಕ ಗೆದ್ದೇ ಗೆಲ್ಲುತ್ತೇನೆ” ಎಂದು ದತ್ ಹೇಳಿರುವುದು ಈಗಾಗಲೇ ಮಾಧ್ಯಮಗಳಲ್ಲಿ ಬಂದಿದೆ.

ಲಾಸ್ ಏಂಜಲೀಸ್ (1984)

ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ನಡುವಣ ಕಿತ್ತಾಟ ಮಾಸ್ಕೊ ಒಲಿಂಪಿಕ್ಸ್ ಮೇಲೆ ಪರಿಣಾಮ ಬೀರಿದಂತೆ, 1984ರ ಲಾಸ್‌ಏಂಜಲೀಸ್ ಒಲಿಂಪಿಕ್ಸ್ ಮೇಲೆಯೂ ಪರಿಣಾಮ ಬೀರಿತ್ತು. ಲಾಸ್‌ಏಂಜಲೀಸ್ ಒಲಿಂಪಿಕ್ಸ್ ಅನ್ನು ಸೋವಿಯತ್ ಒಕ್ಕೂಟವೇ ಅಲ್ಲದೆ ಕ್ಯೂಬಾ, ಪೂರ್ವ ಜರ್ಮನಿ ಸೇರಿದಂತೆ ಅದರ 14 ಬೆಂಬಲಿಗ ದೇಶಗಳು ಬಹಿಷ್ಕರಿಸಿದ್ದವು.

ಈ ಕೂಟದಲ್ಲಿ ಕಾರ್ಲ್‌ಲೂಯಿಸ್ ಮೊದಲ ಬಾರಿಗೆ ಪಾಲ್ಗೊಂಡಿದ್ದು, 100ಮೀ., 200ಮೀ., ಹಾಗೂ ರಿಲೆ ಓಟಗಳಲ್ಲದೆ, ಲಾಂಗ್‌ಜಂಪ್‌ನಲ್ಲಿಯೂ ಚಿನ್ನ ಗೆದ್ದು ದಾಖಲೆ ಮಾಡಿದರು. ಪೋರ್ಚುಗಲ್‌ನ ಕಾರ್ಲೊಸ್ ಲೋಪೆಜ್ ತಮ್ಮ ದೇಶಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು. ಲೋಪೆಜ್ ಮ್ಯೋರಥಾನ್ ಓಟವನ್ನು 2ಗಂಟೆ 09ನಿಮಿಷ 21ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಒಲಿಂಪಿಕ್ ದಾಖಲೆ ಮಾಡಿದ್ದರು. ಈ ದಾಖಲೆ 24 ವರ್ಷಗಳ ಕಾಲ ಅಬಾಧಿತವಾಗಿತ್ತು. ಅದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಮಹಿಳಾ ಮ್ಯೋರಥಾನ್ ಓಟವೂ ನಡೆಯಿತು.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಒಲಿಂಪಿಕ್ಸ್‌ನ ಸಂಘಟನಾ ಸಮಿತಿ ದೊಡ್ಡ ಮಟ್ಟದ ಲಾಭ ಗಳಿಸಿತು.

ಈ ಕೂಟದಲ್ಲಿ ಅಮೆರಿಕ ನಿರಾಯಾಸವಾಗಿ 83 ಚಿನ್ನವೂ ಸೇರಿದಂತೆ 174 ಪದಕಗಳನ್ನು ಗೆದ್ದರೆ, ರುಮೇನಿಯ 53 ಪದಕಗಳೊಂದಿಗೆ ಎರಡನೇ ಸ್ಥಾನಕ್ಕೇರಿತ್ತು. ಚೀನಾ ದೇಶ 32 ಪದಕಗಳಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವ ಮೂಲಕ ಮುಂದಿನ ಕ್ರೀಡಾಶಕ್ತಿ ಎಂಬುದರ ಸೂಚನೆ ನೀಡಿತ್ತು. ಸೋವಿಯತ್ ಗೈರು ಹಾಜರಿ ಎದ್ದು ಕಾಣುತಿತ್ತು.

ಈ ಕೂಟದಲ್ಲಿ ಒಟ್ಟು 140 ದೇಶಗಳ 6, 829 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ನಮ್ಮ ನೆರೆಯ ಭೂತಾನ್, ಬಾಂಗ್ಲಾದೇಶ ಮುಂತಾದ ದೇಶಗಳು ಅದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದವು.

ನಾವೆಲ್ ಎಲ್ ಮೌತಾವಕೇಲ್

ಮಹಿಳೆಯರನ್ನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಕಳಿಸಬೇಕೇ ಬೇಡವೆ ಎಂಬ ಬಗ್ಗೆ ಈಚೆಗೆ ಅರಬ್ ದೇಶಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಕತಾರ್, ಯುಎಇ ಇತ್ಯಾದಿ ದೇಶಗಳು ತಮ್ಮ ದೇಶದ ತಂಡದೊಡನೆ ಮಹಿಳೆಯರನ್ನು ಕಳಿಸುತ್ತೇವೆ ಎಂದಿವೆಯಾದರೂ, ಗೊಂದಲವೇ ಎದ್ದು ಕಾಣುತ್ತಿದೆ. ಇಂತಹ ಪರಿಸ್ಥತಿಯಲ್ಲಿ ನಾವೆಲ್ ಎಲ್ ಮೌತಾವಕೇಲ್ ಎಂಬ ಓಟಗಾರ್ತಿ ಇಸ್ಲಾಂ ದೇಶಗಳ ಮಹಿಳೆಯರಲ್ಲಿ ತುಂಬಿದ ಸ್ಫೂರ್ತಿ ಮತ್ತು ನೀಡಿದ ಆತ್ಮವಿಶ್ವಾಸ ಅನನ್ಯ.

ಮೊರೊಕ್ಕೊ ದೇಶದ ಇವರು 1984ರ ಲಾಸ್‌ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಅದೇ ಮೊದಲ ಬಾರಿಗೆ ಅಲ್ಲಿ ಮಹಿಳೆಯರ 400ಮೀಟರ್ಸ್ ಹರ್ಡಲ್ಸ್ ಸ್ಪರ್ಧೆಯನ್ನು ನಡೆಸಲಾಯಿತು. ಆ ಸ್ಪರ್ಧೆಯಲ್ಲಿ ನಮ್ಮ ದೇಶದ ಪಿ.ಟಿ.ಉಷಾ ಪಾಲ್ಗೊಂಡು ಕೂದಲೆಳೆಯಷ್ಟು ಅಂತರದಿಂದ ಕಂಚಿನ ಪದಕದಿಂದ ವಂಚಿತರಾಗಿದ್ದುದು ಈಗ ನೆನಪಷ್ಟೆ. ಆದರೆ ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾವೆಲ್ ಅವರು ಚಿನ್ನದ ಪದಕ ಗೆದ್ದಿದ್ದರು. ಅವರು ಮೊದಲಿಗರಾಗಿ ಗುರಿ ಮುಟ್ಟಿದ್ದರೆನ್ನುವುದಕ್ಕಿಂತ ಮುಖ್ಯವಾಗಿ ಇಸ್ಲಾಂ ದೇಶವೊಂದರ ಮಹಿಳೆಯೊಬ್ಬರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದುದು ಅದೇ ಮೊದಲು ಎಂಬ ಸಂಗತಿಯೇ ಬಹಳ ಮುಖ್ಯ. ಹೀಗಾಗಿ ನಾವೆಲ್ ಅಂದು ಜಗದ್ವಿಖ್ಯಾತರಾದರು.

ಅಂದು ಲಾಸ್‌ಏಂಜಲೀಸ್‌ನಲ್ಲಿ ನಾವಲ್ ಚಿನ್ನ ಪದಕವನ್ನು ಕೊರಳಲ್ಲಿ ಧರಿಸುತ್ತಿದ್ದಂತೆಯೇ ಇತ್ತ ಮೊರೊಕ್ಕೊ ದೇಶದ ರಾಜ ಎರಡನೇ ಹಸನ್ ಆಕೆಗೆ ಫೋನ್ ಮಾಡಿ ಅಭಿನಂದಿಸಿದರು. ಜತೆಗೆ ಅಂದು ಮೊರೊಕ್ಕೊದಲ್ಲಿ ಹುಟ್ಟಿದ ಎಲ್ಲಾ ಹೆಣ್ಣುಮಕ್ಕಳಿಗೂ ನಾವಲ್ ಹೆಸರಿಡಬೇಕೆಂದು ರಾಜಾಜ್ಞೆ ಹೊರಡಿಸಿದ್ದರು !

ಸ್ಥಿತಿವಂತ ಕುಟುಂಬಕ್ಕೆ ಸೇರಿದ ನಾವಲ್ ಮೊರೊಕ್ಕೊದಲ್ಲಿ ಆರಂಭದ ಶಿಕ್ಷಣ ಪಡೆದ ನಂತರ ಅಮೆರಿಕಾಕ್ಕೆ ತೆರಳಿ ಶಿಕ್ಷಣ ಮುಂದುವರಿಸಿದರು. ಅಲ್ಲಿನ ಅಯೋವಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಹರ್ಡಲ್ಸ್ ಓಟದಲ್ಲಿ ನಾವಲ್ ಆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಈ ನಡುವೆ ಅವರು 1982ರಲ್ಲಿ ಕೈರೊದಲ್ಲಿ ನಡೆದಿದ್ದ ಆಫ್ರಿಕಾ ದೇಶಗಳ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ 58.42 ಸೆಕೆಂಡುಗಳಲ್ಲಿ ಓಡಿ ಬಂಗಾರದ ಸಾಮರ್ಥ್ಯ ತೋರಿದ್ದರು.

ಓಡುವುದರಿಂದ ನಿವೃತ್ತಿ ಪಡೆದ ನಂತರ ಇವರು ಮುಸ್ಲಿಂ ಮಹಿಳಾ ವಿಮೋಚನೆಗೆ ಸಂಬಂಧಿಸಿದಂತೆ ಹತ್ತು ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಇವರು ತಮ್ಮ ಹುಟ್ಟೂರು ಕಾಸಾಬ್ಲಾಂಕಾದಲ್ಲಿ ಇಸ್ಲಾಂ ದೇಶಗಳ ಮಹಿಳೆಯರಿಗಾಗಿಯೇ 5 ಕಿ.ಮೀ. ಓಟದ ಸ್ಪರ್ಧೆಯನ್ನು ಪ್ರತಿವರ್ಷವೂ ಸಂಘಟಿಸುತ್ತಿದ್ದಾರೆ. ಈ ಜನಪ್ರಿಯ ಸ್ಪರ್ಧೆಯಲ್ಲಿ ಪ್ರತಿ ವರ್ಷವೂ 30ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ.

ಅಂತರ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿ ಅತೀವ ಚಟುವಟಿಕೆಯಿಂದ ತೊಡಗಿಕೊಂಡಿರುವ ಇವರು ಇದರ ಹಲವು ಸ್ಥಾಯಿ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸಕ್ತ ಒಲಿಂಪಿಕ್ಸ್ ಅನ್ನು ಲಂಡನ್ ನಗರದಲ್ಲಿಯೇ ನಡೆಸಬಹುದು ಎಂಬ ಅರ್ಹತಾ ಪತ್ರವನ್ನು ನೀಡಿದ ಐಒಎ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿಯೂ ಇವರು ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಲಂಡನ್ ನಗರದ ಮಂದಿ ಇವರಿಗೆ ಯಾವತ್ತೂ ಋಣಿಯಾಗಿರುತ್ತಾರೆ. ಒಲಿಂಪಿಕ್ಸ್ ಆಂದೋಲನದಲ್ಲಿ ಈ ಎತ್ತರಕ್ಕೆ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದಾಗಿದೆ. ಇವರು ಮೊರೊಕ್ಕೊ ದೇಶದ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷರಾಗಿರುವುದೇ ಅಲ್ಲದೆ, 2007ರಿಂದ ಆ ದೇಶದ ಕ್ರೀಡೆ ಮತ್ತು ಯುವಜನ ಸೇವಾ ಖಾತೆ ಸಚಿವರಾಗಿಯೂ ಜನಪ್ರಿಯರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.