ಒಲಿಂಪಿಕ್ಸ್: ಮೂಢನಂಬಿಕೆಯ ಸುಳಿಯಲ್ಲಿ...!

ಶುಕ್ರವಾರ, ಮೇ 24, 2019
23 °C

ಒಲಿಂಪಿಕ್ಸ್: ಮೂಢನಂಬಿಕೆಯ ಸುಳಿಯಲ್ಲಿ...!

Published:
Updated:

ಆತ ವ್ಯಾಪಾರಿ. ಆದ್ದರಿಂದ ನಿತ್ಯ ಒಳ್ಳೆ ಲಾಭದ ನಿರೀಕ್ಷೆ. ಹೊಸ ಅಂಗಡಿ ಮಾಡಿದ. ಮೊದಲ ಕೆಲವು ದಿನಗಳ ಕಾಲ ವ್ಯಾಪಾರ ಅಷ್ಟಕ್ಕಷ್ಟೇ. ಒಂದು ದಿನ ಅಂಗಡಿಯ ಬೀಗ ತೆಗೆಯಲು ಮುಂದಾಗಿದ್ದ. ಆಗ ಏನೋ ಕಾರಣಕ್ಕೆ ಮೂರು ಹೆಜ್ಜೆ ಹಿಂದೆ ಸರಿದು ನಂತರ ಮತ್ತೆ ಮುಂದೆ ಹೋಗಿ ಬೀಗ ತೆಗೆದಿದ್ದ. ಅಂದು ಅವನಿಗೆ ಭಾರಿ ವ್ಯಾಪಾರ.

 

ನಂತರ ನೋಡಿ ಆತ ನಿತ್ಯ ಬಾಗಿಲು ತೆರೆಯುವ ಮುನ್ನ ಒಮ್ಮೆ ಬೀಗ ಮುಟ್ಟಿ ಮೂರು ಹೆಜ್ಜೆ ಹಿಂದೆ ಹೋಗಿ ಮತ್ತೆ ಮುಂದೆ ಬಂದು ಬೀಗ ತೆಗೆಯುವುದು! ಅದೀಗ ಅವನ ಪಾಲಿಗೆ ನಂಬಿಕೆ ಆಗಿಬಿಟ್ಟಿದೆ.ಹೌದು; ಇಂಥ ನಂಬಿಕೆಯ ತೆಕ್ಕೆಯಲ್ಲಿ ಬಿಗಿಯಾಗಿ ಬಂಧಿಯಾಗಿದ್ದು ಐಟಿ ನಗರಿ ಬೆಂಗಳೂರಿನ ಎಂ ಜಿ ರಸ್ತೆಯ ಅಂಗಡಿಯ ವ್ಯಾಪಾರಿ. ಇಂಥ ಅದೆಷ್ಟೊಂದು ಸಣ್ಣ ಸಣ್ಣ ಮೂಢನಂಬಿಕೆಗಳು ದೊಡ್ಡದಾಗಿ ಬೆಳೆದುಬಿಟ್ಟಿವೆ ಸಾಮಾನ್ಯ ಜನರಲ್ಲಿ.ಈ ರೀತಿಯ ನಂಬಿಕೆಗಳು ಸಾಮಾನ್ಯರಿಂದ ಹಿಡಿದು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ಮಂದಿಯೂ ಇದಕ್ಕೆ ಹೊರತಾಗಿ ಉಳಿದಿಲ್ಲ. ರಾಜಕಾರಣಿಯೊಬ್ಬರು ಕೆಲವು ದಿನಗಳ ಹಿಂದೆ ತಾವು ಸೊಂಟಕ್ಕೆ ಕಟ್ಟಿಕೊಂಡಿದ್ದ ತಾಯಿತ ತೋರಿಸಿ `ಇದೇ ಸರ್ ನಾನು ಶಾಸಕ ಆಗಲು ಕಾರಣ~ ಎಂದು ಹೇಳಿದ್ದರು.ಭಾರತದ ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಕ್ರಿಕೆಟ್ ಜೀವನದ ಅನೇಕ ಮಹತ್ವದ ಕ್ಷಣಗಳಲ್ಲಿ ರೌಂಡ್ ಕ್ಯಾಪ್ ಹಾಕಿಕೊಳ್ಳುತ್ತ ಬಂದಿದ್ದರು. ವಿಚಿತ್ರವೆಂದರೆ ಅದು ತುಂಬಾ ಹಳೆಯದಾದ ಕ್ಯಾಪ್.

 

ಆದರೆ ಅವರಿಗೆ ಅದು ಎಷ್ಟರ ಮಟ್ಟಿಗೆ ಅದೃಷ್ಟದ್ದು ಎನಿಸಿತ್ತೆಂದರೆ ಕೊನೆಯ ಟೆಸ್ಟ್‌ನ ಕೊನೆಯ ದಿನ ಬೌಲಿಂಗ್ ಮಾಡಬೇಕಾದ ಅಗತ್ಯ ಇದ್ದಾಗ ಅದೇ ಕ್ಯಾಪ್ ತೊಡುತ್ತಿದ್ದರು. ಕ್ಯಾಪ್ ತುಂಬಾ ಹಳೆಯದಾಗಿದ್ದರೂ ಅದನ್ನು ತುಂಬಾ ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಎಷ್ಟೋ ಬಾರಿ ಅವರು `ಪಂದ್ಯ ಶ್ರೇಷ್ಠ~ ಗೌರವ ಪಡೆಯಲು ಆ ಬೌಲರ್ `ಅದೃಷ್ಟದ ಕ್ಯಾಪ್~ ತೊಟ್ಟುಕೊಂಡು ಬಂದಿದ್ದಿದೆ.ಈ ಮಟ್ಟದಲ್ಲಿ ನಂಬಿಕೆಗಳು ಎಲ್ಲ ವರ್ಗದವರ ಮನಗಳಲ್ಲಿ ಮನೆಮಾಡಿವೆ. ಅಂದಾಗ ಕ್ರೀಡಾಪಟುಗಳು ಹೀಗೆ ಯಾವುದೋ ಒಂದು ಮೂಢನಂಬಿಕೆಗೆ ಅಂಟಿಕೊಂಡಿದ್ದಕ್ಕೆ ಅಚ್ಚರಿಪಡುವ ಅಗತ್ಯವೇನಿಲ್ಲ.

 

ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಕ್ರಿಕೆಟ್‌ನಲ್ಲಿ ಆಡಿರುವ ಹಾಗೂ ಈಗಲೂ ಆಡುತ್ತಿರುವ ಆಟಗಾರರು ವಿಚಿತ್ರ ಎನಿಸುವಂಥ ವರ್ತನೆ ಹಾಗೂ ಪ್ರಾರ್ಥನೆ ಜೊತೆಗೆ ಕೆಲವು ವಸ್ತುಗಳು ತಮ್ಮ ಯಶಸ್ಸಿಗೆ ಕಾರಣವೆಂದು ನಂಬಿದ್ದಾರೆ. ಹೀಗೆಯೇ ಒಲಿಂಪಿಕ್ ಕ್ರೀಡೆಗಳಲ್ಲಿ ಪಾಲ್ಗೊಂಡಿರುವ ಭಾರತದ ಕ್ರೀಡಾಪಟುಗಳೂ ಮೂಢನಂಬಿಕೆಗಳನ್ನು ಹೊಂದಿದ್ದಾರೆ. ಕೆಲವು ಹಾಕಿ ಆಟಗಾರರು ಅಂಗಳಕ್ಕೆ ಇಳಿದ ತಕ್ಷಣ ಸ್ಟಿಕ್ ಅನ್ನು ಊರುವ ರೀತಿಯಲ್ಲಿ ವೈವಿಧ್ಯವನ್ನು ಕಾಣುತ್ತೇವೆ.

 

ಬಲಗಾಲು ಇಟ್ಟು ಅಂಗಳದ ಒಳಗೆ ಹೋಗುವುದು ಮಾತ್ರ ಎಲ್ಲರ ಸಾಮಾನ್ಯ ವರ್ತನೆ. ಆದರೆ ಸ್ಟಿಕ್ ಅನ್ನು ಮೊದಲ ಬಾರಿಗೆ ಅಂಗಳಕ್ಕೆ ಮುಟ್ಟಿಸುವಲ್ಲಿ ಮಾತ್ರ ಭಿನ್ನತೆ. ಇದಕ್ಕೆ ಕಾರಣ ಒಬ್ಬೊಬ್ಬರು ತಮಗೆ ಒಳಿತು ಎನಿಸುವಂಥ ದಿಕ್ಕಿನಲ್ಲಿ ಸ್ಟಿಕ್‌ನ ಚಪ್ಪಟೆ ಮುಖವನ್ನು ಮೊದಲು ತೋರಿಸುತ್ತಾರೆ.ಇನ್ನು ಆಟಗಾರರ ಕತ್ತಿನಲ್ಲಿ ಇರುವ ತಾಯಿತ ಹಾಗೂ ಪವಿತ್ರ ದಾರಗಳಂತೂ ಸಾಕಷ್ಟು. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕತ್ತಲ್ಲಿನ ದಾರದ ಎಳೆ ಕೂಡ ಇದಕ್ಕೆ ಸಾಕ್ಷಿ. ಕುಸ್ತಿಪಟು ಸುಶೀಲ್ ಕುಮಾರ್ ಅವರ ಕೈಯಲ್ಲಿಯಂತೂ ಇಂಥ ಹತ್ತಾರು ದಾರದ ಎಳೆಗಳನ್ನು ಕಾಣಬಹುದು.

 

ಆದರೆ ಕುಸ್ತಿ ಸ್ಪರ್ಧೆಯ ಸಂದರ್ಭದಲ್ಲಿ ಅವರು ಅವುಗಳನ್ನು ಅತ್ಯಂತ ಕಾಳಜಿಯಿಂದ ತೆಗೆದು ನಮಸ್ಕರಿಸಿ ಇಡುತ್ತಾರೆ. ಕೆಲವರು ವಿಚಿತ್ರವಾದ ವರ್ತನೆಯನ್ನು ಕೂಡ ತೋರುತ್ತಾರೆ. ಮತ್ತೆ ಮತ್ತೆ ಕತ್ತು ಹಾಗೂ ತುಟಿಗೆ ಕೈಯೊತ್ತಿಕೊಳ್ಳುವುದು ಭಾರತದ ಕ್ರೀಡಾಪಟುಗಳಲ್ಲಿ ಕಾಣಿಸುವ ಸಾಮಾನ್ಯ ವರ್ತನೆ.ಹೀಗೆ ಮಾಡಿದರೆ ಯಶಸ್ಸು ಗ್ಯಾರಂಟಿ ಎಂದೇನು ಅಲ್ಲ. ಆದರೂ ಯಶಸ್ಸಿಗಾಗಿ ಪರಿತಪಿಸುವ ಹೃದಯವು ನಂಬಿದ ದೈವದ ಪಾರ್ಥನೆ ಮಾಡುವ ರೀತಿಯಿದು.

ಭಾರತೀಯರು ಮಾತ್ರ ಇಂಥ ನಂಬಿಕೆ ಹೊಂದಿರುತ್ತಾರೆ ಎನ್ನುವ ಭಾವನೆ ಖಂಡಿತ ಬೇಡ. ಮೂಢನಂಬಿಕೆ ಎನ್ನುವುದು ವಿಶ್ವವ್ಯಾಪಿ.

 

ಅಮೆರಿಕಾದಂಥ ಅತ್ಯಂತ ಮುಂದುವರಿದ ದೇಶದಿಂದ ಹಿಡಿದು ಸಮೊವಾದಂಥ ಪುಟ್ಟ ದ್ವೀಪರಾಷ್ಟ್ರದ ಕ್ರೀಡಾಪಟುಗಳ ವರೆಗೆ ಇದು ಹರಡಿಕೊಂಡಿದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ತರಬೇತಿ ಪಡೆದರೂ ಮೂಢನಂಬಿಕೆಗಳಿಂದ ಕ್ರೀಡಾಪಟುಗಳು ಮುಕ್ತರಾಗುವುದಿಲ್ಲ.ಅಪಾರ ಶಕ್ತಿಯ ಟೆನಿಸ್ ತಾರೆ ಅಮೆರಿಕಾದ ಸೆರೆನಾ ವಿಲಿಯಮ್ಸ ಅವರಂಥ ಕ್ರೀಡಾ ಸಾಧಕರು ಕೂಡ ಇದಕ್ಕೆ ಹೊರತಾಗಿ ಉಳಿದಿಲ್ಲ. ಅವರು ಪಂದ್ಯ ಆಡುವ ಸಂದರ್ಭದಲ್ಲಿ ಸ್ನಾನದ ಚಪ್ಪಲಿಯನ್ನು ಕೋರ್ಟ್‌ಗೆ ತರುತ್ತಾರೆ ಎನ್ನುವುದೇ ಅಚ್ಚರಿ.ಅವರು ಬೇರೆ ಟೆನಿಸ್ ಆಟಗಾರ್ತಿಯರಂತೆ ಶೂ ಲೇಸ್ ಕಟ್ಟುವುದಿಲ್ಲ. ವಿಭಿನ್ನವಾಗಿ ಹೆಣೆಯುತ್ತಾರೆ. ಅಂಗಳ ಪ್ರವೇಶಿಸಿದ ತಕ್ಷಣ ಐದು ಬಾರಿ ಚೆಂಡನ್ನು ಪುಟಿಯುವಂತೆ ತಟ್ಟುತ್ತಾರೆ. ಇದೆಲ್ಲವೂ ಮುಂದುವರಿದ ದೇಶದ ಆಟಗಾರ್ತಿ ಬಿಗಿದಪ್ಪಿಕೊಂಡಿರುವ ನಂಬಿಕೆಗಳ ಪ್ರತಿಬಿಂಬ.ಒಲಿಂಪಿಕ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಪದಕಗಳನ್ನು ಗೆದ್ದಿರುವ ಶ್ರೇಯ ಹೊಂದಿರುವ ಈಜು ಸ್ಪರ್ಧಿ ಮೈಕಲ್ ಫೆಲ್ಪ್ಸ್ ಅವರದ್ದೂ ಇಂಥದೇ ಇನ್ನೊಂದು ಕಥೆ. ಅವರು ಮೂರು ಬಾರಿ ತೋಳು ಸುತ್ತಿದ ನಂತರವೇ ಈಜು ಕೊಳದ ಬ್ಲಾಕ್ ಮೇಲೆ ಹತ್ತಿ ನಿಲ್ಲುತ್ತಾರೆ. 

ಇಂಗ್ಲೆಂಡ್ ಡೈವಿಂಗ್ ಸ್ಪರ್ಧಿ ಥಾಮಸ್ ಡಲೆಯ್ ಅವರು ಕಿತ್ತಳೆ ವರ್ಣದ ಕೋತಿ ಗೊಂಬೆ ಅದೃಷ್ಟವೆಂದು ನಂಬಿದ್ದಾರೆ.ಮೂಢನಂಬಿಕೆಗಳನ್ನು ತಪ್ಪದೇ ಪಾಲಿಸಿಕೊಂಡು ಬಂದಿದ್ದರೂ ಕೆಲವು ಬಾರಿ ಈ ಕ್ರೀಡಾಪಟುಗಳನ್ನು ನಿರಾಸೆ ಕಾಡಿದೆ. ಆದರೆ ಒಮ್ಮೆ ಯಶಸ್ಸಿಗೆ ಕಾರಣವೆಂದು ನಂಬಿದ ವರ್ತನೆ ಹಾಗೂ ವಸ್ತುವನ್ನು ಮಾತ್ರ ಇವರು ಬಿಟ್ಟಿಲ್ಲ ಎನ್ನುವುದೇ ಅಚ್ಚರಿ!ಯಾವುದೋ ವಿಷಯಕ್ಕೆ ಇನ್ನೊಂದು ಘಟನೆಯನ್ನು ತಳಕು ಹಾಕುವ ಇನ್ನೊಂದು ನಂಬಿಕೆಯೂ ಕ್ರೀಡಾ ಕ್ಷೇತ್ರದಲ್ಲಿ ವಿಚಿತ್ರ. ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರು ಕ್ರೀಡಾಂಗಣಕ್ಕೆ ಬಂದರೆ ಇಂಗ್ಲೆಂಡ್‌ಗೆ ನಿರಾಸೆ ಆಗುತ್ತದೆ ಎನ್ನುವ ಮಟ್ಟದ ವಿಚಿತ್ರವಾದ ಭಾವನೆ ಲಂಡನ್ ಒಲಿಂಪಿಕ್ ಸಂದರ್ಭದಲ್ಲಿ ಮೂಡಿತ್ತು. ಭಾರತದಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಾಗ ಅಭಿಮಾನಿಗಳು ಇಂಥ ಅನೇಕ ಭಾವನೆಗಳನ್ನು ಹುಟ್ಟುಹಾಕುತ್ತಾರೆ.`ಹೇರ್‌ಕಟ್ ಬದಲಿಸಿದರೆ ಯಶಸ್ಸು~ ಎನ್ನುವ ಮಟ್ಟಕ್ಕೂ ಮುಟ್ಟುತ್ತಾರೆ. ಈ ವಿಷಯವಾಗಿ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ಕೂಡ ನಡೆಯುತ್ತದೆ. ಹೀಗೆ ಆಗುವುದು ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲಿ ಅಲ್ಲಿನ ಜನಪ್ರಿಯ ಕ್ರೀಡೆಗಳು ನಡೆದಾಗ ಅಭಿಮಾನಿಗಳು ಇಂಥ ನಂಬಿಕೆಗಳ ಚಿಪ್ಪಿನೊಳಗೆ ಸೇರಿಕೊಳ್ಳುತ್ತಾರೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry