ಒಲಿಂಪಿಕ್‌ಗೆ ಲಂಡನ್ ಸಜ್ಜು: ಬ್ರೌನ್

7

ಒಲಿಂಪಿಕ್‌ಗೆ ಲಂಡನ್ ಸಜ್ಜು: ಬ್ರೌನ್

Published:
Updated:
ಒಲಿಂಪಿಕ್‌ಗೆ ಲಂಡನ್ ಸಜ್ಜು: ಬ್ರೌನ್

ಬೆಂಗಳೂರು: `ನಾವು ಸಜ್ಜಾಗಿದ್ದೇವೆ. ಎಲ್ಲ ತಯಾರಿ ಮುಗಿದಿದೆ. ನಾಳೆಯೇ ಒಲಿಂಪಿಕ್ ಆರಂಭವೆಂದರೂ ವ್ಯವಸ್ಥಿತವಾಗಿ ನಡೆಸಲು ಸಾಧ್ಯ~-ಹೀಗೆಂದು ಹೇಳಿದ್ದು ಇಂಗ್ಲೆಂಡ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಜೆರೆಮಿ ಬ್ರೌನ್. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಗೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ `ಲಂಡನ್ ಒಲಿಂಪಿಕ್‌ಗೆ ಸಿದ್ಧವಾಗಿದ್ದು ಸ್ಪರ್ಧಿಗಳ ಪೈಪೋಟಿಗೆ ಸಾಕ್ಷಿಯಾಗಲು ಕಾಯ್ದಿದೆ~ ಎಂದರು.`ಎಲ್ಲ ನಿರ್ಮಾಣ ಕಾರ್ಯವೂ ನಿಗದಿಗೊಳಿಸಿದ್ದ ಅವಧಿಗೂ ಮೊದಲೇ ಪೂರ್ಣಗೊಂಡಿದೆ. ಕ್ರೀಡಾಂಗಣಗಳಲ್ಲಿ ತಾಲೀಮು ಕ್ರೀಡಾಕೂಟಗಳನ್ನು ಕೂಡ ನಡೆಸಲಾಗಿದೆ. ಮ್ಯಾರಥಾನ್‌ನಂಥ ಓಟದ ಸ್ಪರ್ಧೆಗಳಿಗೆ ಮಾತ್ರ ಕೊನೆಯ ಹಂತದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವುದು ಮಾತ್ರ ಬಾಕಿ~ ಎಂದ ಅವರು `ಒಲಿಂಪಿಕ್‌ನಂಥ ಕ್ರೀಡಾಕೂಟಕ್ಕೆ ಯೋಜನೆ ರೂಪಿಸುವುದು ಎಷ್ಟೊಂದು ಕಷ್ಟ ಎನ್ನುವುದು ನಾನು ಸಂಘಟನಾ ಸಮಿತಿಯನ್ನು ಸೇರಿದ ನಂತರವೇ ಅರಿವಾಯಿತು~ ಎಂದು ಹೇಳಿದರು.ಇಂಗ್ಲೆಂಡ್ ರಾಯಭಾರಿ ಕಚೇರಿ ಹಾಗೂ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಜಂಟಿಯಾಗಿ ಆಯೋಜಿಸುತ್ತಿರುವ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿರುವ ಬ್ರೌನ್ `64 ವರ್ಷಗಳ ನಂತರ ಒಲಿಂಪಿಕ್ ಮತ್ತೆ ಲಂಡನ್‌ಗೆ ಹಿಂದಿರುಗುತ್ತಿದೆ. ಅದೊಂದು ಸಂಭ್ರಮದ ಕ್ಷಣ. ಪ್ರೇಕ್ಷಕರಿಗೆ ಅದ್ಭುತ ಎನಿಸುವಂಥ ಕೂಟ ಇದಾಗಲಿದೆ~ ಎಂದು ವಿಶ್ವಾಸದಿಂದ ನುಡಿದರು.ವಿಶ್ವದ ದೊಡ್ಡ ಕ್ರೀಡಾ ಉತ್ಸವ ಎನಿಸಿದ ಒಲಿಂಪಿಕ್‌ನ 30ನೇ ಕೂಟವು ಜುಲೈ 27ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. `ಕ್ರೀಡೆಗಳ ನಿಟ್ಟಿನಿಂದ ಮಾತ್ರವಲ್ಲ ವಿಭಿನ್ನ ಸಂಸ್ಕೃತಿಯ ಸಂಗಮದ ನಿಟ್ಟಿನಿಂದಲೂ ಇದೊಂದು ಮಹತ್ವದ ಕೂಟ. ಶತಕೋಟಿಗೂ ಹೆಚ್ಚು ಜನರು ಟೆಲಿವಿಷನ್ ಮೂಲಕವೂ ಇದನ್ನು ಆಸ್ವಾಧಿಸುತ್ತಾರೆ. ಲಂಡನ್ ಆತಿಥ್ಯ ವಹಿಸಿದ್ದರೂ ಇದು ವಿಶ್ವದೆಲ್ಲರ ಕ್ರೀಡಾಕೂಟ~ ಎಂದರು.ಭಯೋತ್ಪಾದಕ ದಾಳಿಯ ಭಯವಿಲ್ಲವೆಂದು ಸ್ಪಷ್ಟಪಡಿಸಿದ ಅವರು `ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ನಮ್ಮ ಸರ್ಕಾರವು ಪ್ರತಿಯೊಂದು ಹಂತದಲ್ಲಿಯೂ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆ. ಭದ್ರತೆಯಲ್ಲಿ ಕೊರತೆ ಕಾಣಿಸದು~ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry